ಚಿಕ್ಕಮಗಳೂರು | ಅರಣ್ಯ ಇಲಾಖೆ ತೆರವು ಮಾಡಿದ್ದ ಮಹಿಳೆಯ ಗುಡಿಸಲು ಮರು ನಿರ್ಮಾಣ

  • ಪರಿಶಿಷ್ಟ ಜಾತಿಯ ಅಂಗವಿಕಲ ಮಹಿಳೆ ತಿಂಗಳ ಹಿಂದೆ ಗುಡಿಸಲು ನಿರ್ಮಿಸಿದ್ದರು
  • ಮಹಿಳೆಗೆ ನೆರವಾದ ದ.ಸಂ.ಸ (ಅಂಬೇಡ್ಕರ್‌ ಧ್ವನಿ) ಸಂಘಟನೆ ಪದಾಧಿಕಾರಿಗಳು

ಅರಣ್ಯ ಇಲಾಖೆಗೆ ಸೇರಿದ ಜಾಗ ಎಂಬ ಕಾರಣ ನೀಡಿ ಪರಿಶಿಷ್ಟ ಜಾತಿಯ ವೃದ್ಧ ಮಹಿಳೆಯ ಪುಟ್ಟ ಗುಡಿಸಲನ್ನು ಅರಣ್ಯ ಇಲಾಖೆ ಸಿಬ್ಬಂದಿ ಜೋರು ಮಳೆಯ ನಡುವೆಯೇ ತೆರವು ಮಾಡಿದ್ದರು. ಇದರಿಂದಾಗಿ ಮಹಿಳೆಯ ಬದುಕು ಬೀದಿಗೆ ಬಿದ್ದಿತ್ತು.

ಈ ಘಟನೆ ನಡೆದಿದ್ದು, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ನಿಲುವಾಗಿಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಮರ ಗ್ರಾಮದಲ್ಲಿ. ಪರಿಶಿಷ್ಟ ಜಾತಿಯ ಮಹಿಳೆ ಬೆಳ್ಳಮ್ಮ ತಮ್ಮ ಮಗನಿಂದ ದೂರವಾಗಿ ಗಾಳಿಮರ ಗ್ರಾಮದ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅಂಗವಿಕಲೆಯಾದರೂ ತನ್ನ ಕೈಲಾದ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಜತೆಗೆ ಸಂಬಂಧಿಕರ ನೆರವನ್ನು ಪಡೆಯುತ್ತಿದ್ದರು.

ಇತ್ತೀಚೆಗೆ ಬೆಳ್ಳಮ್ಮ ಅವರ ಮಗಳು ಇವರ ಜೊತೆಗೆ ವಾಸ ಮಾಡುತ್ತಿದ್ದರು. ಇಷ್ಟು ದಿನ ಬಾಡಿಗೆ ಮನೆಯಲ್ಲಿ ಬದುಕು ಕಳೆದಿದ್ದೇವೆ, ಇನ್ನಾದರೂ ಸ್ವಂತ ನೆಲೆ ಮಾಡಿಕೊಳ್ಳೋಣ ಎಂದು ವೃದ್ಧ ಮಹಿಳೆ ಗ್ರಾಮಸ್ಥರ ನೆರವಿನೊಂದಿಗೆ ಗಾಳಿಮರ ಗ್ರಾಮದಲ್ಲಿ ತಿಂಗಳ ಹಿಂದೆ ಪುಟ್ಟ ಗುಡಿಸಲು ನಿರ್ಮಿಸಿಕೊಂಡು ಮಗಳೊಂದಿಗೆ ವಾಸ ಮಾಡುತ್ತಿದ್ದರು.

ಅಂಗವಿಕಲ ಮಹಿಳೆ ವಾಸವಿದ್ದ ಗುಡಿಸಲನ್ನು ಶೃಂಗೇರಿಯ ಆರ್‌ಎಫ್‌ಒ ಸೂಚನೆಯಂತೆ ಅರಣ್ಯ ಇಲಾಖೆ ಸಿಬ್ಬಂದಿ ಜೂನ್‌ 20ರಂದು ತೆರವು ಮಾಡಿದ್ದರು. ಮಳೆಗಾಲ ಆದ್ದರಿಂದ ಜೋರು ಮಳೆ ಸುರಿದು ಗುಡಿಸಲಲ್ಲಿ ಇದ್ದ ಅಕ್ಕಿ ಸೇರಿದಂತೆ ಇತರೆ ವಸ್ತುಗಳು ಹಾಳಾಗಿದ್ದವು. ವಿದ್ಯುತ್ ಇಲ್ಲದಿದ್ದರಿಂದ ಗ್ರಾಮಸ್ಥರೇ ಹಾಕಿಸಿಕೊಟ್ಟಿದ್ದ ಸೋಲಾರ್ ದೀಪವನ್ನು ಅರಣ್ಯ ಇಲಾಖೆ ಸಿಬ್ಬಂದಿ ಒಡೆದು ಹಾಕಿದ್ದರು. ಅಂದಾಜು 1.5 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಮಣ್ಣು ಪಾಲಾಗಿದ್ದವು.

ವಿಷಯ ತಿಳಿದ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ಧ್ವನಿ) ಪದಾಧಿಕಾರಿಗಳು ಪ್ರತಿಭಟನೆ ನಡೆಸಿದ್ದರು. ಮಳೆಗಾಲದಲ್ಲಿ ಏಕಾಏಕಿ ಬಂದು ಮನೆ ಕಿತ್ತು ಹಾಕಿದರೆ ಆ ಮಹಿಳೆ ಎಲ್ಲಿಗೆ ಹೋಗಬೇಕು? ಯಾರ ಆಶ್ರಯ ಪಡೆಯಬೇಕು? ಮಹಿಳೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮನೆಯಿಂದ ಎಳೆದು ಹೊರ ಹಾಕಿರುವುದು ಖಂಡನೀಯ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದರು.

ಬಳಿಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ಧ್ವನಿ) ಪದಾಧಿಕಾರಿಗಳೇ ಗ್ರಾಮಕ್ಕೆ ಭೇಟಿ ನೀಡಿ ತೆರವು ಮಾಡಿದ್ದ ಬೆಳ್ಳಮ್ಮ ಅವರ ಗುಡಿಸಲನ್ನು ಮರು ನಿರ್ಮಾಣ ಮಾಡಿಕೊಟ್ಟಿದ್ದಾರೆ. ಅಲ್ಲದೆ ಅವರಿಗೆ ಅಗತ್ಯ ದಿನಸಿ ವಸ್ತುಗಳನ್ನು ಕೊಡಿಸಿದ್ದಾರೆ. ಗ್ರಾಮದ ಪುಟ್ಟಪ್ಪ ಗೌಡ ಎಂಬುವರು ವೃದ್ಧೆಯ ಗುಡಿಸಲು ನಿರ್ಮಾಣಕ್ಕೆ ಸೀಟ್‌ಗಳನ್ನು ಕೊಡಿಸಿದ್ದಾರೆ.

ಈ ಘಟನೆ ಬಗ್ಗೆ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ಧ್ವನಿ) ಜಿಲ್ಲಾ ಅಧ್ಯಕ್ಷ ರಾಜಾಶಂಕರ್ ಈ ದಿನ.ಕಾಮ್‌ ಜತೆಗೆ ಮಾತನಾಡಿ, “ಬೆಳ್ಳಮ್ಮ ಪರಿಶಿಷ್ಟ ಜಾತಿಯ ಅಂಗವಿಕಲ ಮಹಿಳೆ, ಅವರು ಒಂದು ತಿಂಗಳ ಹಿಂದೆ ಗುಡಿಸಲು ನಿರ್ಮಿಸಿಕೊಂಡಿದ್ದರು. ಯಾರೋ ಫೋನ್‌ ಕರೆ ಮಾಡಿದ್ದರು ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಗುಡಿಸಲು ತೆರವು ಮಾಡಿದ್ದಾರೆ. ಇವರು ಅರಣ್ಯ ಒತ್ತುವರಿ ಮಾಡಿ ಗುಡಿಸಲು ನಿರ್ಮಿಸಿಕೊಂಡಿರಲಿಲ್ಲ. ಅಕ್ಕಪಕ್ಕದಲ್ಲಿ ಮನೆಗಳಿವೆ. ಆದರೂ ಇವರ ಗುಡಿಸಲನ್ನೇ ಏಕೆ ತೆರವು ಮಾಡಿದರು” ಎಂದು ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಅಗ್ನಿಪಥ್ ಯೋಜನೆಯು ರೈತ ಚಳವಳಿಯ ಪ್ರತೀಕಾರ; ಸಿದಗೌಡ ಮೋದಗಿ

“ಅರಣ್ಯ ಇಲಾಖೆಗೆ ಸೇರಿದ ಜಾಗ ಆದ್ದರಿಂದ ತೆರವು ಮಾಡಿದ್ದೇವೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಅಕ್ಕಪಕ್ಕದಲ್ಲಿಯೇ ಮೇಲ್ಜಾತಿಯ ಜನರು ಒತ್ತುವರಿ ಮಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ” ಎಂದು ಆರೋಪಿಸಿದರು.

“ಮಳೆಗಾಲ ಆದ್ದರಿಂದ ಸೂಚನೆ ನೀಡಿ ಗುಡಿಸಲಿನಲ್ಲಿದ್ದ ವಸ್ತುಗಳನ್ನಾದರೂ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಲು ಅವಕಾಶ ನೀಡಬಹುದಿತ್ತು. ಜೋರು ಮಳೆಯಲ್ಲಿ ಈ ರೀತಿ ಏಕಾಏಕಿ ಗುಡಿಸಲು ತೆರವು ಮಾಡಿರುವುದು ಅಮಾನುಷ ಕ್ರಮ” ಎಂದು ಖಂಡಿಸಿದರು.

“ಅರಣ್ಯ ಇಲಾಖೆ ಅಧಿಕಾರಿಗಳು ನಿಲುವಾಗಿಲು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಕ್ಕೂ ತಂದಿಲ್ಲ. ನಮ್ಮ ಸಂಘಟನೆಯಿಂದ ಗುಡಿಸಲನ್ನು ಮರು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಈಗ ಗ್ರಾಮ ಪಂಚಾಯಿತಿ ವತಿಯಿಂದ ಮತ್ತೆ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗಿದೆ” ಎಂದು ತಿಳಿಸಿದರು.

ಗುಡಿಸಲು ನಿರ್ಮಿಸುವ ವೇಳೆ ದಲಿತ ಸಂಘರ್ಷ ಸಮಿತಿ ಕೊಪ್ಪ ತಾಲ್ಲೂಕು ಅಧ್ಯಕ್ಷ ರಾಜು, ಕ್ಷೇತ್ರ ಉಸ್ತುವಾರಿ ಸುರೇಶ್, ಕ್ಷೇತ್ರಾಧ್ಯಕ್ಷ ರಘುವೀರ್ ಹಾಗೂ ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್