ದಸರಾ ಕವಿಗೋಷ್ಠಿಯಲ್ಲಿ 'ಬ್ಯಾರಿ' ಭಾಷೆಗೆ ಕೊಕ್ : ಎಚ್ ಡಿ ಕುಮಾರಸ್ವಾಮಿ ಖಂಡನೆ

h d kumaraswamy
  • ಬಿಜೆಪಿಯದ್ದು ಏಕಭಾಷೆ ಮೆರೆಸುವ ಹುನ್ನಾರ : ಆರೋಪ
  • ಕವಿಗೋಷ್ಠಿಯಲ್ಲಿ ಬ್ಯಾರಿಗೆ ಅವಕಾಶ ನೀಡುವಂತೆ ಆಗ್ರಹ

ಮೈಸೂರು ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವ ರಾಜ್ಯ ಬಿಜೆಪಿ ಸರ್ಕಾರದ ಮತ್ತು ದಸರಾ ಸಮಿತಿಯ ನಡೆಯನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಕಟುವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಅವರು ಬುಧವಾರ ಸರಣಿ ಟ್ವೀಟ್ ಮಾಡಿದ್ದಲ್ಲದೆ ಮಾಧ್ಯಮ ಹೇಳಿಕೆಯನ್ನೂ ನೀಡಿ, ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ. 
“ಜಗದ್ವಿಖ್ಯಾತ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ಸಮ್ಮತವಲ್ಲ. ಬ್ಯಾರಿಯು ಕನ್ನಡದ ನೆರಳಿನಲ್ಲಿ ಅರಳಿರುವ ಭಾಷೆ ಹಾಗೂ ಕರಾವಳಿಯಲ್ಲಿ ಅನೇಕರ ನಿತ್ಯ ನುಡಿ. ಕೇವಲ ಒಂದು ಸಮುದಾಯದವರು ಮಾತನಾಡುತ್ತಾರೆ ಎನ್ನುವ ಕಾರಣಕ್ಕೆ ಬ್ಯಾರಿಯನ್ನು ಬೇಡವೆನ್ನುವುದು ತಪ್ಪು. ಇದು ರಾಜ್ಯ ಬಿಜೆಪಿ ಸರ್ಕಾರದ ಏಕಪಕ್ಷೀಯ ನಡೆ” ಎಂದವರು ಹೇಳಿದ್ದಾರೆ.

“ಈ ವರ್ಷದ ದಸರಾ ಕವಿಗೋಷ್ಠಿಯಲ್ಲಿ ಕನ್ನಡದೊಂದಿಗೆ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳಿಗೆ ಅವಕಾಶ ನೀಡಿರುವುದು ಸ್ವಾಗತಾರ್ಹ. ಆದರೆ, ಬ್ಯಾರಿ ಭಾಷೆಗೆ ಅವಕಾಶ ನಿರಾಕರಿಸಿರುವುದು ರಾಜ್ಯ ಬಿಜೆಪಿ ಸರ್ಕಾರದ ಸಂಕುಚಿತ ಮನೋಭಾವಕ್ಕೆ ಸಾಕ್ಷಿ” ಎಂದು ಟೀಕಿಸಿದ್ದಾರೆ.

“ಏಕಭಾಷೆಯನ್ನು ಮೆರೆಸುವ ಬಿಜೆಪಿಗೆ ಈ ನೆಲದ ತಾಯಿಭಾಷೆ ಕನ್ನಡವೂ ಸೇರಿ ಇತರೆ ಎಲ್ಲ ಉಪಭಾಷೆಗಳನ್ನು ಅಳಿಸಿಹಾಕಬೇಕೆಂಬ ಕೆಟ್ಟ ಮನಃಸ್ಥಿತಿ ಇರುವಂತಿದೆ. ಇದು ಖಂಡಿತಾ  ನಡೆಯುವುದಿಲ್ಲ ಎಂದು ಕುಮಾರಸ್ವಾಮಿ” ಎಚ್ಚರಿಕೆ ನೀಡಿದ್ದಾರೆ.

“ರಾಜ್ಯದಲ್ಲಿ 12 ಲಕ್ಷಕ್ಕೂ ಹೆಚ್ಚು ಜನರು ಬ್ಯಾರಿ ಭಾಷೆ ಮಾತನಾಡುತ್ತಾರೆ. 2007ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ ಬ್ಯಾರಿ ಭಾಷಿಗರ ಬಹುಕಾಲದ ಬೇಡಿಕೆ ಆಗಿದ್ದ ʼಬ್ಯಾರಿ ಸಾಹಿತ್ಯ ಅಕಾಡೆಮಿʼ ಸ್ಥಾಪನೆಗೆ ಅನುಮೋದನೆ ನೀಡಿದ್ದೆ. ಬ್ಯಾರಿ ಅಕಾಡೆಮಿಯ ಮೂಲಕ ಅತ್ಯುತ್ತಮ ಸಾಹಿತ್ಯಕ ಕಾರ್ಯಕ್ರಮಗಳು ನಡೆಯುತ್ತಿವೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಬ್ಯಾರಿ ಅಧ್ಯಯನ ಪೀಠವನ್ನೂ ಸ್ಥಾಪಿಸಲಾಗಿದೆ. ವಿಶೇಷವೆಂದರೆ, ಬ್ಯಾರಿ ಭಾಷಿಗರು ಕನ್ನಡ ಲಿಪಿಯನ್ನೇ ಬಳಸಿ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಕೆಲ ಕೃತಿಗಳು ಕನ್ನಡಕ್ಕೂ ಅನುವಾದಿಸಲ್ಪಟ್ಟಿವೆ” ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಾಡಹಬ್ಬ ದಸರಾದಲ್ಲಿ ಕನ್ನಡ ಕಡೆಗಣನೆ; ಕನ್ನಡ ಪುಸ್ತಕ ಪ್ರದರ್ಶನ ರದ್ದು: ಎಚ್‌ಡಿಕೆ ಕಿಡಿ

“ವಚನ ಸಾಹಿತ್ಯ ಸೇರಿ ಅನೇಕ ಕನ್ನಡದ ಅಮೂಲ್ಯ ಕೃತಿಗಳು ಬ್ಯಾರಿಗೂ ಅನುವಾದಗೊಂಡಿವೆ. ಕನ್ನಡ ನೆಲದಲ್ಲಿ ಕನ್ನಡ ಲಿಪಿಯೊಂದಿಗೆ ಸಾಮರಸ್ಯದ ಭಾಷೆಯಾಗಿ ಬೆರೆತಿರುವ ಬ್ಯಾರಿ ಭಾಷೆಗೆ ಈ ವರ್ಷ ದಸರಾ ಕವಿಗೋಷ್ಠಿಯಲ್ಲಿ ಅವಕಾಶ ನಿರಾಕರಿಸಿರುವುದು ಅಕ್ಷಮ್ಯ. ರಾಜ್ಯ ಬಿಜೆಪಿ ಸರ್ಕಾರ ಮತ್ತು ದಸರಾ ಸಮಿತಿ ಕೂಡಲೇ ಈ ಬಗ್ಗೆ ಪರಿಶೀಲಿಸಿ, ಆಗಿರುವ ಪ್ರಮಾದವನ್ನು ಸರಿಪಡಿಸಿ ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಅವಕಾಶ ಕಲ್ಪಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್