
- ಮೂರು ತಿಂಗಳಲ್ಲಿ ಕಾಡಾನೆ ದಾಳಿಗೆ ಮೃತಪಟ್ಟ ಮೂವರು
- ಕಾಡಾನೆ ಸೆರೆ ಕಾರ್ಯಾಚರಣೆ ಎರಡು ಬಾರಿ ವಿಫಲ ಪ್ರಯತ್ನ
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕು ಹುಲ್ಲೇಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಗೆ ರೈತ ಮಹಿಳೆ ಶೋಭಾ (45) ಬಲಿಯಾಗಿದ್ದಾರೆ.
ಭಾನುವಾರ ಬೆಳಿಗ್ಗೆ ಮನೆಯ ಸಮೀಪ ಗದ್ದೆಯಲ್ಲಿ ಹುಲ್ಲು ಕೊಯ್ಯಲು ತೆರಳಿದ್ದಾಗ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು ರೈತ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಶೋಭ ಹುಲ್ಲೇಮನೆ ಅವರು ಕುಂದೂರು ಗ್ರಾಮದ ಸತೀಶ್ ಗೌಡರ ಪತ್ನಿ (ರೈತ ಸಂಘದ ಚಂದ್ರೇಗೌಡರ ತಮ್ಮನ ಪತ್ನಿ). ಅವರ ಪತಿಯ ಕಣ್ಣೆದುರೆ ಆನೆ ಪತ್ನಿಯನ್ನು ಸಾಯಿಸಿದೆ ಎಂದು ಹೇಳಲಾಗಿದ್ದು, ಮೃತರಿಗೆ 20 ವರ್ಷ ವಯಸ್ಸಿನ ಪುತ್ರನಿದ್ದಾನೆ.
ರಸ್ತೆಗೆ ಸಮೀಪದಲ್ಲಿಯೇ ಬೆಳ್ಳಂಬೆಳಗ್ಗೆ ಕಾಡಾನೆ ದಾಳಿ ನಡೆಸಿದೆ. ಈ ಭಾಗದಲ್ಲಿ ಕಾಡಾನೆಗಳು ಸತತವಾಗಿ ಬೆಳೆ ಹಾನಿ, ಜೀವ ಹಾನಿಗೆ ಕಾರಣವಾಗುತ್ತಿವೆ. ಕೆಲ ತಿಂಗಳ ಹಿಂದೆ ಕೆಂಜಿಗೆ ಗ್ರಾಮದಲ್ಲಿ ಆನಂದ ದೇವಾಡಿಗ ಎನ್ನುವವರನ್ನು ತುಳಿದು ಸಾಯಿಸಿದ್ದ ಆನೆಯೇ ಈ ದಾಳಿ ನಡೆಸಿದೆ ಎಂದು ಗುರುತಿಸಲಾಗಿದೆ.
ಕಳೆದ ಮೂರು ತಿಂಗಳಿಂದ ಮೂಡಿಗೆರೆ ತಾಲ್ಲೂಕಿನಲ್ಲಿ ಮೂರು ಜನರು ಕಾಡಾನೆ ದಾಳಿಗೆ ಮೃತಪಟ್ಟಿದ್ದಾರೆ. ಇತ್ತೀಚೆಗೆ ಊರುಬಗೆ ಗ್ರಾಮದಲ್ಲಿ ಅರ್ಜುನ್ ಎಂಬುವವರು ಆನೆ ದಾಳಿಗೆ ಬಲಿಯಾಗಿದ್ದರು.
ಈ ಸುದ್ದಿ ಓದಿದ್ದೀರಾ? ಸುದ್ದಿ ನೋಟ | ಸಿಐಟಿಇಎಸ್ನಲ್ಲಿ ದಂತ ವ್ಯಾಪಾರ ನಿಷೇಧ ತೆರವಿಗೆ ಭಾರತ ಮೌನಮುದ್ರೆ ಒತ್ತಿದ್ದೇಕೆ?
ಎರಡು ಬಾರಿ ಕಾಡಾನೆ ಸೆರೆ ಕಾರ್ಯಾಚರಣೆ ವಿಫಲ
ಮೂಡಿಗೆರೆ ತಾಲೂಕು ಊರುಬಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಉಪಟಳ ನೀಡುತ್ತಿರುವ ನರಹಂತಕ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯನ್ನು ಎರಡು ಬಾರಿ ಸ್ಥಗಿತ ಮಾಡಿಲಾಗಿತ್ತು. ಮೈಸೂರು ದಸರಾ ಅಂಬಾರಿ ಹೊರುವ ಅಭಿಮನ್ಯು ನೇತೃತ್ವದಲ್ಲಿ ಹುಣಸೂರು ಮತ್ತಿಗೋಡು ಆನೆ ಶಿಬಿರದ ಕರ್ಣ, ಕುಮಾರಸ್ವಾಮಿ, ಅಜಯ್, ಮಹೇಂದ್ರ ಸೇರಿದಂತೆ ಆರು ಸಾಕಾನೆಗಳು ಕಳೆದ ಐದು ದಿನಗಳಿಂದ ಕೂಂಬಿಂಗ್ ನಡೆಸಿದ್ದವು. ಬಳಿಕ ಅಭಿಮನ್ಯುಗೆ ಅನಾರೋಗ್ಯ ಉಂಟಾದ ಕಾರಣ ಸ್ಥಗಿತಗೊಳಿಸಲಾಗಿತ್ತು.
ಮೂಡಿಗೆರೆ ಭಾಗದಲ್ಲಿ ಕಾಡಾನೆ ಹಾವಳಿ ಮುಂದುವರಿದಿದೆ. ಕಾಡಾನೆ ಸಮಸ್ಯೆಯ ಕಾರಣಕ್ಕೆ ಮೂಡಿಗೆರೆ ತಾಲೂಕಿನಲ್ಲಿರುವ 'ಎತ್ತಿನ ಭುಜ' ಬೆಟ್ಟಕ್ಕೆ ಪ್ರವಾಸಿಗರ ಭೇಟಿಗೆ ವಿಧಿಸಿದ್ದ ನಿರ್ಬಂಧ ಇನ್ನೂ ಮುಂದುವರಿದಿದೆ.