ದೊಡ್ಡಬಳ್ಳಾಪುರ | ನರೇಗಾ ಅವ್ಯವಹಾರ ಸಂಬಂಧ ಹಲ್ಲೆ ; ದಲಿತ ಮಹಿಳೆ ಬಲಿ

  • ನರೇಗಾ ಕಾಮಗಾರಿ ಅಕ್ರಮದ ಬಗ್ಗೆ ಶಾಸಕರಿಗೆ ದೂರು ನೀಡಿದ್ದಾರೆಂಬ ಆರೋಪ
  • ದಲಿತರ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ: ಮಹಿಳೆ ಸಾವು, ಪುತ್ರ ಆಸ್ಪತ್ರೆಗೆ ದಾಖಲು

ನರೇಗಾ ಯೋಜನೆ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿರುವ ಬಗ್ಗೆ ಶಾಸಕರಿಗೆ ದೂರು ಹೇಳಿದ್ದಾರೆ ಎಂದು ಅನುಮಾನಗೊಂಡು ಪ್ರಬಲ ಜಾತಿಯ ವ್ಯಕ್ತಿಗಳು ದಲಿತ ಕುಟುಂಬದ ಮನೆಗೆ ನುಗ್ಗಿ ಮಾರಣಾಂತಿಕ ಹಲ್ಲೆ ಮಾಡಿದ್ದು, ತೀವ್ರವಾಗಿ ಗಾಯಗೊಂಡಿದ್ದ ದಲಿತ ಮಹಿಳೆ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಗಂಗಮ್ಮ (58) ಮೃತ ಮಹಿಳೆ. ದೊಡ್ಡಬಳ್ಳಾಪುರದ ಯಾದವ ಸಮುದಾಯದ ಸುಧಾಕರ್ ಮತ್ತು ಆತನ ಕುಟುಂಬ ದಲಿತರ ಮೇಲೆ ಹಲ್ಲೆ ಮಾಡಿದ್ದಾರೆ 

Eedina App

ಸುಧಾಕರ್ ಮತ್ತು ಆತನ ಕುಟುಂಬದವರು ದೊಡ್ಡಬಳ್ಳಾಪುರದಲ್ಲಿ ನರೇಗಾ ಯೋಜನೆ ಅಡಿ ವಿವಿಧ ಕಾಮಗಾರಿಗಳನ್ನು ಮಾಡಿಸುತ್ತಿದ್ದರು. ಹಲವರ ಪಹಣಿ ಪಡೆದಿದ್ದರು. ಮಾನವ ಸಂಪನ್ಮೂಲ ಬಳಸದೆ, ಯಂತ್ರಗಳ ಸಹಾಯದಿಂದ ನರೇಗಾ ಯೋಜನೆಯಡಿ ಬದು ನಿರ್ಮಾಣ ಮಾಡಿಸಿದ್ದರು. ಯಂತ್ರಗಳನ್ನು ಬಳಕೆ ಮಾಡಿ ಮತ್ತು ನರೇಗಾ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವ ಬಗ್ಗೆ ಶಾಸಕರಿಗೆ ದೂರು ತಲುಪಿತ್ತು.

ಪರಿಶಿಷ್ಟ ಜಾತಿಯ ಮಹಿಳೆ ಗಂಗಮ್ಮ ಅವರ ಪುತ್ರ ನಾಗರಾಜನೇ ಶಾಸಕರಿಗೆ ದೂರು ಹೇಳಿದ್ದಾನೆ ಎಂದು ಸುಧಾಕರ್ ಮತ್ತು ಆತನ ಕುಟುಂಬದಲ್ಲಿ ಅನುಮಾನ ಮೂಡಿತ್ತು. ಇದರಿಂದ ಗಂಗಮ್ಮ ಅವರ ಕುಟುಂಬದ ಮೇಲೆ ಸುಧಾಕರ್ ಕುಟುಂಬ ಕೆಂಡ ಕಾರುತ್ತಿತ್ತು.

AV Eye Hospital ad

ಈ ಸುದ್ದಿ ಓದಿದ್ದೀರಾ? ಚಾಮರಾಜನಗರ | ಕಾಲೇಜಿನಲ್ಲಿ ಪೀಠೋಪಕರಣ ಕೊರತೆ: ನೆಲದ ಮೇಲೆ ಕೂತು ತರಗತಿ ಕೇಳುತ್ತಿರುವ ವಿದ್ಯಾರ್ಥಿಗಳು

ಶನಿವಾರ ರಾತ್ರಿ 7 ಗಂಟೆ ಸಮಯದಲ್ಲಿ ಸುಧಾಕರ್, ಹನುಮಂತರಾಯಪ್ಪ, ಮಾರುತಿ ಮತ್ತು  ಚಿನ್ನಕ್ಕ ಎಂಬುವವರು ಏಕಾಏಕಿ ಗಂಗಮ್ಮ ಅವರ ಮನೆಗೆ ನುಗ್ಗಿ ಮನ ಬಂದಂತೆ ಹಲ್ಲೆ ನಡೆಸಿದ್ದಾರೆ. ಸುಧಾಕರ್ ಗಂಗಮ್ಮ  ಅವರಿಗೆ ಕಾಲಿನಿಂದ  ಒದ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾನೆ. ಇದರಿಂದ ಗಂಗಮ್ಮ ಸ್ಥಳದಲ್ಲೇ ಅಸ್ವಸ್ಥಗೊಂಡು ಬಿದ್ದಿದ್ದಾರೆ. ಕೂಡಲೇ ಆಕೆಯನ್ನು ಸರ್ಕಾರಿ ಅಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ.

ಗಂಗಮ್ಮ ಅವರ ಪುತ್ರ ನಾಗರಾಜ್ ಗಾಯಗೊಂಡಿದ್ದು, ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ ಶ್ರೀನಿವಾಸ್, ಡಿವೈಎಸ್‌ಪಿ ನಾಗರಾಜು, ಇನ್‌ಸ್ಪೆಕ್ಟರ್‌ ಸತೀಶ್ ಸೇರಿದಂತೆ ಹಲವರು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app