
- ಮತದಾರರ ಪಟ್ಟಿ ಪರಿಶೀಲನೆಗೆ ಇಲ್ಲಿದೆ ಸುಲಭ ಮಾರ್ಗ
- ಯಾರ ಸಹಾಯವೂ ಇಲ್ಲದೆ ನೀವೇ ಪರಿಷ್ಕರಣೆ ಮಾಡಿಕೊಳ್ಳಿ
ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಾದ ಮಾಹಿತಿ ಕಳ್ಳತನ ಪ್ರಕರಣವು ವೋಟರ್ ಐಡಿ ಪರಿಷ್ಕರಣೆ ವಿಚಾರವನ್ನು ಅನುಮಾನದಿಂದ ನೋಡುವಂತೆ ಮಾಡಿದೆ.
ಚಿಲುಮೆ ವೋಟರ್ ಅಕ್ರಮ ಪ್ರಕರಣ ಬೆಳಕಿಗೆ ಬಂದ ಬಳಿಕ ಮತದಾರರ ಪರಿಷ್ಕರಣೆಗೆ ಹಿಂದೇಟು ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಗೊಂದಲದಲ್ಲಿರುವ ಮತದಾರರ ಆತಂಕ ಪರಿಹರಿಸಲು ಚುನಾವಣಾ ಆಯೋಗ ವೋಟರ್ ಐಟಿ ಡೈರೆಕ್ಟ್ ಎನ್ರೋಲ್ಮೆಂಟ್ (Voter IT Direct Enrolment) ಅವಕಾಶ ಕಲ್ಪಿಸಿದೆ. ಇಲ್ಲಿ ಮಧ್ಯವರ್ತಿಗಳ ಹಾವಳಿಯಿಲ್ಲದೆ, ಮಾಹಿತಿ ಕಳ್ಳತನದ ಆತಂಕವಿಲ್ಲದೆ ನಿಮ್ಮ ವೋಟರ್ ಐಡಿ ಮಾಹಿತಿ ಪರಿಶೀಲನೆ ಮತ್ತು ದತ್ತಾಂಶಗಳ ಬದಲಾವಣೆಗೆ ಅವಕಾಶ ಕಲ್ಪಿಸಿದೆ.
ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ..
ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿಕೃತ ಜಾಲತಾಣ www.ceokarnataka.gov.in ನಲ್ಲಿ ಪಿಡಿಎಫ್ ಹಾಕಲಾಗಿರುತ್ತದೆ. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸುವುದು ಹಾಗೂ ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸುವ ಬಗ್ಗೆ ಖಚಿತಪಡಿಸಿಕೊಳ್ಳಬಹುದು.
ಆಯಾಯ ವಿಧಾನಸಭಾ ಕ್ಷೇತ್ರಗಳ ಮತದಾರರ ನೋಂದಣಾಧಿಕಾರಿಗಳಿಗೆ ಪ್ರತಿ ದಿನ ಸ್ವೀಕೃತವಾಗುವ 6, 7 ಹಾಗೂ 8ರಲ್ಲಿನ ಮಾಹಿತಿಗಳನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿಕೃತ ಜಾಲತಾಣ www.ceokarnataka.gov.in ನಲ್ಲಿ ದಾಖಲಿಸಲಾಗುತ್ತದೆ. ಅದರ ಲಿಂಕ್ http://erms.karnataka.gov.in/claimsobjection/claimsobjection.aspx ಆಗಿರುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ನೇಮಕವಾಗಿರುವ ಅಧಿಸೂಚಿತ ಮತದಾರರ ನೋಂದಣಾಧಿಕಾರಿಗಳು ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆಗಳಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ.
ನಮೂನೆ-6: ಹೆಸರು ಸೇರ್ಪಡೆಗಾಗಿ
ನಮೂನೆ-6ಎ: ಸಾಗರೋತ್ತರ ಭಾರತೀಯ ಮತದಾರರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ.
ನಮೂಲೆ-6ಬಿ- ಮತದಾರರ ಪಟ್ಟಿಯಲ್ಲಿರುವ ಮತದಾರರು ಸ್ವಯಂಪ್ರೇರಿತವಾಗಿ ಆಧಾರ್ ಅಥವಾ ನಮೂನೆ 6ಬಿಯಲ್ಲಿ ನಮೂದಿಸಿದ ಇತರೆ 11 ದಾಖಲೆಗಳಲ್ಲಿ ಒಂದನ್ನು ಜೋಡಣೆ ಮಾಡಿ ದೃಢೀಕರಿಸುವ ಸಲುವಾಗಿ.
ಈ ಸುದ್ದಿ ಓದಿದ್ದೀರಾ?: ಗುಜರಾತ್ ಚುನಾವಣೆ | ಮೊದಲ ಹಂತದ ಮತದಾನಕ್ಕೆ ಅಂತ್ಯಗೊಂಡ ಬಹಿರಂಗ ಪ್ರಚಾರ
ನಮೂನೆ-7: ಹೆಸರು ಸೇರ್ಪಡೆಯ ವಿರುದ್ಧ ಆಕ್ಷೇಪಣೆ/ಹೆಸರು ತೆಗೆದುಹಾಕುವ ಸಲುವಾಗಿ.
ನಮೂನೆ-8: ವಿಧಾನಸಭಾ ಕ್ಷೇತ್ರದ ಒಳಗೆ/ಹೊರಗೆ ನಿವಾಸ ಬದಲಾವಣೆ, ನಮೂದುಗಳಲ್ಲಿ ತಿದ್ದುಪಡಿಗಳು, ಮೊಬೈಲ್ ಸಂಖ್ಯೆ ನೋಂದಾಯಿಸುವುದು. ಅಸ್ಪಷ್ಟ ಭಾವಚಿತ್ರ (ಫೋಟೋ)ಗಳನ್ನು ಬದಲಾಯಿಸುವುದು. ಎಪಿಕ್ ಬದಲಾವಣೆ ಮತ್ತು ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಗುರುತನ್ನು ನಮೂದು ಮಾಡಿಸುವುದು.
ಈ ಮೇಲಿನ ಅಂಶಗಳನ್ನು ನೀವು ಅನುಸರಿಸಿದರೆ, ನಿಮ್ಮ ವೋಟರ್ ಐಡಿ ಸುರಕ್ಷಿತವಾಗಿರುತ್ತದೆ.