ಚಿಕ್ಕಬಳ್ಳಾಪುರ | ಆಟವಾಡುತ್ತಾ ಸವರ್ಣೀಯರ ಜಮೀನಿಗೆ ಹೋಗಿದ್ದಕ್ಕೆ ದಲಿತ ಬಾಲಕನಿಗೆ ಕಂಬಕ್ಕೆ ಕಟ್ಟಿ ಥಳಿತ

  • ಮಗನನ್ನು ಬಿಡಿಸಿಕೊಳ್ಳಲು ಹೋದ ತಾಯಿಗೆ ಚಾಕುವಿನಿಂದ ಹಲ್ಲೆ 
  • ಆಸ್ಪತ್ರೆಗೆ ದಲಿತ ಸಂಘಟನೆ ಮುಖಂಡರ ಭೇಟಿ, ಹೋರಾಟಕ್ಕೆ ಕರೆ

ಕೋಲಾರ ಜಿಲ್ಲೆಯ ಉಳ್ಳೇರಹಳ್ಳಿ ದಲಿತ ಕುಟುಂಬದ ಮೇಲಿನ ದೌರ್ಜನ್ಯ ಪ್ರಕರಣ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯಲ್ಲಿ ದಲಿತ ಬಾಲಕನ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. 

ಚಿಂತಾಮಣಿ ತಾಲೂಕಿನ ಅಂಬಾಜಿ ದುರ್ಗ ಹೋಬಳಿ ಕೆಂಪದೇನಹಳ್ಳಿ ಗ್ರಾಮದ ಆನಂದ ಎಂಬುವವರ ಪುತ್ರ ಯಶ್ವಂತ್ (14) ಎಂಬ ಬಾಲಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಥಳಿಸಲಾಗಿದೆ.

ಮಕ್ಕಳೊಂದಿಗೆ ಆಟವಾಡುತ್ತಾ ಸವರ್ಣೀಯರ ಜಮೀನಿಗೆ ತೆರಳಿದ ಎಂಬ ಕಾರಣಕ್ಕೆ ದಲಿತ ಬಾಲಕನನ್ನು ಹಿಡಿದು ವಿದ್ಯುತ್‌ ಕಂಬಕ್ಕೆ ಕಟ್ಟಿಹಾಕಿ ಥಳಿಸಿದ್ದು, ಮಗನ ಮೇಲಿನ ಹಲ್ಲೆ ತಡೆಯಲು ಹೋದ ಬಾಲಕನ ತಾಯಿಗೂ ಚಾಕುವಿನಿಂದ ಹಲ್ಲೆ ಮಾಡಲಾಗಿದೆ.

ಪರಿಶಿಷ್ಟ ಜಾತಿಯ ಅನಂದ್‌ ಮತ್ತು ಸವರ್ಣೀಯರ ಜಮೀನು ಅಕ್ಕಪಕ್ಕದಲ್ಲಿಯೇ ಇದ್ದು, ಮಕ್ಕಳೊಂದಿಗೆ ಆಟವಾಡುತ್ತ ಪಕ್ಕದ ಜಮೀನಿಗೆ ತೆರಳಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಬಾಲಕ ಮತ್ತು ಆತನ ಕುಟುಂಬಕ್ಕೆ ಮೊದಲಿನಿಂದಲೂ ಸವರ್ಣೀಯರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಹಲ್ಲೆಗೆ ಒಳಗಾದ ಯಶ್ವಂತ್‌ ಮತ್ತು ಆತನ ತಾಯಿಯನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

"ನಾವು ನಾಲ್ಕು ಮಂದಿ ಹುಡುಗರು ಆಟವಾಡುತ್ತಿದ್ವಿ, ಅಲ್ಲಿಗೆ ಬಂದ ಹರೀಶ್‌ ನನ್ನನ್ನು ಹಿಡ್ಕೊಂಡು ಕರ್ಕೊಂಡು ಹೋದ್ರು, ಆಮೇಲೆ ನನ್ನನ್ನ ಕರೆಂಟ್‌ ಕಂಬಕ್ಕೆ ಕಟ್ಟಿ ಹಾಕಿ ಹೊಡೆದರು. ಬಾಯಿ ಮೂಗಲ್ಲಿ ರಕ್ತ ಬಂದರೂ ಬಿಡಲಿಲ್ಲ" ಎಂದು ಬಾಲಕ ಯಶ್ವಂತ್‌ ಘಟನೆಯನ್ನು ವಿವರಿಸಿದ್ದಾನೆ.

"ನನ್ನ ಮಗುವನ್ನು ಕಂಬಕ್ಕೆ ಕಟ್ಟಿ ಹೊಡೆಯುತ್ತಿದ್ದರು. ಆತನನ್ನು ಬಿಡಿಸಿಕೊಳ್ಳಲು ಹೋಗಿದ್ದೆ. ಆವಾಗ ನನಗೆ ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಎರಡೂ ಕೈಗಳಿಗೂ ಚಾಕುವಿನಿಂದ ಹಲ್ಲೆ ಮಾಡಿದರು" ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.

ವಿಷಯ ತಿಳಿದು ಆಸ್ಪತ್ರೆಗೆ 'ಅಂಬೇಡ್ಕರ್‌ ಸೇವಾ ಸಮಿತಿ-ಕರ್ನಾಟಕ'ದ ಸಂಸ್ಥಾಪಕ ಸಂದೇಶ್‌‌ ಭೇಟಿ ನೀಡಿ ದಲಿತ ಬಾಲಕ ಮತ್ತು ಆತನ ತಾಯಿಯ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದರು.

ಈ ವೇಳೆ ಸಂದೇಶ್‌ ಮಾತನಾಡಿ, "ದಲಿತ ಬಾಲಕ ಮತ್ತು ಆತನ ಕುಟುಂಬಕ್ಕೆ ನಿರಂತರವಾಗಿ ಶೋಷಣೆ ನಡೆಸುತ್ತಲೆ ಬರಲಾಗಿದೆ. ಈ ಕುಟುಂಬಕ್ಕೆ ಜೀವ ಬೆದರಿಕೆ ಇದ್ದು, ಪೊಲೀಸರು ಸೂಕ್ತ ರಕ್ಷಣೆ ನೀಡಬೇಕು. ಬಲಾಢ್ಯರು ಹೆಚ್ಚು ಇರುವ ಕಡೆ ದಲಿತರ ಮೇಲೆ ಈ ರೀತಿ ದೌರ್ಜನ್ಯ ಮಾಡುವುದನ್ನು ಸಹಿಸಲು ಸಾಧ್ಯವಿಲ್ಲ. ಈ ಘಟನೆಯನ್ನು ಇಲ್ಲಿಗೇ ಬಿಡುವುದಿಲ್ಲ. ಚಿಕ್ಕಬಳ್ಳಾಪುರದಲ್ಲಿ ನಾನಾ ದಲಿತ ಮತ್ತು ಜನಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್‌ ಹೋರಾಟಕ್ಕೆ ಕರೆ ಕೊಡುತ್ತೇವೆ" ಎಂದರು. 

ಈ ಸುದ್ದಿ ಓದಿದ್ದೀರಾ ? ಐಕ್ಯತಾ ಯಾತ್ರೆಯಲ್ಲಿ ಹಾರಿದ 'ಪೇ ಸಿಎಂ' ಬಾವುಟ | ಯುವಕನ ಟೀ ಶರ್ಟ್ ಬಿಚ್ಚಿಸಿ ವಶಕ್ಕೆ ಪಡೆದ ಪೊಲೀಸರು

ಘಟನೆ ಕುರಿತು ಮಾದಿಗ ದಂಡೋರದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ ಎಂ ದೇವರಾಜ್ ಪ್ರತಿಕ್ರಿಯೆ ನೀಡಿದ್ದು, “ಬಾಲಕ ತಪ್ಪು ಮಾಡಿದ್ದರೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಕಾನೂನನ್ನು ಕೈಗೆತ್ತಿಕೊಂಡು ಹಲ್ಲೆ ನಡೆಸಿರುವುದು ಖಂಡನೀಯ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಜತೆಗೆ ಸಂತ್ರಸ್ತ ದಲಿತ ಕುಟುಂಬಕ್ಕೆ ರಕ್ಷಣೆ ಮತ್ತು ಪರಿಹಾರ ಒದಗಿಸಬೇಕು” ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್