
- ಚಿತ್ರದುರ್ಗ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟ
- 'ಕಠಿಣ ಪರಿಸ್ಥಿತಿ ಎದುರಾದರೂ ಪ್ರಯತ್ನ ನಿಲ್ಲಬಾರದು'
ಸತತ ಹಾಗೂ ಪ್ರಾಮಾಣಿಕ ಪ್ರಯತ್ನ ಮಾಡಿದರೆ ಖಂಡಿತವಾಗಿ ಯಶಸ್ಸು ಲಭಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಅದನ್ನು ಕ್ರೀಡಾ ಸ್ಫೂರ್ತಿಯಿಂದ ಸ್ವೀಕರಿಸಬೇಕು. ಸೋತವರು ಗೆಲುವಿಗಾಗಿ, ಗೆದ್ದವರು ವಿಶ್ವ ದಾಖಲೆಗಾಗಿ ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮಂಗಳವಾರ ಚಿತ್ರದುರ್ಗ ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು. "ಎಂತಹುದೇ ಕಠಿಣ ಪರಿಸ್ಥಿತಿ ಎದುರಾದರೂ ಪ್ರಯತ್ನಿಸುವುದನ್ನು ನಿಲ್ಲಿಸಬಾರದು. ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದರ ಮೂಲಕ ಕ್ರೀಡೆಯಲ್ಲಿ ಸದಾ ಮುಂದವರೆಯಬೇಕು. ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಉತ್ತಮ ಮನೋಭಾವದಿಂದ ಪಾಲ್ಗೊಂಡು ಕ್ರೀಡಾಕೂಟ ಯಶಸ್ವಿಗೊಳಿಸಿ" ಎಂದು ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ಮಾತನಾಡಿ, "ದೈಹಿವಾಗಿ ಸಧೃಡರಾಗಿರವವರು ಮಾತ್ರ ಪೊಲೀಸ್ ಇಲಾಖೆಯಲ್ಲಿ ಕೆಲಸಕ್ಕೆ ಆಯ್ಕೆಯಾಗುತ್ತಾರೆ. ಇದಕ್ಕೆ ಹೊರತಾಗಿ ಮಾಸಿಕವಾಗಿ ಹಾಗೂ ಬೌದ್ಧಿಕವಾಗಿ ಬಲಿಷ್ಠಾವಾಗಿರುವರನ್ನು ವಿವಿಧ ಆಯಾಮಗಳಲ್ಲಿ ಪರಿಗಣಿಸಿ ಅಧಿಕಾರಿಗಳ ಹುದ್ದೆ ನೇಮಿಸಲಾಗುತ್ತದೆ. ಆದರೆ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ಆಯ್ಕೆಯಾದವರು ದೈಹಿಕವಾಗಿ ಸಧೃಡರಾಗಿರುತ್ತಾರೆ. ಅವರೆಲ್ಲರೂ ಕ್ರೀಡೆ ಹಿನ್ನಲೆಯಿಂದ ಬಂದವರಾಗಿರುತ್ತಾರೆ" ಎಂದರು.
"ವಾರ್ಷಿಕ ಕ್ರೀಡಾ ಕೂಟ ಎಲ್ಲರಿಗೂ ಹಬ್ಬವಿದ್ದಂತೆ. ಸಹೋದ್ಯೋಗಿಗಳೊಂದಿಗೆ ಕ್ರೀಡಾ ಮನೋಭವದಿಂದ ಭಾಗಿಯಾವುದು ಮಹತ್ವವಾಗುತ್ತದೆ. ಬಿಡುವಿಲ್ಲದ ಹಾಗೂ ಕಠಿಣ ಕೆಲಸದ ನಡುವೆಯು ನಮ್ಮನ್ನು ನಾವು ಮರು ಹೊಂದಾಣಿಕೆ ಮಾಡಿಕೊಳ್ಳಲು ಕ್ರೀಡೆ ಸಹಕಾರಿಯಾಗಿದೆ. ಇಂತಹ ಅವಕಾಶವನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕು. ಎಲ್ಲರೂ ಆಸಕ್ತಿಯಿಂದ ಪಾಲ್ಗೊಳ್ಳಬೇಕು. ನಿಮ್ಮ ನಿಮ್ಮ ಉಪವಿಭಾಗಗಳಿಗೆ ಹೆಮ್ಮೆ ತರುವ ಕೆಲಸ ಮಾಡಬೇಕು. ಕ್ರೀಡಾ ಸ್ಪೂರ್ತಿ ಮೆರೆಯಬೇಕು" ಎಂದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಪ್ರಾದೇಶಿಕ ಅರಣ್ಯ ವಿಭಾಗ ಉಪ ಸಂರಕ್ಷಣಾಧಿಕರಿ ರಾಜಣ್ಣ, ಐಮಂಗಲ ಪೊಲೀಸ್ ತರಬೇತಿ ಶಾಲೆಯ ಪ್ರಾಂಶಪಾಲ ಪಿ.ಪಾಪಣ್ಣ, ಡಿಎಆರ್ ಡಿವೈಎಸ್ಪಿ ಜಿ.ಎಂ.ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಉಪವಿಭಾಗಗಳ ಡಿವೈಎಸ್ಪಿ, ಸಿಪಿಐ, ಪಿಎಸ್ಐ ಅಧಿಕಾರಿಗಳು ಸಿಬ್ಬಂದಿ ಇದ್ದರು.