
- 2015ರಲ್ಲಿ ಬಾಲ ಭವನ ನಿರ್ಮಾಣಕ್ಕೆ ಮಂಜೂರು
- ಏಳು ವರ್ಷಗಳಾದರೂ ನಿರ್ಮಾಣವಾಗದ ಭವನ
ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ರೂಪುತಾಳಿ 16 ವರ್ಷಗಳು ಕಳೆದಿವೆ. ಆದರೂ, ಜಿಲ್ಲಾ ಕೇಂದ್ರದಲ್ಲಿ ಬಾಲ ಭವನವಿಲ್ಲ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ವೇದಿಕೆಯನ್ನು ಒದಗಿಸುವಂಥ ಮಹತ್ವದ ಬಾಲ ಭವನ ನಿರ್ಮಾಣದ ಕನಸು ಕನಸಾಗಿಯೇ ಉಳಿದಿದೆ.
ಮಕ್ಕಳು ವೈಯಕ್ತಿಕ ಮತ್ತು ಮಾನಸಿಕವಾಗಿ ವಿಕಾಸ ಹೊಂದುವಂತೆ ನೋಡಿಕೊಳ್ಳುವುದು ಬಾಲ ಭವನ ಯೋಜನೆಯ ಮುಖ್ಯ ಧ್ಯೇಯವಾಗಿದೆ. ಆದರೆ, ಜಿಲ್ಲೆಯಲ್ಲಿ ಬಾಲ ಭವನ ನಿರ್ಮಾಣವಾಗದೇ ಇರುವುದು ಸ್ಥಳೀಯರ ಅಸಮಾಧಾನಕ್ಕೆ ಎಡೆಮಾಡಿದೆ.
ಸ್ಥಳೀಯ ನಿವಾಸಿ, ದಲಿತ ಮುಖಂಡ ಜಿ.ವಿ ಗಂಗಪ್ಪ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಾಲ ಭವನದ ಯೋಜನೆ ಒಂದೂವರೆ ದಶಕ ಕಳೆದರೂ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ” ಎಂದು ಆರೋಪಿಸಿದರು.
“ನಗರದ ಗೌರಿಬಿದನೂರು ರಸ್ತೆಯಲ್ಲಿರುವ ರಂಗನಾಥ ಸ್ವಾಮಿ ದೇವಸ್ಥಾನದ (ರಂಗಸ್ಥಳ) ಬಳಿ ಬಾಲಭವನ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿತ್ತು. 2015ರಲ್ಲಿ ಅಂದಿನ ಜಿಲ್ಲಾಧಿಕಾರಿ ಏಳು ಎಕರೆ ಜಾಗವನ್ನು ಮಂಜೂರು ಮಾಡಿದ್ದರು. ಜಾಗ ಮಂಜೂರಾಗಿ ಏಳು ವರ್ಷ ಕಳೆದರೂ ಭವನ ನಿರ್ಮಾಣ ಕಾಮಗಾರಿ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ದಿನ.ಕಾಮ್ನೊಂದಿಗೆ ಮಾತನಾಡಿದ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಅರಸು, “ಬಾಲ ಭವನ ಸೊಸೈಟಿಯು 2015ರಲ್ಲಿ ಕಟ್ಟಡ, ಮಕ್ಕಳ ಹುಟ್ಟುಹಬ್ಬದ ಹಾಲ್, ಶೌಚಾಲಯ, ಆಟೋಪಕರಣ, ಟೆಲಿಸ್ಕೋಪ್, ಅಕ್ವೇರಿಯಂ, ಆಟದ ಮೈದಾನ ನಿರ್ಮಿಸಲು 60 ಲಕ್ಷ ರೂ. ಅನುದಾನ ಮಂಜೂರು ಮಾಡಿತ್ತು. ಆದರೆ, ಕರ್ನಾಟಕ ಗೃಹ ಮಂಡಳಿ (ಕೆಎಚ್ಬಿ) ಅಧಿಕಾರಿಗಳು 2017ರಲ್ಲಿ ಉದ್ದೇಶಿತ ಜಾಗದ ಸಮೀಕ್ಷೆ ನಡೆಸಿದಾಗ ಬಾಲಭವನಕ್ಕೆ ಆ ಜಾಗ ಸೂಕ್ತವಲ್ಲವೆಂದು ವರದಿ ನೀಡಿದ್ದರು” ಎಂದು ಹೇಳಿದರು.
ಈ ದಸುದ್ದಿ ಓದಿದ್ದೀರಾ? ಟ್ಯಾಕ್ಸಿ, ಆಟೋರಿಕ್ಷಾ ಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ‘ವಿದ್ಯಾನಿಧಿ’ ಯೋಜನೆ: ಅರ್ಜಿ ಆಹ್ವಾನ
“ಕೆಎಚ್ಬಿ ವರದಿ ನೀಡಿದ ಬಳಿಕ, ಬಾಲ ಭವನ ಸೊಸೈಟಿಯು ಬಾಲ ಭವನ ನಿರ್ಮಾಣಕ್ಕಾಗಿ ನೀಡಿದ್ದ ₹60 ಲಕ್ಷ ಅನುದಾನವನ್ನು 2018ರ ಆಗಸ್ಟ್ನಲ್ಲಿ ಹಿಂಪಡೆಯಿತು. ಪರ್ಯಾಯ ಜಾಗ ಹುಡುಕಿ, ಯೋಜನೆ ಸಿದ್ಧಪಡಿಸಿದ ಬಳಿಕ ಪುನಃ ಅನುದಾನ ನೀಡುವುದಾಗಿ ತಿಳಿಸಿತ್ತು. ಅಂದಿನಿಂದ ಈವರೆಗೆ ಬಾಲಭವನಕ್ಕೆ ಪರ್ಯಾಯ ಜಾಗ ಹುಡುಕುವ ಕಾರ್ಯ ಕೈಗೊಂಡಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ನಿರಾಶ್ರಿತ ಮಕ್ಕಳಿಗೆ ಆಸರೆಯಾಗಿರುವ ಬಾಲಭವನ ನೆನೆಗುದಿಗೆ ಬಿದ್ದಿರುವುದು ವಿಷಾಧನೀಯ. ಪುತ್ಥಳಿಗಳ ನಿರ್ಮಾಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡುವ ಸರ್ಕಾರ ನಿರಾಶ್ರಿತ ಮಕ್ಕಳ ಆಶ್ರಯಕ್ಕೆ ನಿರ್ಲಕ್ಷ್ಯ ಮಾಡುತ್ತಿದೆ" ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.