ಜುಲೈ 1ರಿಂದ ಕೆಲಸ ಸ್ಥಗಿತಗೊಳಿಸಿ ಪೌರ ಕಾರ್ಮಿಕರ ಮುಷ್ಕರ

  • ನಿವೃತ್ತರಾಗುವ ಸ್ವಚ್ಛತಾ ಕಾರ್ಮಿಕರಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು
  • ಅವೈಜ್ಞಾನಿಕ ವಿಭಾಗೀಕರಣ ಬಿಟ್ಟು ಎಲ್ಲ ಕಾರ್ಮಿಕರನ್ನು ಸಮಾನವಾಗಿ ಕಾಣಬೇಕು

ರಾಜ್ಯದ ಎಲ್ಲ ನೇರ ಪಾವತಿ, ಗುತ್ತಿಗೆ ಪೌರ ಕಾರ್ಮಿಕರು, ಲೋಡರ್‍ಸ್‌, ಕಸದ ವಾಹನ ಚಾಲಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರನ್ನು ಒಂದೇ ಬಾರಿಗೆ ಕಾಯಂಗೊಳಿಸುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಜುಲೈ 1 ರಿಂದ ಪೌರ ಕಾರ್ಮಿಕರ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಗಲಿದೆ.

ಜುಲೈ 1ರಿಂದ ಬೆಂಗಳೂರಿನ ಸ್ವಾತಂತ್ಯ್ರ ಉದ್ಯಾನವನದಲ್ಲಿ ಮುಷ್ಕರ ಆರಂಭವಾಗಲಿದ್ದು, 15 ರಿಂದ 16 ಸಾವಿರ ಪೌರ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪೌರ ಕಾರ್ಮಿಕರು ಮುಷ್ಕರ ಕೈಗೊಳ್ಳಲಿದ್ದಾರೆ.

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಸಫಾಯಿ ಕರ್ಮಚಾರಿ ಕಾವಲು ಸಮಿತಿ ರಾಜ್ಯ ಸಂಚಾಲಕ ಕೆ ಬಿ ಓಬಳೇಶ, ”ಪೌರ ಕಾರ್ಮಿಕರ ಪ್ರಮುಖ ಬೇಡಿಕೆ ನೌಕರಿಯನ್ನು ಕಾಯಂಗೊಳಿಸುವುದು. 2016-17ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಗುತ್ತಿಗೆ ಪದ್ಧತಿ ರದ್ದುಪಡಿಸಿ. ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಕಾಯಂ ಮಾಡುವ ನಿರ್ಧಾರ ತೆಗೆದುಕೊಂಡಿತ್ತು. ಆದರೆ, ನಗರಾಭಿವೃದ್ಧಿ ಇಲಾಖೆ ಮತ್ತು ಪೌರಾಡಳಿತ ನಿರ್ದೇಶನಾಲಯದ ದಲಿತ ಪೌರ ಕಾರ್ಮಿಕರ ವಿರೋಧಿ ಅಧಿಕಾರಿಗಳು, ಸಚಿವ ಸಂಪುಟದ ನಿರ್ಣಯವನ್ನು ಯಥಾವತ್ತಾಗಿ ಅನುಷ್ಠಾನ ಮಾಡದೇ ಪೌರ ಕಾರ್ಮಿಕರ ವಿಶೇಷ ನೇಮಕಾತಿ ನಿಯಮಗಳು-2017 ಎಂಬ ನಿಯಮ ಜಾರಿ ಮಾಡಿ ಆ ನಿಯಮದ ಅಡಿಯಲ್ಲಿ  ಕಾರ್ಮಿಕರನ್ನು ವಿಂಗಡಿಸಿದರು" ಎಂದು ದೂರಿದರು.

52,000 ಜನ ಸ್ವಚ್ಛತಾ ಕಾರ್ಮಿಕರು

"ರಾಜ್ಯದಾದ್ಯಂತ 33,000 ಪೌರ ಕಾರ್ಮಿಕರು, 12,900 ಮಂದಿ ಲೋಡರ್‍ಸ್‌, 1,000 ಒಳಚರಂಡಿ ಕಾರ್ಮಿಕರು ಸೇರಿ ಒಟ್ಟು 52,000 ಮಂದಿ ಸ್ಚಚ್ಛತಾ ಕಾರ್ಮಿಕರು ಇದ್ದೇವೆ" ಎಂದರು.

"ರಾಜ್ಯ ಸರ್ಕಾರ ಈಗಾಗಲೇ ಪೌರ ಕಾರ್ಮಿಕ ಇಲಾಖೆಯಲ್ಲಿ 43 ಸಾವಿರ ಕಾಯಂ ಹುದ್ದೆಗಳನ್ನು ನೀಡಿದೆ. ಆದರೆ, ಇಲಾಖೆ ಹೊರಗುತ್ತಿಗೆ ಮೇಲೆ 10 ಸಾವಿರ ಮಂದಿಯಿಂದ ಕೆಲಸ ಮಾಡಿಸುತ್ತಿದೆ. ಹಾಗಾದರೆ ಉಳಿದ ಹುದ್ದೆಗಳ ಪರಿಸ್ಥಿತಿ ಏನು? ಆ ಹುದ್ದೆಗಳ ಭರ್ತಿ ಯಾವಾಗ?" ಎಂದು ಪ್ರಶ್ನಿಸಿದರು.

"ಕೆಲವರು ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಮಿಕರಿಗೆ ನೀಡುತ್ತಿರುವ ಸಂಬಳ ಬಹಳ ಕಡಿಮೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದರೂ ಕೂಡಾ ಸರ್ಕಾರ ಕಾರ್ಮಿಕರನ್ನು ತಾತ್ಸಾರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರವನ್ನು ಕೈಗೊಳ್ಳಲಿದ್ದೇವೆ. ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ" ಎಂದು ಅವರು ಹೇಳಿದರು.

"ಪೌರ ಕಾರ್ಮಿಕ ಸಂಘಟಣೆಗಳು, ದಲಿತ ಸಂಘಟಣೆಗಳು, ಎಡಪಂಥೀಯ ಸಂಘಟಣೆಗಳು ಇನ್ನಿತರ ಹಲವು ಸಂಘಟಣೆಗಳು ಸೇರಿ ಪೌರ ಕಾರ್ಮಿಕ ಜಂಟಿ ಹೋರಾಟ ಸಮಿತಿ ಮಾಡಿಕೊಂಡು ಮುಷ್ಕರ ಮಾಡಲಿದ್ದೇವೆ" ಎಂದು ಓಬಳೇಶ ಮಾಹಿತಿ ನೀಡಿದರು.

ಪೌರ ಕಾರ್ಮಿಕರ ಬೇಡಿಕೆಗಳು

1. ನೇರ ಪಾವತಿ ಪೌರಕಾರ್ಮಿಕರು, ಹೊರಗುತ್ತಿಗೆ, ಕ್ಷೇಮಾಭಿವೃದ್ಧಿ, ಮನೆ-ಮನೆ ಕಸ ಸಂಗ್ರಹಿಸುವ ಪೌರಕಾರ್ಮಿಕರು, ಒಳಚರಂಡಿ ಸ್ವಚ್ಛತಾ ಕಾರ್ಮಿಕರು, ಲೋಡರ್‍ಸ್‌, ಕಸದ ವಾಹನ ಚಾಲಕರು, ಸಹಾಯಕರು ಹಾಗೂ ಪೌರಕಾರ್ಮಿಕರ ಮೇಲ್ವಿಚಾರಕರು ಎಂಬ ಅಸಂಬದ್ಧ ವಿಗಂಡಣೆಯನ್ನು ಕೈಬಿಟ್ಟು ಎಲ್ಲಾ ಸ್ವಚ್ಛತಾ ಕಾರ್ಮಿಕರನ್ನು ಏಕಕಾಲಕ್ಕೆ ಕಾಯಂ ಮಾಡಬೇಕು.

2. ಮಹಿಳಾ ಪೌರಕಾರ್ಮಿಕರಿಗೆ ಶೌಚಾಲಯ, ಕುಡಿಯುವ ನೀರು, ಹೆರಿಗೆ ಭತ್ಯೆ, ಹೆರಿಗೆ ರಜೆ, ಬಾಲವಾಡಿ, ವಿಶ್ರಾಂತಿ ಗೃಹದಂತಹ ಅತ್ಯವಶ್ಯಕ ಮೂಲಭೂತ ಸೌಲಭ್ಯಗಳನ್ನು ರಾಜ್ಯದ ಎಲ್ಲಾ ಕಡೆ ನೀಡಬೇಕು.

3. ಪೌರ ಕಾರ್ಮಿಕರಿಗಾಗಿ ಜಾರಿ ಮಾಡಿರುವ ಗೃಹಭಾಗ್ಯ ಯೋಜನೆಯನ್ನು ಕೇವಲ ಕಾಯಂ ಪೌರಕಾರ್ಮಿಕರಿಗೆ ಸೀಮಿತ ಮಾಡಿ ಶೇ. 85ರಷ್ಟು ಸ್ವಚ್ಛತಾ ಕಾರ್ಮಿಕರಿಗೆ ತಾರತಮ್ಯ ಮಾಡಲಾಗಿದೆ. ಈ ಯೋಜನೆಯನ್ನು ಎಲ್ಲ ಕಾರ್ಮಿಕರಿಗೂ ನೀಡಬೇಕು.

4. ಕಾರ್ಮಿಕರ ಮಕ್ಕಳಿಗೆ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಲು ಅನುಕೂಲವಾಗುವಂತೆ ಅದಕ್ಕೆ ಅಗತ್ಯವಿರುವ ಹಣಕಾಸಿನ ನೆರವು ನೀಡಬೇಕು.

5. ನೇರ ಪಾವತಿಯಡಿ 60 ವರ್ಷದವರೆಗೂ ಕಾರ್ಯನಿರ್ವಹಿಸಿ ನಿವೃತ್ತಿಯಾಗುವ ಸ್ವಚ್ಛತಾ ಕಾರ್ಮಿಕರಿಗೆ ತಲಾ ₹ 10 ಲಕ್ಷ ಪರಿಹಾರ ನೀಡಬೇಕು. ಮಾಸಿಕ ₹ 5000 ಪಿಂಚಣಿ ಹಾಗೂ ಕಾರ್ಮಿಕರ ಅವಲಂಬಿತರಿಗೆ ಉದ್ಯೋಗ ನೀಡಬೇಕು. ಹಾಗೂ ಅವರ ಆರೋಗ್ಯ ಭದ್ರತೆಗಾಗಿ ಆರೋಗ್ಯ ಕಾರ್ಡ್ ನೀಡಬೇಕು.

ಈ ಸುದ್ದಿ ಓದಿದ್ದೀರಾ? ನರೇಗಾ ಯೋಜನೆಯಿಂದ ನರಳುತ್ತಿರುವ ಕೂಲಿ ಕಾರ್ಮಿಕರು

ಹರಿದ ಸಮವಸ್ತ್ರ ಧರಿಸಿಯೇ ಸಫಾಯಿ ಕೆಲಸ

ಬಿಬಿಎಂಪಿ ಪ್ರತಿ ವರ್ಷವೂ ಪೌರ ಕಾರ್ಮಿಕರಿಗೆ ಹೊಸ ಸಮವಸ್ತ್ರಗಳನ್ನು ವಿತರಿಸಬೇಕು. ಆದರೆ, 2020ರಲ್ಲಿ ಹೊಸ ಸಮವಸ್ತ್ರಗಳನ್ನು ನೀಡಿದ್ದೇ ಕೊನೆ, ಮತ್ತೆ ಇಲ್ಲಿಯವರೆಗೂ ಬಿಬಿಎಂಪಿ ಪೌರ ಕಾರ್ಮಿಕರಿಗೆ ಹೊಸ ಸಮವಸ್ತ್ರ ನೀಡಿಲ್ಲ.

ಬೆಂಗಳೂರಿನ ಶಿವಾಜಿನಗರ ಮತ್ತು ಶಾಂತಿನಗರ ಪ್ರದೇಶಗಳಲ್ಲಿ ಹಲವಾರು ಪೌರ ಕಾರ್ಮಿಕರು ಹರಿದ ಬಟ್ಟೆಗಳನ್ನು ಧರಿಸುತ್ತಿದ್ದಾರೆ. ಹಾಗೂ ಕೆಲವರು ಗಮ್ ಟೇಪ್‌ಗಳಿಂದ ಹರಿದ ಬಟ್ಟೆಗಳನ್ನು ಮುಚ್ಚಿದ್ದಾರೆ.

Image

ಕೆಲಸದ ಸಮಯದಲ್ಲಿ ಪೌರ ಕಾರ್ಮಿಕರು ಸಮವಸ್ತ್ರ ಧರಿಸದಿದ್ದರೆ, ಮಾರ್ಷ್‌ಲ್‌ಗಳು ದಂಡ ವಿಧಿಸುತ್ತಾರೆ. ಗುತ್ತಿಗೆದಾರರು ಸಹ ಸಮವಸ್ತ್ರ ಧರಿಸದವರಿಗೆ ಮಸ್ಟರ್ ಕೇಂದ್ರಗಳಲ್ಲಿ ಹಾಜರಾತಿ ಹಾಕಲು ಅನುಮತಿ ನೀಡುವುದಿಲ್ಲ. ಇದರಿಂದ ದಿನದ ಸಂಬಳ ಕಳೆದುಕೊಳ್ಳಲು ಕಾರಣವಾಗುತ್ತದೆ ಎಂದು ಕಾರ್ಮಿಕರ ಬಳಗ ಆರೋಪಿಸಿದೆ.

ನೂರರ ಲೆಕ್ಕದಲ್ಲಿ ಸಂಬಳ ಏರಿಕೆ!

"ಸರ್ಕಾರ ಸಂಬಳ ಹೆಚ್ಚಿಸುವ ಭರವಸೆ ನೀಡಿದೆಯಾದರೂ 200 ರಿಂದ 300 ರೂಪಾಯಿ ಲೆಕ್ಕದಲ್ಲಿ ಸಂಬಳ ಹೆಚ್ಚಿಸುತ್ತಿದೆ" ಎಂದು ಪೌರ ಕಾರ್ಮಿಕರು ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪೌರ ಕಾರ್ಮಿಕರ ಸಮಸ್ಯೆ ಮತ್ತು ಬೇಡಿಕೆಗೆ ಸ್ಪಂದಿಸಲು ಬಿಬಿಎಂಪಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪೌರ ಕಾರ್ಮಿಕರ ಸಮಸ್ಯೆಗಳನ್ನು ಕಂಡು ಕಾಣದಂತೆ ನಿರ್ಲಕ್ಷ್ಯ ತೋರುತ್ತಾರೆ ಎಂದು ಸಂಘಟನೆಗಳು ಆರೋಪಿಸಿವೆ.

ಟನ್‌ಗಟ್ಟಲೇ ಕಸ

ನಗರದಲ್ಲಿ ದಿನಕ್ಕೆ ಟನ್‌ಗಟ್ಟಲೇ ತ್ಯಾಜ್ಯ ಸಂಗ್ರಹವಾಗುತ್ತಿದೆ. ಇರುವ ಮೂಲ ಸೌಕರ್ಯಗಳ ಕೊರತೆಯ ನಡುವೆಯೇ ಪೌರ ಕಾರ್ಮಿಕರು ಈ ಕಸದ ಸಮಸ್ಯೆ ನಿರ್ವಹಿಸಲು ದುಡಿಯುತ್ತಿದ್ದಾರೆ. ಒಂದೊಮ್ಮೆ ಪೌರ ಕಾರ್ಮಿಕರ ಮುಷ್ಕರ ಆರಂಭವಾದಲ್ಲಿ ಬೆಂಗಳೂರಿನಲ್ಲಿ ಕಸದ ಸಮಸ್ಯೆ ಉಂಟಾಗುತ್ತದೆ.

ಪ್ರಸ್ತುತ ರಾಜ್ಯದಾದ್ಯಾಂತ ವ್ಯಾಪಕ ಮಳೆಯಾಗುತ್ತಿದ್ದು ಮುಂದಿನ ದಿನಗಳಲ್ಲಿ ಮಳೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಒಂದು ದಿನ ಕಸ ಸಂಗ್ರಹಿಸುವುದನ್ನು ನಿಲ್ಲಿಸಿದರೆ, ನಗರದ ತ್ಯಾಜ್ಯ ನಿರ್ವಹಣೆ ಸ್ಥಗಿತಗೊಳ್ಳಲಿದ್ದು, ಇದರಿಂದ ರಸ್ತೆಗಳಲ್ಲಿ ಓಡಾಡೋದು ಕಷ್ಟ ಎಂಬ ಸ್ಥಿತಿ ಸೃಷ್ಠಿಯಾಗಲಿದೆ. ಇದು ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರಲಿದೆ.

ಮುಷ್ಕರಕ್ಕೆ ಬೆಂಬಲವಿಲ್ಲ

‘ಪೌರ ಕಾರ್ಮಿಕರ ನೌಕರಿಯನ್ನು ಕಾಯಂಗೊಳಿಸುವಂತೆ ಆಗ್ರಹಿಸಿ ಮುಷ್ಕರ ಹೂಡುತ್ತಿರುವವರ ನೇತೃತ್ವ ವಹಿಸಿರುವ ಸಂಘಟಣೆಯು ರಾಜಕೀಯ ಪಕ್ಷದ ಮುಖವಾಡದಂತೆ ಕಾರ್ಯನಿರ್ವಹಿಸುತ್ತಿದೆ. ಹಾಗಾಗಿ ಜುಲೈ 1ರಿಂದ ಆರಂಭವಾಗಲಿರುವ  ಪೌರ ಕಾರ್ಮಿಕರ ಮುಷ್ಕರಕ್ಕೆ ನಾವು ಬೆಂಬಲ ನೀಡುವುದಿಲ್ಲ’ ಎಂದು ಕರ್ನಾಟಕ ರಾಜ್ಯ ಪೌರ ಕಾರ್ಮಿಕ ಮತ್ತು ಸಫಾಯಿ ಕರ್ಮಚಾರಿ ಕಾರ್ಮಿಕ ಸಂಘದ ಗೌರವ ಅಧ್ಯಕ್ಷ ಹೆಣ್ಣೂರು ಶ್ರೀನಿವಾಸ ಹೇಳಿದ್ದಾರೆ.     

ನಿಮಗೆ ಏನು ಅನ್ನಿಸ್ತು?
2 ವೋಟ್