ಚಿತ್ರದುರ್ಗ | ತಾ.ಪಂ. ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ತಿಪ್ಪಾರೆಡ್ಡಿ

  • ಚೆಕ್‌ ಡ್ಯಾಮ್‌ ನಿರ್ಮಾಣದ ಹೆಸರಿನಲ್ಲಿ ಅವ್ಯವಹಾರ
  • ಕಾಮಗಾರಿಗೂ ಮೊದಲು ಒತ್ತುವರಿಗಳ ತೆರವಿಗೆ ಸೂಚನೆ

ಚಿತ್ರದುರ್ಗ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ತಾಲೂಕು ಪಂಚಾಯತಿ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ಶಾಸಕರು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಚಿತ್ರದುರ್ಗ ತಾಲೂಕಿನ ಇಂಗಾಳದಾಳು ಗ್ರಾಮ ಪಂಚಾಯತಿಯಲ್ಲಿ ಚೆಕ್‌ ಡ್ಯಾಮ್‌ ನಿರ್ಮಾಣದ ಹೆಸರಿನಲ್ಲಿ ₹ 6ರಿಂದ  ₹7ಕೋಟಿ ಅವ್ಯವಹಾರ ನಡೆದಿದ್ದು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ ಎಂಬ ಮಾಹಿತಿಯನ್ನು ಶಾಸಕ ಜಿ ಎಚ್‌ ತಿಪ್ಪಾರೆಡ್ಡಿ ಬಹಿರಂಗಗೊಳಿಸಿದ್ದಲ್ಲದೇ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಮಾತನಾಡಿದ ಶಾಸಕರು, “ಕೆಲ ವರ್ಷಗಳ ಹಿಂದೆ ನಿರ್ಮಿಸಿದ್ದ ಚೆಕ್‌ ಡ್ಯಾಮ್‌ಗೆ ಸುಣ್ಣ ಬಳಿದು ದಾಖಲೆಗಳನ್ನು ಸಲ್ಲಿಸಿ ಬಿಲ್‌ ಮಾಡಿಸಿದ್ದಾರೆ. ಈ ವಿಚಾರ ಗಮನಕ್ಕೆ ಬಂದಿದ್ದು, ಈ ಕುರಿತು ಮಾಹಿತಿ ಕಲೆ ಹಾಕಿದ ಬಳಿಕ ಅವ್ಯವಹಾರ ನಡೆದಿರುವುದು ದೃಢಪಟ್ಟಿದೆ. ಅಧಿಕಾರಿಗಳು ಪರಿಶೀಲನೆಗೆ ತೆರಳುವ ಮುನ್ನ ದಾಖಲೆಗಳು ಸಿಗದಂತೆ ಸುಟ್ಟು ಹಾಕಲಾಗಿದೆ” ಎಂದು ತಿಳಿಸಿದರು. 

“ಅಕ್ರಮವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಅಧಿಕಾರಿಗಳ ವಿಶೇಷ ತಂಡ ರಚಿಸಿ, ಲೆಕ್ಕ ಪರಿಶೋಧನೆ ನಡೆಸಿದ ವರದಿಯನ್ನು ತಾಲೂಕು ಹಾಗೂ ಜಿಲ್ಲಾ ಪಂಚಾಯತಿಗೆ ಸಲ್ಲಿಸಬೇಕು. ಈ ಮೊದಲು ಕರ್ತವ್ಯ ನಿರ್ವಹಿಸಿರುವ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇತೃತ್ವದ ವಿಶೇಷ ತಂಡಕ್ಕೆ ಎಲ್ಲ ದಾಖಲೆಗಳನ್ನು ಒದಗಿಸಬೇಕು” ಎಂದು ಸೂಚಿಸಿದರು. 

“ಅಕ್ರಮ ಎಸಗಿದವರು ಅಧಿಕಾರಿಗಳ ತಂಡಕ್ಕೆ ಸರಿಯಾದ ಮಾಹಿತಿ ಮತ್ತು ದಾಖಲೆಗಳನ್ನು ಒದಗಿಸಬೇಕು. ಇಲ್ಲದಿದ್ದರೆ ಈ ಪ್ರಕರಣವನ್ನು ಲೋಕಾಯುಕ್ತಕ್ಕೆ ವಹಿಸುತ್ತೇನೆ. ಆಗ ಭಾಗಿಯಾದವರು ಯಾರೆಂದು ತಿಳಿಯುತ್ತದೆ” ಎಂದು ಎಚ್ಚರಿಸಿದರು.

ಸಂಚಾರ ಠಾಣೆ ಪೊಲೀಸರೊಂದಿಗೆ ಸಭೆ ನಡೆಸಿದ್ದು, ನಗರ ಬಸ್‌ ಸಂಚಾರ ವ್ಯವಸ್ಥೆಯನ್ನು ಜಾರಿಗೊಳಿಸಿ, ಬಸ್ ಸಂಚಾರದ ವೇಳಾಪಟ್ಟಿ ಹಾಗೂ ಅಗತ್ಯ ಸಿದ್ಧತೆಗಳನ್ನು ನಡೆಸಿ ಜನತೆಗೆ ಅನುಕೂಲವಾಗುವಂತೆ ಮಾಡಿ” ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ವ್ಯವಸ್ಥಾಪಕರಿಗೆ ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಕನ್ನಡ ಶಾಲೆಯ ಸಮಾಧಿ ಮೇಲೆ ವಿವೇಕ ಸ್ಮಾರಕ; ಶಾಲೆ ಉಳಿವಿಗಾಗಿ ಹೋರಾಟ

ನಗರದಲ್ಲಿ ಸಿಸಿ ರಸ್ತೆ ಕಾಮಗಾರಿ ನಡೆಯುತ್ತಿರುವುದನ್ನು ಕುರಿತು “ಕೋಟ್ಯಂತರ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದೆ. ಆದರೆ, ರಸ್ತೆ ಮಧ್ಯೆ ಕಾರಿನ ಚಕ್ರ ಇಳಿಯುವಷ್ಟು ಅಂತರವಿದೆ. ಮೊದಲು ರಸ್ತೆಗಳನ್ನು ಪೂರ್ಣಗೊಳಿಸಿ. ನೀವು ಮಾಡಿರುವ ಅವಾಂತರಕ್ಕೆ ನಮಗೆ ಜನರಿಂದ ದೂರು ಕೇಳಿ ಕೇಳಿ ಸಾಕಾಗಿದೆ” ಎಂದು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.

ನಗರದ ಕನಕ ವೃತ್ತದಿಂದ ಎಸ್‌ಜೆಎಂ ಕಾಲೇಜು, ಭೀಮಸಮುದ್ರ ಮಾರ್ಗದ ರಸ್ತೆ ಕಾಮಗಾರಿ ನಡೆಯುತ್ತಿದೆ. ಕಾಮಗಾರಿಗೂ ಮೊದಲು ಎಲ್ಲ ಒತ್ತುವರಿಗಳನ್ನು ತೆರವುಗೊಳಿಸಬೇಕು. ಮೇದೆಹಳ್ಳಿ ರಸ್ತೆಯ ಕಾಮಗಾರಿಯ ಲೋಪ ಸರಿಪಡಿಸಬೇಕು. ಸೆಪ್ಟೆಂಬರ್‌ ಅಂತ್ಯಕ್ಕೆ ಎಲ್ಲ ರಸ್ತೆ ಕಾಮಗಾರಿಗಳು ಪೂರ್ಣವಾಗಬೇಕು” ಎಂದು ಹೇಳಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಾ. ಕೆ ನಂದಿನಿದೇವಿ, ತಾಲೂಕು ಪಂಚಾಯತಿ ಇಒ ಹನುಮಂತಪ್ಪ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಸಭೆಯಲ್ಲಿ  ಇದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್