ಸ್ವಾತಂತ್ರ್ಯದ ಅಮೃತ ಮಹೋತ್ಸವ: ಹಲವು ಹೊಸ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಬೊಮ್ಮಾಯಿ

basavaraj bommai
  • ʼರಾಜ್ಯದ ಎಲ್ಲ ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶೇ.100 ರಷ್ಟು ಶೌಚಾಲಯ ನಿರ್ಮಾಣʼ
  • ʼಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿʼ

ಭಾರತದ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಧ್ವಜಾರೋಹಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿ, ಹಲವು ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ.

ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, “ರಾಜ್ಯದ ಎಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶೇ.100 ರಷ್ಟು ಶೌಚಾಲಯ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ₹250 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ. ಆ ಮೂಲಕ ಶಾಲೆ, ಕಾಲೇಜುಗಳಲ್ಲಿ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಲಾಗುವುದು” ಎಂದು ತಿಳಿಸಿದರು.

“ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸ್ವಚ್ಛತೆ, ಪೌಷ್ಟಿಕತೆ ಕಾಪಾಡುವುದು ಮತ್ತು ರೈತರು, ಶ್ರಮಿಕರ ಏಳಿಗೆಗಾಗಿ ಹಾಗೂ ದೇಶ ಕಾಯುವ ಸೈನಿಕರ ಕ್ಷೇಮಾಭಿವೃದ್ಧಿಗಾಗಿ ಕೆಲವು ಕೊಡುಗೆ ನೀಡಲು ಸರ್ಕಾರ ನಿರ್ಧರಿಸಿದೆ” ಎಂದರು.

“ಭೂ ರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತರ ಮಕ್ಕಳಿಗೆ ಜಾರಿಗೊಳಿಸಿದ್ದ ರೈತ ವಿದ್ಯಾನಿಧಿ ಯೋಜನೆಯ ಸೌಲಭ್ಯ ವಿಸ್ತರಿಸಲಾಗುವುದು. ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದಿಂದ ಕುಂಬಾರ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು, ಮಾದರು ಮತ್ತಿತರ ಕುಶಲ ಕರ್ಮಿಗಳಿಗೆ ತಲಾ ₹50 ಸಾವಿರದವರೆಗೆ ಸಾಲ-ಸಹಾಯಧನ ಯೋಜನೆ ಜಾರಿಗೊಳಿಸಲಾಗುವುದು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಸ್ವಾತಂತ್ರ್ಯ 75 | ಸತ್ಯ ಹೇಳಿದವರನ್ನು, ಪ್ರಶ್ನೆ ಮಾಡಿದವರನ್ನು ಬೇಟೆಯಾಡಿದ ಕಾಲ!

“ದೇಶದ ರಕ್ಷಣೆಗಾಗಿ ಸೈನಿಕರು ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದಾರೆ. ರಾಜ್ಯದ ಸೈನಿಕರು ಕರ್ತವ್ಯ ನಿರತರಾಗಿದ್ದಾಗ ಮೃತಪಟ್ಟರೆ, ಅವರ ಕುಟುಂಬದ ಜೀವನಕ್ಕೆ ಭದ್ರತೆ ಕೊಡುವ ಉದ್ದೇಶದಿಂದ ಮೃತ ಸೈನಿಕರ ಕುಟುಂಬದ ಒಬ್ಬ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ನೀಡಲು ಸರ್ಕಾರ ಮುಂದಾಗಿದೆ” ಎಂದರು.

“ಭೂರಹಿತ ಕಾರ್ಮಿಕರು ವಾಸಿಸುವ ಪ್ರದೇಶಗಳನ್ನು ಮುಖ್ಯ ಆದ್ಯತೆಯಾಗಿರಿಸಿಕೊಂಡು, ರಾಜ್ಯದಲ್ಲಿ ಹೊಸದಾಗಿ 4,050 ಅಂಗನವಾಡಿ ತೆರೆಯಲು ಉದ್ದೇಶಿಸಲಾಗಿದೆ. ಆ ಮೂಲಕ 16 ಲಕ್ಷ ಕುಟುಂಬಗಳ ಮಕ್ಕಳಿಗೆ ಪೌಷ್ಟಿಕ ಆಹಾರ ಕಲ್ಪಿಸುವ ಸಂಕಲ್ಪ ತೊಡಲಾಗಿದೆ. ಇದರಿಂದಾಗಿ 8,100 ಮಹಿಳೆಯರಿಗೆ ಉದ್ಯೋಗಾವಕಾಶ ಸಿಗಲಿದೆ” ಎಂದು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
4 ವೋಟ್