ದಕ್ಷಿಣ ಕನ್ನಡ | ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾದ ಜಿಲ್ಲಾಡಳಿತ

Rajendra
  • ತಣ್ಣೀರಬಾವಿ ಬೀಚ್‌ನಲ್ಲಿ ನೀಲಿ ಧ್ವಜದ ಕಾಮಗಾರಿಗೆ ಶಂಕು ಸ್ಥಾಪನೆ
  • ಕರಾವಳಿ ಉತ್ಸವ ಆಯೋಜಿಸುವ ಕುರಿತು ಮುಂದಿನ ವಾರ ಸಭೆ

ದಕ್ಷಿಣ ಕನ್ನಡ ಜಿಲ್ಲಾಡಳಿತವು ಜಿಲ್ಲಾ ಪ್ರವಾಸೋದ್ಯಮದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದ್ದು, ಶೀಘ್ರದಲ್ಲಿಯೇ ರಾತ್ರಿ ಪ್ರವಾಸೋದ್ಯಮ (ನೈಟ್‌ ಟೂರಿಸಂ) ಚಟುವಟಿಕೆ ಪ್ರಾರಂಭಿಸಲು ಚಿಂತನೆ ನಡೆಸಿದೆ ಎಂದು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಹೇಳಿದ್ದಾರೆ.

ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ತಣ್ಣೀರಬಾವಿ ಬೀಚ್‌ನಲ್ಲಿ ನೀಲಿ ಧ್ವಜದ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. "ಸ್ಥಳೀಯರು ಮತ್ತು ವಾಸಿಗರ ಸುರಕ್ಷತೆ ಮತ್ತು ಭದ್ರತೆಯ ಪ್ರಾಮುಖ್ಯತೆಯನ್ನು ಗಮನದಲ್ಲಿಟ್ಟುಕೊಂಡು ರಾತ್ರಿ ಪ್ರವಾಸೋದ್ಯಮ ಯೋಜನೆಗಳನ್ನು ಪ್ರಾರಂಭಿಸಲು ಜಿಲ್ಲಾಡಳಿತ ಚಿಂತನೆ ನಡೆಸಿದೆ" ಎಂದು ತಿಳಿಸಿದರು. 

"ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಲವು ಅವಕಾಶಗಳಿವೆ. ಸಸಿಹಿತ್ಲುವಿನ 28 ಎಕರೆ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಪರಿಸರ ಪ್ರವಾಸೋದ್ಯಮ ಯೋಜನೆ, ಜಂಗಲ್ ಲಾಡ್ಜ್ ಹಾಗೂ ರೆಸಾರ್ಟ್‌ಗಳ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ" ಎಂದರು.

ಈ ಸುದ್ದಿ ಓದಿದ್ದೀರಾ?; ಭಾರತ್ ಜೋಡೋ | ಕರ್ನಾಟಕ ಪ್ರವೇಶಿಸಲಿರುವ ಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿದ ಜಿಲ್ಲಾಡಳಿತ

"ಜಿಲ್ಲೆಯಲ್ಲಿ ಕಡಲತೀರ ಮಹತ್ವದ್ದಾಗಿದ್ದರೂ, ದೇವಸ್ಥಾನ, ಪಶ್ಚಿಮಘಟ್ಟಗಳು, ನದಿಗಳು ಹಾಗೂ ಕಾಡುಗಳಲ್ಲಿ ಪ್ರವಾಸೋದ್ಯಮವನ್ನು ವಿಸ್ತರಿಸಬಹುದು. ಹೀಗಾಗಿ ಜಿಲ್ಲಾ ಪ್ರವಾಸೋದ್ಯಮ ಸಮಿತಿಯು ಸಸಿಹಿತ್ಲು, ಸುರತ್ಕಲ್, ಪಣಂಬೂರು, ಸೋಮೇಶ್ವರ, ಉಳ್ಳಾಲ ಬೀಚ್‌ಗಳ ಅಭಿವೃದ್ಧಿಗೆ ಮುಂದಾಗಿದೆ" ಎಂದು ವಿವರಿಸಿದರು.

"ಜಿಲ್ಲೆಯ ಪಣಂಬೂರು ಬೀಚ್‌ನಲ್ಲಿ ಮೂಲ ಸೌಲಭ್ಯ ಹೆಚ್ಚಿಸಲು ಪಿಪಿಪಿ ಮಾದರಿ ಅನುಷ್ಠಾನಕ್ಕೆ ಟೆಂಡರ್ ಕರೆಯಲಾಗಿದ್ದು, 15 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಅದರ ಯಶಸ್ಸು ಆಧರಿಸಿ ಇತರೆ ಬೀಚ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಕರಾವಳಿ ಉತ್ಸವ ಆಯೋಜಿಸುವ ಕುರಿತು ಮುಂದಿನ ವಾರದಲ್ಲಿ ಸಚಿವ ಸುನೀಲ್ ಕುಮಾರ್ ಮತ್ತು ಶಾಸಕರೊಂದಿಗೆ ಸಭೆ ನಡೆಸಲಾಗುವುದು" ಎಂದು ತಿಳಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್