ರಾಜ್ಯಾದ್ಯಂತ ಮುಂದುವರಿದ ಮಳೆ ; ಉತ್ತರ ಕರ್ನಾಟಕದ ಹಲವೆಡೆ ಯಲ್ಲೋ ಅಲರ್ಟ್‌ ಘೋಷಣೆ

Uttar Karanataka
  • ಕರಾವಳಿಯ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
  • ಕಲಬುರಗಿಯಲ್ಲಿ ಮನೆ ಕುಸಿದು ಓರ್ವ ಮಹಿಳೆ ಸಾವು 

ರಾಜ್ಯಾದ್ಯಂತ ಮಳೆ ಮುಂದುವರೆದಿದ್ದು, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಭಾರಿ ಮಳೆಯಾಗುವ ಬಗ್ಗೆ ಹವಮಾನ ಇಲಾಖೆ ಮೂನ್ಸೂಚನೆ ನೀಡಿದ್ದು, ಬೀದರ್, ಯಾದಗಿರಿ, ಕಲಬುರ್ಗಿ, ವಿಜಯಪುರ, ಬೆಳಗಾವಿ, ಧಾರವಾಡ, ಹಾವೇರಿ ಸೇರಿದಂತೆ ಮಲೆನಾಡಿನ ಹಾಸನ ಜಿಲ್ಲೆಗೆ ಭಾನುವಾರ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ. 

ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಮೂರು ಜಿಲ್ಲೆಗಳಿಗೆ ಸೋಮವಾರವೂ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಚಿಕ್ಕಮಗಳೂರು, ಕೊಡಗು, ಮೈಸೂರು, ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಕಲಬುರಗಿಯಲ್ಲಿ ಮನೆ ಕುಸಿದು ಓರ್ವ ಮಹಿಳೆ ಸಾವು 

ಸತತ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಮನೆ ಕುಸಿದು ಬಿದ್ದು ಮಹಿಳೆ ಮೃತಪಟ್ಟು ಇಬ್ಬರಿಗೆ ಗಾಯವಾಗಿದೆ. ಆರೀಫಾ ಬೇಗಂ ಸರ್ದಾರ್ ಅಲಿ (63) ಎನ್ನುವ ವೃದ್ಧೆ ಸಾವನ್ನಪ್ಪಿರುವ ಮೃತ ದುರ್ದೈವಿ. ಯಾಸ್ಮೀನ್ ಬೇಗಂ ಮತ್ತು ಅಲಿ ಗಾಯಗೊಂಡವರು. ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Image
Kalaburagi

ಘಟನೆ ಸುದ್ದಿ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಪುರಸಭೆಯ ಅಧ್ಯಕ್ಷ ಮಲ್ಲಿಕಾರ್ಜುನ ಕಾಳಗಿ ಅವರು ಕುಸಿದು ಬಿದ್ದ ಮನೆಯನ್ನು ಪರಿಶೀಲಿಸಿದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. 

ಕೊಡಗಿನಲ್ಲಿ ಮತ್ತೆ ಕಂಪಿಸಿದ ಭೂಮಿ

ಜಿಲ್ಲೆಯಲ್ಲಿ ಸತತವಾಗಿ ಧಾರಾಕಾರ ಮಳೆ ಮುಂದುವರೆದಿದ್ದು, ಭಾನುವಾರ ಮತ್ತೆ ಮಡಿಕೇರಿಯ ಚೆಂಬು ಗ್ರಾಮದಲ್ಲಿ ಲಘು ಭೂಕಂಪನವಾಗಿದೆ. ಬೆಳಿಗ್ಗೆ 6.22 ಕ್ಕೆ ಭೂಮಿಯಿಂದ ಭಾರಿ ಪ್ರಮಾಣದ ಶಬ್ದ ಕೇಳಿ ಬಂದಿದ್ದು, ಭೂಮಿ ಕಂಪಿಸಿದೆ. 1.8 ತೀವ್ರತೆಯ ಭೂಕಂಪ ಸಂಭವಿಸಿದ್ದು, ಅದರ ಕೇಂದ್ರ ಬಿಂದು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಪತ್ತೆಯಾಗಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ಉಸ್ತುವಾರಿ ಕೇಂದ್ರ ತಿಳಿಸಿದೆ.

ಜಿಲ್ಲೆಯಲ್ಲಿ ಅಲ್ಲಲ್ಲಿ ರಸ್ತೆ ಮೇಲೆ ಗುಡ್ಡಗಳು ಕುಸಿತ ಕಾಣುತ್ತಿರುವುದರಿಂದ ಜಿಲ್ಲಾಧಿಕಾರಿ ಬಿ.ಸಿ. ಸತೀಶ್ ಜಿಲ್ಲೆಯಾದ್ಯಂತ ಅಕ್ಟೋಬರ್ 15 ವರೆಗೆ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸಿ ಶನಿವಾರ ಆದೇಶ ಹೊರಡಿಸಿದ್ದಾರೆ.

Image
Kodagu

ಜಿಲ್ಲೆಯಲ್ಲಿ ಶನಿವಾರ ರಾತ್ರಿ ಇಡೀ ಹಾಗೂ ಭಾನುವಾರ ಬೆಳಿಗ್ಗೆ ಭಾರಿ ಮಳೆ ಸುರಿದಿದೆ. ಕಿಂಡಿ ಆಣೆಕಟ್ಟು ತುಂಬಿ ನೀರು ಸಂಪಾಜೆಯಲ್ಲಿ ಕೊಯನಾಡಿನ ಮನೆಗಳಿಗೆ ನುಗ್ಗಿದ್ದು, ನಾಗರಿಕರ ಸಹಾಯದಿಂದ ದಿನಬಳಕೆ ವಸ್ತುಗಳನ್ನು ರಕ್ಷಣೆ ಮಾಡಲಾಗಿದೆ.  

ಹಾವೇರಿ ಜಿಲ್ಲೆಯಲ್ಲಿ ಧಾರಕಾರ ಮಳೆ 

ಜಿಲ್ಲೆಯಲ್ಲಿ ಧಾರಕಾರವಾಗಿ ಮಳೆಯಾಗುತ್ತಿದ್ದು, ಸವಣೂರು ತಾಲೂಕಿನಾದ್ಯಂತ ಸುಮಾರು ಹತ್ತು ಮನೆಗಳು ಹಾನಿಗೀಡಾಗಿವೆ. ಪಟ್ಟಣದಲ್ಲಿ ಕೋರಿಪೇಟೆಯಲ್ಲಿ ಭರಮವ್ವ ಭರಮಪ್ಪ ಹುಣಸಿಮರದ (74) ಎನ್ನುವವರ ಮೇಲೆ ಗೋಡೆ ಕುಸಿದು ತೀವ್ರ ಗಾಯಗೊಂಡಿದ್ದಾರೆ. 

Image
Haveri

ಗಾಯಗೊಂಡಿರುವ ವೃದ್ಧೆಯನ್ನು ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಲೂಕಿನಲ್ಲಿ ಹರಿಯುವ ವರದಾ ನದಿಗೆ ಕಳಸೂರ ಗ್ರಾಮದ ಹತ್ತಿರ ನಿರ್ಮಿಸಿರುವ ಬ್ಯಾರೇಜ್ ಸಂಪೂರ್ಣ ತುಂಬಿ ಅಪಾಯದ ಹಂತ ತಲುಪಿದ್ದು ಕಳಸೂರ ಗ್ರಾಮದಿಂದ ಹಾವೇರಿ ನಗರಕ್ಕೆ ಸಂರ್ಪಕ ಕಲ್ಪಿಸುವ ರಸ್ತೆ ಬಂದಾಗಿದ್ದು ಸಂಚಾರಕ್ಕೆ ಖಡಿತಗೊಂಡಿದೆ. 

ವಿಜಯನಗರ ಹೂವಿನಹಡಗಲಿಯಲ್ಲಿ ಮಳೆ, ಪ್ರವಾಹ ಭೀತಿ

ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆಯಾದ ಹಿನ್ನಲೆಯಲ್ಲಿ ತುಂಗಭದ್ರಾ ನದಿ ತುಂಬಿದ್ದು, ಹೂವಿನಹಡಗಲಿ ತಾಲೂಕಿನ ಹಲವು ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ಹಿರೇಬನ್ನಿಹಟ್ಟಿಯ ನದಿ ತೀರದ ಹೊಲಗಳಿಗೆ ನೀರು ನುಗ್ಗಿದ್ದು, ಸುಮಾರು 50-60 ರಷ್ಟು ಎಕರೆ ಜಲಾವೃತವಾಗಿದ್ದು, ಮೆಕ್ಕೆಜೋಳ, ಭತ್ತ ಹಾಗೂ ಕಬ್ಬು ಬೆಳೆಗೆ ಹಾನಿಯಾಗಿದೆ.

ತಹಶೀಲ್ದಾರ್ ಪ್ರತಿಭಾ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ್ ಬೆಣ್ಣಿ ಅವರು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಪ್ರವಾಹ ಸ್ಥಿತಿಯನ್ನು ಅವಲೋಕಿಸಿದ್ದಾರೆ.

Image
Vijayanagar

ಸದ್ಯದ ಮಟ್ಟಿಗೆ ಯಾವುದೇ ಅಪಾಯವಿಲ್ಲ, ಒಳ ಹರಿವು ಹೆಚ್ಚಾದಂತೆ ಕುರುವತ್ತಿ, ಅಂಗೂರು, ಮದಲಗಟ್ಟಿ ಗ್ರಾಮಗಳ ಕೆಲ ಕುಟುಂಬಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳುತ್ತೇವೆ. ಮೂರು ಗ್ರಾಮಗಳ ಶಾಲೆಗಳಲ್ಲಿ ಕಾಳಜಿ ಕೇಂದ್ರ ತೆರೆಯಲು ಸಿದ್ದತೆಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿ, ಪಿಡಿಒಗಳು ಕೇಂದ್ರ ಸ್ಥಳದಲ್ಲೇ ಇದ್ದು ಪ್ರವಾಹ ಸ್ಥಿತಿಯ ನಿಗಾವಹಿಸುವಂತೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಪ್ರತಿಭಾ ತಿಳಿಸಿದ್ದಾರೆ.

ಬೀದರ್ ಜಿಲ್ಲೆಯಲ್ಲಿ ಸತತ ಮಳೆ 

ಜಿಲ್ಲೆಯಲ್ಲಿ ಶನಿವಾರ ದಿನವಿಡೀ ಜಿಟಿ ಜಿಟಿ ಮಳೆ ಸುರಿಯಿತು. ಅಬ್ಬರಿಸದಿದ್ದರೂ ಮುಸಲಧಾರಿಯಾಗಿ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿತ್ತು. ಶಾಲಾ ಕಾಲೇಜು ರಜೆ ಘೋಷಣೆ ಮಾಡಲಾಗಿದೆ. ಹವಮಾನ ಇಲಾಖೆ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.

ಈ ಸುದ್ದಿ ಓದಿದ್ದೀರಾ?; ಆಂಧ್ರಪ್ರದೇಶ | ವಿದ್ಯುತ್‌ ಮೀಟರ್‌ ಅಳವಡಿಕೆ : ಬೀದಿಗಿಳಿದ ಅನಂತಪುರ ಜಿಲ್ಲೆಯ ರೈತರು

ಉಡುಪಿ ಜಿಲ್ಲೆಯಾದ್ಯಂತ ಮುಂದುವರೆದ ಮಳೆ 

ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕಾರ್ಕಡ, ಕಾರ್ಕಳ ತಾಲ್ಲೂಕಿನ ಇರ್ವತ್ತೂರು, ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದಲ್ಲಿ ನಾಲ್ಕು ಮನೆಗಳಿಗೆ ಹಾನಿಯಾಗಿದೆ. ಹಂಗಳೂರು, ಆಲೂರು, ರಟ್ಟಾಡಿ, ಅಂಪಾರು, ಚಿತ್ತೂರು, ಯಡಾಡಿ-ಮತ್ಯಾಡಿಯಲ್ಲಿ ಮನೆಗಳು ಕುಸಿದಿವೆ.

ಬೈಂದೂರು ತಾಲೂಕಿನ ಉಪ್ಪುಂದ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಮ್ಮನವರ ತೊಪ್ಲು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡ ಕುಸಿದು ಬಿದ್ದಿದೆ. ಶಿರೂರಿನಲ್ಲಿ ಭತ್ತ ಬೆಳೆ ನಾಶವಾಗಿದೆ.

Image
Udupi

ಉಡುಪಿ ನಗದಲ್ಲಿ ಕೃತಕ ನೆರೆ ಮುಂದುವರೆದಿದ್ದು, ಹಲವಾರು ಮನೆಗಳಿಗೆ ನೀರು ನುಗ್ಗಿವೆ. ಕಳೆದ 24 ಗಂಟೆಗಳಲ್ಲಿ ಉಡುಪಿ ತಾಲ್ಲೂಕಿನಲ್ಲಿ 121.1 ಮಿ.ಮೀ, ಬ್ರಹ್ಮಾವರ 125, ಕಾಪು 139.5, ಕುಂದಾಪುರ 127.6, ಬೈಂದೂರು 96.1, ಕಾರ್ಕಳ 137.8, ಹೆಬ್ರಿ 161 ಮಿ.ಮೀ ಸೇರಿ ಜಿಲ್ಲೆಯಲ್ಲಿ ಸರಾಸರಿ 122.9 ಮಿ.ಮೀ. ಮಳೆ ಬಿದ್ದಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ರಸ್ತೆ, ವಿದ್ಯುತ್ ಕಂಬ, ಬೆಳೆ ಹಾಗೂ ಸೇತುವೆಗಳು ಹಾನಿಯಾಗಿದ್ದು, ಸುಮಾರು ₹ 24.73 ಕೋಟಿ ನಷ್ಟ ಸಂಭವಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಮಳೆ

ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ನೇತ್ರಾವದಿ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇನ್ನೊಂದಡೆ ಮಳೆ ಹಾನಿಯ ಪ್ರಮಾಣ ಹೆಚ್ಚಾಗಿದೆ. ಸಮುದ್ರದ ಅಲೆಗಳಿಂದ ಕಡಲ್ಕೊರೆತ ಹೆಚ್ಚಾಗುತ್ತಿದ್ದು, ನಗರ ಮತ್ತು ಗ್ರಾಮಾಂತರ ಜನಜೀವನ ಅಸ್ತವ್ಯಸ್ತವಾಗಿದೆ.

ಶನಿವಾರ ದಿನವಿಡೀ ಮಳೆ ಸುರಿದಿದ್ದು, ಹವಾಮಾನ ಇಲಾಖೆ ಜು.12 ವರೆಗೆ ರೆಡ್ ಅಲರ್ಟ್ ಜು.14 ವರೆಗೆ ಅರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಉಳ್ಳಾಲದ ಬಟಪಾಡಿ, ಪಣಂಬೂರು, ಬೈಕಂಪಾಡಿಯಲ್ಲಿ ಶನಿವಾರ ಕಡಲ್ಕೊರೆತ ತೀವ್ರಗೊಂಡಿತ್ತು. ಮಂಗಳೂರು ನಗರಸಭೆ ನಿರ್ಮಿಸಿದ್ದ ಮೀನು ಮಾರುಕಟ್ಟೆ ಕಡಲಕೊರೆತದಿಂದ ಸಮುದ್ರಕ್ಕೆ ಆಹುತಿಯಾಗಿದೆ. ಬಟಪಾಡಿಯಲ್ಲಿ ಕಡಲು ಪ್ರಕ್ಷುಬ್ದಗೊಂಡಿದ್ದು, ಅಪಾಯದಲ್ಲಿ ಅನೇಕ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ.

ಶಿವಮೊಗ್ಗ ಸತತ ಮಳೆ ಆಗುಂಬೆಯಲ್ಲಿ ಗುಡ್ಡ ಕುಸಿತ

ಜಿಲ್ಲೆಯಲ್ಲಿ ಭಾರಿ ಮಳೆಗೆ ಆಗುಂಬೆ ಘಾಟಿಯಲ್ಲಿ ರಸ್ತೆಗೆ ಗುಡ್ಡ ಕುಸಿದಿದ್ದು, ಜಿಲ್ಲೆಯಿಂದ ಕರಾವಳಿ ಸಂಪರ್ಕ ಕಲ್ಪಿಸುವ ತೀರ್ಥಹಳ್ಳಿ-ಹೆಬ್ರಿ ನಡುವಿನ ರಾಷ್ಟ್ರೀಯ ಹೆದ್ದಾರಿ ವಾಹನ ಸಂಚಾರ ಸ್ಥಗಿತಗೊಂಡಿದೆ. ಆಗುಂಬೆ ಹಾಗೂ ಸೋಮೇಶ್ವರ ಚೆಕ್ ಪೋಸ್ಟ್ ಗಳಲ್ಲಿಯೇ ವಾಹನಗಳನ್ನು ಮರಳಿ ಕಳುಹಿಸಲಾಗುತ್ತಿದೆ. ಅರಣ್ಯ ಇಲಾಖೆ ಹಾಗೂ ಹೆದ್ದಾರಿ ಪ್ರಾಧಿಕಾರದವರು ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180