ರಾಜ್ಯಾದ್ಯಂತ ಧಾರಾಕಾರ ಮಳೆ: ಬಂಟ್ವಾಳದಲ್ಲಿ ಗುಡ್ಡ ಕುಸಿತ ಮೂವರು ಸಾವು

Bantwal Death
  • ಮಂಗಳೂರು-ಮುತ್ತೂರು ವ್ಯಾಪ್ತಿಯಲ್ಲಿ ಗುಡ್ಡ ಕುಸಿತ ಆತಂಕದಲ್ಲಿ ಜನ
  • ಧಾರಕಾರ ಮಳೆಯಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ

ರಾಜ್ಯಾದ್ಯಂತ ಮುಂಗಾರು ಮಳೆ ಅಬ್ಬರ ಹೆಚ್ಚಾಗಿದೆ. ಭಾರಿ ಮಳೆಯಿಂದಾಗಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ದಕ್ಷಿಣ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಪ್ರದೇಶಗಳು ಜಲಾವೃತಗೊಂಡಿವೆ. ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದಲ್ಲಿ ಶೆಡ್‌ ಮೇಲೆ ಗುಡ್ಡ ಕುಸಿದಿದ್ದು, ಶೆಡ್‌ನಲ್ಲಿದ್ದ ಕೇರಳ ಮೂಲದ ಮೂವರು ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಸಂತೋಷ ಅಲಫುಜ್ (46), ಪಾಲಕ್ಕಡ ನಿವಾಸಿ ರಾಜು (46), ಹಾಗೂ ಕೊಟ್ಟಾಯಂ ನಿವಾಸಿ ಬಾಬು (46) ಮೃತ ದುರ್ದೈವಿಗಳು. 

ಧಾರಕಾರ ಮಳೆಯಿಂದ ಮಂಗಳೂರು ತಾಲೂಕಿನ ಮುತ್ತೂರು ವ್ಯಾಪ್ತಿಯಲ್ಲಿ ಗುರುಪುರ ಮತ್ತು ಎಡಪದವು ಸಮೀಪದ ಗುಡ್ಡಗಳು ಕುಸಿಯುತ್ತಿದ್ದು, ಸ್ಥಳೀಯರಲ್ಲಿ ಭಯದ ವಾತಾವರಣ ಮೂಡಿದೆ. 

ಗುರುವಾರವೂ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ನೈಸರ್ಗಿಕ ವಿಪತ್ತು ನಿರ್ವಹಣಾ ಸಮಿತಿ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಮುಂಜಾಗ್ರತೆ ಕ್ರಮವಾಗಿ ಜಿಲ್ಲೆಯ ಎಲ್ಲ ಅಂಗನವಾಡಿ, ಶಾಲೆ ಹಾಗೂ ಕಾಲೇಜುಗಳಿಗೆ ರಜೆ ನೀಡಿ ಜಿಲ್ಲಾಧಿಕಾರಿ ರಾಜೇಂದ್ರ ಕೆವಿ ಆದೇಶ ಹೊರಡಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆ 

ಉತ್ತರ ಕನ್ನಡ ಜಿಲ್ಲೆಯಾದ್ಯಂತ ಧಾರಕಾರ ಮಳೆಯಾಗಿದ್ದು, ತಗ್ಗು ಪ್ರದೇಶ ಜಲಾವೃತವಾಗಿವೆ. ಜನವಸತಿ ಪ್ರದೇಶಕ್ಕೂ ಮಳೆ ನೀರು ನುಗ್ಗಿದೆ. ಮಳೆ ಅರ್ಭಟ ಮುಂದುವರೆದಿದ್ದು, ಜಿಲ್ಲೆಯಲ್ಲಿ ಹರಿಯುವ ಶರಾವತಿ, ಅಘನಾಶಿನಿ ಹಾಗೂ ಗಂಗಾವಳಿ ನದಿಗಳು ತುಂಬಿ ಹರಿಯುತ್ತಿವೆ. ನದಿ ತೀರದ ಜನರಲ್ಲಿ ಪ್ರವಾಹ ಭೀತಿ ಎದುರಾಗಿದೆ. 

ಕಾರವಾರ ತಾಲೂಕಿನ ಅರಗಾ ಮತ್ತು ಬಿಣಗಾ ಭಾಗದಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿದ್ದು, ಜನವಸತಿ ಪ್ರದೇಶ ಕೆರೆಯಂತಾಗಿದೆ. ಮನೆಯಲ್ಲಿದ್ದ ದಿನ ಬಳಕೆ ವಸ್ತುಗಳು ನೀರುಪಾಲಾಗಿವೆ. ಇನ್ನೂ ಮಳೆ ಮುಂದುವರೆದಿದ್ದು, ನೀರಿನ ಮಟ್ಟ ಏರುತ್ತಲೇ ಇದೆ. ಜಲಾವೃತಗೊಂಡಿರುವ ಪ್ರದೇಶಗಳಿಗೆ ಶಾಸಕಿ ರೂಪಾಲಿ ನಾಯ್ಕ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಅರಗಾದಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ.

ಚಿಕ್ಕಮಗಳೂರು ಮುಂದುವರೆದ ಮಳೆ ಶಾಲಾ ಕಾಲೇಜು ರಜೆ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಅರ್ಭಟ ಮುಂದುವೆದಿದ್ದು, ಇನ್ನೂ ನಾಲ್ಕು ದಿನ ಬಾರಿ ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಜುಲೈ 9 ರವೆರೆಗೆ ಜಿಲ್ಲೆಯ ಮೂಡಿಗೆರೆ, ಕಳಸ, ಎನ್‌ಆರ್ ಪುರ, ಕೊಪ್ಪ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹುಣಸೂರಿನಲ್ಲಿ ಎರಡು ಮನೆಗಳು ಸಂಪೂರ್ಣ ನಾಶ

ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಾದ್ಯಂತ ನಿರಂತರವಾಗಿ ಎರಡು ದಿನದಿಂದ ಮಳೆಯಾಗುತ್ತಿದ್ದು, ಹನಗೋಡು ಹೋಬಳಿಯ ಭರತವಾಡಿಯಲ್ಲಿ ಎರಡು ಮನೆಗಳ ಮೇಲ್ಚಾವಣಿ ಕುಸಿದ್ದು ಬಿದ್ದು, ಸಂಪೂರ್ಣ ಮನೆ ಹಾಳಾಗಿದೆ. 

ಭರತವಾಡಿಯ ಆದಿವಾಸಿ ಮಹಿಳೆ ಕುಮಾರಿ ಎಂಬುವವರ ಮನೆ ನಾಶಾವಾಗಿದ್ದು, ಮೇಲ್ಚಾವಣಿ ಬೀಳುವ ಸಮಯದಲ್ಲಿ ಜೋರಾದ ಶಬ್ದ ಬಂದಿದ್ದರಿಂದ ಮನೆ ಮಂದಿ ಹೊರಗಡೆ ಬಂದು ಪ್ರಾಣಾಪಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಧವಸದಾನ್ಯ, ದಿನ ಬಳಕೆ ವಸ್ತುಗಳು ಮಣ್ಣಿನಡಿ ಸಿಲುಕಿ ಹಾಳಾಗಿವೆ.

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ತಾಲೂಕು ಆಡಳಿತದಿಂದ ಪರಿಹಾರ ನೀಡಬೇಕೆಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ ರಾಮು ಒತ್ತಾಯಿಸಿದ್ದಾರೆ. 

ಕೊಡಗು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ

ಕೊಡಗು ಜಿಲ್ಲೆಯಲ್ಲಿ ಸತತ ಮಳೆಯಾಗುತ್ತಿದ್ದು, ಬುಧವಾರವೂ ಭಾರೀ ಮಳೆಯಾಗಿದೆ. ಮಡಿಕೇರಿ ತಾಲೂಕಿನ ಗಾಳಿಬೀಡು ಹಾಗೂ ಸೋಮವಾರಪೇಟೆ ತಾಲೂಕಿನಾದ್ಯಂತ ಧಾರಕಾರ ಮಳೆಯಾಗಿದೆ. ಭಾರಿ ವೇಗದಲ್ಲಿ ಗಾಳಿ ಬೀಸಿದ್ದು, ಹಲವಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ಹಾಲೇರಿ ಸಮೀಪ ಬೃಹತ್ ಗಾತ್ರದ ಮರವೊಂದು ರಸ್ತೆಗುರುಳಿ ರಸ್ತೆ ಸಂಚಾರ ಬಂದಾಗಿತ್ತು.

ಅಮ್ಮತ್ತಿ ಸಮೀಪ 33 ಕೆವಿ ಸಾಮರ್ಥ್ಯದ ಸಿದ್ದಾಪುರ ವಿದ್ಯುತ್ ಲೈನ್ ಮೇಲೆ ಮರ ಉರುಳಿದೆ. ಮಡಿಕೇರಿ ನಾಪೋಕ್ಲು ರಸ್ತೆಯಲ್ಲಿ ವಿದ್ಯುತ್ ಕಂಬಗಳು ಮುರಿದಿವೆ. ಸೆಸ್ಕ ಸಿಬ್ಬಂದಿ ದುರಸ್ತಿ ಕಾರ್ಯ ಮಾಡಿದ್ದಾರೆ. ಗುರುವಾರ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು, ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಈ ಸುದ್ದಿ ಓದಿದ್ದೀರಾ?; ಪ್ರವಾಹ ಪೀಡಿತ ಪ್ರದೇಶಗಳ ಶಾಶ್ವತ ಸ್ಥಳಾಂತರದ ಪ್ರಸ್ತಾಪವಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ

ಶಿವಮೊಗ್ಗದಲ್ಲಿ ಬಾರಿ ಮಳೆ 

ಬುಧವಾರ ಜಿಲ್ಲೆಯಾದ್ಯಂತ ಮಳೆ ಮುಂದುವೆದಿದ್ದೂ, ಹಗಲು ರಾತ್ರಿಯೆನ್ನದೆ ಸುರಿಯುತ್ತಿದೆ. ಕಳೆದ 24 ಗಂಟೆಯ ಅವದಿಯಲ್ಲಿ ಸರಾಸರಿ 4.01 ಸೆ.ಮೀ. ಮಳೆಯಾಗಿದೆ. ಭದ್ರಾವತಿ, ತೀರ್ಥಹಳ್ಳಿ, ಶಿಕಾರಿಪುರ, ಸೊರಬ, ಹೊಸನಗರ ಹಾಗೂ ಸಾಗರ ಸೇರಿದಂತೆ ಜಿಲ್ಲೆಯಾದ್ಯಂತ ಮಳೆಯಾಗಿದೆ. 

ಸೋಮಿನಕೊಪ್ಪದ ನಿವಾಸಿ ಇಂದ್ರಮ್ಮ ಕೃಷ್ಣೋಜಿರಾವ್ ಎಂಬ ವೃದ್ಧೆಯ ಮನೆ ಮೇಲೆ ತೆಂಗಿನ ಮರ ಬಿದ್ದು, ಸಂಪೂರ್ಣ ಹಾನಿಯಾಗಿದೆ. ಹಾನಿಗೀಡಾದ ಮನೆಗೆ ಸಂತೋಷ ಗುರೂಜಿ ಭೇಟಿ ನೀಡಿದ್ದು, ಸುಸಿಜ್ಜಿತ ಮನೆ ಕಟ್ಟಿಕೊಡುವ ಭರವಸೆ ನೀಡಿದ್ದಾರೆ. 

ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಶಾಲೆ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಜಿಲ್ಲಾಧಿಕಾರಿ ಆರ್ ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಸಕಲೇಶಪುರದಲ್ಲಿ ಮಳೆ

ಹಾಸನ ಜಿಲ್ಲೆ ಸಕಲೇಶಪುರದಲ್ಲಿ ಭಾರಿ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಪಶ್ಚಿಮಘಟ್ಟದ ಅಂಚಿನಲ್ಲಿರುವ ದೇವಾಲದಕೆರೆ, ಕುಮಾರಳ್ಳಿ, ಕಾಡಮನೆ, ಮಾರನಹಳ್ಳಿ, ಹೊಂಗಡಹಳ್ಳ, ಅತ್ತಿಹಳ್ಳಿ, ಬಿಸಿಲೆ ಗ್ರಾಮಗಳು ಹಾಗೂ ಹಾನುಬಾಳು ಮತ್ತು ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೆ ಸರಾಸರಿ 122 ಮಿ.ಮೀ. ಮಳೆಯಾಗಿದೆ.

ಬಾಳ್ಳುಪೇಟೆ–ಸಕಲೇಶಪುರ–ಮಾರನಹಳ್ಳಿ ನಡುವಿನ ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಳೆಯಂತೆ ನೀರು ನಿಂದು ರಸ್ತೆ ಮತ್ತು ಗುಂಡಿ ಗೊತ್ತಾಗದೇ ವಾಹನಗಳ ಸಂಚಾರಕ್ಕೆ ಭಾರೀ ಸಮಸ್ಯೆ ಉಂಟಾಗಿದೆ.

ಉಡಿಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದ ಸಮುದ್ರದಲ್ಲಿ ಕಡಲಕೊರತೆ ಮುಂದವರೆದಿದೆ. ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಹಳೆಅಳಿವೆ ಕಡಲತೀರದಲ್ಲಿ ತೆಡೆಗೊಡೆಗೆ ಹಾಕಲಾಗಿದ್ದ ಕಲ್ಲುಗಳು ಕಡಲಕೊರತದಿಂದ ಸಮುದ್ರ ಪಾಲಾಗುತ್ತಿವೆ. ಇದರಿಂದ ಸುತ್ತಮುತ್ತಲಿನ ಜನ ಆತಂಕಗೊಂಡಿದ್ದಾರೆ.

ಸಮುದ್ರ ತೀರಲ್ಲಿರುವ ಬೀಜಾಡಿ, ಗೋಪಾಡಿ, ಕೋರವಡಿ ಹಾಗೂ ಮರವಂತೆ ಭಾಗದಲ್ಲಿ ಕಡಲಕೊರೆತ ಕಾಣಿಸಿಕೊಳ್ಳುತ್ತಿದೆ. ಮರವಂತೆಯಲ್ಲಿ ಕಡಲ್ಕೊರೆತದಿಂದ ಮರಗಳು ಮತ್ತು ರಸ್ತೆ ನೀರು ಪಾಲಾಗಿದೆ. 

ಕೋಟೆಶ್ವರ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮಾವಿನ ಮರಗಳು ರಸ್ತೆಗುರುಳಿವೆ. ಗೆಲ್ಲು ತಂಗುದಾಣದ ಸಮೀಪ ಬಿದ್ದಿರುವ ಮರಗಳಿಂದ ವಿದ್ಯುತ್ ಕಂಬ, ತಂತಿ ಹಾಗೂ ಟ್ರಾನ್ಸಾಫಾರ್ಮರ್ ಹಾನಿಯಾಗಿವೆ. 

ನಿಮಗೆ ಏನು ಅನ್ನಿಸ್ತು?
0 ವೋಟ್