ಚಕ್ರತೀರ್ಥ ವಿರುದ್ಧ ಎಸ್ಸಿ-ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರು| ಪ್ರಕರಣ ದಾಖಲಿಸಲು ನಿರಾಕರಿಸಿದ ರಾಮನಗರ ಎಸ್ಪಿ

ʼಆದಿವಾಸಿ ಕಾಡು ಜನಾಂಗʼದ ಕುರಿತು ಪರಿಷ್ಕೃತ ಪಠ್ಯದಲ್ಲಿ ಅವಹೇಳನ ಮಾಡಲಾಗಿದೆ ಎಂದು ʼಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘʼ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದೆ. ಆದರೆ, ಪೊಲೀಸ್‌ ವರಿಷ್ಠಾಧಿಕಾರಿ ಮಾತ್ರ ಶಿಕ್ಷಣ ಇಲಾಖೆಯ ಒಪ್ಪಿಗೆ ಇಲ್ಲದೆ ಪಠ್ಯಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಮತ್ತುಇತರೇ ಸದಸ್ಯರ ವಿರುದ್ಧ ದೂರು ದಾಖಲಿಸಿಕೊಳ್ಳುವುದಿಲ್ಲ ಎಂದು ಎಫ್‌ ಐಆರ್‌ ಹಾಕಲು ನಿರಾಕರಿಸಿದ್ದಾರೆ!
Rohith chakrathirtha

ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ಮತ್ತು ಸಮಿತಿಯ ಇತರೇ ಸದಸ್ಯರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ 1989ರ ಅನ್ವಯ ʼಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘʼ ದೂರು ನೀಡಿದ್ದರೂ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿ ಈವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ.

ʼಆದಿವಾಸಿ ಕಾಡು ಜನಾಂಗʼದ ಕುರಿತು ಪರಿಷ್ಕೃತ ಪಠ್ಯದಲ್ಲಿ ಅವಹೇಳನ ಮಾಡಲಾಗಿದೆ ಎಂದು ʼಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘʼ ಆರೋಪಿಸಿದ್ದು, ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅವರು ಶನಿವಾರ ಪೊಲೀಸ್‌ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರಿಗೆ ದೂರು ನೀಡಿದ್ದಾರೆ. 

ಆದರೆ, ಪೊಲೀಸ್‌ ವರಿಷ್ಠಾಧಿಕಾರಿಗಳು ಮಾತ್ರ ಶಿಕ್ಷಣ ಇಲಾಖೆಯ ಒಪ್ಪಿಗೆ ನೀಡಿದ ಮೇಲೆ ರೋಹಿತ್‌ ಚಕ್ರತೀರ್ಥ ಮತ್ತು ಇತರೆ ಸದಸ್ಯರ ವಿರುದ್ಧ ದೂರು ದಾಖಲಿಸಿಕೊಳ್ಳುತ್ತೇವೆ ಎಂದು ಕೃಷ್ಣಮೂರ್ತಿ ಅವರಿಗೆ ಸಬೂಬು ಹೇಳಿ ಸಾಗಹಾಕಿದ್ದಾರೆ.

ದೂರು ನೀಡಿರುವ ವಿಚಾರವಾಗಿ ʼಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘʼದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ಅವರನ್ನು ಈ ದಿನ.ಕಾಮ್‌ ಮಾತನಾಡಿಸಿದಾಗ, “ಶನಿವಾರ ನಮ್ಮ ಸಂಘಟನೆಯಿಂದ ರೋಹಿತ್ ಚಕ್ರತೀರ್ಥ ಮತ್ತು ಸಮಿತಿಯ ಇತರೇ ಸದಸ್ಯರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಲು ಹೋಗಿದ್ದೆವು. ಪೊಲೀಸರು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್. ಸೆಲ್ವಕುಮಾರ್‌ ಅವರನ್ನು ಭೇಟಿಯಾಗಲು ತಿಳಿಸಿದ್ದಾರೆ,” ಎಂದು ಹೇಳಿದರು.

ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿ ಕೆ ಸಂತೋಷ್‌ ಬಾಬು ಅವರನ್ನು ಈ ದಿನ.ಕಾಮ್‌ ಇದೇ ವಿಚಾರವಾಗಿ ಸಂಪರ್ಕಿಸಿದಾಗ, “ಏಕಾಏಕಿ ರೋಹಿತ್ ಚಕ್ರತೀರ್ಥ ಮತ್ತು ಸಮಿತಿಯ ಇತರೇ ಸದಸ್ಯರ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲು ಬರುವುದಿಲ್ಲ. ಪಠ್ಯಪುಸ್ತಕ ಸಮಿತಿಯನ್ನು ಶಿಕ್ಷಣ ಇಲಾಖೆ ನೇಮಿಸಿರುವುದರಿಂದ ಆ ಇಲಾಖೆಯ ಒಪ್ಪಿಗೆ ಬೇಕಾಗುತ್ತದೆ,” ಎಂದರು.

Image
Complaint Copy
ದೂರು ನೀಡಿರುವ ಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ

ಮುಂದುವರಿದು, “ಪರಿಷ್ಕೃತ ಪಠ್ಯಪುಸ್ತಕದಲ್ಲಿ ಆದಿವಾಸಿ ಕಾಡು ಜನಾಂಗದ ಕುರಿತು ಪರಿಷ್ಕೃತ ಪಠ್ಯದಲ್ಲಿ ಅವಹೇಳನ ಮಾಡಲಾಗಿದೆಯಾ ಎಂಬುದನ್ನು ಪರಿಶೀಲಿಸಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಎಸ್‌ ಸೆಲ್ವಕುಮಾರ್‌ ಅವರಿಗೆ ಪತ್ರ ಬರೆದಿದ್ದೇವೆ. ಅವರ ಕ್ರಮವನ್ನಾಧರಿಸಿ ಮುಂದಿನ ನಿರ್ಧಾರ ತಗೆದುಕೊಳ್ಳಲಾಗುವುದು,” ಎಂದು ವಿವರಿಸಿದರು.

ಪೊಲೀಸರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲು ಶಿಕ್ಷಣ ಇಲಾಖೆಯ ಅನುಮತಿ ಬೇಕೆ? ಎನ್ನುವ ವಿಚಾರವಾಗಿ ಹಿರಿಯ ವಕೀಲ ಕೆ ಬಾಲನ್‌ ಅವರ ಜೊತೆ ಈ ದಿನ.ಕಾಮ್‌ ಮಾತನಾಡಿದಾಗ, “ಯಾರೇ ಆಗಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ದೂರು ನೀಡಲು ಬರುತ್ತಾರೆ ಎಂದರೆ ಯಾರ ಒಪ್ಪಿಗೆಯನ್ನೂ ಪಡೆಯದೇ ದೂರು ದಾಖಲಿಸಿಕೊಳ್ಳಬೇಕು. ಅದರ ಸತ್ಯಾಸತ್ಯತೆ ಮುಂದಿನ ತನಿಖೆಯಲ್ಲಿ ಗೊತ್ತಾಗುತ್ತದೆ. ಈ ವಿಚಾರದಲ್ಲಿ ಪೊಲೀಸರಿಗೆ ಶಿಕ್ಷಣ ಇಲಾಖೆಯ ಒಪ್ಪಿಗೆ ಬೇಕಿಲ್ಲ,” ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿ ಓದಿದ್ದೀರಾ? ಸ್ತ್ರೀದ್ವೇಷಿ ಪೋಸ್ಟ್‌ಗಳಿಗೆ ವಿರೋಧ; ಫೇಸ್‌ಬುಕ್‌, ಟ್ವಿಟರ್‌ ಖಾತೆ ಲಾಕ್‌ ಮಾಡಿದ ರೋಹಿತ್‌ ಚಕ್ರತೀರ್ಥ

ದೂರಿನಲ್ಲಿ ಏನಿದೆ?

ʼಇರುಳಿಗ (ಅರಣ್ಯವಾಸಿ) ಕ್ಷೇಮಾಭಿವೃದ್ಧಿ ಸಂಘʼ ನೀಡಿರುವ ದೂರಿನ ಪ್ರತಿ ಈ ದಿನ.ಕಾಮ್‌ಗೆ ಲಭ್ಯವಾಗಿದ್ದು, “10ನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ನಮ್ಮ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಪಠ್ಯ ಮುದ್ರಿಸಿರುವ ರೋಹಿತ್ ಚಕ್ರತೀರ್ಥ ಮತ್ತು ಇತರ ಸದಸ್ಯರನ್ನು ಬಂಧಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರು ಸಲ್ಲಿಸಿದೆ. 

“2022-23ನೇ ಸಾಲಿನ ಹತ್ತನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ ‘ಸಂಸ್ಕೃತಿಯು ರಕ್ತದಲ್ಲಿ ಹರಿಯಬೇಕು. ಆಧುನಿಕ ಕಾಲದಲ್ಲಿ ಬೇಕಾದಷ್ಟು ಜ್ಞಾನಸಂಪತ್ತನ್ನು ಪಡೆದ ದೇಶಗಳನ್ನು ನೋಡಿರುವೆವು. ಆದರೆ ಅದರಿಂದ ಏನು ಪ್ರಯೋಜನ? ಅವರು ಕಾಡುಜನರಂತೆ ಇರುವರು. ಅವರಲ್ಲಿ ಸಂಸ್ಕೃತಿ ಇಲ್ಲ’ ಎಂಬುದಾಗಿ ಅವಹೇಳನಕಾರಿಯಾಗಿ ಮುದ್ರಿಸಿ ಆದಿವಾಸಿಗಳನ್ನು (ಕಾಡುವಾಸಿ) ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಲಾಗಿದೆ,” ಎಂದು ಆರೋಪಿಸಲಾಗಿದೆ.

ಮುಂದುವರಿದು, “ಈ ನೆಲದ ಮೂಲನಿವಾಸಿಗಳಾದ ಆದಿವಾಸಿಗಳ ಘನತೆ, ಸಂಸ್ಕೃತಿಯನ್ನು ಅಲ್ಲಗಳೆಯಲಾಗಿದೆ. ನಮ್ಮನ್ನು ಮನುಷ್ಯರೆಂದೇ ಕಾಣದಂತಹ ವಿಕೃತ ಮನೋಧೋರಣೆಯ ರೋಹಿತ್‌ ಚಕ್ರತೀರ್ಥ ಮತ್ತು ಇತರೇ ಸದಸ್ಯರು ವ್ಯಕ್ತಿಯ ಆದಿವಾಸಿ ಗೌರವಕ್ಕೆ ಧಕ್ಕೆಯುಂಟು ಮಾಡಿ, ನಮ್ಮ ಆದಿವಾಸಿ ಜನರನ್ನು ಅಲ್ಲಗಳೆದಿದ್ದಾರೆ. ಇವರನ್ನು ಎಸ್‌ಸಿ, ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ 1989ರ ಅಡಿಯಲ್ಲಿ ಬಂಧಿಸಿ ಕ್ರಮಕೈಗೊಳ್ಳಬೇಕು,” ಎಂದು ಮನವಿ ಮಾಡಲಾಗಿದೆ.

Image
Police Copy

ಎಸ್‌ಪಿಯಿಂದ ಪ್ರಧಾನ ಕಾರ್ಯದರ್ಶಿಗೆ ಪತ್ರ

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್‌ ಬಾಬು ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಎಸ್‌ ಸೆಲ್ವಕುಮಾರ್‌ ಅವರಿಗೆ ಬರೆದ ಪತ್ರ ಈ ದಿನ.ಕಾಮ್‌ಗೆ ಲಭ್ಯವಾಗಿದ್ದು, “10ನೇ ತರಗತಿ ಕನ್ನಡ ಪಠ್ಯಪುಸ್ತಕದಲ್ಲಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಎಂಬ ಶೀರ್ಷಿಕೆಯಲ್ಲಿ ಆದಿವಾಸಿ ಕಾಡು ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಮುದ್ರಿಸಿ ಕಾಡುಜನಗಳನ್ನು ಉದ್ದೇಶಪೂರ್ವಕವಾಗಿ ಅನಾಗರಿಕರೆಂದು ನಿಂದಿಸಿ ಈ ನೆಲದ ಮೂಲ ನಿವಾಸಿಗಳ ಗೌರವಕ್ಕೆ ಧಕ್ಕೆಯುಂಟು ಮಾಡಿರುವ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷ ರೋಹಿತ್‌ ಚಕ್ರತೀರ್ಥ ಮತ್ತು ಸಮಿತಿಯ ಇತರೇ ಸದಸ್ಯರ ಮೇಲೆ ಎಸ್ಸಿ ಮತ್ತು ಎಸ್ಟಿ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಲು ದೂರು ನೀಡಿರುತ್ತಾರೆ. ಆದ್ದರಿಂದ ಈ ಬಗ್ಗೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಕೋರಲಾಗಿದೆ,” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಆದರೆ, ಪೊಲೀಸ್ ವರಿಷ್ಠಾಧಿಕಾರಿಗಳ ಪತ್ರ ಗಮನಿಸಿದಾಗ ಶಿಕ್ಷಣ ಇಲಾಖೆಯೇ ರೋಹಿತ್‌ ಚಕ್ರತೀರ್ಥ ಮತ್ತು ಸಮಿತಿ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ಈ ಮೂಲಕ ಪೊಲೀಸರು ರೋಹಿತ್‌ ಚಕ್ರತೀರ್ಥ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಎಫ್‌ ಐಆರ್‌ ಹಾಕಲು ಹಿಂಜರಿದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.

ಈ ಸುದ್ದಿ ಓದಿದ್ದೀರಾ? ರೋಹಿತ್‌ ಚಕ್ರತೀರ್ಥ ಐಐಟಿ-ಸಿಇಟಿ ಪ್ರೊಫೆಸರ್ ಎಂದ ಸಚಿವ ನಾಗೇಶ್‌: ಅಸಲಿಯತ್ತೇನು?

ಇದೇ ರೋಹಿತ್‌ ಚಕ್ರತೀರ್ಥ ವಿರುದ್ಧ ನಾಡಗೀತೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಬಿ ಟಿ ನಾಗಣ್ಣ ಎಂಬುವರು ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಗೆ ಈಗಾಗಲೇ ದೂರು ನೀಡಿದ್ದಾರೆ. 

ಹಾಗೆಯೇ ಬೆಂಗಳೂರು ವಕೀಲರ ನಿಯೋಗ ಕೂಡ ರೋಹಿತ್‌ ಚಕ್ರತೀರ್ಥ ಮತ್ತು ಲಕ್ಷ್ಮಣ್‌ ಆಕಾಶೆ ವಿರುದ್ಧ ನಾಡಗೀತೆ ತಿರುಚಿ, ರಾಷ್ಟ್ರಕವಿ ಕುವೆಂಪುಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದು ಕೂಡ ಇಲ್ಲಿ ಗಮನಿಸಬಹುದು.

ಆದರೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯದಂತಹ ಗಂಭೀರ ದೂರಿನ ವಿಷಯದಲ್ಲಿ ರಾಮನಗರ ಪೊಲೀಸ್‌ ವರಿಷ್ಠಾಧಿಕಾರಿಗಳು ದೂರು ದಾಖಲಿಸಿಕೊಳ್ಳಲು ನಿರಾಕರಿಸಿರುವುದು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಕೈತೊಳೆದುಕೊಂಡಿರುವುದು ಚರ್ಚೆಗೆ ಗ್ರಾಸವಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್