ತೆವಳುತ್ತಿದ್ದ ಕಾಂಗ್ರೆಸ್ಸಿಗೆ ʼಬೂಸ್ಟರ್ ಡೋಸ್ʼ ಕೊಟ್ಟ ʼಸಿದ್ದರಾಮೋತ್ಸವʼ: ಅಸಲಿ ಆಟ ಈಗ ಶುರು!

ಸಿದ್ದರಾಮಯ್ಯ ಅವರ ಅಭಿಮಾನಿಗಳ ಅಭಿಮಾನ ಪ್ರದರ್ಶನ ರಾಜ್ಯದ ಮೂಲೆ ಮೂಲೆಗೂ ಈಗಾಗಲೇ ತಲುಪಿದೆ. ಆದರೆ, ಆಟ ಇಲ್ಲಿಗೇ ಮುಗಿದಿಲ್ಲ. ಇದು ಆರಂಭ ಅಷ್ಟೇ. ಚುನಾವಣೆಯ ಅಖಾಡಕ್ಕೆ ಧುಮಕುವುದು ಹೇಗೆ ಎಂದು ಚಿಂತಾಕ್ರಾಂತವಾಗಿದ್ದ ಕಾಂಗ್ರೆಸ್ಸಿಗೆ ʼಸಿದ್ದರಾಮೋತ್ಸವʼ ಯಾವ ರೀತಿ ಅನುಕೂಲವಾಗಲಿದೆ ಎಂಬ ನೋಟ ಇಲ್ಲಿದೆ.
siddaramosava

ಕಾಂಗ್ರೆಸ್‌ ಪಕ್ಷಕ್ಕೂ ಮತ್ತು ಸಿದ್ದರಾಮಯ್ಯ ಅವರ ಜನ್ಮದಿನ ಆಚರಣೆಗೂ ಯಾವುದೇ ಸಂಬಂಧವಿಲ್ಲ ಎಂಬ ಸ್ಪಷ್ಟನೆಯೊಂದಿಗೆ ಹೊರಟ ʼಸಿದ್ದರಾಮೋತ್ಸವʼ ಪರ ವಿರೋಧದ ತಿಕ್ಕಾಟದಲ್ಲೇ ತಿಂಗಳುಗಟ್ಟಲೇ ಹಾದಿ ಸವೆಸಿ, ಕೊನೆಗೆ ಆಗಸ್ಟ್‌ 3ರಂದು ತಲುಪಿದ ಗುರಿ ಮತ್ತು ಕೊಟ್ಟ ಸಂದೇಶ ಮಾತ್ರ ಈಗ ಇಡೀ ಕಾಂಗ್ರೆಸ್‌ ಪಕ್ಷಕ್ಕೆ ವರದಾನವಾಗಿದೆ!

ಸಿದ್ಧರಾಮಯ್ಯ ಅವರ 75ನೇ ಜನ್ಮದಿನದ ಅಮೃತ ಮಹೋತ್ಸವ ಊಹೆಗೂ ಮೀರಿ ಯಶಸ್ಸು ಕಂಡಿದ್ದು, ಸ್ವತಃ ಕಾಂಗ್ರೆಸ್‌ ನಾಯಕರಿಗೆ ಇದು ಮನದಟ್ಟಾಗಿದೆ. ಸಿದ್ದರಾಮಯ್ಯ ಅವರ ಲಕ್ಷೋಪಲಕ್ಷ ಅಭಿಮಾನಿಗಳು ʼಸಿದ್ದರಾಮೋತ್ಸವʼದ ಹೆಸರಲ್ಲಿ ಹಚ್ಚಿದ ಬೆಳಕು ಕಾಂಗ್ರೆಸ್ಸಿನ ಮಟ್ಟಿಗೆ ಮುಂಬರುವ ವಿಧಾನಸಭಾ ಚುನಾವಣೆಗೆ ದಾರಿದೀಪ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಆ ಬೆಳಕಿನಲ್ಲಿ ಕಾಂಗ್ರೆಸ್‌ ನಾಯಕರು ಹೇಗೆ ನಡೆಯುತ್ತಾರೆ, ಆ ಬೆಳಕನ್ನು ಹೇಗೆ ಬಳಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗಳು ಕೂಡ ಹುಟ್ಟಿಕೊಂಡಿವೆ. 

ಸದ್ಯದ ರಾಜ್ಯ ರಾಜಕಾರಣದಲ್ಲಿ ಕೆಲವು ಮಾಧ್ಯಮಗಳು ಮತ್ತು ಪ್ರತಿಪಕ್ಷಗಳು, ಅದರಲ್ಲೂ ಮುಖ್ಯವಾಗಿ ಬಿಜೆಪಿ ತೋಡುವ ಖೆಡ್ಡಾಗಳಿಗೆ, ಕಾಂಗ್ರೆಸ್‌ ಸದಾ ಬಿಳುತ್ತಲೇ ಬಂದಿದೆ. ಬಿಜೆಪಿಯ ಹಾರ್ಡ್‌ಕೋರ್‌ ಹಿಂದುತ್ವ ರಾಜಕಾರಣಕ್ಕೆ ಮತ್ತು ಮಾಧ್ಯಮಗಳ ವ್ಯವಸ್ಥಿತ ಕುತಂತ್ರ ನೀತಿಗೆ ನಿಷ್ಠುರವಾಗಿ ಉತ್ತರಿಸುವ ಎದೆಗಾರಿಕೆ ವಿಧಾನಸಭಾ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಚೆನ್ನಾಗಿ ಸಿದ್ಧಿಸಿದೆ. ಜೊತೆಗೆ ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್‌ ಕೂಡ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿಚಾರದಲ್ಲಿ ಸದಾ ಚಾಟಿ ಬಿಸುತ್ತಲೇ ಇರುತ್ತಾರೆ. ಉಳಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಡಿ ಕೆ ಶಿವಕುಮಾರ್‌ ಆದಿಯಾಗಿ ಕಾಂಗ್ರೆಸ್ಸಿನ ಬಹುತೇಕ ಪ್ರಮುಖ ನಾಯಕರು ಈ ಬಗ್ಗೆ ಜಾಣತನ ಪ್ರದರ್ಶಿಸುತ್ತಲೇ ಬರುತ್ತಿದ್ದಾರೆ. 

ರಾಜ್ಯ ವಿಧಾನಸಭಾ ಚುನಾವಣೆಗೆ ಎಂಟು ತಿಂಗಳು ಬಾಕಿಯಿರುವಾಗ ʼಸಿದ್ದರಾಮೋತ್ಸವʼದಂತಹ ಬೃಹತ್‌ ಸಮಾವೇಶವನ್ನು ಕಾಂಗ್ರೆಸ್ ಪಕ್ಷದ ವತಿಯತಿಂದ ಆಯೋಜಿಸಲು ಬಹುಶಃ ಸಾಧ್ಯವಾಗುತ್ತಿರಲಿಲ್ಲವೇನೋ? ʼಸಿದ್ದರಾಮೋತ್ಸವʼಕ್ಕೆ ಬಂದ ಜನರಿಗಷ್ಟೇ ತಲುಪಬೇಕು ಎಂದು ಹೊರಟಿದ್ದರೂ ಕಾಂಗ್ರೆಸ್‌ ಪಕ್ಷ ರಾಜ್ಯದಾದ್ಯಂತ ಕನಿಷ್ಠ ಅಂದರೂ 10-15 ಸಮಾವೇಶಗಳನ್ನಾದರೂ ಮಾಡಬೇಕಿತ್ತು. ಅಷ್ಟರ ಮಟ್ಟಿಗೆ ʼಸಿದ್ದರಾಮೋತ್ಸವʼ ಒಂದೇ ದಿನದಲ್ಲಿ ಯಶಸ್ಸು ಕಂಡಿದೆ. 

Image
Congress

ಕಾಕತಾಳೀಯ ಎಂಬಂತೆ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ಸಿದ್ದರಾಮಯ್ಯ ಅವರ 75ನೇ ಜನ್ಮದಿನ ಏಕಕಾಲಕ್ಕೆ ಕೂಡಿ ಬಂದಿರುವುದು ಕರ್ನಾಟಕ ಕಾಂಗ್ರೆಸ್ಸಿಗೆ ಚುನಾವಣೆ ದೃಷ್ಟಿಯಲ್ಲಿ ದೊಡ್ಡ ಲಾಭ. ಇದನ್ನೇ ಸಕಾರಾತ್ಮಕವಾಗಿ ಸಿದ್ದರಾಮಯ್ಯ ಅವರನ್ನು ಬಲವಾಗಿ ಪ್ರೀತಿಸುವ ಕಾಂಗ್ರೆಸ್‌ ನಾಯಕರು ಬಳಸಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರ ಜನ್ಮದಿನವನ್ನು ವ್ಯಕ್ತಿಕೇಂದ್ರಿತವಾಗಿ ಆಚರಿಸುವುದಕ್ಕಿಂತಲೂ ಹೆಚ್ಚಾಗಿ ಒಂದು ರಾಜಕೀಯ ಸಮಾವೇಶವನ್ನಾಗಿ ಆಚರಿಸಿದ್ದು, ಅದು ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದ್ದು ಕರ್ನಾಟಕ ರಾಜಕಾರಣದ ಇತಿಹಾಸದಲ್ಲಿಯೇ ಒಂದು ದಾಖಲೆ!

ʼಸಿದ್ದರಾಮೋತ್ಸವʼ ಎನ್ನುವ ಚರ್ಚೆ ಆರಂಭವಾದ ಮೇಲೆ ಕಾಂಗ್ರೆಸ್‌ ಪಕ್ಷ ಸಿದ್ದರಾಮಯ್ಯ ಅವರ ಜನ್ಮದಿನ ಆಚರಣೆಯನ್ನು ಅಷ್ಟು ಗಂಭೀರವಾಗಿ ಪರಿಗಣಿಸಿದ್ದು ಎಲ್ಲೂ ಕಾಣಲಿಲ್ಲ. ಆದರೆ, ದಾವಣಗೆರೆಯ ʼಸಿದ್ದರಾಮೋತ್ಸʼವದ ಯಶಸ್ಸು, ತೆವಳುತಿದ್ದ ಕಾಂಗ್ರೆಸ್ಸಿಗೆ ಮತ್ತೆ ತನ್ನ ಸಾಮರ್ಥ್ಯ ಮರುಪರಿಚಯಿಸಿಕೊಳ್ಳಲು ʼಬೂಸ್ಟರ್ ಡೋಸ್ʼ ಕೊಟ್ಟಂತೆ ಕೆಲಸ ಮಾಡಿದೆ.

ಸದ್ಯದ ಲೆಕ್ಕಾಚಾರದಲ್ಲಿ ಕಾಂಗ್ರೆಸ್ಸಿಗೆ 2023ರ ಚುನಾವಣಾ ಪ್ರಚಾರಕ್ಕೆ ಅಧಿಕೃತವಾಗಿ ರಣಕಹಳೆಯನ್ನೇ ʼಸಿದ್ದರಾಮೋತ್ಸವʼ ಮೊಳಗಿಸಿದೆ. ಸಿದ್ದರಾಮಯ್ಯ ಅವರ ಜನ್ಮದಿನಕ್ಕೆ ಸುಮಾರು 14 ಲಕ್ಷ ಜನ ಸೇರಿದ್ದರು ಎನ್ನುವ ಅಂದಾಜಿದೆ. ಅದರಾಚೆಗೂ 10 ಲಕ್ಷ ಎಂದೇ ಪರಿಗಣಿಸಿದರೂ ಒಬ್ಬ ಅಭಿಮಾನಿ ಕೇವಲ 10 ಜನರಿಗೆ ಸಮಾವೇಶದ ಬಣ್ಣನೆ ಮಾಡಿದರೂ ಸಾಕು ಸುಮಾರು ಒಂದು ಕೋಟಿ ಜನರಿಗೆ ಸಿದ್ದರಾಮಯ್ಯ ಅವರ ಶಕ್ತಿ, ರಾಜಕೀಯ ವರ್ಚಸ್ಸು ಹಾಗೂ ಕಾಂಗ್ರೆಸ್ಸಿನ ಪರಿಚಯವಾಗಲಿದೆ. ಇದು ಕೇವಲ ಸಿದ್ದರಾಮಯ್ಯ ಅವರಿಗಷ್ಟೇ ಲಾಭವಾ ಎಂದು ಯೋಚಿಸಿದರೆ ಖಂಡಿತ ಅಲ್ಲ;  ಸಿದ್ದರಾಮಯ್ಯ ಅವರನ್ನು ಮೀರಿ ಇಡೀ ಕಾಂಗ್ರೆಸ್ ಪಕ್ಷಕ್ಕೆ ಅದರ ಲಾಭ ದಕ್ಕಲಿದೆ.  

ಅಮೃತ ಮಹೋತ್ಸವದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌, ವಿಧಾನ ಪರಿಷತ್‌ ಪ್ರತಿಪಕ್ಷದ ನಾಯಕ ಬಿ ಕೆ ಹರಿಪ್ರಸಾದ್‌, ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಜಿ ಪರಮೇಶ್ವರ್‌ ಸೇರಿದಂತೆ ಹಿರಿಯ ನಾಯಕರ ಭಾಷಣದ ಸೂಕ್ಷ್ಮತೆ ಗಮನಿಸಿದರೆ ಕಾಂಗ್ರೆಸ್ಸಿಗೆ ಸಿದ್ದರಾಮೋತ್ಸವ ಹೇಗೆ ವರದಾನವಾಗಿದೆ ಎಂಬುದಕ್ಕೆ ಹೆಚ್ಚಿನ ಪುಷ್ಟಿ ಸಿಗುತ್ತದೆ.

Image
Siddaramaiah

ಪ್ರಮುಖ ನಾಯಕರು ಮಾತನಾಡುವಾಗ ಅಳೆದು ತೂಗಿ ಮಾತನಾಡಿದರು. ಅವರೆಲ್ಲರ ಮಾತಿನ ಧಾಟಿ ಗಮನಿಸಿದರೆ, ಸಿದ್ದರಾಮಯ್ಯ ಅವರ ಶಕ್ತಿಯನ್ನು ಬಾಯಿ ತುಂಬಾ ಹೊಗಳುತ್ತಲೇ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‌ ಅನ್ನು ಅಧಿಕಾರಕ್ಕೆ ತರುವ ಪ್ರಯತ್ನದ ಜಪವೇ ಹೆಚ್ಚು ನಡೆಯಿತು. 

ಒಟ್ಟಾರೆಯಾಗಿ, ಸಿದ್ದರಾಮಯ್ಯ ಅವರ ಅಭಿಮಾನಿಗಳ ಅಭಿಮಾನ ಪ್ರದರ್ಶನ ಕಾಂಗ್ರೆಸ್‌ ಕಾರ್ಯಕರ್ತರನ್ನು ಈಗಾಗಲೇ ತಲುಪಿದೆ. ಆಟ ಇಲ್ಲಿಗೇ ಮುಗಿದಿಲ್ಲ. ಇದು ಆರಂಭ ಅಷ್ಟೇ. ಚುನಾವಣೆಯ ಅಖಾಡಕ್ಕೆ ಧುಮಕುವುದು ಹೇಗೆ ಎಂದು ಚಿಂತಾಕ್ರಾಂತವಾಗಿದ್ದ ಕಾಂಗ್ರೆಸ್ಸಿಗೆ ʼಸಿದ್ದರಾಮೋತ್ಸವʼ ಹೊಸ ಆರಂಭ ನೀಡಿದೆ. ಆದರೆ, ʼಸಿದ್ದರಾಮೋತ್ಸವʼದ ಉತ್ಸಾಹದಲ್ಲಿ ಕಾಂಗ್ರೆಸ್ಸಿಗರು ಮೈಮರೆತರೆ ಮತ್ತಿನ್ಯಾರೋ ʼಗೇಮ್‌ ಫಿನಿಶರ್‌ʼ ಆಗಿಬಿಡಬಹುದು! 

ಈ ಒಂದು ಎಚ್ಚರಿಕೆಯಿಟ್ಟುಕೊಂಡು ಕಾಂಗ್ರೆಸ್‌ ನಡೆದಿದ್ದೇ ಆದರೆ 2023ರ ಚುನಾವಣೆಯಲ್ಲಿ ʼಸಿದ್ದರಾಮೋತ್ಸವʼ ಬಹುದೊಡ್ಡ ಪಾತ್ರ ನಿರ್ವಹಿಸಲಿದೆ. ಸಿದ್ದರಾಮಯ್ಯ ಅವರ ಅಭಿಮಾನಿಗಳು ಸೃಷ್ಟಿಸಿದ ಈ ಅಲೆ ಕಾಂಗ್ರೆಸ್‌ ಅನ್ನು ವಿಧಾನಸೌಧ ಮೂರನೇ ಮಹಡಿಯಲ್ಲಿ ಕೂರಿಸುವುದರಲ್ಲಿ ಸಂಶಯವಿಲ್ಲ!

ನಿಮಗೆ ಏನು ಅನ್ನಿಸ್ತು?
3 ವೋಟ್