ಶುಕ್ರವಾರವೂ ಅಬ್ಬರಿಸಿದ ಮಳೆ | ಮನೆ ಗೋಡೆ ಕುಸಿದು ಬಾಲಕ ಸಾವು

Rain
  • ಭೂವನಹಳ್ಳಿ ಗ್ರಾಮದ ಏಳನೇ ತರಗತಿ ಓದುತ್ತಿದ್ದ ಬಾಲಕ 
  • ಕೊಡಗು ಜಿಲ್ಲೆಯಲ್ಲಿ ಅಗಸ್ಟ್‌ 6ರಂದು ಶಾಲೆಗಳಿಗೆ ರಜೆ

ರಾಜ್ಯದಲ್ಲಿ ಶುಕ್ರವಾರವೂ ಮಳೆಯ ಅಬ್ಬರ ಮುಂದುವರೆದಿದೆ. ಹಾಸನ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆ ಗೋಡೆ ಕುಸಿದುಬಿದ್ದಿದ್ದು, ಮನೆಯಲ್ಲಿ ಮಲಗಿದ್ದ ಬಾಲಕ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಭೂವನಹಳ್ಳಿ ಗ್ರಾಮದ ವಿಜಯಕುಮಾರ್-ಚೈತ್ರ ದಂಪತಿ ಪುತ್ರ ಪ್ರಜ್ವಲ್ (13) ಮೃತಪಟ್ಟ ದುರ್ದೈವಿ ಬಾಲಕ. ಆತ ಮೂರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದ ಎನ್ನಲಾಗಿದೆ.

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ಮೂರು ದಿನ ಹಾಸ್ಟೆಲ್‌ಗೆ ರಜೆ ನೀಡಿದ್ದರಿಂದ ಗುರುವಾರ ಸಂಜೆ ಮನೆಗೆ ಬಂದಿದ್ದ. ರಾತ್ರಿ ಮಲಗಿದ್ದ ಸಮಯದಲ್ಲಿ ಗೋಡೆ ಬಿದ್ದು, ಬಾಲಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ.

ಕೊಡಗು ಜಿಲ್ಲೆಯಲ್ಲಿ ಅಗಸ್ಟ್‌ 6ರಂದು ಶಾಲೆಗಳಿಗೆ ರಜೆ

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ರೆಡ್‌ ಅಲರ್ಟ್ ಘೋಷಿಸಲಾಗಿದೆ. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ವೇದಮೂರ್ತಿ ಅವರು ಜಿಲ್ಲೆಯ ಎಲ್ಲ ಶಾಲೆಗಳಿಗೆ ರಜೆ ನೀಡಿ ಆದೇಶ ಹೊರಡಿಸಿದ್ದಾರೆ.

ಮನೆಗಳ ಹಾನಿ

ದಕ್ಷಿಣ ಕನ್ನಡದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಕುಕ್ಕೆ ಸುಭ್ರಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಹರಿಹರದಲ್ಲಿ 18 ಮನೆಗಳು, ಕಲ್ಮಕಾರಿನಲ್ಲಿ 7 ಮನೆಗಳು, ಕಲ್ಲಮೊಗ್ರದಲ್ಲಿ 6 ಮನೆಗಳಿಗೆ ಹಾನಿಯಾಗಿದೆ. 

ರಾಮನಗರ ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ರಂಗರಾಯರದೊಡ್ಡಿ ಕೆರೆ ಕೋಡಿ ಬಿದ್ದಿದೆ. ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದೆ. 

ಕೆರೆ ಕೋಡಿಯಲ್ಲಿರುವ ಹಳ್ಳವು ಕನಕಪುರ ವೃತ್ತದ ಬಳಿ ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತಿದ್ದು, ಅಲ್ಲಿ ಕಸಕಡ್ಡಿ ಹೆಚ್ಚಾದ ಕಾರಣ ಮಳೆ ನೀರು ಹಳ್ಳದಲ್ಲಿ ಹರಿಯಲಾಗದೇ ಅಕ್ಕಪಕ್ಕದ ವಸತಿ ಪ್ರದೇಶಗಳತ್ತ ನುಗ್ಗಿದೆ. ಇದರಿಂದಾಗಿ ಕನಕಪುರ ವೃತ್ತದ ಸುತ್ತಮುತ್ತ ಮನೆಗಳಿಗೆ ನುಗ್ಗಿ ಜನರು ಪರದಾಡಿದ್ದಾರೆ.

20ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಬಾಲಗೇರಿಯ ಲತಾ ಎಂಬುವವರ ಮನೆಗೆ ಭಾಗಶಃ ಹಾನಿಯಾಗಿದೆ. ರಾಮನಗರ ಒಂದರಲ್ಲಿಯೇ 40 ವಿದ್ಯುತ್‌ ಕಂಬಗಳು ಉರುಳಿವೆ. 

ರಾಜ್ಯದ ನಾನಾ ಕಡೆ ಮುಂದುವರೆದ ಮಳೆ

ವಿಜಯಪುರ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಡೋಣಿ ನದಿ ತುಂಬಿ ಹರಿದಿದೆ. ನದಿ ವ್ಯಾಪ್ತಿಯ ಸಾವಿರಾರು ಎಕರೆ ಜಮೀನು ಜಲಾವೃತವಾಗಿದ್ದು, ಬೆಳೆ ನಾಶವಾಗಿದೆ. ನದಿ ಪ್ರವಾಹದ ಹಳ್ಳಿಗಳಿಗೆ ಜಿಲ್ಲಾಧಿಕಾರಿ ಮತ್ತು ಶಾಸಕರು ಭೇಟಿ ನೀಡಿ ಪರಿಶೀಲಿದ್ದಾರೆ.

ಡೋಣಿ ನದಿ ತಟಕ್ಕೆ ಜನರು ತೆರಳದಂತೆ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ದೇವರ ಹಿಪ್ಪರಗಿ ಪಟ್ಟದಲ್ಲಿಯೂ ಧಾರಾಕಾರ ಮಳೆಯಾಗಿದ್ದು, ಐತಿಹಾಸಿಕ ದೇವಸ್ಥಾನ ಮಲ್ಲಯ್ಯ, ಗರ್ಭಗುಡಿಗೆ ನೀರು ನುಗ್ಗಿದೆ. 2009ರ ಬಳಿಕ ದೇವಸ್ಥಾನ ಮತ್ತೆ ಮುಳುಗಡೆಯಾಗಿದೆ.

ಈ ಸುದ್ದಿ ಓದಿದ್ದೀರಾ?; ಬೆಂಗಳೂರು | ಹತ್ತು ವರ್ಷಗಳ ಬಳಿಕ ತುಂಬುವ ಹಂತಕ್ಕೆ ಬಂದ ತಿಪ್ಪನಗೊಂಡನಹಳ್ಳಿ ಜಲಾಶಯ

ಬೀದರ್ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು, ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿರುವ ಬಸವ ಮಂಟಪಕ್ಕೆ ನೀರು ನುಗ್ಗಿದೆ. ಕಮಲನಗರ ತಾಲೂಕಾದ್ಯಂತ ಮಳೆಯಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿದಿವೆ. ಹಳ್ಳ ಉಕ್ಕಿ ಹರಿದ ಪರಿಣಾಮ ತಾಲೂಕಿನ ಚಂದನವಾಡಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿದೆ. 

ಚಿತ್ರದುರ್ಗ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಹಿರಿಯೂರು ತಾಲೂಕಿನ ಐತಿಹಾಸಿಕ ವಾಣಿವಿಲಾಸ ಜಲಾಶಯವು 65 ವರ್ಷಗಳ ಬಳಿಕ ದಾಖಲೆ ಮಟ್ಟಕ್ಕೆ ತುಂಬಿದೆ. ಆರೇಳು ದಶಕಗಳ ನಂತರ ವೇದಾವತಿ ನದಿ ಮತ್ತೊಮ್ಮೆ ಮೈದುಂಬಿ ಹರಿದ ಕಾರಣ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಶುಕ್ರವಾರ 125 ಅಡಿ ದಾಟಿದೆ. ಜಲಾಶಯ ಭರ್ತಿಗೆ ಕೇವಲ 5 ಅಡಿ ನೀರು ಬೇಕಿದ್ದು, ಕೋಡಿ ಬೀಳುವ ಕ್ಷಣವನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಜನ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಮಳೆಯಿಂದ ಬೆಳೆ ನಾಶ 

ಚಿತ್ರದುರ್ಗ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಕೃಷಿ ಭೂಮಿ ಜಲಾವೃತವಾಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಚಳ್ಳಕೇರೆ ತಾಲೂಕಿಮ ಪರಶುರಾಂಪುರ ಹೋಬಳಿ ಹುಲಿಕುಂಟೆ ಗ್ರಾಮದ ರೈತ ಮಹಿಳೆ ನಾಗಮ್ಮ ಅವರು ಸುಮಾರು 2.5 ಲಕ್ಷ ಖರ್ಚು ಮಾಡಿ ಬೆಳೆದ ಕಲ್ಲಂಗಡಿ ಬೆಳೆ ಸಂಪೂರ್ಣವಾಗಿ ಜಲಾವೃತವಾಗಿದೆ.

ಕಳೆದ 5-6 ದಿನಗಳ ಕಾಲ ನಿರಂತರವಾಗಿ ಮಳೆ ಸುರಿದು ಪರಿಣಾಮವಾಗಿ ತಾಲೂಕಿನಲ್ಲಿ ಬೆಳೆದ 45 ಹೆಕ್ಟೇರ್‌ ಪ್ರದೇಶದ ಕಲ್ಲಂಗಡಿ ಬೆಳೆಯಲ್ಲಿ 20 ಎಕರೆ ಜಮೀನಿನಲ್ಲಿ ಮಳೆ ನೀರು ತುಂಬಿಕೊಂಡಿದೆ. ಇದರಿಂದ ₹ 35 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ ಎಂದು ಅಂದಾಜಿಸಲಾಗಿರುವುದಾಗಿ ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಡಾ. ವಿರೂಪಾಕ್ಷಪ್ಪ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Image
AV Eye Hospital ad
ನಿಮಗೆ ಏನು ಅನ್ನಿಸ್ತು?
0 ವೋಟ್