ಹಾಸನ | ಬುದ್ಧಿಮಾಂದ್ಯ ಮಗುವಿನ ಚಿಕಿತ್ಸೆಗೆ ನೆರವು ಕೋರುತ್ತಿದೆ ದಲಿತ ಕುಟುಂಬ

  • ತಂದೆ - ತಾಯಿ ಕೂಲಿ ಮಾಡಿ ಮಗಳಿಗೆ ಚಿಕಿತ್ಸೆ ಕೊಡಿಸುತ್ತಿದ್ದಾರೆ
  • ದೊಡ್ಡ ಆಸ್ಪತ್ರೆಗಳಿಗೆ ತೋರಿಸಲಾಗದೇ ಕಣ್ಣೀರಿಡುತ್ತಿರುವ ಪೋಷಕರು 

ಹಾಸನ ಜಿಲ್ಲೆ ಆಲೂರು ತಾಲೂಕಿನ ಗುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನಾಪುರ ಗ್ರಾಮದ ಪರಿಶಿಷ್ಟ ಜಾತಿಯ ಶಿವಮ್ಮ ಮತ್ತು ಪುಟ್ಟಸ್ವಾಮಿ ದಂಪತಿಯ ಒಂಬತ್ತು ವರ್ಷದ ಪುತ್ರಿ ದಿವ್ಯ, ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಆಕೆಗೆ ಚಿಕಿತ್ಸೆ ಕೊಡಿಸಲು ಆರ್ಥಿಕ ನೆರವು ಬೇಡಿದ್ದಾರೆ.

ಇತರೆ ಮಕ್ಕಳೊಂದಿಗೆ ಆಟವಾಡುತ್ತ ನಲಿದು ಬೆಳೆಯಬೇಕಾದ ಈ ಪುಟ್ಟ ಮಗುವಿನ ಬಾಲ್ಯವನ್ನು ಕಾಯಿಲೆ ಹಿಂಡಿ ಹಿಪ್ಪೆ ಮಾಡಿದೆ. ದಿವ್ಯ ಹುಟ್ಟಿನಿಂದಲೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದು, ಪೋಷಕರು ಸಂಕಷ್ಟಕ್ಕೀಡಾಗಿ ನಿತ್ಯ ಕಣ್ಣೀರಿಡುತ್ತಿದ್ದಾರೆ.

ದಿವ್ಯ ತನ್ನ ಮನೆಯಿಂದ ಕೇವಲ 200 ಮೀಟರ್ ದೂರವಿರುವ ಶಾಲೆಗೆ ನಡೆದುಕೊಂಡು ಹೋಗಿ ಬರಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಳೆ. ಪೋಷಕರು ಶಾಲೆಗೆ ಕೂರಿಸಿ ಬಂದರೂ ಕುಳಿತು ಪಾಠ ಕೇಳುವ ಶಕ್ತಿಯೂ ದಿವ್ಯಾಳಿಗೆ ಇಲ್ಲ.

ಕುಟುಂಬ ಕಡುಬಡತನದಲ್ಲಿದ್ದು, ತಮ್ಮ ಮಗಳಿಗೆ ಔಷಧಿ ಕೊಡಿಸಲು ಹಣವಿಲ್ಲ. ನಿತ್ಯ ಕಣ್ಣೀರಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಪುಟ್ಟರಾಜು ಮತ್ತು ಶಿವಮ್ಮ ಇಬ್ಬರೂ ಬೇರೆಯವರ ಹೊಲ, ತೋಟದಲ್ಲಿ ಕೂಲಿ ಕೆಲಸ ಮಾಡಿ ಬದುಕು ನಡೆಸುತ್ತಿದ್ದಾರೆ. ಹೊರಗೆ ಹೋಗಿ ಕೂಲಿ ಮಾಡಿ ತಂದ ಹಣವನ್ನೆಲ್ಲಾ ಮಗಳ ಚಿಕಿತ್ಸೆಗೆ ವಿನಿಯೋಗಿಸುತ್ತಿದ್ದಾರೆ.

ರೋಗದ ಜತೆಗೆ ದಿವ್ಯಾಳಿಗೆ ಕೈಕಾಲುಗಳೂ ಸಂಪೂರ್ಣ ಸ್ವಾಧೀನ ಇಲ್ಲ. ಕುಳಿತುಕೊಳ್ಳಲು, ನಡೆದಾಡಲು ಕಿಂಚಿತ್ತೂ ಶಕ್ತಿ ಇಲ್ಲ. ತಮ್ಮ ಮಗಳಿಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಎನ್ನುತ್ತಾರೆ ಪೋಷಕರು.

ಕೂಲಿ ಕೆಲಸ ಮಾಡಿ ಬಂದ ಹಣ ಮಾತ್ರವಲ್ಲದೆ ಚಿನ್ನಾಭರಣಗಳನ್ನು ಅಡವಿಟ್ಟು ಇದುವರೆಗೂ ಮಗಳ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಕೆಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಾರೆ. ಆದರೆ, ದುಬಾರಿ ವೆಚ್ಚದಿಂದಾಗಿ ಪೋಷಕರು ಚಿಂತಾಕ್ರಾಂತರಾಗಿದ್ದಾರೆ. 

ಈ ಸುದ್ದಿ ಓದಿದ್ದೀರಾ ? ಗುಜರಾತ್ | ಅಸ್ಪೃಶ್ಯತೆ ವಿರೋಧಿಸಿ ದಲಿತರಿಂದ 'ಒಂದು ರೂಪಾಯಿ ಸಂಗ್ರಹ' ಅಭಿಯಾನ

ಈ ದಿನ.ಕಾಮ್‌ ಜತೆಗೆ ತಾಯಿ ಶಿವಮ್ಮ ಮಾತನಾಡಿ, “ನಮಗೆ ಇಬ್ಬರು ಹೆಣ್ಣು ಮಕ್ಕಳು, ಚಿಕ್ಕ ಮಗಳಿಗೆ ನಾಲ್ಕು ವರ್ಷ. ಹುಟ್ಟಿನಿಂದಲೂ ದಿವ್ಯಾಳಿಗೆ ಇದೇ ರೀತಿ ಸಮಸ್ಯೆ ಇದೆ. ಕೂಲಿ ಕೆಲಸಕ್ಕೆ ಹೋದಾಗ ಮನೆಯಲ್ಲಿ ಆಕೆಯನ್ನು ನೋಡಿಕೊಳ್ಳಲು ಯಾರೂ ಇಲ್ಲ. ಹಾಗಾಗಿ ಕೂಲಿ ಮಾಡುವ ಜಾಗಕ್ಕೂ ಕರೆದುಕೊಂಡು ಹೋಗಬೇಕು. ಶಿವಮೊಗ್ಗದ ಖಾಸಗಿ ಆಸ್ಪತ್ರೆಯೊಂದಕ್ಕೆ ತೋರಿಸುತ್ತಿದ್ದೇವೆ. ಅಲ್ಲಿನ ವೈದ್ಯರು ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಶಿಫಾರಸ್ಸು ಮಾಡಿದ್ದಾರೆ. ಆದರೆ, ದೊಡ್ಡ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಲು ಹಣವಿಲ್ಲ. ಯಾರಾದರೂ ನೆರವು ನೀಡಿದರೆ ತುಂಬಾ ಉಪಕಾರವಾಗಲಿದೆ” ಎಂದು ಕಣ್ಣೀರಿಟ್ಟರು.

ಸಂಪರ್ಕಕ್ಕೆ ಶಿವಮ್ಮ ಅವರ ಮೊಬೈಲ್ ಸಂಖ್ಯೆಗೆ (9972258452) ಕರೆ ಮಾಡಬಹುದು.

ನಿಮಗೆ ಏನು ಅನ್ನಿಸ್ತು?
0 ವೋಟ್