ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಸುತ್ತೋಲೆ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

DSS Protest
  • ಫ್ರೀಡಂ ಪಾರ್ಕ್‌ ಬಳಿ ಧರಣಿ, ಸುತ್ತೋಲೆ ಹರಿದುಹಾಕಿ ಆಕ್ರೋಶ
  • ದಲಿತರ ಹೋರಾಟಕ್ಕೆ ರೈತ ಸಂಘ, ಕಾರ್ಮಿಕ ಸಂಘಟನೆಗಳ ಬೆಂಬಲ

ಸಂವಿಧಾನ ಸಮರ್ಪಣಾ ದಿನವನ್ನು ತಾರತಮ್ಯದ ಜಾತಿ ಪದ್ಧತಿಯ ವೈಭವೀಕರಣ ದಿನವನ್ನಾಗಿ ಬದಲಿಸಲು ಹೊರಟಿರುವ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ಸುತ್ತೋಲೆಯನ್ನು ಹರಿದುಹಾಕುವ ಮೂಲಕ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಆಕ್ರೋಶ ಹೊರಹಾಕಿದೆ.

ಸಂಘಟನೆಯ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಶನಿವಾರ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದಲಿತ ಮುಖಂಡ ಮಾವಳ್ಳಿ ಶಂಕರ್, “ಇಂದು ಭಾರತೀಯರ ಪಾಲಿಗೆ ಚರಿತ್ರಾರ್ಹ ದಿನ. ಕಾರಣ ಡಾ. ಬಿ ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು 1949ರ ನ.26ರಂದು ದೇಶದ ಜನತೆಗೆ ಸಮರ್ಪಿಸಿದ್ದರು. ಆ ದಿನದ ನೆನಪಿಗೆ 'ಸಂವಿಧಾನ ಸಮರ್ಪಣಾ ದಿನ'ವನ್ನು ಆಚರಿಸಿಕೊಂಡು ಬರುತ್ತಿದ್ದೇವೆ” ಎಂದರು.

Eedina App

“ಸಾವಿರಾರು ವರ್ಷಗಳ ಕಾಲ ಯಾವ ಬ್ರಾಹ್ಮಣ್ಯ ಈ ದೇಶವನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು, ಜಾತಿ ಜಾತಿಗಳ ನಡುವೆ ವೈಷಮ್ಯ ಬಿತ್ತಿ ಸಮಾಜವನ್ನು ಒಡೆದು ಆಳುತ್ತಿತ್ತೋ, ಅಂತಹ ಬ್ರಾಹ್ಮಣ್ಯವನ್ನು ಬುಡ ಸಮೇತ ಕಿತ್ತುಹಾಕುವ ಒಂದು ಬದಲಾವಣೆಯಾಗಿ ಸಂವಿಧಾನವನ್ನು ತಂದಂತಹ ದಿನ ಇದು. ಅದರಲ್ಲಿಯೂ ಬಹುಜನರು ಮತ್ತು ತಳ ಸಮುದಾಯಕ್ಕೆ, ಮಹಿಳೆಯರಿಗೆ ಅತ್ಯಂತ ಶ್ರೇಷ್ಠವಾದ ದಿನ” ಎಂದರು.

“ಆರ್‌ಎಸ್‌ಎಸ್‌ ಪ್ರೇರಿತ ಚಿಂತನೆಗಳನ್ನು ಸಮುದಾಯಗಳ ಮೇಲೆ ಹೇರುವ ಕೆಲಸ ಇಂದು ಆಗುತ್ತಿದೆ. ಬಹುತೇಕ ಭಾರತೀಯರನ್ನು ದೇವರು, ದೇವಸ್ಥಾನ ಮತ್ತು ಧರ್ಮಗಳ ನೆಪದಲ್ಲಿ ವಂಚಿಸುತ್ತಿದ್ದಾರೆ. ದೇಶದ ಜನರ ಮೆದುಳಿನಲ್ಲಿ ಆರ್‌ಎಸ್‌ಎಸ್‌ ಚಿಂತನೆಗಳನ್ನು ತುರುಕುತ್ತಿದ್ದಾರೆ. ದೇಶದ ಜನರ ಹಸಿವು, ಬಡತನ ನಿರುದ್ಯೋಗದ ಬಗ್ಗೆ ಅವರಿಗೆ ಯಾವುದೇ ಕಾಳಜಿ ಇಲ್ಲ. ಆದರೆ, ದೇವರು ಧರ್ಮವನ್ನು ಮುನ್ನೆಲೆಗೆ ತರುವ ಮೂಲಕ ಬ್ರಾಹ್ಮಣಶಾಹಿ ತನ್ನ ಅಸ್ಥಿತ್ವವನ್ನು ಉಳಿಸಿಕೊಳ್ಳುತ್ತಿದೆ ಎಂಬುದನ್ನು ಚಿಂತನೆ ಮಾಡಬೇಕು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು” ಎಂದು ಕರೆ ನೀಡಿದರು.

AV Eye Hospital ad

'ವೈದಿಕತೆ ಮತ್ತು ಮನುವಾದನ್ನು ಜಾರಿಗೆ ತರುವ ಹುನ್ನಾರ' ; ಇಂದೂಧರ ಹೊನ್ನಾಪುರ

ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಮುಖಂಡ ಇಂದೂಧರ ಹೊನ್ನಾಪುರ ಮಾತನಾಡಿ, “2014ರ ನಂತರ ಈ ದೇಶದ ಚುಕ್ಕಾಣಿ ಹಿಡಿದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂವಿಧಾನದ ಆಶಯಗಳಿಗೆ ನಿರಂತರವಾಗಿ ಧಕ್ಕೆ ತರುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದೆ. ಸಂವಿಧಾನದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಈಗ ಅದೇ ಸಂವಿಧಾನವನ್ನು ನಾಶ ಮಾಡುವ ಹಂತಕ್ಕೆ ಕೈ ಹಾಕಿರುವುದನ್ನು ನೋಡುತ್ತಿದ್ದೇವೆ” ಎಂದು ಕಿಡಿಕಾರಿದರು.

"ಅತ್ಯಂತ ಹೆಮ್ಮೆಯ ಪರಂಪರೆ, ಸೌಹಾರ್ದತೆ, ಸಹಬಾಳ್ವೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡು ಬಂದಿರುವ ಈ ದೇಶವನ್ನು ಜಾತಿ, ಕೋಮುವಾದ, ಅಸ್ಪೃಶ್ಯತೆ, ದೇವರ ಹೆಸರಿನಲ್ಲಿ ಒಡೆದು ಪ್ರತಿಯೊಂದು ಮನೆ ಮತ್ತು ಮನಸ್ಸನ್ನು ಛಿದ್ರಗೊಳಿಸುವ ಕೆಲಸಕ್ಕೆ ಬಿಜೆಪಿ ಕೈ ಹಾಕುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬಿಜೆಪಿಯು ಮೇಲ್ನೋಟಕ್ಕೆ ಕಾಣುವಂತೆ ಅದು ಕೇವಲ ಒಂದು ರಾಜಕೀಯ ಪಕ್ಷವಲ್ಲ. ಅದು ಭಾರತದಲ್ಲಿ ವೈದಿಕರು ಬಿತ್ತಿದ ತಾರತಮ್ಯ, ಅಸಮಾನತೆಯನ್ನು ತಮ್ಮ ಸರ್ಕಾರಗಳ ಮೂಲಕ ಪ್ರತಿ ಮನೆಮನೆಗೂ ಮುಟ್ಟಿಸಿ ಇಡೀ ವ್ಯವಸ್ಥೆಯನ್ನು ಹಾಳು ಮಾಡುವ ಕೆಲಸದಲ್ಲಿ ನಿರತವಾಗಿದೆ. ಅದರ ಮುಂದುವರಿದ ಭಾಗವಾಗಿ ಇಡೀ ಜಗತ್ತು ಹೆಮ್ಮೆಪಡುವಂತಹ ಭಾರತದ ಸಂವಿಧಾನದ ಆಶಯಗಳನ್ನು ನಾಶಮಾಡಿ, ವೈದಿಕತೆ ಮತ್ತು ಮನುವಾದನ್ನು ಜಾರಿಗೆ ತರುವ ಹುನ್ನಾರವನ್ನು ಇಂದು ಮಾಡುತ್ತಿದೆ” ಎಂದು ಆರೋಪಿಸಿದರು.

"ಕೇಂದ್ರ ಸರ್ಕಾರವು ಹೊರಡಿಸಿರುವ ಸುತ್ತೋಲೆಯಲ್ಲಿ ನ. 26ನ್ನು ಭಾರತ – ಲೋಕತಂತ್ರದ ಜನನಿ ಎಂಬ ಹೆಸರಿನಲ್ಲಿ ದೇಶಾದ್ಯಂತ ಎಲ್ಲ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾಲಯಗಳು ಹಾಗೂ ಕೇಂದ್ರ ಕಚೇರಿಗಳು ಆಚರಿಸಬೇಕೆಂದು ಸೂಚನೆ ಹೊರಡಿಸಿದೆ. ಹೀಗೆ ನೀಡಿರುವ ಸೂಚನೆಯಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ನೆನೆಯದೆ ಅವಮಾನಿಸಿದೆ. ಅಲ್ಲದೆ, ವೇದಗಳ ಕಾಲದಲ್ಲಿಯೇ ಪ್ರಜಾಪ್ರಭುತ್ವವಿತ್ತು. ಗ್ರಾಮಗಳಲ್ಲಿದ್ದ ಪಂಚಾಯಿತಿ ಹಾಗೂ ಖಾಪ್ ಪಂಚಾಯಿತಿಗಳ ರೂಪದಲ್ಲಿ ಮುಂದುವರೆಯಿತು. ಭಗವದ್ಗೀತೆಯು ಪ್ರಜಾತಂತ್ರದ ಭಾಗವಾಗಿತ್ತು ಎಂಬ ಸುಳ್ಳನ್ನು ಪಸರಿಸುವ ಮೂಲಕ ಇಡೀ ಒಕ್ಕೂಟ ವ್ಯವಸ್ಥೆಯನ್ನು ಹಾಳು ಮಾಡುವ ಮುನ್ನುಡಿಯನ್ನು ಈ ಸುತ್ತೋಲೆಯ ಮೂಲಕ ಬರೆಯಲಾಗಿದೆ” ಎಂದು ದೂರಿದರು.

DSS Protest

'ಜುಡಿಶಿಯಲ್ ಆ್ಯಕ್ಟಿವಿಸಂ ಪ್ರಾರಂಭವಾಗಿದೆ' ; ಬಡಗಲಪುರ ನಾಗೇಂದ್ರ

ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, “ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ, ಭ್ರಮೆ ಹುಟ್ಟಿಸುವುದಲ್ಲಿ ಬಹಳ ನಿಪುಣರು. ಅಂಬೇಡ್ಕರ್ ಅವರ ಪ್ರತಿಮೆಗಳನ್ನು ನಿರ್ಮಾಣ ಮಾಡುವ ಮೂಲಕ, ಲಂಡನ್‌ನಲ್ಲಿ ಅಂಬೇಡ್ಕರ್ ಅವರ ಮನೆ ಖರೀದಿಸುವ ಮೂಲಕ ಇಡೀ ದಲಿತ ಸಮುದಾಯವನ್ನು ಆಕರ್ಷಣೆ ಮಾಡಿಕೊಂಡು ಬಂದಂತಹ ಕುತಂತ್ರ ಬಿಜೆಪಿಗೆ ಸಲ್ಲುತ್ತದೆ. ಆದರೆ, ಅವರು ವಾಸ್ತವವಾಗಿ ಒಳಗೊಳಗೇ ಸಂವಿಧಾನ ವಿರೋಧಿಗಳು. ಮೇಲ್ನೋಟಕ್ಕೆ ಎಲ್ಲರನ್ನು ಮೆಚ್ಚಿಸುವ ನಾಟಕವಾಡುತ್ತಾರೆ” ಎಂದು ಕಿಡಿಕಾರಿದರು.

“ಸಂವಿಧಾನಕ್ಕೆ ಇಂದು ಅಪಾಯ ಎದುರಾಗಿದೆ. ಜುಡಿಶಿಯಲ್ ಆ್ಯಕ್ಟಿವಿಸಂ ಪ್ರಾರಂಭವಾಗಿದೆ. ಅದರ ಭಾಗವಾಗಿ ಕೆಲವು ತೀರ್ಪುಗಳನ್ನು ಗಮನಿಸಬಹುದು. ಸುಪ್ರೀಂ ಕೋರ್ಟ್ ಸಂವಿಧಾನದ ರಕ್ಷಕ. ಆದರೆ, ಈ ಸುಪ್ರೀಂಕೋರ್ಟ್‌ ಅನ್ನು ಧ್ವಂಸ ಮಾಡುವಂತಹ ಕೆಲಸವನ್ನು ಇವರು ಮಾಡುತ್ತಿದ್ದಾರೆ” ಎಂದು ಆರೋಪಿಸಿದರು.

'ರಾಷ್ಟ್ರ ಮಾಡಲು ಸಂವಿಧಾನ ತಿರಸ್ಕರಿಸುವ ಹುನ್ನಾರ' : ಜಿ ಎನ್ ನಾಗರಾಜ್ 

ಕರ್ನಾಟಕ ಕೂಲಿಕಾರರ ಸಂಘದ ರಾಜ್ಯಾಧ್ಯಕ್ಷ ಜಿ ಎನ್ ನಾಗರಾಜ್ ಮಾತನಾಡಿ, “ಸಂವಿಧಾನಕ್ಕೆ ಬದಲಾಗಿ ಮನುಸ್ಮೃತಿಯನ್ನು ಜಾರಿಗೆ ತರಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ ಎಂಬುದು ಎಲ್ಲರಿಗೂ ಗೊತ್ತಿದೆ. ಅದಕ್ಕೆ ಸಾಕ್ಷಿ ಎಂಬಂತೆ ಸಂವಿಧಾನ ಜಾರಿಯಾದ ದಿನವೇ ಆರ್‌ಎಸ್‌ಎಸ್‌ ತನ್ನ ಆರ್ಗನೈಸರ್ ಎಂಬ ಪತ್ರಿಕೆಯ ಮುಖಪುಟದಲ್ಲಿ ‘ಮನುಸ್ಮೃತಿಯನ್ನು ಒಳಗೊಳ್ಳದ ಸಂವಿಧಾನವನ್ನು ನಾವು ತಿರಸ್ಕರಿಸುತ್ತೇವೆ’ ಎಂದು ಬರೆದುಕೊಂಡರು. ಸಂವಿಧಾನ ಜಾರಿಯಾಗುವುದನ್ನು ತಪ್ಪಿಸುವ ಉದ್ದೇಶದಿಂದ 1949ರ ಡಿಸೆಂಬರ್ 22ರ ಮಧ್ಯರಾತ್ರಿ ಬಾಬರಿ ಮಸಿದಿಯಲ್ಲಿ ರಾಮನ ಮೂರ್ತಿಯನ್ನು ಇಟ್ಟರು. ಇದರ ಉದ್ದೇಶ, ದೊಡ್ಡ ಪ್ರಮಾಣದಲ್ಲಿ ಕೋಮು ದಂಗೆಗಳನ್ನು ದೇಶದಲ್ಲಿ ಹುಟ್ಟುಹಾಕಿ, ಹಿಂದೂ ರಾಷ್ಟ್ರ ಮಾಡುವ ಉದ್ದೇಶದಿಂದ ಸಂವಿಧಾನವನ್ನು ತಿರಸ್ಕರಿಸಬೇಕು ಎಂಬುದು ಅವರ ಹುನ್ನಾರವಾಗಿತ್ತು” ಎಂದು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಸಂವಿಧಾನ ದಿನವನ್ನು ವೈದಿಕ ದಿನವಾಗಿ ಆಚರಣೆ ಆರೋಪ: ಕೇಂದ್ರದ ಸುತ್ತೋಲೆ ಹರಿದು ದಸಂಸ ಆಕ್ರೋಶ

“ಅಂಬೇಡ್ಕರ್ ಅವರು ಯಾವಾಗ ಮನುಸ್ಮೃತಿಯನ್ನು ಸುಟ್ಟು ಹಾಕಿದರೋ ಆಗಿನಿಂದಲೇ ಸಂಘಪರಿವಾರದವರಿಗೆ ಅಂಬೇಡ್ಕರ್ ಬಗ್ಗೆ ಉರಿ. ಹಾಗಾಗಿ ಸಾಮಾಜಿಕ ನ್ಯಾಯವನ್ನು ಹೊಂದಿರುವ ಸಂವಿಧಾನವನ್ನು ಸಂಪೂರ್ಣ ನಾಶ ಮಾಡುವುದು ಅವರ ಗುರಿ. ಹಾಗಾಗಿ ಅನೇಕ ತಂತ್ರಗಳನ್ನು ಮಾಡುತ್ತಿದ್ದಾರೆ” ಎಂದರು.

ಧರಣಿಯಲ್ಲಿ ಕೇಂದ್ರ ಸರ್ಕಾರದ ಸಂವಿಧಾನ ವಿರೋಧಿ ನೀತಿಗಳನ್ನು ಖಂಡಿಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಸಂಘಟನೆಗಳ ಹೋರಾಟಕ್ಕೆ ರೈತ ಮತ್ತು ಕಾರ್ಮಿಕ ಸಂಘಟನೆಗಳು ಬೆಂಬಲ ನೀಡಿದರು. ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಹರಿದು ಹಾಕಿದರು.

ಪ್ರತಿಭಟನೆಯಲ್ಲಿ ದಲಿತ ಮುಖಂಡರಾದ ಜಿಗಣಿ ಶಂಖರ್, ಶ್ರೀಪಾದ ಭಟ್, ಡಿ ಜಿ ಸಾಗರ್, ಭೂ ವಸತಿ ವಂಚಿತರ ಹೋರಾಟ ಸಮಿತಿ ಮುಖಂಡ ಸಿರಿಮನೆ ನಾಗರಾಜ್ ಹಾಗೂ ಇತರರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app