
- ಮನೆಗೆ ಹಿಂದಿರುಗುತ್ತಿದ್ದಾಗ ಅಡ್ಡಗಟ್ಟಿ ಹಲ್ಲೆ
- ವೈಯಕ್ತಿಕ ದ್ವೇಷದಿಂದ ಹಲ್ಲೆ ನಡೆದಿರುವ ಶಂಕೆ
ಪುಂಜಾಲಕಟ್ಟೆಯಲ್ಲಿ ಕಬಡ್ಡಿ ಪಂದ್ಯ ವೀಕ್ಷಿಸಿ ಮನೆಗೆ ಹಿಂದಿರುಗುತ್ತಿದ್ದ ವ್ಯಕ್ತಿಯ ಮೇಲೆ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಪರಾರಿಯಾಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಬೋಳಂತೂರು ಬಳಿ ನಡೆದಿದೆ.
ಬೋಳಂತೂರು ನಿವಾಸಿ ಶಕೀರ್ (30) ಹಲ್ಲೆಗೊಳಗಾಗಿದ್ದು, ಅವರನ್ನು ಕಲ್ಲಡ್ಕದ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಠಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನವಾನೆ ತಿಳಿಸಿದ್ದಾರೆ.
“ಶಕೀರ್ ತಮ್ಮ ಸ್ನೇಹಿತರೊಂದಿಗೆ ಆಟೋರಿಕ್ಷಾದಲ್ಲಿ ಪುಂಜಾಲಕಟ್ಟೆಯಲ್ಲಿ ಕಬಡ್ಡಿ ಪಂದ್ಯವನ್ನು ವೀಕ್ಷಿಸಲು ಹೋಗಿದ್ದರು. ತನ್ನ ಸ್ನೇಹಿತರನ್ನು ಬಿಟ್ಟು, ಶಕೀರ್ ಮನೆಗೆ ಹಿಂದಿರುಗುತ್ತಿದ್ದಾಗ ಅವರ ಮೇಲೆ ಹಲ್ಲೆ ನಡೆದಿದೆ" ಎಂದು ಹೃಷಿಕೇಶ್ ಹೇಳಿದ್ದಾರೆ.
“ಶಕೀರ್ ಮೇಲೆ ಪ್ರಮುಖ ಆರೋಪಿ ಸಾದಿಕ್ ಅಲಿಯಾಸ್ ಕುಂದಾ ಹಾಗೂ ಇನ್ನಿಬ್ಬರು ಹಲ್ಲೆ ನಡೆಸಿದ್ದಾರೆ. ಶಕೀರ್ ತೆರಳುತ್ತಿದ್ದ ಆಟೋವನ್ನು ತಡೆದು ಮಾರಕಾಸ್ತ್ರಗಳಿಂದ ದಾಳಿ ಮಾಡಿ, ಪರಾರಿಯಾಗಿದ್ದಾರೆ. ಆರೋಪಿಗಳಿಗಾಗಿ ಶೋಧ ನಡೆಯುತ್ತಿದೆ. ವೈಯಕ್ತಿಕ ದ್ವೇಷವೇ ಹಲ್ಲೆಗೆ ಕಾರಣವಾಗಿರಬಹುದು” ಎಂದು ಹೃಷಿಕೇಶ್ ಶಂಕಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸಕಲೇಶಪುರ | ನಿಲ್ಲದ ಕಾಡಾನೆ ಹಾವಳಿ; ಅಡಿಕೆ, ಬಾಳೆ, ಕಾಫಿ ಭತ್ತದ ಬೆಳೆ ಹಾನಿ
ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 341, 323, 324, 504, 506 ಮತ್ತು 34ರ ಅಡಿಯಲ್ಲಿ ವಿಠಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.