ಪೌರ ಕಾರ್ಮಿಕರ ಮುಷ್ಕರ| ಬೇಡಿಕೆ ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ

  • ಮುಷ್ಕರದಲ್ಲಿ ಸಾವಿರಾರು ಪೌರ ಕಾರ್ಮಿಕರು ಭಾಗಿ
  • ಬೇಡಿಕೆ ಈಡೇರುವವರೆಗೂ ಮುಷ್ಕರ ನಿಲ್ಲದು: ಘೋಷಣೆ

ರಾಜ್ಯದಾದ್ಯಂತ ಇಂದಿನಿಂದ ಪೌರ ಕಾರ್ಮಿಕರು ಮುಷ್ಕರ ಕೈಗೊಂಡಿದ್ದು, ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಕೈಬಿಡುವುದಿಲ್ಲ ಎಂಬುದು ಪೌರ ಕಾರ್ಮಿಕರ ಕೂಗಾಗಿದೆ.

ಇಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಸಾವಿರಾರು ಮಂದಿ ಪೌರ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ನಾಳೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಪೌರ ಕಾರ್ಮಿಕರು ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಮುಷ್ಕರದ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಅಧ್ಯಕ್ಷ ನಾರಾಯಣ (ಮೈಸೂರು), ”ಗುತ್ತಿಗೆ ಪದ್ಧತಿ ಆಧುನಿಕ 'ಜೀತ ಪದ್ಧತಿ'. ಇದನ್ನು ನಿಲ್ಲಿಸಬೇಕೆಂದು 2016ರಲ್ಲಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಮಾಡಲಾಯಿತು. ಆ ಸಮಯದಲ್ಲಿ ಗುತ್ತಿಗೆ ಪದ್ಧತಿಯನ್ನು ರದ್ದು ಮಾಡಿ, ಕಾರ್ಮಿಕರಿಗೆ ನೇರ ಸಂಬಳ ನೀಡುತ್ತಿದ್ದರು. ಆದರೆ, ಗುತ್ತಿಗೆದಾರರು ಎಷ್ಟು ಸಂಬಳ ನೀಡುತ್ತಿದ್ದರೋ, ಅಷ್ಟೇ ಸಂಬಳವನ್ನು ಸರ್ಕಾರ ನೀಡುತ್ತಿದೆ. ಈ ಹಿಂದೆ ಗುತ್ತಿಗೆದಾರರು ಶೋಷಣೆ ಮಾಡುತ್ತಿದ್ದರು. ಈಗ ಸರ್ಕಾರ ಶೋಷಣೆ ಮಾಡುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಕಸ ಗುಡಿಸುವವರು, ಲೋಡರ್‍ಸ್, ಸ್ವಚ್ಛತಾ ಕಾರ್ಮಿಕರು, ವಾಹನ ಚಾಲಕರು ಹಾಗೂ ಒಳಚರಂಡಿ ಕಾರ್ಮಿಕರು ಈ ಎಲ್ಲ ಪೌರ ಕಾರ್ಮಿಕರಿಗೂ ಏಕಕಾಲದಲ್ಲಿ ಮೂರು ತಿಂಗಳ ಒಳಗೆ ಕೆಲಸ ಕಾಯಂ ಮಾಡಬೇಕು. ನೌಕರಿ ಕಾಯಂ ಮಾಡುವವರೆಗೂ ₹ 31,000 ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಬೇಡಿಕೆಗಳು ಈಡೇರುವವರೆಗೆ ಯಾರೂ ಕಸ ತೆಗೆಯುವುದಿಲ್ಲ. ಸಾರ್ವಜನಿಕರಿಗೆ ಇದರಿಂದ ತೊಂದರೆಯಾದರೆ, ಅದಕ್ಕೆ ಸರ್ಕಾರವೇ ನೇರ ಹೊಣೆ” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಜುಲೈ 1ರಿಂದ ಕೆಲಸ ಸ್ಥಗಿತಗೊಳಿಸಿ ಪೌರ ಕಾರ್ಮಿಕರ ಮುಷ್ಕರ

"ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ಗ್ಯಾಸ್ ದರ, ತರಕಾರಿ ದರ ಎಲ್ಲವೂ ಏರಿಕೆಯಾಗಿದೆ. ಆದರೆ, ಕಳೆದ 6 ವರ್ಷಗಳಿಂದ ಪೌರ ಕಾರ್ಮಿಕರ ಸಂಬಳ ₹ 14,000 ಅಷ್ಟೆ ಇದೆ. ಕೇವಲ ₹ 14,000 ಸಂಬಳದಲ್ಲಿ ಜೀವನ ನಡೆಸಲು ಸಾಧ್ಯವಿಲ್ಲ. ಸರ್ಕಾರ ಪೌರ ಕಾರ್ಮಿಕರನ್ನು ನಿರ್ಲಕ್ಷಿಸಿದೆ” ಎಂದು ದೂರಿದರು.

ಪೌರ ಕಾರ್ಮಿಕ ಮಹಿಳೆ ಶಾರದಾ ಮಾತನಾಡಿ, ”ಕಳೆದ 21 ವರ್ಷದಿಂದ ಕಸ ತೆಗೆಯುವ ಕೆಲಸ ಮಾಡುತ್ತಿದ್ದೇನೆ. ₹ 12,000 ಸಂಬಳ ಇದೆ. ಇದರಲ್ಲಿ ಜೀವನ ನಡೆಸಲು ಹೇಗೆ ಸಾಧ್ಯ? ಕಳೆದ ಹಲವು ವರ್ಷಗಳಿಂದ ದಿನೇ ದಿನೆ ವಸ್ತುಗಳ ದರ ಏರಿಕೆಯಾಗುತ್ತಿದೆ. ಇಷ್ಟು ವರ್ಷ ದುಡಿದರೂ ಇನ್ನೂ 12,000 ಸಂಬಳ ಪಡೆಯುತ್ತಿದ್ದೇನೆ. ನನ್ನ ಮಕ್ಕಳನ್ನು ಚೆನ್ನಾಗಿ ಓದಿಸುವ ಕನಸು ಇಟ್ಟುಕೊಂಡಿದ್ದೇನೆ. ಬರುವ ಸಂಬಳದಲ್ಲಿ ಮನೆ ನಡೆಸಲೂ ಆಗುತ್ತಿಲ್ಲ. ಇನ್ನು ಮಗಳನ್ನು ಹೇಗೆ ಓದಿಸಲಿ" ಎಂದು ತಮ್ಮ ನೋವನ್ನು ತೋಡಿಕೊಂಡರು.

Image
ಮುಷ್ಕರದಲ್ಲಿ ಪಾಲ್ಗೊಂಡ ಮಹಿಳೆಯರು

ಪೌರ ಕಾರ್ಮಿಕ ಮಹಿಳೆ ವನಜಾ ಮಾತನಾಡಿ, ”ಸುಮಾರು ವರ್ಷಗಳಿಂದ ಕಾಯಂ ನೌಕರಿಗಾಗಿ ಬೇಡಿಕೆ ಇಟ್ಟರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ನಮ್ಮನ್ನು ಸರ್ಕಾರ ಕಡೆಗಣಿಸುತ್ತಿದೆ. ಕೆಲವು ಜನರು ನಮ್ಮನ್ನ ಕಂಡರೆ ಕಸದಮ್ಮ, ಕಸ ತೆಗೆಯುವವರು ಎಂದು ಕರೆಯುತ್ತಾರೆ. ಆದರೆ ನಮಗೂ ಒಂದು ಹೆಸರಿದೆ" ಎಂದರು.

"ಕೆಲಸದ ಸಮಯದಲ್ಲಿ ನಮಗೆ ತಂಗಲು ಯಾವುದೇ ಕೊಠಡಿಯಿಲ್ಲ. ಶೌಚ ಬಂದರೆ ಚಂಬು ಹಿಡಿದು ಹೊರಗಡೆ ಹೋಗಬೇಕು. ಮಹಿಳೆಯರಿಗೆ ಯಾವುದೇ ರೀತಿಯ ಹೆರಿಗೆ ಭತ್ಯೆ, ಹೆರಿಗೆ ರಜೆ ನೀಡಿಲ್ಲ. ಮೂಲಭೂತ ಸೌಲಭ್ಯಗಳನ್ನು ನೀಡಿಲ್ಲ. ಎಲ್ಲ ಸೌಲಭ್ಯಗಳನ್ನು ನೀಡುವವರೆಗೂ ಮುಷ್ಕರ ನಿಲ್ಲಿಸುವುದಿಲ್ಲ" ಎಂದು ಹೇಳಿದರು. 

ಧ್ವನಿ ಎತ್ತಿದ ಪೌರ ಕಾರ್ಮಿಕರು

ಹಲವು ವರ್ಷಗಳಿಂದ ಪೌರ ಕಾರ್ಮಿಕರು ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ ಮಾಡಿದ್ದರೂ, ಸರ್ಕಾರ ಇಲ್ಲಿಯವರೆಗೂ ಸರ್ಕಾರ ಪೌರ ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿಲ್ಲ. ಸಂಬಳ ಏರಿಕೆ ಮಾಡುವುದಾದರೆ ನೂರು ರೂಪಾಯಿ ಲೆಕ್ಕದಲ್ಲಿ ಏರಿಕೆ ಮಾಡಿದೆ. ಪೌರ ಕಾರ್ಮಿಕರಿಗೆ 2020ರಲ್ಲಿ ಸಮವಸ್ತ್ರ ನೀಡಲಾಗಿತ್ತು. ಅದಾದ ಬಳಿಕ ಇಲ್ಲಿಯವರೆಗೂ ಸಮವಸ್ತ್ರ ನೀಡಿಲ್ಲ. ಹರಿದ ಬಟ್ಟೆ ಹಾಕಿಕೊಂಡೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಷ್ಟು ವರ್ಷ ಎಲ್ಲ ನೋವುಗಳನ್ನು ಸಹಿಸಿಕೊಂಡ ಪೌರ ಕಾರ್ಮಿಕರು ಇಂದು ಧ್ವನಿ ಎತ್ತಿದ್ದಾರೆ.

Image
ನಗರದ ಮಾಗಡಿ ರಸ್ತೆ ಟೋಲ್ ಗೇಟ್ ಬಳಿ ಕಸದ ರಾಶಿ

ಒಂದೇ ದಿನಕ್ಕೆ ನಗರದ ರಸ್ತೆಗಳಲ್ಲಿ ಕಸದ ರಾಶಿ

ಪೌರ ಕಾರ್ಮಿಕರು ಇಂದು ಪೊರಕೆ ಹಿಡಿಯದ ಕಾರಣ ನಗರದ ರಸ್ತೆ ಬದಿಗಳಲ್ಲಿ ಕಸದ ರಾಶಿ ತುಂಬಿದೆ. ನಗರದ ಪ್ರಕಾಶ ನಗರ, ಮೆಜೆಸ್ಟಿಕ್, ವಿಜಯನಗರ, ಗೋವಿಂದರಾಜ ನಗರ ಹಾಗೂ ನಗರದ ನಾನಾ ಭಾಗಗಳಲ್ಲಿ ಕಸದ ರಾಶಿ  ಕಂಡುಬಂದಿತು.

ಇಂದು ಸಂಜೆ ಮುಖ್ಯಮಂತ್ರಿಯೊಂದಿಗೆ ಸಭೆ

ಪೌರ ಕಾರ್ಮಿಕರ ಬೇಡಿಕೆಗಳ ಕುರಿತು ಶುಕ್ರವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೌರ ಕಾರ್ಮಿಕರ ಸಂಘಟನೆಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್