ಚಿತ್ರದುರ್ಗ | ಸುವರ್ಣಮುಖಿ ನದಿ ಸೇತುವೆ ಕುಸಿತ: 15ಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತ

  • 38 ವರ್ಷಗಳ ಹಳೆಯ ಸೇತುವೆ ಸತತ ಮಳೆಯಿಂದ ಶಿಥಿಲಗೊಂಡಿತ್ತು
  • ಸೇತುವೆ ಕುಸಿದ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಶಾಸಕಿ

ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಮ್ಯಾದನಹೊಳೆ - ಸಮುದ್ರದಹಳ್ಳಿ ನಡುವೆ ಸುವರ್ಣಮುಖಿ ನದಿಗೆ ನಿರ್ಮಿಸಲಾಗಿದ್ದ ಸೇತುವೆ ಮಂಗಳವಾರ ರಾತ್ರಿ ಕುಸಿದು ಬಿದ್ದಿದೆ.

60 ಮೀಟರ್ ಉದ್ದವದ ಸೇತುವೆಯನ್ನು 1979-80ರಲ್ಲಿ ನಿರ್ಮಿಸಲಾಗಿತ್ತು. ಈ ಸೇತುವೆ ಕುಸಿದು ಬಿದ್ದಿರುವುದರಿಂದ ಕೋಡಿಹಳ್ಳಿ, ಕುರುಬರಹಳ್ಳಿ ಭಾಗದ ಜನರು ಸಮುದ್ರದಹಳ್ಳಿ ಪ್ರವೇಶಿಸುವ ಮಾರ್ಗ ಸಂಪೂರ್ಣ ಕಡಿತಗೊಂಡಿದೆ. ಅಲ್ಲದೆ, ಆರನಕಟ್ಟೆಯಲ್ಲಿರುವ ಪ್ರೌಢಶಾಲೆ ಹಾಗೂ ಕಾಲೇಜಿಗೆ ಪ್ರತಿನಿತ್ಯ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ.

ಇತ್ತೀಚೆಗೆ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಹಿರಿಯೂರಿನ ಸುತ್ತಮುತ್ತಲಿರುವ ಕೆರೆ ಕಟ್ಟೆ ಸೇರಿದಂತೆ ಐತಿಹಾಸಿಕ ಮಾರಿಕಣಿವೆ ಜಲಾಶಯ ತುಂಬಿ ಕೋಡಿ ಬಿದ್ದಿದ್ದು, ಸುವರ್ಣಮುಖಿ ನದಿ ಮೈದುಂಬಿ ಹರಿಯುತ್ತಿದೆ. 

ಇದರಿಂದಾಗಿ, ಈಗ ಕುಸಿದು ಬಿದ್ದಿರುವ ಸೇತುವೆಯೂ ಸೇರಿದಂತೆ ಹಿರಿಯೂರಿನ ಬಹುತೇಕ ಸೇತುವೆಗಳ ಮೇಲೆ ನೀರು ಹರಿಯುತ್ತಿತ್ತು. ನೀರಿನ ರಭಸಕ್ಕೆ ಶಿಥಿಲಗೊಂಡಿದ್ದ ಸೇತುವೆ ನೀರು ಕಡಿಮೆಯಾದ ಕೂಡಲೇ ಕುಸಿದು ಬಿದ್ದಿದೆ ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹಿರಿಯೂರು ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ, ಲೋಕೋಪಯೋಗಿ ಅಧಿಕಾರಿಗಳು ಹಾಗೂ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷರಾದ ಡಿ.ಟಿ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದೀ ಓದಿದ್ದೀರಾ?: ಹುಬ್ಬಳ್ಳಿ–ಬೆಂಗಳೂರು ಮಾರ್ಗದ ನಡುವೆ ಶೀಘ್ರವೇ ಎಲೆಕ್ಟ್ರಿಕ್ ರೈಲು ಸಂಚಾರ

ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ ಮಾತನಾಡಿ, “ಸೇತುವೆಯು ರಾತ್ರಿ ಕುಸಿದು ಬಿದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸೇತುವೆ ದುರಸ್ತಿ ಕೈಗೊಳ್ಳಲು ಕಾಲಾವಕಾಶ ಹಿಡಿಯಲಿದ್ದು, ಪರ್ಯಾಯ ಮಾರ್ಗ ಪರಿಶೀಲಿಸಲಾಗುತ್ತಿದೆ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಮುನ್ನೆಚ್ಚರಿಕಾ ಕ್ರಮವಾಗಿ ಸ್ಥಳಕ್ಕೆ ಪೊಲೀಸರನ್ನು ನಿಯೋಜಿಸಲಾಗಿದೆ” ಎಂದು ತಿಳಿಸಿದ್ದಾರೆ.

ವಿಧಾನಸಭಾ ಅಧಿವೇಶನದಲ್ಲಿ ಇದರ ಬಗ್ಗೆ ಪ್ರಸ್ತಾಪ ಮಾಡಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್, “38 ವರ್ಷಗಳ ಹಿಂದೆ ಪೈಪ್‌ಗಳನ್ನು ಹಾಕಿ ನಿರ್ಮಾಣ ಮಾಡಲಾಗಿದ್ದ ಶಿರಾ ಮತ್ತು ಹಿರಿಯೂರು ಗಡಿಯಲ್ಲಿರುವ ಸೇತುವೆಯು ಕುಸಿದು ಬಿದ್ದಿದ್ದು, ಹದಿನೈದಕ್ಕೂ ಹೆಚ್ಚು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಈ ಮಾರ್ಗದಲ್ಲಿ ದಿನನಿತ್ಯ ಶಾಲಾ-ಕಾಲೇಜಿಗೆ ಓಡಾಡುವ ವಿದ್ಯಾರ್ಥಿಗಳಿಗೆ ತೊಂದರೆಯುಂಟಾಗಿದೆ. ಹಾಗಾಗಿ ಆದಷ್ಟು ಬೇಗ ಸೇತುವೆ ಮರು ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು” ಎಂದು ಮನವಿ ಮಾಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್