
- ಕಡೂರು ತಾ. ಪಂ. ಪ್ರಭಾರ ಇಒ ದೇವರಾಜ್ ನಾಯಕ್ ಅಮಾನತು
- ಅಮಾನತು ಆದೇಶ ಹೊರಡಿಸಿದ ಅಧೀನ ಕಾರ್ಯದರ್ಶಿ
ಕಮಿಷನ್ಗೆ ಬೇಡಿಕೆಯಿಟ್ಟ ಪ್ರಕರಣದಲ್ಲಿ ಕಡೂರು ತಾಲೂಕು ಪಂಚಾಯಿತಿ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ (ಇಒ), ಹಿರಿಯ ಪಶುವೈದ್ಯಾಧಿಕಾರಿ ಡಾ. ದೇವರಾಜ್ ನಾಯಕ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಗ್ರಾಮ ಪಂಚಾಯತಿಗಳಿಗೆ ಕೋವಿಡ್ ಪರಿಕರ ಪೂರೈಕೆ ಮಾಡಿದ್ದ ಗುತ್ತಿಗೆದಾರರಿಗೆ ಬಿಲ್ಗಳನ್ನು ಪಾವತಿಸಲು ಕಮಿಷನ್ ಕೇಳಿದ್ದರು ಎಂದು ದೇವರಾಜ್ ನಾಯಕ್ ವಿರುದ್ಧ ಆರೋಪಗಳು ಕೇಳಿಬಂದಿವೆ. ಆರೊಪಗಳ ಕುರಿತು ಪರಿಶೀಲಿಸಿರುವ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಅಧೀನ ಕಾರ್ಯದರ್ಶಿ ಅಮಾನತು ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕು ಉಲ್ಬಣಗೊಂಡಿದ್ದ ಸಮಯದಲ್ಲಿ ಕಡೂರಿನ ಗ್ರಾಮ ಪಂಚಾಯಿತಿಗಳಿಗೆ ಹುಬ್ಬಳ್ಳಿಯ ಗುತ್ತಿಗೆದಾರ ಬಸವರಾಜ್ ಅಮರಗೋಳ ಕೋವಿಡ್ ಪರಿಕರ ಪೂರೈಕೆ ಮಾಡಿದ್ದರು. ಅವುಗಳ ಬಿಲ್ಗಳನ್ನು ಪಡೆಯಲು ತಾಲೂಕು ಪಂಚಾಯತಿ ಪ್ರಭಾರ ಇಒ ದೇವರಾಜ್ ನಾಯಕ್ ಬಳಿ ಕೇಳಿಕೊಂಡಿದ್ದರು. ಈ ವೇಳೆ, ದೇವರಾಜ್ ಅವರು ಬಿಲ್ಗಳನ್ನು ಪಾವತಿಸಲು ಕಮಿಷನ್ಗಾಗಿ ಬೇಡಿಕೆ ಇಟ್ಟಿದ್ದಾರೆಂದು ಗುತ್ತಿಗೆದಾರ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು| ರಸ್ತೆಗುಂಡಿ ಸಾವು-ನೋವು: ಮೂರು ಬೇಡಿಕೆಗಳನ್ನಿಟ್ಟುಕೊಂಡು ಎಎಪಿ ಬೃಹತ್ ಪ್ರತಿಭಟನೆ
ತನಿಖೆ ವೇಳೆ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬಿಲ್ ಪಾವತಿಸುವಂತೆ ಸೂಚನೆ ನಿಡಿದ್ದರೂ, ದೇವರಾಜ್ ಬಿಲ್ ಪಾವತಿಸಿಲ್ಲ ಎಂಬುದು ಗೊತ್ತಾಗಿದೆ. ಬಳಿಕ, ಅವರನ್ನು ಅಮಾನತುಗೊಳಿಸಿ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.