ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಕಾಂಡೋಮ್‌ | ಶಾಲೆಗಳಲ್ಲಿ ಲೈಂಗಿಕ ಶಿಕ್ಷಣ ವಿರೋಧಿಸಿದ ಪರಿಣಾಮ ಇದು; ಶಿಕ್ಷಣ ತಜ್ಞರ ಕಳವಳ

‌ಕಾಂಡೋಮ್ಸ್
  • ಮಕ್ಕಳನ್ನು ದೂಷಿಸಿ ದೊಡ್ಡದಾಗಿ ಚರ್ಚಿಸುವುದು ಅನಗತ್ಯ 
  • ಮೊಬೈಲ್‌ ಮೂಲಕ ಪಾಠ ಮಾಡಿಸಿದ ಸರ್ಕಾರವೇ ಇದಕ್ಕೆಲ್ಲ ಕಾರಣ 

"ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕೆಂದೂ, ಮೊಬೈಲ್ ಸಾಧನಗಳ ಮೂಲಕ ಆನ್ ಲೈನ್ ಪಾಠಗಳನ್ನು ಮಾಡುವುದು ಹಲವು ತೊಂದರೆಗಳನ್ನುಂಟು ಮಾಡಲಿವೆ ಎಂದು  ಎಚ್ಚರಿಸಿದ್ದೆವು. ಅವನ್ನೆಲ್ಲ ಕಡೆಗಣಿಸಿ ಮಾಡಬಾರದ್ದನ್ನು ಮಾಡಿದ್ದರ ದುಷ್ಪರಿಣಾಮಗಳನ್ನೇ ಈಗ ನಾವು ಕಾಣುತ್ತಿದ್ದೇವೆ" ಎಂದು ರಾಜ್ಯದ ಶಿಕ್ಷಣ ತಜ್ಞರು, ಸಾಹಿತಿಗಳು ಅಭಿಪ್ರಾಯ ಪಟ್ಟಿದ್ದಾರೆ.

ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್‌, ಗರ್ಭಪಾತ ಗುಳಿಗೆ, ನೀರಿನ ಬಾಟಲ್‌ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವಾಗಿ ಮಾಧ್ಯಮಗಳಲ್ಲಿ ವರದಿಯಾಗಿರುವ ಬಗ್ಗೆ ಶಿಕ್ಷಣ ತಜ್ಞರು, ವೈದ್ಯರು ಹಾಗೂ ಸಾಹಿತಿಗಳು ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.

Eedina App

ಈ ಕುರಿತು ಶಿಕ್ಷಣ ತಜ್ಞ ಪ್ರೊ. ನಿರಂಜನಾರಾಧ್ಯ ವಿ.ಪಿ, ಡಾ.ಶ್ರೀನಿವಾಸ ಕಕ್ಕಿಲ್ಲಾಯ, ಡಾ. ಜಿ. ರಾಮಕೃಷ್ಣ, ಡಾ. ಕೆ ಎಂ ಮರಳುಸಿದ್ದಪ್ಪ, ಪ್ರೊ. ಎಸ್ ಜಿ ಸಿದ್ಧರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಡಾ. ವಸುಂಧರಾ ಭೂಪತಿ, ಡಾ. ವಿಜಯ ಸುರೇಂದ್ರ ರಾವ್, ಡಾ. ಕೆ.ಮರುಳಸಿದ್ದಪ್ಪ ಜಂಟಿ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ. 

“ಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗಿದೆ. ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ನಾವು ಕೆಲವರು ಜೂನ್ 2020ರಿಂದಲೇ ಪದೇ ಪದೇ ಎಚ್ಚರಿಕೆ ನೀಡಿದ್ದೆವು” ಎಂದು ಹೇಳಿದ್ದಾರೆ.

AV Eye Hospital ad

ಮಕ್ಕಳ ಶಾಲಾ ಬ್ಯಾಗ್‌ಗಳಲ್ಲಿ ಕಾಂಡೋಮ್ಸ್‌ ಸಿಕ್ಕಿರುವ ವಿಚಾರದ ಬಗ್ಗೆ ಅದಕ್ಕೆ ಕಾರಣರಾದ ಆಡಳಿತ, ಶಾಲಾ ವ್ಯವಸ್ಥಾಪಕರು ಮುಂತಾದವರು ಹೊಣೆ ಹೊರಬೇಕಲ್ಲದೆ ಮಕ್ಕಳನ್ನು ದೂಷಿಸಿ ದೊಡ್ಡದಾಗಿ ಚರ್ಚಿಸುವುದು ಅನ್ಯಾಯವಾಗುತ್ತದೆ" ಎಂದಿದ್ದಾರೆ.

“ಹಾಗೆಯೇ ಇಂತಹ ವಿಷಯವನ್ನು ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿವೆ. ಇಂದು ಮಕ್ಕಳ ಶಿಕ್ಷಣದ ಕ್ರಮ ಹಾಗೂ ವಿಧಾನಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ಸರಕಾರಗಳು ಗಂಭೀರವಾಗಿ ಯೋಚಿಸುವುದಕ್ಕೆ ಇದು ಪ್ರಚೋದನೆಯಾಗಬೇಕು ಎನ್ನುವುದು ನಿಜವಾದರೂ, ಈ ಬಗ್ಗೆ ಭಾವೋದ್ರೇಕದಿಂದ ವರದಿ ಮಾಡುವುದು ಮತ್ತು ಮಕ್ಕಳನ್ನೇ ದೂಷಿಸುವುದು ಅಪೇಕ್ಷಣೀಯವಲ್ಲ, ಅದರಿಂದ ಮಕ್ಕಳಿಗೆ ಇನ್ನಷ್ಟು ಹಾನಿಯೇ ಆಗಬಹುದು” ಎಂದು ವಿರೋಧಿಸಿದ್ದಾರೆ

“ಹಲವು ರೀತಿಯಲ್ಲಿ ಇಂತಹ ಬೆಳವಣಿಗೆಗಳಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಕಾರಣವಾಗಿರುವ ಸರ್ಕಾರವೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯವಾಗಿದೆ” ಎಂದು ಹೇಳಿದ್ದಾರೆ.

ಲೈಂಗಿಕ ಶಿಕ್ಷಣ ವಿರೋಧಿಸಿದ್ದೇ ಇದಕ್ಕೆ ಕಾರಣ

“ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರೆಯದಲ್ಲಿ ತಮ್ಮ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ಅವನ್ನು ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ, ನಮ್ಮ ಸರ್ಕಾರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗೂ ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿದ ಕಾರಣ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲಕ್ಕೆ ಸಿಲುಕುತ್ತಿರುವುದು ಮತ್ತು ಪ್ರಯೋಗಗಳಿಗೆ ಮುಂದಾಗುವಂತಾಗಿದೆ” ಎಂದು ವಿವರಿಸಿದ್ದಾರೆ. 

ಈ ಸುದ್ದಿ ಓದಿದ್ದೀರಾ? ವಿದ್ಯಾರ್ಥಿಗಳ ಬ್ಯಾಗ್‌ನಲ್ಲಿ ಸಿಗ್ತು ಕಾಂಡೋಮ್, ಗರ್ಭ ನಿರೋಧಕ ಮಾತ್ರೆ; ಮೊಬೈಲ್‌ ಹುಡುಕಲು ಹೋದ ಶಿಕ್ಷಕರಿಗೆ ಆಘಾತ!

ಸರ್ಕಾರವು ಈಗಲಾಗದರೂ ಎಚ್ಚೆತ್ತುಕೊಳ್ಳಲಿ

“ಸರ್ಕಾರವು ಈಗಲಾಗದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗುವುದು ಸರಿಯಾದ ಕ್ರಮವೆಂದು ನಾವು ಭಾವಿಸುತ್ತೇವೆ. ಈಗಾಗಲೇ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದ್ದು, ಅಂತಾರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್‌ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗು ಮಾಡ್ಯೂಲ್‌ಗಳನ್ನು ತಯಾರಿಸಿವೆ. ಅವನ್ನೇ ಇಲ್ಲೂ ಬಳಸಲು ಸಾಧ್ಯವಿದೆ” ಎಂದು ತಿಳಿಸಿದ್ದಾರೆ.

“ಇಂತಹ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಮತ್ತು ತಜ್ಞತೆಯನ್ನು ಹೊಂದಿರುವವರ ಮಾರ್ಗದರ್ಶನದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕೇ ಹೊರತು ರಜೆ ನೀಡಿ ಕೌನ್ಸಿಲಿಂಗ್‌ಗೆ ಕಳಿಸುತ್ತೇವೆಂದು ಬಹಿರಂಗವಾಗಿ ಸಾರಿ ಹೇಳುವುದು ಅಥವಾ ಸಲಹೆ ನೀಡುವುದು ಅತ್ಯಂತ ಅವಿವೇಕದ ನಿರ್ಧಾರವಾಗುತ್ತದೆ. ಅಂತಹ ಮಕ್ಕಳನ್ನು ಗುರುತಿಸಿ, ಅವರ ಗೌಪ್ಯತೆಯನ್ನು ಕಾಪಾಡಿ ತಜ್ಞರ ಸಹಾಯದಿಂದ ಅವರು ಅದನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲು ನೆರವಾಗಬೇಕು. ಅದನ್ನು ಬಿಟ್ಟು ಸಾರ್ವಜನಿಕವಾಗಿ ಚರ್ಚಿಸುವುದಾಗಲಿ ಅಥವಾ ಸುದ್ದಿಯಾಗಿ ವೈಭವೀಕರಿಸುವುದಾಗಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ, ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆ ಎಂದು ಸಮಾಜ ಹಾಗೂ ಸರ್ಕಾರ ಅರಿಯಬೇಕು” ಎಂದು ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app