- ದಿಂಡಾವರ ದುಗ್ಗಾಣಿ ಹಟ್ಟಿ ಬಳಿ ಅಪಘಾತ
- ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಚಾಲಕನ ನಿಯಂತ್ರಣ ತಪ್ಪಿ ವಾಹನವೊಂದು ಪಲ್ಟಿಯಾಗಿ, ಗಾರ್ಮೆಂಟ್ ಕೆಲಸಕ್ಕೆ ತೆರಳುತ್ತಿದ್ದ ಹತ್ತು ಮಹಿಳೆಯರಿಗೆ ಗಂಭೀರ ಗಾಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ದಿಂಡವರ ಬಳಿ ನಡೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಟಾಟಾ ಮ್ಯಾಜಿಕ್ ವಾಹನದ ಚಾಲಕ ಪ್ರತಿದಿನ ಹೊಸಹಳ್ಳಿ, ಶೇಷಪ್ಪನಹಳ್ಳಿ, ಮಾದೇನಹಳ್ಳಿ, ಕೆಂಚಯ್ಯನಹಟ್ಟಿ, ಹಂದಿಗನಡು ಗ್ರಾಮದಿಂದ ಮಹಿಳೆಯರನ್ನು ದಿಂಡಾವರ ದುಗ್ಗಾಣಿ ಹಟ್ಟಿ ಹತ್ತಿರವಿರುವ ಗಾರ್ಮೆಂಟ್ಸ್ಗೆ ಕರೆದುಕೊಂಡು ಹೋಗುತ್ತಿದ್ದರು. ಎಂದಿನಂತೆ ಇಂದು (ಮಂಗಳವಾರ) ಕರೆದುಕೊಂಡು ಹೋಗುತ್ತಿದ್ದ ವೇಳೆ ಘಟನೆ ಸಂಭವಿಸಿದೆ.
ಈ ಸುದ್ದಿ ಓದಿದ್ದೀರಾ?: ರಾಯಚೂರು | ಸರ್ಕಾರಿ ಜಮೀನಿನಲ್ಲಿ ಆಕ್ರಮ ಮಣ್ಣು ಗಣಿಗಾರಿಕೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ವಾಹನ ಪಲ್ಟಿಯಾದ ಹೊಡೆತಕ್ಕೆ ಮಹಿಳೆಯರ ಕೈಕಾಲಿಗೆ ಪೆಟ್ಟಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಸ್ಥಳೀಯರು ಗಾಯಾಳುಗಳನ್ನು ತಕ್ಷಣವೇ ಹಿರಿಯೂರು ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಪಘಾತದ ಸುದ್ದಿ ತಿಳಿದ ತಕ್ಷಣ ಹಿರಿಯೂರು ತಾಲೂಕಿನ ಶಾಸಕಿ ಕೆ. ಪೂರ್ಣಿಮಾ ಶ್ರೀನಿವಾಸ್ ಅವರು, ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಮಹಿಳೆಯರನ್ನು ವಿಚಾರಿಸಿದ್ದಾರೆ. ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುವಂತೆ ತಿಳಿಸಿದ್ದಾರೆ.