ಕಲಬುರ್ಗಿ: ಶ್ರೀರಾಮ ಸೇನೆ ಅಭಿಯಾನಕ್ಕೆ ದಲಿತ ಸೇನೆ ಪ್ರತಿರೋಧ

  • ಧರ್ಮಗಳ ನಡುವೆ ವಿಷ ಬೀಜ ಬಿತ್ತುವವರು ಸಮಾಜಘಾತುಕರು
  • ಪ್ರಾಣ ತೆತ್ತಾದರೂ ಮುಸ್ಲೀಮರ ಬೆಂಬಲಕ್ಕೆ ನಿಲ್ಲುತ್ತೇವೆ: ಡಿ.ಕೆ ಮದನಕರ

ಆಝಾನ್ ವಿರುದ್ಧ ರಾಜ್ಯದಾದ್ಯಂತ ಶ್ರೀರಾಮ ಸೇನೆ ಕಾರ್ಯಕರ್ತರು ಸುಪ್ರಭಾತ ಅಭಿಯಾನ ಆರಂಭಿಸಿದ್ದು, ಅವರ ಹೋರಾಟಕ್ಕೆ ಕಲಬುರ್ಗಿ ಜಿಲ್ಲೆಯ ದಲಿತ ಸೇನೆ ಪ್ರತಿರೋಧ ವ್ಯಕ್ತಪಡಿಸಿದೆ.

ಕಲಬುರ್ಗಿಯ ಸೂಪರ್ ಮಾರ್ಕೆಟ್ ಬಳಿ ಇರುವ ಮೆಹಬಾಸ್ ಮಸೀದಿ ಬಳಿ ಸೋಮವಾರ ಬೆಳಿಗ್ಗೆಯಿಂದಲೇ ಕಾರ್ಯಕರ್ತರು ಜಮಾಯಿಸಿದ್ದರು. ಹನುಮಾನ್ ಚಾಲೀಸಾ, ಭಜನೆಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಮೆಹಬಾಸ್ ಮಸೀದಿ ಬಳಿ ಹೋರಾಟ ನಡೆಸುವುದಾಗಿ ಅಲ್ಲಿನ ಶ್ರೀರಾಮ ಸೇನೆ ಘಟಕ ಹಿಂದಿನ ದಿನ ಕರೆ ನೀಡಿತ್ತು. 

ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಕೆ ಮದನಕರ ಸುದ್ದಿಗಾರರೊಂದಿಗೆ ಮಾತನಾಡಿ, “ಪ್ರಮೋದ್ ಮುತಾಲಿಕ್, ಸಿದ್ಧಲಿಂಗಸ್ವಾಮಿ ಇಲ್ಲವೇ ಬೇರೆ ಯಾವುದಾದರೂ ಹಿಂದೂ ಕಾರ್ಯಕರ್ತರು ಬರುತ್ತಾರೇನೋ ಎಂದುಕೊಂಡು ನಾವು ಬೆಳಿಗ್ಗೆ 5 ಗಂಟೆಯಿಂದಲೇ ಮಸೀದಿ ಬಳಿ ಬಂದು ನಿಂತಿದ್ದೇವೆ. ಆದರೆ, ಯಾರೊಬ್ಬರೂ ಬಂದಿಲ್ಲ. ನಾವೂ ಹಿಂದುಗಳು, ನಮಗೂ ಮಠ ಮಂದಿರಗಳಿವೆ. ಆದರೆ ಯಾರೂ ಇಂಥ ನಯವಂಚಕ ಸ್ವಾಮೀಜಿಗಳಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಧರ್ಮ-ಧರ್ಮಗಳ ನಡುವೆ ಜಾತಿ ಮತ್ತು ಕೋಮು ವಿಷ ಬೀಜ ಬಿತ್ತಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ. ಅದನ್ನು ಮೆಟ್ಟಿ ನಿಲ್ಲಲು ಕಲಬುರ್ಗಿಯ ಎಲ್ಲಾ ಮಸೀದಿಗಳ ಬಳಿ ದಲಿತ ಸೇನೆ, ನೀಲಿ ಪಡೆ ಕಾರ್ಯಕರ್ತರು ರಕ್ಷಣಾ ಗೋಡೆಯಾಗಿ ನಿಂತಿದ್ದೇವೆ. ಪ್ರಮೋದ್ ಮುತಾಲಿಕ್, ಇಲ್ಲವೇ ಸಿದ್ಧಲಿಂಗಸ್ವಾಮೀಜಿ ಯಾರು ಬರುತ್ತಾರೆ ಬರಲಿ ನೋಡೋಣ” ಎಂದು ಸವಾಲು ಹಾಕಿದರು.

ಈ ಸುದ್ದಿ ಓದಿದ್ದೀರಾ? ಸುಪ್ರಭಾತ ಅಭಿಯಾನದ ನೆಪದಲ್ಲಿ ಕಾನೂನು ಉಲ್ಲಂಘಿಸಿದರೆ ಕಠಿಣ ಕ್ರಮ: ಆರಗ ಜ್ಞಾನೇಂದ್ರ ಎಚ್ಚರಿಕೆ

“ದೇವಸ್ಥಾನದಲ್ಲಿ ಕುಳಿತು ಭಜನೆ ಮಾಡಿ. ಯಾರು ಬೇಡ ಎಂದಿದ್ದಾರೆ? ಆದರೆ ಮಸೀದಿ ಬಳಿ ಬಂದು ಹೋರಾಟ ಮಾಡುತ್ತೇವೆ ಎಂದರೆ ಹೇಗೆ? ಇದು ಸಂವಿಧಾನ ಮತ್ತು ಕಾನೂನು ವಿರುದ್ಧ ಆಗುತ್ತದೆ. ದಲಿತ ಸಂಘರ್ಷ ಸಮಿತಿ ಮತ್ತು ದಲಿತ ಸೇನೆ ನೀಲಿ ಪಡೆ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ನಾವು ಕಾವಲಗಾರರಾಗಿ ನಿಲ್ಲುತ್ತೇವೆ. ಜೀವ ತೆತ್ತಾದರೂ ಸರಿ ಈ ರೀತಿಯ ಸಮಾಜ ಘಾತುಕ ವಿಷಯವನ್ನು ಮೆಟ್ಟಿ ನಿಲ್ಲುವ ಕೆಲಸ ಮಾಡುತ್ತೇವೆ” ಎಂದು ಎಚ್ಚರಿಕೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್