ಚನ್ನರಾಯಪಟ್ಟಣ ರೈತರ ಮೌನ ಪ್ರತಿಭಟನೆ ಹತ್ತಿಕ್ಕಿದ ಪೊಲೀಸರು | ‘ಭೂಸ್ವಾಧೀನ ಹೋರಾಟ ಸಮಿತಿ’ ಮುಖಂಡರ ಬಂಧನ

Formers Protest
  • ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಜಿ ಸಿ ಬಯ್ಯಾರೆಡ್ಡಿ ಬಂಧನ
  • ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈತರು?

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ದೇವನಹಳ್ಳಿ ಪಟ್ಟಣದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಮೌನ ಪ್ರತಿಭಟನೆಯನ್ನು ಆರಂಭವಾಗುವ ಮೊದಲೇ ಪೊಲೀಸರು ಹತ್ತಿಕ್ಕಿದ್ದಾರೆ.

ಬೆಂಗಳೂರು ನಗರ ಮತ್ತು ಗ್ರಾಮಾಂತರ ಪೊಲೀಸರು ಆ.15ರ ಬೆಳಗಿನ ಜಾವ 4 ಗಂಟೆಗೆ ಏಕಕಾಲದಲ್ಲಿ ಚನ್ನರಾಯಪಟ್ಟಣದ ಧರಣಿ ಸ್ಥಳ ಮತ್ತು ರೈತ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿ, ಹಲವು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

ಕೆಪಿಆರ್‌ಎಸ್‌ ಅಧ್ಯಕ್ಷ ಜಿ ಸಿ ಬಯ್ಯಾರೆಡ್ಡಿ ಬಂಧನ

“ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಜಿ ಸಿ ಬಯ್ಯಾರೆಡ್ಡಿ ಅವರನ್ನು ರಾತ್ರೋರಾತ್ರಿ ಅವರ ಮನೆಗೆ ನುಗ್ಗಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಬಿಡದೇ ಅಕ್ರಮವಾಗಿ ಬಂಧನದಲ್ಲಿರಿಸಿರುವುದನ್ನು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ” ಎಂದು ಸಂಘಟನೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ.

Image
G C Bhayyareddy
ಪ್ರಾಂತ ರೈತ ಸಂಘದ ಅಧ್ಯಕ್ಷ ಜಿ ಸಿ ಬಯ್ಯಾರೆಡ್ಡಿ

“ಹೋರಾಟನಿರತ ರೈತರು ಅಮೃತ ಮಹೋತ್ಸವದ ಸ್ವಾತಂತ್ರ್ಯ ದಿನಾಚರಣೆಯ ಈ ದಿನ, ಒಂದೆಡೆ ಕೈಯ್ಯಲ್ಲಿ ರಾಷ್ಟ್ರಧ್ವಜ ಹಿಡಿದು ಅಮೃತ ಮಹೋತ್ಸವ ಆಚರಿಸುತ್ತಾ, ಮತ್ತೊಂದೆಡೆ ರಾಜ್ಯ ಸರ್ಕಾರದ ರೈತ ವಿರೋಧಿ ನಿಲುವಾದ ಬಲವಂತದ ಅನಗತ್ಯ ಭೂಸ್ವಾಧೀನವನ್ನು ವಿರೋಧಿಸಲು ಬಾಯಿಗೆ ಕಪ್ಪು ಬಟ್ಟೆ ಧರಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದರು. ರಾಜ್ಯ ಸರ್ಕಾರದ ಬಲವಂತದ ಭೂಸ್ವಾಧೀನದ ವಿರುದ್ಧದ ಈ  ಹೋರಾಟದ ಮುಂದುವರಿಕೆಯನ್ನು ತಡೆಯಲು ಬಯ್ಯಾರೆಡ್ಡಿ ಅವರ ಅಕ್ರಮ ಬಂಧನಕ್ಕೆ ಕ್ರಮವಹಿಸಿದ್ದಾರೆ” ಎಂದು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಯು ಬಸವರಾಜ ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ದೇವನಹಳ್ಳಿ | ಸ್ವಾತಂತ್ರ್ಯ ದಿನದಂದೇ ರೈತರ ಮೇಲೆ ಪೊಲೀಸರ ದರ್ಪ

ಸಂಪಂಗಿರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೈತರು?

ಚನ್ನರಾಯಪಟ್ಟಣ, ದೇವನಹಳ್ಳಿ ಮತ್ತು ಬೆಂಗಳೂರಿನಲ್ಲಿ ಬಂಧಿಸಿರುವ ರೈತರು ಮತ್ತು ರೈತ ಮುಖಂಡರನ್ನು ಸಂಪಂಗಿರಾಮನಗರ ಪೊಲೀಸ್ ಕ್ವಾಟ್ರಸ್ ಒಂದರಲ್ಲಿ ಬಂಧಿಸಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ದೇವನಹಳ್ಳಿ ಪಟ್ಟಣ ಮತ್ತು ಬೆಂಗಳೂರು ನಗರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದ ರೈತ ಮುಖಂಡರಾದ ಮಾರೇಗೌಡ, ಜಿ ಸಿ ಬಯ್ಯಾರೆಡ್ಡಿ ಮತ್ತು ಇತರರನ್ನು ಹೆಗ್ಡೆ ನಗರದ ಪೊಲೀಸ್ ಗ್ರೌಂಡ್‌ನಲ್ಲಿ ಬಂಧಿಸಿಟ್ಟಿದ್ದರು.

ಚನ್ನರಾಯಟ್ಟಣದ ಪ್ರತಿಭಟನಾ ಸ್ಥಳದಲ್ಲಿ ಬಂಧಿಸಿದ್ದವರನ್ನು ರಾಜಾನುಕುಂಟೆ, ವಿಜಯಪುರ ಮತ್ತು ದೊಡ್ಡಬಳ್ಳಾಪುರದಲ್ಲಿ ಸುತ್ತಾಡಿಸಿ, ಮಧ್ಯಾಹ್ನದ ಹೊತ್ತಿಗೆ ಸಂಪಂಗಿರಾಮನಗರದ ಪೊಲೀಸ್ ಕ್ವಾಟ್ರಸ್ ಒಂದಕ್ಕೆ ಎಲ್ಲರನ್ನೂ ಕರೆತರಲಾಗಿದೆ ಎಂದು ಈ ದಿನ.ಕಾಮ್ ಗೆ ಬಂಧಿತ ರೈತರು ದೂರವಾಣಿ ಮೂಲಕ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್