ಚಿತ್ರದುರ್ಗ | ನೆಲೆ ಇಲ್ಲದ ಸುಡುಗಾಡು ಸಿದ್ಧರ ಗುಡಿಸಲುಗಳನ್ನೂ ಕಿತ್ತುಕೊಂಡರು

  • ಗಾಳಿ ಮಳೆಯಲ್ಲಿ ಊಟ; ನಿದ್ರೆ ಇಲ್ಲದೆ ನಲುಗಿದ ವೃದ್ಧರು, ಮಕ್ಕಳು, ಮಹಿಳೆಯರು
  • ಸುಡುಗಾಡು ಸಿದ್ಧರ ನಿವೇಶನಕ್ಕೆ 2 ಎಕರೆ ಜಮೀನು ಮಂಜೂರಾಗಿದೆ: ತಹಶೀಲ್ದಾರ್

ಹೇಳಿಕೇಳಿ ಈಗ ಮಳೆಗಾಲ; ಜೋರು ಗಾಳಿ ಮಳೆ, ಚಳಿಯಿಂದ ರಕ್ಷಣೆ ಪಡೆಯಲು ಈ ಸಂದರ್ಭದಲ್ಲಿ ಬೆಚ್ಚನೆಯ ಮನೆ ಇರಬೇಕು ಎಂಬುದು ಎಲ್ಲರ ಅಪೇಕ್ಷೆ. ಆದರೆ, ಇಲ್ಲಿ ಆಸರೆಯಾಗಿದ್ದ ಪುಟ್ಟ ಗುಡಿಸಲುಗಳನ್ನೇ ಅಧಿಕಾರಿಗಳು ಕಿತ್ತು ಹಾಕಿದ್ದು, ಪುಟಾಣಿ ಮಕ್ಕಳು, ವೃದ್ಧರು ಮಳೆಯಲ್ಲಿಯೇ ಹಗಲು ರಾತ್ರಿ ಬದುಕು ದೂಡುವ ಸ್ಥಿತಿ ಎದುರಾಗಿದೆ.

ಇದು ಚಿತ್ರದುರ್ಗ ಬಳಿಯ ಬೆಂಗಳೂರು ಹೆದ್ದಾರಿ ಪಕ್ಕದ ಖಾಸಗಿ ಜಮೀನಲ್ಲಿ ಗುಡಿಸಲು ನಿರ್ಮಿಸಿಕೊಂಡು ಬದುಕು ಸಾಗಿಸುತ್ತಿರುವ ಸುಡುಗಾಡು ಸಿದ್ಧರ ರೋದನೆ. ಸುಡುಗಾಡು ಸಿದ್ಧ ಸಮುದಾಯದ ಸುಮಾರು 40 ಕುಟುಂಬಗಳು ನಿಲ್ಲಲು ನೆಲೆ ಇಲ್ಲದೆ ಬಯಲಿನಲ್ಲೇ ಬದುಕು ಸಾಗಿಸುತ್ತಿದ್ದಾರೆ.

Eedina App

ಕಾವಿ ತೊಟ್ಟು ಊರೂರು ತಿರುಗಿ ಭಿಕ್ಷಾಟನೆ ಮಾಡುವುದು ಇವರ ಪ್ರಮುಖ ಕಸುಬು. ಅದರ ಜತೆಗೆ ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಿದ ಅಲಂಕಾರಿಕ ವಸ್ತುಗಳು, ಹೂವಿನ ಕುಂಡಗಳು, ಹೇರ್ ಪಿನ್, ಬಲೂನು, ಸೂಜಿ ದಾರ, ಹಣೆ ಬೊಟ್ಟು ಹೀಗೆ ಸಣ್ಣಪುಟ್ಟ ವ್ಯಾಪಾರ ಮಾಡಿ, ಬಂದ ಅಷ್ಟೋ ಇಷ್ಟೋ ಹಣದಿಂದ ಜೀವನ ನಡೆಸುತ್ತಿದ್ದಾರೆ.

ಚಿತ್ರದುರ್ಗದಲ್ಲಿ ಹೀಗೆ ಪುಟ್ಟ ಗುಡಿಸಲುಗಳನ್ನು ನಿರ್ಮಿಸಿಕೊಂಡು ಕಳೆದ ಐದಾರು ವರ್ಷಗಳಿಂದ ವಾಸವಿದ್ದ ಸುಮಾರು 40 ಕುಟುಂಬಗಳನ್ನು ಈಗ ಮತ್ತೆ ಬೀದಿಗೆ ತಳ್ಳಲಾಗಿದೆ. ಜಾಗವನ್ನು ಕೂಡಲೇ ಖಾಲಿ ಮಾಡುವಂತೆ ಚಿತ್ರದುರ್ಗ ತಹಶೀಲ್ದಾರ್ ಹಾಗೂ ಸ್ಥಳೀಯ ಶಾಸಕರು, ಸುಡುಗಾಡು ಸಿದ್ಧರಿಗೆ ಬೆದರಿಕೆ ಹಾಕಿ, ಗುಡಿಸಲುಗಳನ್ನು ಕಿತ್ತು ಹಾಕಿದ್ದಾರೆ.

AV Eye Hospital ad

ಗುಡಿಸಲು ಬೀಳಿಸಿದ್ದರಿಂದ ಶನಿವಾರ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಮಕ್ಕಳು, ವೃದ್ಧರು, ಗರ್ಭಿಣಿಯರು, ಅನಾರೋಗ್ಯದಿಂದ ಬಳಲುತ್ತಿರುವವರು ಗೋಳಾಡಬೇಕಾಗಿದೆ. ರಾತ್ರಿಯೆಲ್ಲ ಊಟ, ನಿದ್ರೆಯಿಲ್ಲದ ಇವರ ಪರಿಸ್ಥಿತಿ ನೋಡಿದರೆ ಎಂಥವರಿಗೂ ಹೃದಯ ಕರಗದೆ ಇರಲಾರದು.

“ನಿಮಗೆ ಸೈಟ್ ಕೊಟ್ಟಿದ್ದೇವೆ ಇಲ್ಲಿಂದ ಹೋಗಿ ಹೋಗಿ ಎಂದು ಹೇಳುತ್ತಾರೆ. ಈವರೆಗೆ ಮೂರು ನಾಲ್ಕು ಬಾರಿ ನಮ್ಮ ಗುಡಿಸಲು ಕೀಳಿಸಿದ್ದಾರೆ. ಗುಡಿಸಿಲಿನಲ್ಲಿ ಪುಟ್ಟ ಮಕ್ಕಳು, ವೃದ್ಧರು, ಗರ್ಭಿಣಿಯರು ಇದ್ದಾರೆ. ಏಕಾಏಕಿ ಗುಡಿಸಲುಗಳನ್ನು ಕಿತ್ತರೆ ನಾವು ಎಲ್ಲಿಗೆ ಹೋಗಬೇಕು? ಯಾರಿಗೂ ಸ್ವಂತ ಜಮೀನಾಗಲಿ, ನಿವೇಶನವಾಗಲಿ ಇಲ್ಲ. ಏನು ಮಾಡಬೇಕು ತಿಳಿಯುತ್ತಿಲ್ಲ” ಎಂದು ಸುಡುಗಾಡು ಸಿದ್ಧರ ಮಹಿಳೆಯೊಬ್ಬರು ತಮ್ಮ ಅಳಲು ತೋಡಿಕೊಂಡರು.

ಈ ಕುರಿತು ಅಖಿಲ ಕರ್ನಾಟಕ ಸುಡುಗಾಡು ಸಿದ್ಧರ ಮಹಾಸಂಘದ ರಾಜ್ಯ ಉಪಾಧ್ಯಕ್ಷ ವೀರೇಶ್, ಈ ದಿನ.ಕಾಮ್ ಜತೆಗೆ ಮಾತನಾಡಿ, “ಸುಡುಗಾಡು ಸಿದ್ಧ ಸಮುದಾಯದ ಸುಮಾರು 40 ಕುಟುಂಬಗಳು ಮೊದಲು ಮೆದೆಹಳ್ಳಿಯಲ್ಲಿ ವಾಸವಿದ್ದರು. ಈಗ ಕಳೆದ ಐದು ವರ್ಷಗಳಿಂದ ಚಿತ್ರದುರ್ಗ ಮತ್ತು ಬೆಂಗಳೂರು ನಡುವಿನ ಹೆದ್ದಾರಿ ಪಕ್ಕದ ಖಾಸಗಿ ಜಮೀನಲ್ಲಿ ವಾಸವಿದ್ದರು. ಅವರಿಗೆ ಕಾಲಾವಕಾಶ ನೀಡದೇ ಏಕಾಏಕಿ ಗುಡಿಸಲು ಕಿತ್ತು ಹಾಕಿದ್ದಾರೆ. ಸುಡುಗಾಡು ಸಿದ್ಧರ ಕುಟುಂಬಗಳ ನಿವೇಶನಕ್ಕೆ 2 ಎಕರೆ ಜಮೀನು ಮೀಸಲಿಡಲಾಗಿದೆ ಎಂದು ಹೇಳುತ್ತಾರೆ. ಅಲ್ಲಿ ಶೀಘ್ರವೇ ನಿವೇಶನ ಸಿದ್ಧಪಡಿಸಿ ಹಂಚಿಕೆ ಮಾಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ರಾಜಸ್ಥಾನ | ಅಕ್ರಮ ಸಂಬಂಧ ಶಂಕೆ; ಪತ್ನಿಯನ್ನು ಮರಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ ಪತಿ

ಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ್, ಈ ದಿನ.ಕಾಮ್ ಜತೆಗೆ ಮಾತನಾಡಿ, “ಸುಡುಗಾಡು ಸಿದ್ಧರು ಖಾಸಗಿ ಜಮೀನಲ್ಲಿ ಗುಡಿಸಲುಗಳನ್ನು ಹಾಕಿಕೊಂಡು ವಾಸವಿದ್ದರು. ಆ ಜಮೀನಿನ ಮಾಲೀಕ ನಮಗೆ ದೂರು ನೀಡಿದ್ದರು, ಹಾಗಾಗಿ ಗುಡಿಸಲುಗಳನ್ನು ತೆರುವು ಮಾಡುವಂತೆ ತಿಳಿಸಿದ್ದೇವೆ. ಸುಡುಗಾಡು ಸಿದ್ಧರ ನಿವೇಶನಗಳಿಗಾಗಿ 2 ಎಕರೆ ಜಮೀನು ಮಂಜೂರಾಗಿದೆ. ನಿವೇಶನಗಳನ್ನು ಅಭಿವೃದ್ಧಿ ಮಾಡುವ ಪ್ರಕ್ರಿಯೆ ನಡೆಯುತ್ತಿದ್ದು, ಸದ್ಯದಲ್ಲೇ ಸುಡುಗಾಡು ಸಿದ್ಧರಿಗೆ ಹಂಚಿಕೆ ಮಾಡಲಾಗುವುದು” ಎಂದು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app