ಚಿತ್ರದುರ್ಗ | ಮಕ್ಕಳಿಂದ ಕೆಲಸ ಮಾಡಿಸಿದ ವಸತಿ ಶಾಲೆ; ಪ್ರಾಂಶುಪಾಲ, ವಾರ್ಡನ್‌ ಅಮಾನತಿಗೆ ಆಗ್ರಹ

Chithradurga | Principals, wardens bringing children to work ; Farmers' union demands suspension of officials
  • ಘಟನೆಗೆ ಸಂಬಂಧಪಟ್ಟವರ ವಿರುದ್ದ ಸೂಕ್ತ ಕ್ರಮಕ್ಕೆ ಒತ್ತಾಯ
  • ಕ್ರಮ ಕೈಗೊಳ್ಳದಿದ್ದಲ್ಲಿ ತೀವ್ರ ಹೋರಾಟದ ಎಚ್ಚರಿಕೆ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸಪುರ ಮೊರಾರ್ಜಿ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಸತಿ ಶಾಲೆಯ ಪ್ರಾಂಶುಪಾಲ ಮತ್ತು ವಾರ್ಡನ್ ಕರ್ತವ್ಯ ಲೋಪ ಎಸಗಿದ್ದು, ಅವರನ್ನು ಅಮಾನತು ಮಾಡಬೇಕೆಂದು ರೈತಸಂಘ ಆಗ್ರಹಿಸಿದೆ. 

ಮಕ್ಕಳಿಂದ ಕೆಲಸ ಮಾಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಹಿರಿಯೂರು ತಹಶೀಲ್ದಾರ್‌ಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. 

“ವಾಣಿವಿಲಾಸ ಸಾಗರ ಸುಮಾರು 88 ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 22ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾಣಿವಿಲಾಸ ಸಾಗರಕ್ಕೆ ಬಾಗಿನ ಅರ್ಪಿಸಲು ಬಂದಿದ್ದರು. ಅದಕ್ಕಾಗಿ ಮೊರಾರ್ಜಿ ದೇಸಾಯಿ ಶಾಲಾ ಆವರಣದಲ್ಲಿ ಹೆಲಿಪ್ಯಾಡ್ ನಿರ್ಮಿಸುವ ಉದ್ದೇಶಕ್ಕಾಗಿ ವಿದ್ಯಾರ್ಥಿಗಳಿಂದ ಕೆಲಸ ಮಾಡಿಸಲಾಗಿದೆ” ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. 

“ಹವಾಮಾನ ವೈಪರಿತ್ಯದಿಂದ ಹೆಲಿಪ್ಯಾಡ್‌ ನಿರ್ಮಾಣ ರದ್ದಾಗಿತ್ತು. ಅದರೆ, ಲಾರಿಯಲ್ಲಿ ತರಲಾಗಿದ್ದ ಅಗತ್ಯ ವಸ್ತುಗಳನ್ನು ಶಾಲೆಯ ಸುಪರ್ದಿಗೆ ನೀಡಲಾಗಿತ್ತು. ಈ ವೇಳೆ, ಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್‌ಗಳು ಮಕ್ಕಳಿಂದ ಲಾರಿಯನ್ನು ಅನ್‌ಲೋಡ್‌ ಮಾಡಿಸಿದ್ದಾರೆ" ಎಂದು ದೂರಿದ್ದಾರೆ. 

"ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈ ರೀತಿ ಘಟನೆ ನಡೆದಿರುವುದು ನಮ್ಮೆಲ್ಲರಿಗೂ ಮಾನಸಿಕವಾಗಿ ನೋವು ಉಂಟುಮಾಡಿದೆ. ವಿದ್ಯಾರ್ಥಿಗಳೆಲ್ಲರೂ ಹಿಂದುಳಿದ ವರ್ಗಕ್ಕೆ ಸೇರಿದ್ದು, ತೀರಾ ಬಡವರಾಗಿರುತ್ತಾರೆ. ಆ ಕಾರಣಕ್ಕೆ ಮಕ್ಕಳಿಂದ ದುಡಿಸಿಕೊಳ್ಳುವುದು ಒಳ್ಳೆಯ ನಡೆಯಲ್ಲ” ಎಂದು ರೈತ ಸಂಘದ ಜಿಲ್ಲಾ ಕಾರ್ಯಧ್ಯಕ್ಷ ಕೆ.ಸಿ ಹೊರಕೇರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೂಡಲೇ ಶಾಲೆಯ ಪ್ರಾಂಶುಪಾಲ ಮತ್ತು ವಾರ್ಡನ್‌ಗಳನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ನಗರಸಭೆ ಆಡಳಿತದಲ್ಲಿ ಅಧ್ಯಕ್ಷೆ ಪತಿ ಹಸ್ತಕ್ಷೇಪ: ಎಎಪಿ ಖಂಡನೆ

"ಹತ್ತು ದಿನಗಳ ಒಳಗಾಗಿ ಘಟನೆಗೆ ಸಂಬಂಧಪಟ್ಟವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ವಿಳಂಬ ಮಾಡಿದಲ್ಲಿ ಜಿಲ್ಲೆಯಾದ್ಯಂತ ಜನಪರ ಸಂಘಟನೆಗಳ ಜೊತೆ ಸೇರಿ ತೀವ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ

ಹಕ್ಕೊತ್ತಾಯ ಸಲ್ಲಿಸುವ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ ಸಿ ಹೊರಕೇರಪ್ಪ, ತಾಲ್ಲೂಕು ಅಧ್ಯಕ್ಷ ಬಿ ಒ ಶಿವಕುಮಾರ್, ಯುವ ಘಟಕದ ಅಧ್ಯಕ್ಷ ತುಳುನಾಡು ಚೇತನ್, ಜಿಲ್ಲಾ ಸಂಘಟನೆ ಕಾರ್ಯದರ್ಶಿ ಎಂ ಲಕ್ಷ್ಮೀಕಾಂತ್, ತಾಲೂಕು ಉಪಾಧ್ಯಕ್ಷ ತಿಪ್ಪೇಸ್ವಾಮಿ ಸೇರಿದಂತೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ಇದ್ದರು.

ಮಾಸ್‌ ಮೀಡಿಯಾ ಚಿತ್ರದುರ್ಗ ಜಿಲ್ಲಾ ಸಂಯೋಜಕ ಹಾಲರಾಮೇಶ್ವರ ಎಚ್‌ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180