
- ಖುದ್ದು ಪೋಸ್ಟರ್ ಅಂಟಿಸಿದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್, ಬಿ ಕೆ ಹರಿಪ್ರಸಾದ್
- ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ʼಪೇ ಸಿಎಂʼ ಪೋಸ್ಟರ್ ಅಂಟಿಸಿ ಆಕ್ರೋಶ
ಬಿಜೆಪಿ ಸರ್ಕಾರದ ವಿರುದ್ಧ ʼಪೇ ಸಿಎಂʼ ಸಮರ ಸಾರಿರುವ ಕಾಂಗ್ರೆಸ್ ನಾಯಕರು ಶುಕ್ರವಾರ ಸಂಜೆ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿ ಸಿಕ್ಕ ಸಿಕ್ಕ ಕಡೆ ʼಪೇ ಸಿಎಂʼ ಪೋಸ್ಟರ್ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಭಾಗಿಯಾಗಿ ʼಪೇ ಸಿಎಂʼ ಪೋಸ್ಟರ್ ಅಭಿಯಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದರು.
ರೇಸ್ ಕೋರ್ಸ್ ರಸ್ತೆಯ ವೋಲ್ವೋ ಕಚೇರಿಯ ಗೋಡೆಗಳಿಗೆ, ಬಿಎಂಟಿಸಿ ಬಸ್ಗಳಿಗೆ, ಪೋಲಿಸ್ ಬ್ಯಾರಿಕೇಡ್ ಹಾಗೂ ಪೊಲೀಸ್ ವಾಹನಗಳಿಗೂ ಕಾಂಗ್ರೆಸ್ ನಾಯಕರು ʼಪೇ ಸಿಎಂʼ ಪೋಸ್ಟರ್ ಅಂಟಿಸಿ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಹಾಗೂ ಬಿ ಕೆ ಹರಿಪ್ರಸಾದ್ ಅವರು ಖುದ್ದು ತಮ್ಮ ಕೈಯಿಂದ ಗೋಡೆಗೆ ಅಂಟು ಸವರಿ ಪೋಸ್ಟರ್ ಅಂಟಿಸಿದರು.
ಸಿದ್ದರಾಮಯ್ಯ ಪೋಸ್ಟರ್ ಅಂಟಿಸುವ ವೇಳೆ ಮಾತನಾಡಿ, “ನಮ್ಮ ಕಾರ್ಯಕರ್ತರನ್ನು ಬಂಧಿಸಿದ್ದಕ್ಕೆ ನಾವು ಬೀದಿಗೆ ಬಂದಿದ್ದೇವೆ. ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ಹೀಗೆ ಮುಂದುವರಿಯಲಿದೆ. ಧಮ್ಮು ತಾಕತ್ತು ಇದ್ದರೆ ನಮ್ಮ ಮೇಲೆ ಕ್ರಮಕೈಗೊಳ್ಳಲಿ” ಎಂದು ಕಿಡಿ ಕಾರಿದರು.

ಡಿ ಕೆ ಶಿವಕುಮಕಾರ್ ಪ್ರತಿಕ್ರಿಯಿಸಿ, “ಲಿಂಗಾಯತ ಸಿಎಂ ಎಂಬುದು ನಮ್ಮ ಟಾರ್ಗೆಟ್ ಅಲ್ಲ. ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಮಾಧ್ಯಮಗಳಲ್ಲಿ ಬಯಲಾಗಿದೆ. ಅದನ್ನು ನಾವು ಪೋಸ್ಟರ್ ಮಾಡಿ ತಿಳಿಸುತ್ತಿದ್ದೇವೆ. ಇದೊಂದು ಭ್ರಷ್ಟ ಸರ್ಕಾರವಾಗಿದ್ದು, ಬೊಮ್ಮಾಯಿ ಅವರಿಗೆ ತಾಕತ್ತಿದ್ದರೆ ಸರ್ಕಾರ ವಜಾಮಾಡಿ ಚುನಾವಣೆಗೆ ಬರಲಿ” ಎಂದು ಸವಾಲು ಎಸೆದರು.
“ಧಮ್, ತಾಕತ್ ಇದ್ದರೆ ಬೊಮ್ಮಾಯಿ ಅವರು ನಮ್ಮನ್ನು ಅರಸ್ಟ್ ಮಾಡಿಸಲಿ. ನಾವು ʼಪೇ ಸಿಎಂʼ ಪೋಸ್ಟರ್ ಮುಂದೆಯೂ ಅಂಟಿಸುತ್ತೇವೆ. ನಾವು ಆರೆಸ್ಟ್ ಆಗಲು ತಯಾರಿದ್ದೀವೆ. ನಮ್ಮ ಕಾರ್ಯಕರ್ತರನ್ನು ಬಂಧನ ಮಾಡಿದ್ದಾರೆ. ತಾಕತ್ತು ಇದ್ದರೆ ನಮ್ಮನ್ನೂ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಲಿ ನೋಡೋಣ” ಎಂದು ಬಿ ಕೆ ಹರಿಪ್ರಸಾದ್ ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ʼ40 ಪರ್ಸೆಂಟ್ ಸರ್ಕಾರʼದ ಮುಖ್ಯಮಂತ್ರಿ ʼಪೇ ಸಿಎಂʼ ಆಗಿಯೇ ಬಂದಿದ್ದಾರೆ, ಪುಗಸಟ್ಟೆ ಅಲ್ಲ: ಕಾಂಗ್ರೆಸ್ ಟೀಕೆ
“ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದವರು ಇಷ್ಟೊಂದು ಭ್ರಷ್ಟಾಚಾರದಲ್ಲಿ ಮುಳುಗಿದವರು ಬೊಮ್ಮಾಯಿ ಅವರು. ಲಿಂಗಾಯತರ ಹೆಸರು ಇಟ್ಟುಕೊಂಡು ಅವರು ಏನೇನು ಮಾಡಿದ್ದಾರೆ ಎಂಬುದು ಅವರಿಗೂ ಗೊತ್ತಿದೆ. ಇಂತಹ ವಿಚಾರಗಳನ್ನು ಹೇಳಿಕೊಂಡು ಜನರನ್ನು ಮರಳು ಮಾಡಲು ಆಗಲ್ಲ” ಎಂದು ಕುಟುಕಿದರು.
ಪೋಸ್ಟರ್ ಅಂಟಿಸುತ್ತಿದ್ದ ಕಾಂಗ್ರೆಸ್ ನಾಯಕರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಈ ವೇಳೆ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿ, “ಪೊಲೀಸರು ಕೂಡ ಬಿಜೆಪಿ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ” ಎಂದು ದೂರಿದರು.