ಕಾಡಿನ ಮಕ್ಕಳು ವಿದ್ಯೆ ಕಲಿಯಲು ಹೊರಟಿವೆ, ಪೆನ್ನು ಪುಸ್ತಕ ಕೊಡಿಸುವಿರಾ..?

  • ಧಾರಾಕಾರ ಮಳೆಗೆ ಸೋರುತ್ತಿವೆ ಟಾರ್ಪಲ್ ಹೊದಿಕೆಯ ಗುಡಿಸಲು
  • ಮಳೆಯಿಂದಾಗಿ ಕೂಲಿಯೂ ಇಲ್ಲದೆ ನಲುಗಿ ಹೋಗಿದ್ದಾರೆ ಆದಿವಾಸಿಗಳು

ಆದಿವಾಸಿಗಳೆಂದರೆ ಕಣ್ಣೆದುರು ಬರುವುದು, ಚಿಕ್ಕ ಗುಡಿಸಲುಗಳು, ಕನಿಷ್ಠ ಸೌಕರ್ಯಗಳು ಇಲ್ಲದ ಹಾಡಿಗಳು. ಮುಗ್ಧ  ನೋಟ ಬೀರುವ ಪುಟ್ಟ ಮಕ್ಕಳು...

ಹಾಡಿಗಳಲ್ಲಿ ವಾಸಿಸುವ ಮಕ್ಕಳು ಶಾಲೆಗೆ ಹೋಗುವುದೇ ಒಂದು ದೊಡ್ಡ ಸಂಗತಿ. ಹೀಗಿರುವಾಗ ಮೈಸೂರು ಜಿಲ್ಲೆಯ ಕೆಲವು ಹಾಡಿಗಳಲ್ಲಿನ ಮಕ್ಕಳು ಶಾಲೆಗೆ ಹೊರಟಿದ್ದು, ಅವರಿಗೆ ಪೆನ್ನು, ಪುಸ್ತಕಗಳ ನೆರವು ಬೇಕಿದೆ.      

ಮೈಸೂರು ಜಿಲ್ಲೆಯ ಹಿಂದುಳಿದ ತಾಲೂಕು ಎಂದೇ ಹೆಸರುವಾಸಿ ಆಗಿರುವ ಹೆಗ್ಗಡ ದೇವನ ಕೋಟೆ (ಎಚ್ ಡಿ ಕೋಟೆ) ತಾಲೂಕು ಹಲವು ಆದಿವಾಸಿ ಸಮುದಾಯ ವಾಸಿಸುವ ಹಾಡಿಗಳನ್ನು ಹೊಂದಿದೆ. ಹಾಡಿಗಳಲ್ಲಿ ಬದುಕುತ್ತಿರುವ ಆದಿವಾಸಿಗಳಿಗೆ ಯಾವುದೇ ಸ್ವಂತ ಭೂಮಿ ಇಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಕನಿಷ್ಠ ಮೂಲ ಸೌಕರ್ಯಗಳು ಈವರೆಗೂ ವ್ಯವಸ್ಥಿತವಾಗಿ ಅವರಿಗೆ ದೊರೆತಿಲ್ಲ. 

ಶಿಕ್ಷಣದ ಕಡೆಗೆ ಮುಖ ಮಾಡಿರುವ ಹಾಡಿಯ ಮಕ್ಕಳ ಕತೆ ಹೇಳತೀರದಾಗಿದೆ. ಕಲಿಕೆಗೆ ಅಗತ್ಯವಾದ ನೋಟ್ ಪುಸ್ತಕ, ಪೆನ್ನು ಇತರೆ ಸಣ್ಣಪುಟ್ಟ ಸಾಮಗ್ರಿಗಳನ್ನು ಪೂರೈಸಲು ಪೋಷಕರಿಗೆ ಸಾಧ್ಯವೇ ಆಗುತಿಲ್ಲ. ಆದಿವಾಸಿಗಳ ಸ್ಥಿತಿ ಅರಿತಿರುವ ಶಾಲೆಯ ಶಿಕ್ಷಕರು ಮಕ್ಕಳಿಗೆ ಪೆನ್ನು, ನೋಟ್ ಪುಸ್ತಕ ಇತರೆ ಲೇಖನ ಸಾಮಗ್ರಿಗಳ ಅಗತ್ಯ ಇದೆ, ಸಹಾಯ ಮಾಡುವವರಿದ್ದರೆ ಸಹಕರಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಎಚ್ ಡಿ ಕೋಟೆ ತಾಲೂಕಿನ ಡಿ ಬಿ ಕುಪ್ಪೆ, ಮೂಲೆಯೂರು ಹಾಡಿ, ಮಾನಿಮೂಲೆ ಹಾಡಿ, ತಿಮ್ಮನಹೊಸಹಳ್ಳಿ ಹಾಡಿ, ಆನೆಮಾಳ ಹಾಡಿ, ಗೋಳೂರು ಹಾಡಿ, ಬಾವಲಿ ಹಾಡಿ, ಬಳ್ಳೆ ಹಾಡಿ, ಮಾಳದ ಹಾಡಿ, ಡೋರನಕಟ್ಟೆ ಕಾಲೋನಿ, ಅರಳಳ್ಳಿ ಕಾಲೋನಿ, ಚನಗುಂಡಿ ಕಾಲೋನಿ. ಹುಣಸೂರು ತಾಲೂಕಿನ ಹಾಡಿಗಳಾದ ಮಾದಳ್ಳಿ, ಮಾದಳ್ಳಿ ಹಾಡಿ, ವಿಜಯಗಿರಿ ಹಾಡಿ, ಭಾರತವಾಡಿ ಹಾಡಿ, ವೀರನಹೊಸಹಳ್ಳಿಯ ಆದಿವಾಸಿ ಮಕ್ಕಳಿಗೆ ಸಹಾಯ ಬೇಕಿದೆ.

ಎಚ್ ಡಿ ಕೋಟೆ ಸುತ್ತಮುತ್ತಲಿನ ಹಾಡಿಯಲ್ಲಿ ವಾಸಿಸುವ ಬಹುತೇಕ ಆದಿವಾಸಿ ಕುಟುಂಬಗಳು ನಿತ್ಯದ ಬದುಕಿಗೆ ಕೂಲಿ ಕೆಲಸವನ್ನೇ ಆಶ್ರಯಿಸಿವೆ. ಅವರು ಪ್ರತಿದಿನ ಸಮೀಪದ ಕೊಡಗು, ಕೇರಳದ ಅಂಚಿನವರೆಗೆ ಮಾಲೀಕರೇ ಕಳಿಸುವ ವಾಹನಗಳಲ್ಲಿ ಹೋಗಿ ಅತ್ಯಂತ ಕಡಿಮೆ ಕೂಲಿಗೆ ದಿನವಿಡೀ ದುಡಿಯುತ್ತಾರೆ. ಈ ಹಣದಿಂದಲೇ ಜೀವನ ಸಾಗಿಸುತ್ತಿದ್ದಾರೆ. 

ಆದಿವಾಸಿಗಳ ಕೂಲಿಯ ಹಣ ಒಪ್ಪೊತ್ತಿನ ಗಂಜಿಗೂ ಸಾಕಾಗುತ್ತಿಲ್ಲ. ಇತ್ತೀಚಿನ ವರ್ಷಗಳಲ್ಲಿ ದಿನಬಳಕೆಯ ವಸ್ತುಗಳ ಬೆಲೆ ಗಗನಕ್ಕೆ ಏರಿದ್ದು, ಆದಿವಾಸಿಗಳನ್ನು ಮತ್ತಷ್ಟು ಉಸಿರು ಕಟ್ಟಿಸುವಂತೆ ಮಾಡಿದೆ. ಹೀಗಿರುವಾಗ ಕಡಿಮೆ ಕೂಲಿಯಲ್ಲಿ ಬದುಕು ಕಟ್ಟಿಕೊಳ್ಳಲು ಹವಣಿಸುತಿದ್ದಾರೆ.

ಈ ಸುದ್ದಿ ಓದಿದ್ದೀರಾ? ದೊಡ್ಡಬಳ್ಳಾಪುರ | ದಲಿತ ಮಹಿಳೆ ಹತ್ಯೆ ಮಾಡಿದ್ದ ಆರೋಪಿಗಳ ಬಂಧನಕ್ಕೆ ಆಗ್ರಹ

ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಿರಂತರವಾದ ಮಳೆ ಸುರಿಯುತ್ತಿದೆ. ಇದರಿಂದ ಹಾಡಿಗೆ ಸಂಪರ್ಕ ಕಲ್ಪಿಸುವ ಮಣ್ಣಿನ ರಸ್ತೆಗಳೆಲ್ಲವೂ ಗುಂಡಿ ಬಿದ್ದು, ಕೆಸರುಮಯವಾಗಿವೆ. ಮಳೆ ಕಾರಣದಿಂದಾಗಿ ಕೂಲಿ ಕೆಲಸವೂ ಇಲ್ಲದೆ ನಿತ್ಯ ಪರಿತಪಿಸುವಂತಾಗಿದೆ.

Image

ಟಾರ್ಪಲ್‌ಗಳಿಗೆ ಮೊರೆ

ಎಚ್ ಡಿ ಕೋಟೆ ತಾಲೂಕಿನ ಬಹುತೇಕ ಆದಿವಾಸಿ ಹಾಡಿಗಳಲ್ಲಿ ಅಲ್ಲಿನ ಬುಡಕಟ್ಟು ಸಮುದಾಯ ಚಿಕ್ಕ ಶೆಡ್‌ಗಳಲ್ಲಿಯೇ ವಾಸ ಮಾಡುತ್ತಿವೆ. ಇತ್ತೀಚೆಗೆ ಸುಲಭ ಸಾಧನವಾದ ಪ್ಲಾಸ್ಟಿಕ್ ಟಾರ್ಪಲ್‌ಗಳ ಮೊರೆ ಹೋಗಿದ್ದಾರೆ. ಈ ಟಾರ್ಪಲ್‌ಗಳು  ಬಿಸಿಲು ಮಳೆಗೆ ಒಂದು ವರ್ಷ ಬಾಳಿಕೆ ಬರಬಹುದು. ಒಂದು ವೇಳೆ ಜೋರು ಗಾಳಿ ಮಳೆ ಬಂದರೆ ಗಾಳಿಗೆ ಹಾರಿ ಹೋಗುವ ಸಾಧ್ಯತೆಗಳೂ ಇವೆ.

ಆದಿವಾಸಿಗಳು ನಿರ್ಮಿಸಿಕೊಂಡಿರುವ ಪ್ಲಾಸ್ಟಿಕ್ ಟಾರ್ಪಲ್‌ಗಳು ಹಾಳಾಗಿದ್ದು, ಹೊಸ ಟಾರ್ಪಲ್‌ಗಳನ್ನು ಕೊಂಡುಕೊಳ್ಳಲಾಗದ ಸ್ಥಿತಿ ಇದೆ. ಮಳೆ ಬಿರುಸು ಪಡೆದಿರುವುದರಿಂದ ಗುಡಿಸಲುಗಳು ಸೋರುತ್ತಿದ್ದು, ಅವರ ಕುಟುಂಬಗಳಿಗೆ ಟಾರ್ಪಲ್ ಸಹಕಾರ ಬೇಕಾಗಿದೆ.

Image

ಸಾಮಾಜಿಕ ಕಾರ್ಯಕರ್ತೆ ಮಂಗಳಾ ಈ ದಿನ.ಕಾಮ್ ಜತೆಗೆ ಮಾತನಾಡಿ, “ಎಚ್ ಡಿ ಕೋಟೆ ಭಾಗದ ಬಹುತೇಕ ಹಾಡಿಗಳಲ್ಲಿ ಟಾರ್ಪಲ್ ಹೊದಿಕೆಗಳ ಶೆಡ್‌ಗಳೇ ಆಶ್ರಯವಾಗಿವೆ. ಇತ್ತೀಚೆಗೆ ಮಳೆ ಜೋರಾಗಿದ್ದು, ಗುಡಿಸಲುಗಳು ಸೋರುತ್ತಿವೆ. ಹಾಗಾಗಿ ಅವರಿಗೆ ಟಾರ್ಪಲ್‌ಗಳ ನೆರವು ಬೇಕಿದೆ. ಹಾಗೆಯೇ ಕಾಡಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಲೇಖನಿ ಸಾಮಗ್ರಿಗಳ ಅಗತ್ಯವಿದ್ದು, ಸಹಾಯ ಮಾಡಬಹುದು. ಆದಿವಾಸಿಗಳು ಶಾಲೆಗಳನ್ನು ಮುಖ ಮಾಡುವುದೇ ದೊಡ್ಡ ವಿಚಾರ ಹಾಗಾಗಿ ಅವರಿಗೆ ನೆರವು ನೀಡುವ ಮೂಲಕ ಕಲಿಕೆಗೆ ಪ್ರೋತ್ಸಾಹ ನೀಡಬಹುದು” ಎಂದರು.

Image

ಹಣ ನೀಡಬೇಡಿ

ಮೈಸೂರು ಜಿಲ್ಲೆಯ ಎಚ್ ಡಿ ಕೋಟೆ ತಾಲ್ಲೂಕಿನ ಹಾಡಿಗಳ ಜನರಿಗೆ ನೆರವು ನೀಡಲು ಬಯಸುವವರು ಹಣ ನೀಡಬೇಡಿ, ಬದಲಿಗೆ ಟಾರ್ಪಲ್, ಶಾಲಾ ಮಕ್ಕಳಿಗೆ ಪೆನ್ನು, ಪುಸ್ತಕ, ಬ್ಯಾಗ್ ಇತರೆ ಲೇಖನಿ ಸಾಮಗ್ರಿಗಳನ್ನು ನೀಡಬಹುದು. ಆದಿವಾಸಿಗಳಿಗೆ ಟಾರ್ಪಲ್ ವ್ಯವಸ್ಥೆ ಮಾಡಿಕೊಡಿ ಎಂದು ಮಂಗಳ ಈ ದಿನ.ಕಾಮ್ ಮೂಲಕ ಮನವಿ ಮಾಡಿದ್ದಾರೆ.

ಸಂಪರ್ಕಕ್ಕೆ ಮಂಗಳ ಮೊ. ಸಂಖ್ಯೆ; 9845765275 ಕರೆ ಮಾಡಬಹುದು.

ನಿಮಗೆ ಏನು ಅನ್ನಿಸ್ತು?
6 ವೋಟ್