ಚಿಕ್ಕಬಳ್ಳಾಪುರ | ವಿಶೇಷ ಪ್ಯಾಕೇಜ್‌ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯ; ಜೀತ ವಿಮುಕ್ತರ ಪ್ರತಿಭಟನೆ

ಜೀತ ವಿಮುಕ್ತರ ಪ್ರತಿಭಟನೆ
  • ವಿಶೇಷ ಪ್ಯಾಕೇಜ್‌ ಸೇರಿ ಹಲವು ಬೇಡಿಕೆಗಳಿಗೆ ಜೀತ ವಿಮುಕ್ತರ ಆಗ್ರಹ
  • ʼಚೇಳೂರು ಹೋಬಳಿಯ 134 ಜೀತದಾಳುಗಳಿಗೆ ಬಿಡುಗಡೆ ಪತ್ರ ನೀಡಿʼ

ವಿಶೇಷ ಪ್ಯಾಕೇಜ್ ನೀಡುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲ್ಲೂಕು ಕಚೇರಿ ಮುಂಭಾಗ ಜೀತ ವಿಮುಕ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.

ಜೀತ ವಿಮುಕ್ತಿ ಕರ್ನಾಟಕ (ಜೀವಿಕಾ) ಹಾಗೂ ರಾಜ್ಯ ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜೀವ ವಿಮುಕ್ತರು, "75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿಯೂ ಜಿಲ್ಲೆಯ ಕೆಲವೆಡೆ ಜೀತ ಪದ್ಧತಿ ಜೀವಂತವಿದೆ. ಅಲ್ಲದೆ, ಈಗಾಗಲೇ ಜೀತ ಕಾರ್ಮಿಕರೆಂದು ಗುರುತಿಸಿ, ಬಿಡುಗಡೆಗೊಳಿಸಿದ ಹಲವು ವರ್ಷಗಳ ನಂತರವೂ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದೇವೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಜೀತ ವಿಮುಕ್ತರಾಗಿರುವ ಬಹುತೇಕ ಕಾರ್ಮಿಕರು ದಲಿತರಾಗಿದ್ದು, ಇಂದಿಗೂ ತಮಗಾಗಿ ಮೀಸಲಿರುವ ವಿಶೇಷ ಪ್ಯಾಕೇಜ್‌, ಕೃಷಿ ಜಮೀನು ಸೇರಿದಂತೆ ಹಲವು ಸೌಲಭ್ಯಗಳು ದೊರೆತಿಲ್ಲ. ಈ ಕುರಿತು ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಜೀವಿಕಾದ ಸಂಸ್ಥಾಪಕ ಕಿರಣ್‍ ಕಮಲ್‍ ಪ್ರಸಾದ್ ಮಾತನಾಡಿ, "ಜೀತ ಪದ್ಧತಿ ಕಾನೂನು ಪ್ರಕಾರ ಅಪರಾಧವಾಗಿದ್ದು, 2019ರಲ್ಲಿ ಬಾಗೇಪಲ್ಲಿ ತಾಲೂಕಿನಾದ್ಯಂತ 1421 ಕಾರ್ಮಿಕರಲ್ಲಿ 444 ಮಂದಿ ಜೀತ ಕಾರ್ಮಿಕರು ಪತ್ತೆಯಾಗಿದ್ದರು. ಅವರನ್ನು ಜೀತ ವಿಮುಕ್ತರನ್ನಾಗಿಸಿ, ಜೀತದಾಳಾಗಿ ದುಡಿಸಿಕೊಳ್ಳುತ್ತಿದ್ದ ಮಾಲೀಕರ ಮೇಲೆ ದೂರು ದಾಖಲಿಸಲಾಗಿದೆ. ಆದರೆ, ಜೀತ ವಿಮುಕ್ತರಿಗೆ ಸರ್ಕಾರದಿಂದ ಇಂದಿಗೂ ಯಾವುದೇ ಸೌಲಭ್ಯಗಳು ಸರಿಯಾಗಿ ತಲುಪಿಲ್ಲ. ಅವರೆಲ್ಲ ಗೌರವಯುತವಾಗಿ ಜೀವಿಸಲು ಅಗತ್ಯ ಸೌಲಭ್ಯಗಳು ದೊರಕಬೇಕು " ಎಂದು ಆಗ್ರಹಿಸಿದರು.

ಜೀವಿಕಾ ಜಿಲ್ಲಾ ಸಂಚಾಲಕ ನಾರಾಯಣಸ್ವಾಮಿ ಮಾತನಾಡಿ, "ಜೀತ ವಿಮುಕ್ತ ಕುಟುಂಬಕ್ಕೆ ತಲಾ 3 ಎಕರೆ ಭೂಮಿ ನೀಡಬೇಕು. ತನಿಖಾ ತಂಡಗಳ ಮಾಹಿತಿ ಪ್ರಕಾರ ಚೇಳೂರು ಹೋಬಳಿಯಲ್ಲಿ 134 ಜೀತದಾಳುಗಳು ಪತ್ತೆಯಾಗಿದ್ದು, ಅವರೆಲ್ಲರಿಗೂ ಜೀತ ಪದ್ಧತಿಯಿಂದ ಬಿಡುಗಡೆಯಾದ ಕುರಿತು ಪತ್ರ ವಿತರಿಸಬೇಕು. ಅಗತ್ಯ ಸೌಲಭ್ಯ ಒದಗಿಸಲು ಸರ್ಕಾರ ಮುಂದಾಗಬೇಕು" ಎಂದು ಒತ್ತಾಯಿಸಿದರು.

ಈ ಸುದ್ದಿ ಓದಿದ್ದೀರಾ? ಮಿಜೋರಾಂ | ಕಲ್ಲುಗಣಿ ಕುಸಿತ; 8 ಕಾರ್ಮಿಕರು ಸಾವು, ನಾಲ್ವರು ಕಣ್ಮರೆ

ಜೀವಿಕಾ ಜಿಲ್ಲಾ ಮಹಿಳಾ ಸಂಚಾಲಕಿ ವೆಂಕಟನಾರಾಯಣಮ್ಮ, ತಾಲ್ಲೂಕು ಸಂಚಾಲಕ ಆಂಜಿನಪ್ಪ, ಮಹಿಳಾ ಸಂಚಾಲಕಿ ಅಮರಾವತಿ, ಸಂಚಾಲಕರಾದ ಎಚ್ ಸಿ ಚೌಡಯ್ಯ, ಆದಿನಾರಾಯಣ, ಜೀತದಾಳು ಮತ್ತು ಕೃಷಿ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಆದಿನಾರಾಯಣಪ್ಪ ಸೇರಿ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app