ಹಿಂದೆ 53 ಲಕ್ಷ ಕೋಟಿ ಇದ್ದ ದೇಶದ ಸಾಲ, ಮೋದಿ ಅವಧಿಯಲ್ಲಿ 155 ಲಕ್ಷ ಕೋಟಿಗೆ ಏರಿದೆ!

yuvajanotsava
  • ʼಯುವ ಜನೋತ್ಸವʼ ಕಾರ್ಯಕ್ರಮದಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ
  • ಮೋದಿ ನೀತಿಯಿಂದ ದೇಶ ದಿವಾಳಿ, ಸಹಿಸಿಕೊಂಡು ಹೇಗೆ ಇರ್ತೀರಾ: ಯುವಕರಿಗೆ ಪ್ರಶ್ನೆ

"2011ರಲ್ಲಿ ಆರ್ಥಿಕ ಅಭಿವೃದ್ಧಿಯಲ್ಲಿ ಜಾಗತಿಕವಾಗಿ ನಮ್ಮ ದೇಶ 3ನೇ ಸ್ಥಾನದಲ್ಲಿತ್ತು. ಮೋದಿ ಪ್ರಧಾನಿಯಾದ ಮೇಲೆ ಅದು 164ನೇ ಸ್ಥಾನಕ್ಕೆ ಕುಸಿದುಹೋಗಿದೆ ಎಂದು ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಅವರೇ ಹೇಳಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಯುವ ಕಾಂಗ್ರೆಸ್‌ ಆಯೋಜಿಸಿದ್ದ ʼಯುವ ಜನೋತ್ಸವʼದಲ್ಲಿ ಅವರು ಮಾತನಾಡಿ, “ಜಗತ್ತಿನ ಒಟ್ಟು 193 ದೇಶಗಳಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ದೇಶಗಳ ಪೈಕಿ ಭಾರತ 164 ಸ್ಥಾನದಲ್ಲಿ ಇದೆ ಎಂದು ಮೋದಿ ಅವರು ಹೇಳಿದ್ದಾರೆ. ಇದಕ್ಕೆ ಬಿಜೆಪಿಯ ಸುಬ್ರಮಣ್ಯಂ ಸ್ವಾಮಿ ಅವರು ಟ್ವೀಟ್‌ ಮಾಡಿ, ಮೋದಿ ಹಿಂದಿನ ಮತ್ತು ಅವರ ಆಡಳಿತದ ಅವಧಿಯ ದೇಶದ ಪ್ರಗತಿಯನ್ನು ಹೋಲಿಸಿ ಸತ್ಯ ಹೇಳಿದ್ದಾರೆ ಎಂದು ಹೇಳಿದರು. 

"ಸ್ವಾತಂತ್ರ್ಯ ಬಂದ ನಂತರದಿಂದ ಮನಮೋಹನ್‌ ಸಿಂಗ್‌ ಅವರು ಪ್ರಧಾನಿ ಸ್ಥಾನದಿಂದ ಇಳಿಯುವವರೆಗೆ ಇದ್ದ ದೇಶದ ಒಟ್ಟು ಸಾಲ 53 ಲಕ್ಷದ 11 ಸಾವಿರ ಕೋಟಿ. ಇದು ಈ ವರ್ಷದ ಮಾರ್ಚ್‌ ಕೊನೆಗೆ 155 ಲಕ್ಷ ಕೋಟಿ ಆಗಿದೆ. ಕೇವಲ ಎಂಟು ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿರುವ ಒಟ್ಟು ಸಾಲ 102 ಲಕ್ಷ ಕೋಟಿ. ಇದರಿಂದ ದೇಶ ಆರ್ಥಿಕವಾಗಿ ದಿವಾಳಿಯಾಗಲ್ವಾ? ಇದನ್ನು ಸಹಿಸಿಕೊಂಡು ಇರ್ತೀರಾ” ಎಂದು ನೆರೆದಿದ್ದ ಯುವಕರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು.

“ಇಂದು ದೇಶದ ಯುವಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ಯುವ ಜನರು ರಾಜಕೀಯ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆ ತರುವ ಶಕ್ತಿ ಹೊಂದಿದ್ದಾರೆ. ದೇಶದ ಜನಸಂಖ್ಯೆಯಲ್ಲಿ 35 ವಯಸಿನ ಒಳಗಿನ ಯುವಕರ ಪ್ರಮಾಣ ಶೇ.65 ಇದೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ 107 ಕೋಟಿ ಜನರು ದುಡಿಯುವ ಶಕ್ತಿ ಹೊಂದಿದ್ದಾರೆ, ಆದರೆ ಇವರಲ್ಲಿ ಉದ್ಯೋಗ ಹೊಂದಿರುವ ಜನರ ಪ್ರಮಾಣ ಕೇವಲ 37- 38% ಇದೆ” ಎಂದರು.

“ದುರಾದೃಷ್ಟವಶಾತ್‌ ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆ ಯುವಕರ ಶಕ್ತಿಯನ್ನು ಸದುಪಯೋಗ ಮಾಡಿಕೊಂಡು ದೇಶ ಕಟ್ಟುವ ಕೆಲಸ ಆಗಿಲ್ಲ. ದೇಶದ ಯುವಶಕ್ತಿ ದುರುಪಯೋಗ ಆಗುತ್ತಿದೆ. ನಿರುದ್ಯೋಗ ತಾಂಡವವಾಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗದ ಪ್ರಮಾಣ 7% ಮತ್ತು ನಗರ ಪ್ರದೇಶದಲ್ಲಿ 9% ಆಗಿದೆ. ಒಟ್ಟು ನಿರುದ್ಯೋಗ 8% ಇದೆ. ಇಷ್ಟು ಪ್ರಮಾಣದ ನಿರುದ್ಯೋಗ ಹಿಂದೆಂದೂ ಇರಲಿಲ್ಲ, ಹಾಗಾಗಿ ನಾವೆಲ್ಲರೂ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರದ ವಿರುದ್ಧ ಧ್ವನಿ ಎತ್ತುವ ಕೆಲಸ ಮಾಡಬೇಕು” ಎಂದು ಕಿವಿಮಾತು ಹೇಳಿದರು.

“ಅಗ್ನಿಪಥ ಯೋಜನೆ ಜಾರಿಗೆ ತಂದು ಯುವಕರಿಗೆ ಕೇವಲ 4 ವರ್ಷ ಸೈನ್ಯದಲ್ಲಿ ಉದ್ಯೋಗ ನೀಡಲು ಹೊರಟಿದ್ದಾರೆ. ಈ ಅವಧಿ ಮುಗಿದ ಮೇಲೆ ಸೈನ್ಯದಲ್ಲಿ ಇದ್ದವರು ಏನು ಮಾಡಬೇಕು? 17 ವರ್ಷಕ್ಕೆ ಕೆಲಸಕ್ಕೆ ಸೇರಿದವರು 21 ವರ್ಷಕ್ಕೆ ನಿವೃತ್ತಿಯಾಗುತ್ತಾರೆ, ಆಮೇಲೆ ಆತ ಬದುಕಿರುವವರೆಗೆ ಏನು ಕೆಲಸ ಮಾಡಬೇಕು. ಶಿಕ್ಷಣವೂ ಪೂರೈಸಿರುವುದಿಲ್ಲ, ಇತ್ತು ಉದ್ಯೋಗವೂ ಸಿಗುವುದಿಲ್ಲ. ಕೊನೆಗೆ ಯಾವ ದಾರಿ ಸಿಗದೆ ಯುವಕರು ತಪ್ಪು ದಾರಿ ಹಿಡಿಯುತ್ತಾರೆ” ಎಂದರು.

ಈ ಸುದ್ದಿ ಓದಿದ್ದೀರಾ? ʼಸಿದ್ದರಾಮೋತ್ಸವʼದಿಂದ ಬಿಜೆಪಿಗೆ ನಡುಕ ಶುರುವಾಗಿದೆ:‌ ಎಂ ಬಿ ಪಾಟೀಲ್‌ ಕಿಡಿ

“ನರೇಂದ್ರ ಮೋದಿ ಅವರು ನೋಟು ರದ್ದತಿ ಘೋಷಿಸಿ, ರಾತ್ರಿ 12 ಗಂಟೆಗೆ ಮಾಡಿದ ಭಾಷಣದಲ್ಲಿ ಇನ್ನುಮುಂದೆ ಕಪ್ಪು ಹಣ ಇರಲ್ಲ ಎಂದಿದ್ದರು. ಈಗ ಗೋವಾದಲ್ಲಿ 50 ಕೋಟಿ ಕೊಟ್ಟು ಶಾಸಕರ ಖರೀದಿ ಮಾಡುತ್ತಿದ್ದಾರಲ್ಲ, ಅದು ಯಾರಪ್ಪನ ಮನೆ ಹಣ? ಇಲ್ಲಿ ಯಡಿಯೂರಪ್ಪ 30–40 ಕೋಟಿ ಕೊಟ್ಟು ಶಾಸಕರನ್ನು ಕೊಂಡುಕೊಂಡಿದ್ದು ಯಾವ ಹಣದಲ್ಲಿ? ಮಹಾರಾಷ್ಟ್ರದಲ್ಲಿ ಶಾಸಕರಿಗೆ ತಲಾ 50 ಕೋಟಿ ಕೊಟ್ಟಿದ್ದು ಯಾರಪ್ಪನ ಮನೆ ದುಡ್ಡು? ಕಪ್ಪು ಹಣ ಇರಲ್ಲ ಎಂದಿದ್ದರು, ಇದಕ್ಕೇನಂತಾರೆ?” ಎಂದು ಮೋದಿ ವಿರುದ್ಧ ಹರಿಹಾಯ್ದರು.

ಆರ್‌ ಎಸ್‌ ಎಸ್‌ ಆಳ ಅಗಲ ಪುಸ್ತಕ ಓದಿ

“ಬಿಜೆಪಿಯವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ಇವರು ಚತುರ್ವರ್ಣ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡವರು. ದೇವನೂರು ಮಹಾದೇವ ಅವರು ಆರ್‌ಎಸ್‌ಎಸ್‌ ಆಳ ಮತ್ತು ಅಗಲ ಎಂಬ ಪುಸ್ತಕ ಬರೆದಿದ್ದಾರೆ. ಇದನ್ನು ಪ್ರತಿಯೊಬ್ಬರೂ ಓದಬೇಕು. ಇವರ ಬಹಿರಂಗ ಅಜೆಂಡಾ ಮತ್ತು ಹಿಡನ್‌ ಅಜೆಂಡಾ ಏನು ಎಂಬುದನ್ನು ದೇಶದ ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಮೂಲ ಆರ್‌ ಎಸ್‌ ಎಸ್‌ ನ ಒರಿಜಿನಲ್‌ ಗಿರಾಕಿಗಳು ಯಾವುದಕ್ಕೂ ಮುಂದೆ ಬರಲ್ಲ. ಪರಿಶಿಷ್ಟ ಜಾತಿ, ವರ್ಗದ ಹಾಗೂ ಹಿಂದುಳಿದ ಜಾತಿಗಳ, ಬಡವರ ಮಕ್ಕಳನ್ನು ಮುಂದೆ ತಳ್ಳುತ್ತಾರೆ. ಇದನ್ನು ನೀವೆಲ್ಲಾ ಅರ್ಥಮಾಡಿಕೊಳ್ಳಬೇಕು” ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್