ಚಿಕ್ಕಬಳ್ಳಾಪುರ | ದಲಿತ ಜೋಡಿಗೆ ಮಂಟಪ ನಿರಾಕರಣೆ ಪ್ರಕರಣ; ಮುಜರಾಯಿ ಇಲಾಖೆ ವಶಕ್ಕೆ ಕಲ್ಯಾಣ ಮಂಟಪ

Chikkaballapura | Background of the Brahminahalli case; Muzrai department locks marriage hall
  • ದೇವಾಲಯದ ಹೆಸರಿನಲ್ಲಿರುವ 123 ಎಕರೆ ಜಮೀನು
  • 4 ಎಕರೆ 4 ಗುಂಟೆ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣ

ಚಿಕ್ಕಬಳ್ಳಾಪುರ ತಾಲೂಕಿನ ಬ್ರಾಹ್ಮಣರಹಳ್ಳಿಯಲ್ಲಿ ಪರಿಶಿಷ್ಟ ಸಮುದಾಯದ ಜನರಿಗೆ ಕಲ್ಯಾಣ ಮಂಟಪ ನಿರಾಕರಣೆ ಪ್ರಕರಣದ ಹಿನ್ನೆಲೆಯಲ್ಲಿ ಸ್ಥಳೀಯ ದೇವಾಲಯಗಳಿಗೆ ಸೇರಿದ ಅಕ್ರಮ ಕಟ್ಟಡಗಳನ್ನು ಮುಜರಾಯಿ ಇಲಾಖೆ ಸ್ವಾಧಿನಕ್ಕೆ ಪಡೆದಿದೆ.

ಬ್ರಾಹ್ಮಣರಹಳ್ಳಿಯ ದೇವಾಲಯಗಳಿಗೆ ಸೇರಿದ ಜಮೀನಿನಲ್ಲಿ ಸಂಘ ಸಂಸ್ಥೆಗಳು ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿಕೊಂಡಿದ್ದರೆ, ವಶಕ್ಕೆ ಪಡೆಯುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಮುಜುರಾಯಿ ಇಲಾಖೆ ಕ್ರಮಕ್ಕೆ ಮುಂದಾಗಿದ್ದು, ಬ್ರಾಹ್ಮಣರಹಳ್ಳಿಯ ಪ್ರಕರಣದಿಂದ ಅಕ್ರಮ ಕಟ್ಟಡಗಳನ್ನು ವಶಕ್ಕೆ ಪಡೆದಿದೆ.

ಬ್ರಾಹ್ಮಣರಹಳ್ಳಿಯ ಪರಿಶಿಷ್ಟ ಜಾತಿಯ ಜನರಿಗೆ ಕಲ್ಯಾಣ ಮಂಟಪ ನಿರಾಕರಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಈ ದಿನ.ಕಾಮ್‌’ನಲ್ಲಿ ನವೆಂಬರ್‌ 5ರಂದು ಸರಣಿಯಾಗಿ ವರದಿಗಳು ಪ್ರಕಟವಾಗಿದ್ದವು.

ಈ ವಿಷಯಕ್ಕೆ ಸಂಬಂಧಿಸಿದಂತೆ ಸ್ಥಳೀಯ ದಲಿತ ಮುಖಂಡ ಗುಡಿಬಂಡೆ ಗಂಗಪ್ಪ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ತಾಲೂಕಿನ ಎಲ್ಲೋಡು ಕೊರ್ಮಗಿರಿ ಲಕ್ಷ್ಮೀ ಆದಿನಾರಾಯಣಸ್ವಾಮಿ ದೇವಾಲಯದ ನಾಲ್ಕು ಕಲ್ಯಾಣ ಮಂಟಪ ಮತ್ತು ಇತರ ಕಟ್ಟಡಗಳನ್ನು ಮುಜರಾಯಿ ಇಲಾಖೆ ವಶಕ್ಕೆ ಪಡೆದಿದೆ” ಎಂದು ತಿಳಿಸಿದರು.

“ಮುಜರಾಯಿ ಇಲಾಖೆ ಸುಪರ್ದಿಗೆ ಸೇರುವ ದೇವಾಲಯದ ಹೆಸರಿನಲ್ಲಿ 123 ಎಕರೆ ಜಮೀನಿದೆ. ಇದರಲ್ಲಿ 4 ಎಕರೆ 4 ಗುಂಟೆ ಜಾಗದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯದೆ ಅಕ್ರಮವಾಗಿ ಕಟ್ಟಡ ನಿರ್ಮಿಸಿಕೊಂಡಿದ್ದವು.‌ ಇದೀಗ ಅಕ್ರಮ ಕಟ್ಟಡಗಳನ್ನು ಮುಜರಾಯಿ ಇಲಾಖೆ ಸ್ವಾಧೀನಪಡಿಸಿಕೊಂಡಿದೆ” ಎಂದು ಹೇಳಿದರು.

“ದೇವಾಲಯದ 4 ಎಕರೆ 4 ಗುಂಟೆ ಜಾಗದಲ್ಲಿ ದೇವರ ಹೆಸರಿನಲ್ಲಿ ಕೆಲವರು ಖಾಸಗಿ ಟ್ರಸ್ಟ್‌ ನಿರ್ಮಿಸಿಕೊಂಡು ಅನೇಕ ವರ್ಷಗಳಿಂದ ಕಲ್ಯಾಣ ಮಂಟಪ್ಪ ನಿರ್ಮಿಸಿ ಬಾಡಿಗೆಗೆ ನೀಡುತ್ತಿದ್ದರು. ದೇವಾಲಯದ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಬ್ರಾಹ್ಮಣರ ಕಲ್ಯಾಣ ಮಂಟಪ, ದೇವಾಂಗ ಕಲ್ಯಾಣ ಮಂಟಪ ಹಾಗೂ ಎರಡು ಆರ್ಯವೈಶ್ಯ ಕಲ್ಯಾಣ ಮಂಟಪವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದರು.

“ಆಕ್ರಮವಾಗಿ ನಿರ್ಮಿಸಿರುವ ಕಲ್ಯಾಣ ಮಂಟಪಗಳನ್ನು ತೆರವುಗೊಳಿಸಲು ಜಿಲ್ಲಾಧಿಕಾರಿ ಜುಲೈ 8ರಂದು ಆದೇಶ ನೀಡಿದ್ದರು. ಆದೇಶದ ಪ್ರಕಾರ ಒತ್ತುವರಿ ಮಾಡಿಕೊಂಡ 4 ಎಕರೆ 4 ಗುಂಟೆ ಜಾಗದಲ್ಲಿ ನಿರ್ಮಿಸಿದ್ದ ನಾಲ್ಕೂ ಕಲ್ಯಾಣ ಮಂಟಪಗಳಿಗೆ ಇಲಾಖೆ ಅಧಿಕಾರಿಗಳು ಬೀಗಹಾಕಿದ್ದು, ಇದೀಗ ಮುಜರಾಯಿ ಇಲಾಖೆಯ ಸುಪರ್ದಿಗೆ ಪಡೆಯಲಾಗಿದೆ” ಎಂದರು.

ಈ ಸುದ್ದಿ ಒದಿದ್ದೀರಾ? ಚಿಕ್ಕಬಳ್ಳಾಪುರ | ದಲಿತರೆಂಬ ಕಾರಣಕ್ಕೆ ಕಲ್ಯಾಣ ಮಂಟಪ ನಿರಾಕರಣೆ; ಕ್ರಮಕ್ಕೆ ದಲಿತ ಮುಖಂಡರ ಒತ್ತಾಯ

“ಎಲ್ಲ ಸಮುದಾಯದವರೂ ಸೇರಿದಂತೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇಲಾಖೆಯಿಂದ ಬಾಡಿಗೆಗೆ ನೀಡಲು ವರದಿ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ತಹಶೀಲ್ದಾರ್‌ ಸಿಗ್ಬತ್‌ವುಲ್ಲಾ ಪತ್ರ ಬರೆದಿದ್ದಾರೆ” ಎಂದು ತಿಳಿಸಿದರು.

ಕಲ್ಯಾಣ ಮಂಟಪಗಳಿಗೆ ಬೀಗ ಹಾಕುವ ವೇಳೆ ರಾಜಸ್ವ ನಿರೀಕ್ಷಕ ಲಕ್ಷ್ಮೀನಾರಾಯಣ, ಗ್ರಾಮ ಲೆಕ್ಕಾಧಿಕಾರಿ ಮುನಿರಾಜು, ಪೊಲೀಸ್ ಸಿಬ್ಬಂದಿ ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180