ಚಿಕ್ಕಮಗಳೂರು | ಕನಿ‍‍‍‍‍‍‍ಷ್ಠ ಸೌಕರ್ಯಗಳಿಲ್ಲದೆ ಬದುಕುತ್ತಿವೆ 49 ಆದಿವಾಸಿ ಕುಟುಂಬಗಳು

  • ಹಕ್ಕುಪತ್ರಕ್ಕೆ ಆಗ್ರಹಿಸಿ ಜೂ. 27ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ
  • ಶಾಸಕರು, ಸಚಿವರಿಗೆ ಮನವಿ ಪತ್ರ ನೀಡಿದರೂ ಬಗೆಹರಿಯದ ಸಮಸ್ಯೆ

ಆದಿವಾಸಿ ಬುಡಕಟ್ಟು ಸಮುದಾಯದ 49ಕ್ಕೂ ಹೆಚ್ಚು ಕುಟುಂಬಗಳು ವಾಸಿಸುವ ಎಂ ಪಿ ಕುಮಾರಸ್ವಾಮಿ ಬಡಾವಣೆ ನಿವಾಸಿಗಳು ಕಳೆದ ಮೂರು ವರ್ಷಗಳಿಂದ ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ ನಿತ್ಯ ಸಂಕಷ್ಟದಲ್ಲಿಯೇ ಬದುಕು ದೂಡುತ್ತಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ತಾಲೂಕಿನ ಕಳಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನಕೆರೆ ಗ್ರಾಮದ ಎಂ ಪಿ ಕುಮಾರಸ್ವಾಮಿ (ಕುಂಬಳಡಿಕೆ) ಬಡಾವಣೆಯ ಸ್ಥಿತಿ ಇದು.

ಮೂರು ವರ್ಷಗಳ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ನಿರ್ಗತಿಕರ ನಿವೇಶನಕ್ಕೆ ಮಾವಿನಕೆರೆ ಗ್ರಾಮದ ಸರ್ವೆ ನಂ. 153ರಲ್ಲಿ 12 ಎಕರೆ ಗೋಮಾಳ ಜಾಗ ಮಂಜೂರಾಗಿತ್ತು. ನಿವೇಶನಗಳನ್ನು ಹಂಚಿಕೆ ಮಾಡಿ ಉಳಿದಿದ್ದ 4 ಎಕರೆ ಪ್ರದೇಶದಲ್ಲಿ ಸುತ್ತಮುತ್ತಲಿನ ನಿರ್ಗತಿಕರು, ಎಸ್ಟೇಟ್‌ಗಳಿಂದ ಹೊರಹಾಕಲ್ಪಟ್ಟ ಆದಿವಾಸಿ ಬುಡಕಟ್ಟು, ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯದ ಬಡ ಜನರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಂಡು ಮೂರು ವರ್ಷಗಳಿಂದ ವಾಸ ಮಾಡುತ್ತಿದ್ದಾರೆ.

ಕುಂಬಳಡಿಕೆ ಕಳಸದಿಂದ ಮೂರು ಕಿ.ಮೀ ದೂರದಲ್ಲಿದೆ. ಇಲ್ಲಿಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲ. ಅಗತ್ಯ ಕಾರ್ಯಕ್ಕೆ ಪಟ್ಟಣಕ್ಕೆ ಬರಬೇಕಿದ್ದರೆ ಖಾಸಗಿ ಆಟೋ ರಿಕ್ಷಾಗಳನ್ನೇ ಅವಲಂಬಿಸಿದ್ದಾರೆ. ಇಲ್ಲಿನ ಮಕ್ಕಳು ಶಾಲೆಗೆ ಹೋಗಬೇಕೆಂದರೆ ಒಂದೂವರೆ ಕಿ ಮೀ ನಡೆಯಬೇಕು. ಈ ಬಡಾವಣೆಗೆ ವಿದ್ಯುತ್ ಸಂಪರ್ಕವೂ ಇಲ್ಲ. ದೀಪದ ಬೆಳಕಿನಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ದಿನನಿತ್ಯದ ಚಟುವಟಿಕೆಗಳಿಗೆ ಆಶ್ರಯಿಸಿರುವುದು ಸಮೀಪದ ಹಳ್ಳದ ನೀರು ಮತ್ತು ಮಳೆಯ ನೀರು ಮಾತ್ರ. ಹೆಸರಿಗೊಂದು ರಸ್ತೆ ಇದೆ. ಆದರೆ ಈವರೆಗೂ ಡಾಂಬಾರು ಕಂಡಿಲ್ಲ. ಹೀಗೆ ಕನಿಷ್ಠ ಮೂಲ ಸೌಕರ್ಯಗಳು ಈ ಬಡಾವಣೆಗೆ ಇಲ್ಲ. ದಿನಗೂಲಿಯೇ ಇವರ ಆದಾಯ.

Image

ಅತಿವೃಷ್ಟಿ ಸಂದರ್ಭದಲ್ಲಿ ಇಲ್ಲಿನ ಶಾಸಕ ಎಂ ಪಿ ಕುಮಾರಸ್ವಾಮಿ ಅವರು ಮುಂದೆ ನಿಂತು ನಿವೇಶನ ಮಂಜೂರು ಮಾಡಿಸಿದ್ದರು. ಆದರೆ, ಈವರೆಗೂ ಇವರಿಗೆ ಸೌಕರ್ಯ ಕಲ್ಪಿಸಿಲ್ಲ. ಮೂರು ವರ್ಷಗಳಿಂದ ಈವರೆಗೂ ಶೆಡ್‌ಗಳಲ್ಲಿಯೇ ವಾಸ ಮಾಡುತ್ತಿದ್ದಾರೆ. ನಿವೇಶನಕ್ಕೆ ಹಕ್ಕುಪತ್ರ ನೀಡಿಲ್ಲ, ಮನೆ ಮಂಜೂರು ಮಾಡಿಲ್ಲ. ಹಾಗಾಗಿ ಈ ಎಲ್ಲ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲು ಇಲ್ಲಿನ ನಿವಾಸಿಗಳು ಮುಂದಾಗಿದ್ದಾರೆ.

ಬುಡಕಟ್ಟು ಆದಿವಾಸಿ ಸಂಘದ ಮೂಡಿಗೆರೆ ತಾಲೂಕು ಅಧ್ಯಕ್ಷ ಸಂಜೀವ ಈ ದಿನ.ಕಾಮ್ ಜತೆಗೆ ಮಾತನಾಡಿ, “ಆದಿವಾಸಿ ಬುಡಕಟ್ಟು ಸಮುದಾಯದ 49 ಕುಟುಂಬಗಳೂ ಸೇರಿದಂತೆ ಪರಿಶಿಷ್ಟ ಜಾತಿ ಹಾಗೂ ಇತರೆ ಸಮುದಾಯಗಳ ಒಟ್ಟು 73 ಕುಟುಂಬಗಳು ಕುಂಬಳಡಿಕೆಯಲ್ಲಿ ಶೆಡ್ ನಿರ್ಮಿಸಿಕೊಂಡು ವಾಸ ಮಾಡುತ್ತಿದ್ದಾರೆ. ಮೂರು ವರ್ಷದ ಹಿಂದೆ ಅತಿವೃಷ್ಟಿ ಸಂದರ್ಭದಲ್ಲಿ ಕಾಫಿ ಎಸ್ಟೇಟ್‌ಗಳಿಂದ ಹೊರಹಾಕಲ್ಪಟ್ಟು ಇಲ್ಲಿಗೆ ಬಂದು ನೆಲೆ ನಿಂತಿದ್ದೇವೆ. ಆದರೆ ನಮಗೆ ಕನಿಷ್ಠ ಸೌಕರ್ಯಗಳು ಇಲ್ಲ” ಎಂದು ಆರೋಪಿಸಿದರು.

“ಕಳೆದ ಮೂರು ವರ್ಷಗಳಿಂದ ಅನೇಕ ಬಾರಿ ಶಾಸಕರನ್ನು ಭೇಟಿ ಮಾಡಿ ನಮಗೆ ಹಕ್ಕು ಪತ್ರ ನೀಡುವ ಜತೆಗೆ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದ್ದೇವೆ. ಬೆಂಗಳೂರಿಗೂ ಹೋಗಿ ಮುಖ್ಯಮಂತ್ರಿ ಮತ್ತು ವಸತಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ. ಆದರೂ ನಮಗೆ ಹಕ್ಕು ಪತ್ರ ನೀಡಿಲ್ಲ” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಜೂ. 27ರಿಂದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ

“ದೇಶದಲ್ಲಿ ಪ್ರಸ್ತುತ ರಾಷ್ಟ್ರಪತಿ ಚುನಾವಣೆ ನಡೆಯುತ್ತಿದೆ. ಆದಿವಾಸಿ ಸಮುದಾಯದ ಮಹಿಳೆಯನ್ನು ಮೋದಿ ಅವರು ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಇದು ಒಂದೆಡೆಯಾದರೆ, ಮತ್ತೊಂದೆಡೆ ಆದಿವಾಸಿಗಳಾದ ನಾವು ಕನಿಷ್ಠ ಸೌಕರ್ಯಗಳಿಗಾಗಿ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದೇವೆ. ಇದು ವಿಪರ್ಯಾಸ ಅಲ್ಲವೇ ” ಎಂದು ಸಂಜೀವ ಈ ದಿನ.ಕಾಮ್‌ ಜೊತೆ ತಮ್ಮ ಅಳಲು ತೋಡಿಕೊಂಡರು.

“ಮಾವಿನಕೆರೆ ಗ್ರಾಮದ ಸರ್ವೆ ನಂ. 153ರಲ್ಲಿ ವಾಸವಿರುದ 49 ಆದಿವಾಸಿ ಕುಟುಂಬಗಳು ಸೇರಿದಂತೆ ಎಲ್ಲರಿಗೂ ಹಕ್ಕುಪತ್ರ ಹಾಗೂ ಮನೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಜೂನ್ 27ರಂದು ಮೂಡಿಗೆರೆ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿದ್ದೇವೆ. ಅಂದಾಜು 200 ಮಂದಿ ಧರಣಿಯಲ್ಲಿ ಭಾಗವಹಿಸಲಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ” ಎಂದು ಸಂಜೀವ ತಿಳಿಸಿದರು.

Image

ಕಂದಾಯ ಇಲಾಖೆಯಿಂದ ಮಂಜೂರಾಗಿದೆ: ತಹಶೀಲ್ದಾರ್

“ಮೂರು ವರ್ಷದ ಹಿಂದೆ ಆಶ್ರಯ ಯೋಜನೆಯಡಿ ನಿವೇಶನಗಳನ್ನು ಮಂಜೂರು ಮಾಡಲಾಗಿದೆ. 70ಕ್ಕೂ ಹೆಚ್ಚು ಕುಟುಂಬಗಳು ಅಲ್ಲಿ ಟೆಂಟ್ ಹಾಕಿಕೊಂಡಿದ್ದಾರೆ. ಅವರು ಹಕ್ಕು ಪತ್ರ ನೀಡಿ ಎಂದು ಕೇಳುತ್ತಿದ್ದಾರೆ. ಅದು ಗ್ರಾಮ ಪಂಚಾಯಿತಿಯಿಂದ ಆಗಬೇಕಾಗಿದೆ. ಸ್ಥಳಕ್ಕೆ ಒಮ್ಮೆ ಭೇಟಿ ನೀಡಿದ್ದೇನೆ” ಎಂದು ಮೂಡಿಗೆರೆ ತಹಶೀಲ್ದಾರ್ ನಂದಕುಮಾರ್ ಈ ದಿನ.ಕಾಮ್ಗೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಉಡುಪಿ | ಮೆಟ್ಟಿಲು ಹತ್ತಾಲಾಗದ ವೃದ್ದೆ ಬಳಿ ಬಂದು ಹೇಳಿಕೆ ಆಲಿಸಿದ ನ್ಯಾಯಾಧೀಶರು

ಎಲ್ಲರಿಗೂ ಒಮ್ಮೆಲೆ ನಿವೇಶನ ನೀಡಲು ತಾಂತ್ರಿಕ ಸಮಸ್ಯೆ: ಪಿಡಿಓ

ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ರವೀಶ್, ಈ ದಿನ.ಕಾಮ್ ಜತೆಗೆ ಮಾತನಾಡಿ, “ಆಶ್ರಯ ನಿವೇಶನದಲ್ಲಿ ಆನ್‌ಲೈನ್‌ನಲ್ಲಿ ನಿವೇಶನ 'ಎಂಟ್ರಿ' ಮಾಡಲು ಅವಕಾಶ ಇಲ್ಲ. ಅದನ್ನು ಲಾಕ್ ಮಾಡಿದ್ದಾರೆ. ಈಗ ನಾಲ್ಕು ಎಕರೆಗೆ ಪಹಣಿ ಆಗಿದೆ. ಆದರೆ ಗಡಿ ಗುರುತಿಸಿಲ್ಲ. ಅತಿವೃಷ್ಟಿ ಸಂತ್ರಸ್ತರು ಮತ್ತು ನಿರಾಶ್ರಿತರಿಗೆ ಹತ್ತು ಎಕರೆಯಲ್ಲಿಯೇ ವಿಭಜನೆ ಮಾಡಲಾಗಿದೆ. ಇನ್ನೂ ಗಡಿ ಗುರುತು ಆಗಬೇಕು. ಲೇಔಟ್ ಪ್ಲಾನ್ ಆಗಬೇಕು. ಬಳಿಕ ಫಲಾನುಭವಿಗಳ ಆಯ್ಕೆ ಮಾಡಬೇಕು. ರಾಜೀವ್ ಗಾಂಧಿ ವಸತಿ ನಿಗಮದಲ್ಲಿ ಫಲಾನುಭವಿಗಳ ಹೆಸರು ದಾಖಲಿಸಬೇಕು. ಆದರೆ ಈಗ ಆನ್‌ಲೈನ್ ಬ್ಯಾಕ್ ಆಗಿದೆ. ಈಗ ಎಲ್ಲ ಕುಟುಂಬಗಳಿಗೂ ಒಂದೇ ಬಾರಿಗೆ ನಿವೇಶನದ ಹಕ್ಕುಪತ್ರ ನೀಡಲು ತಾಂತ್ರಿಕ ಸಮಸ್ಯೆ ಎದುರಾಗಿದೆ” ಎಂದು ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್