ಸೋನಿಯಾ, ರಾಹುಲ್‌ ಗಾಂಧಿಗೆ ಇಡಿ ನೋಟಿಸ್‌ ಖಂಡಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

Congress Protest
  • ಲಾಲ್ ಬಾಗ್ ಡಬಲ್ ರೋಡ್ ಗೇಟ್‌ ಬಳಿ ಪ್ರತಿಭಟನೆ, ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿ
  • ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಧಿಕ್ಕಾರದ ಕೂಗು

ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಇಡಿ) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರಿಗೆ ನೋಟಿಸ್‌ ಜಾರಿ ಮಾಡಿರುವುದನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಬೆಂಗಳೂರಿನಲ್ಲಿ ಸೋಮವಾರ ಬೃಹತ್‌ ಪ್ರತಿಭಟನೆ ನಡೆಸಿತು.

ಸೋಮವಾರ ಬೆಳಿಗ್ಗೆ ಬೆಂಗಳೂರಿನ ಲಾಲ್ ಬಾಗ್ ಡಬಲ್ ರೋಡ್ ಗೇಟ್‌ ಬಳಿ ಪ್ರತಿಭಟನೆ ಆರಂಭವಾಯಿತು. ಕಾಂಗ್ರೆಸ್ಸಿನ ಪ್ರಮುಖ ನಾಯಕರು ಕೇಂದ್ರ ಸರ್ಕಾರ ಮತ್ತು ಕೇಂದ್ರ ಇಡಿ ಕಚೇರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Eedina App

ಲಾಲ್‌ಬಾಗ್‌ ನಿಂದ ಶಾಂತಿನಗರದ ಇಡಿ ಕಚೇರಿ ವರಗೂ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಸೇರಿದಂತೆ ಪ್ರಮುಖ ನಾಯಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

“ಕೇಂದ್ರ ಸರ್ಕಾರ ಉದ್ದೇಶಪೂರ್ವಕವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಮನ್ಸ್ ಜಾರಿ ಮಾಡಿದೆ. ಇದರ ಹಿಂದೆ ದ್ವೇಷದ ರಾಜಕಾರಣ ಇದೆ" ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

AV Eye Hospital ad

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, “ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಸರ್ಕಾರದ ಎಲ್ಲ ಸ್ವತಂತ್ರ ಸಂಸ್ಥೆಗಳನ್ನು ಅವರ ಕೈಗೊಂಬೆಗಳಾಗಿ ಮಾಡಿಕೊಂಡಿದ್ದಾರೆ. ಅದು ರಿಸರ್ವ್‌ ಬ್ಯಾಂಕ್‌, ಸಿಎಜಿ, ಸಿಬಿಐ, ಇಡಿ, ಎನ್‌ಎಸ್‌ಎಸ್‌ಒ ಇವು ಯಾವುದೇ ಇರಬಹುದು. ಈ ಎಲ್ಲಾ ಸಂಸ್ಥೆಗಳು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡಿಕೊಂಡಿದ್ದಾರೆ,” ಎಂದು ಟೀಕಿಸಿದರು.

“ಇಡಿ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು ವಿರೋಧ ಪಕ್ಷದವರ ಮೇಲೆ ಛೂ ಬಿಡುವ ಕೆಲಸ ಮಾಡುತ್ತಿದ್ದಾರೆ. ಸ್ವತಂತ್ರ ಭಾರತದ ಇತಿಹಾಸದಲ್ಲಿ ಯಾವತ್ತೂ ಕೂಡ ಸ್ವಾಯತ್ತ ಸಂಸ್ಥೆಗಳನ್ನು ಈ ರೀತಿ ದುರುಪಯೋಗ ಮಾಡಿಕೊಂಡ ಉದಾಹರಣೆಗಳಿಲ್ಲ. ಇಡಿ, ಸಿಬಿಐ, ಐಟಿ ಈ ಎಲ್ಲಾ ಸಂಸ್ಥೆಗಳು ಮೋದಿ ವಿರುದ್ಧ ಇರುವವರ ಮೇಲೆ ದಾಳಿ ಮಾಡಲು ಇವೆ,” ಎಂದು ದೂರಿದರು.

“ದೇಶದ ಪ್ರಗತಿಯ ಅಂಕಿ ಅಂಶಗಳು ಯಾರಿಗೂ ಸಿಗಬಾರದು ಎಂದು ಎನ್‌ಎಸ್‌ಎಸ್‌ಒ ಅನ್ನು ನಿಷ್ಕ್ರಿಯಗೊಳಿಸಿದ್ದಾರೆ. ಯೋಜನಾ ಆಯೋಗವನ್ನು ತೆಗೆದು ಹಾಕಿ ತಮಗೆ ಬೇಕಾದಂತೆ ಕುಣಿಯುವ ನೀತಿ ಆಯೋಗವನ್ನು ರಚನೆ ಮಾಡಿದ್ದಾರೆ. ನರೇಂದ್ರ ಮೋದಿ ಅಧಿಕಾರಕ್ಕೆ ಬಂದಮೇಲೆ ಸಂವಿಧಾನದ ಎಲ್ಲ ಸಂಸ್ಥೆಗಳನ್ನು ತಮ್ಮ ಕೈಗೊಂಬೆ ಮಾಡಿಕೊಂಡು, ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸವನ್ನು ಮಾಡುತ್ತಿದ್ದಾರೆ,” ಎಂದು ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ದೆಹಲಿ | ಬೃಹತ್‌ ಮೆರವಣಿಗೆಯೊಂದಿಗೆ ಇಡಿ ಕಚೇರಿಗೆ ಹಾಜರಾದ ಕಾಂಗ್ರೆಸ್‌ ಮುಖಂಡ ರಾಹುಲ್‌ಗಾಂಧಿ

ನಾಯಕರಿಗೆ ನೈತಿಕ ಬೆಂಬಲ 

“ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಮೇಲೆ ಇಡಿಯನ್ನು ಛೂ ಬಿಟ್ಟು, ಅದರ ಮೂಲಕ ಸಮನ್ಸ್‌ ನೀಡಿ, ಸುಳ್ಳು ಮೊಕದ್ದಮೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಕಾಂಗ್ರೆಸ್‌ ನಾಯಕರನ್ನು ಹೆದರಿಸುವ ಕೆಲಸವನ್ನು ಮೋದಿ ಮಾಡುತ್ತಿದ್ದಾರೆ. ಹಾಗಾಗಿಯೇ ಅಂತಹ ದಬ್ಬಾಳಿಕೆಯ ವಿರುದ್ಧ ಇಡೀ ದೇಶದಲ್ಲಿ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಪ್ರತಿಭಟನೆ ನಮ್ಮ ನಾಯಕರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಲು ಮಾಡುತ್ತಿರುವುದು. ಕಾನೂನನ್ನು ತಮಗೆ ಬೇಕಾದಂತೆ ಬಳಕೆ ಮಾಡಲು ಬರಲ್ಲ. ನ್ಯಾಯ ಎಲ್ಲರಿಗೂ ಒಂದೇ ಆಗಿರಬೇಕು,” ಎಂದರು.

“ನರೇಂದ್ರ ಮೋದಿ ಅವರಿಗೆ ರಾಜ್ಯದ ಗುತ್ತಿಗೆದಾರರ ಸಂಘದವರು ರಾಜ್ಯ ಬಿಜೆಪಿ ಸರ್ಕಾರ 40% ಕಮಿಷನ್ ಕೇಳುತ್ತಿದೆ ಎಂದು ಪತ್ರ ಬರೆದಿದ್ದರು, ಈ ಭ್ರಷ್ಟರ ಮೇಲೆ ಇಡಿ ಛೂ ಬಿಟ್ಟಿದ್ದೀರ ಮೋದಿಜೀ? ಯಾರ ಮೇಲಾದರೂ ಕೇಸ್‌ ಹಾಕಿದ್ದೀರ? ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಅವರೇನು ಲೂಟಿ ಹೊಡೆದಿದ್ದಾರ? ಮೋದಿ ಅವರು ನಾ ಖಾವೂಂಗಾ, ನಾ ಖಾನೆದೂಂಗ ಅನ್ನೋದು ಬರೀ ಸುಳ್ಳು. ದೇಶದ ಸ್ವಾತಂತ್ರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯ ಟ್ರಸ್ಟಿಗಳ ಮೇಲೆ ಇಡಿ ಛೂ ಬಿಟ್ಟಿದೀರಲ್ಲ, ನಾಚಿಕೆಯಾಗಲ್ವ ನಿಮಗೆ? ಇಡಿ ಮೂಲಕ ಕಾಂಗ್ರೆಸ್‌ ನಾಯಕರನ್ನು ಹೆದರಿಸಬಹುದು ಎಂದುಕೊಂಡಿದ್ದರೆ ಅದು ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ಗುಂಡಿಗೆ, ಲಾಠಿ ಏಟಿಗೆ ಹೆದರದ ಕಾಂಗ್ರೆಸ್‌ ಕಾರ್ಯಕರ್ತರು ನಿಮ್ಮ ಸರ್ಕಾರಕ್ಕೆ ಹೆದರುವುದಿಲ್ಲ,” ಎಂದು ತಿಳಿಸಿದರು.

ಕಾಂಗ್ರೆಸ್ ನಡೆಸಿದ ಪ್ರತಿಭಟನೆಯಲ್ಲಿ ಹೆಚ್ಚಿನ ಕಾರ್ಯಕರ್ತರು ಜಮಾಯಿಸಿದ್ದರು. ಶಾಂತಿನಗರ, ಲಾಲ್‌ಬಾಗ್, ವಿಲ್ಸನ್ ಗಾರ್ಡನ್ ಸುತ್ತಮುತ್ತಲಿನ ಏರಿಯಾಗಳಲ್ಲಿ ಸೋಮವಾರ ಟ್ರಾಫಿಕ್ ಜಾಮ್ ಉಂಟಾಗಿತ್ತು. ಕೆಲವು ಕಾರ್ಯಕರ್ತರು ಇಡಿ ಕಚೇರಿಯೊಳಗೆ ನುಗ್ಗಲು ಪ್ರಯತ್ನ ಮಾಡಿದರು. ಕೂಡಲೇ ಪೊಲೀಸರು ಅವರನ್ನು ವಶಕ್ಕೆ ಪಡೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app