ಪೆದ್ದನಹಳ್ಳಿ ದಲಿತ ಯುವಕರ ಹತ್ಯೆ | ಸ್ಥಳೀಯ ಶಾಸಕರ ವಿರುದ್ಧ ದಲಿತ ಸಂಘಟನೆಗಳ ಆಕ್ರೋಶ

  • ಪೆದ್ದನಹಳ್ಳಿ ದಲಿತ ಯುವಕರ ಕೊಲೆ ಪ್ರಕರಣ
  • ನಿಸ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಕಾಲ್ನಡಿಗೆ ಜಾಥಾ

ದಲಿತ ಯುವಕರ ಹತ್ಯೆ ಪ್ರಕರಣದ ಮುಖ್ಯ ಆರೋಪಿಗಳಿಗೆ ಸ್ಥಳೀಯ ಶಾಸಕರು ರಕ್ಷಣೆ ನೀಡುತ್ತಿದ್ದಾರೆ ಎಂದು ದಲಿತ ಮುಖಂಡ ಹೆಣ್ಣೂರು ಶ್ರೀನಿವಾಸ್ ಅವರು ಆರೋಪಿಸಿದ್ದಾರೆ.

ಗುಬ್ಬಿ ತಾಲೂಕಿನ ಪೆದ್ದನಹಳ್ಳಿಯ ಇಬ್ಬರು ದಲಿತ ಯುವಕರ ಕೊಲೆ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಗುಬ್ಬಿಯಿಂದ ತುಮಕೂರಿಗೆ ಕಾಲ್ನಡಿಗೆ ಜಾಥಾ ನಡೆಸಿದ್ದಾರೆ. 

Eedina App

ತುಮಕೂರು ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಿ ಶ್ರೀನಿವಾಸ್ ಮಾತನಾಡಿದರು. "ತಿಂಗಳ ಹಿಂದೆ ಪೆದ್ದನಹಳ್ಳಿ ಗ್ರಾಮದಲ್ಲಿ ಇಬ್ಬರು ದಲಿತ ಯುವಕರನ್ನು ಹಿಂಸಿಸಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಇದುವರೆಗೂ ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಆರೋಪಿಗಳಿಗೆ ಸ್ಥಳೀಯ ಶಾಸಕರು ರಕ್ಷಣೆ ನೀಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ರಾಜಕೀಯ ಒತ್ತಡಗಳಿಗೆ ಪೊಲೀಸ್ ಅಧಿಕಾರಿಗಳು ಒಳಗಾಗಿದ್ದಾರೆ. ಪ್ರಕರಣ ಸಂಬಂಧ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವ ಸಲುವಾಗಿ ಸರ್ಕಾರದಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ದಲಿತ ಯುವಕರ ಹತ್ಯೆ ಪ್ರಕರಣದ ತನಿಖೆಯನ್ನು ಬಲಿಷ್ಠ ಜಾತಿಯ ಅಧಿಕಾರಿಗಳು ನಡೆಸುತ್ತಿರುವುದರಿಂದ ಹಾಗೂ ಸ್ಥಳೀಯ ನಾಯಕರ ಪ್ರಭಾವದಿಂದ ದಲಿತ ಕುಟುಂಬಗಳಿಗೆ ನ್ಯಾಯ ಸಿಗುವುದೋ, ಇಲ್ಲವೋ ಎಂಬ ಗೊಂದಲವಿದೆ" ಎಂದು ಶ್ರೀನಿವಾಸ್ ಅಸಮಾಧಾನ ವ್ಯಕ್ತಪಡಿಸಿದರು.

AV Eye Hospital ad

"ದಲಿತ ಯುವಕರ ಹತ್ಯೆ- ನಾಗರಿಕ ಸಮಾಜ ತಲೆತಗ್ಗಿಸುವಂಥದ್ದು. ಯುವಕರ ಕುಟುಂಬಕ್ಕೆ ನ್ಯಾಯ ಮತ್ತು ಪರಿಹಾರ ಸಿಗಬೇಕು. ಕ್ಷುಲ್ಲಕ ಕಾರಣಕ್ಕೆ ಕೊಲೆ ಆಗುವುದನ್ನು ಖಂಡಿಸಬೇಕು" ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ನಾಯಕ ಗೋವಿಂದರಾಜು ಒತ್ತಾಯಿಸಿದರು.

ಕೊಟ್ಟ ಶಂಕರ್ ಮಾತನಾಡಿ, "ಪ್ರಾಮಾಣಿಕ ತನಿಖೆ ನಡೆಸಿ ಪೊಲೀಸ್ ಅಧಿಕಾರಿಗಳು ವರದಿ ನೀಡಿದರೆ, ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ಸಾಧ್ಯ. ಹತ್ಯೆಯಾದ ಯುವಕರ ಕುಟುಂಬಗಳಿಗೆ ಪರಿಹಾರವಾಗಿ ಐದು ಎಕರೆ ಭೂಮಿ, 25 ಲಕ್ಷ ರೂ. ಪರಿಹಾರ ಕೊಡಿಸಬೇಕು" ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಕೊಪ್ಪಳ | ದಲಿತರ ಮೇಲಿನ ದೌರ್ಜನ್ಯ ಖಂಡಿಸಿ ಮೇ 30ಕ್ಕೆ ಕಾರಟಗಿ ಬಂದ್ 

ಈ ಸಂದರ್ಭದಲ್ಲಿ ದಲಿತ ನಾಯಕ ನರಸಿಯಪ್ಪಾ, ಜಿಲ್ಲಾ ಮತ್ತು ತಾಲೂಕು ಮಟ್ಟದ ಹಲವು ದಲಿತ ಮತ್ತು ಪ್ರಗತಿಪರ ಸಂಘಟನೆಗಳ ನಾಯಕರು ಭಾಗವಹಿಸಿದ್ದರು.

ತುಮಕೂರು ಜಿಲ್ಲಾ ಮಾಧ್ಯಮ ಸಂಯೋಜಕ ರವಿಶಂಕರ್ ಮಾಹಿತಿ ಆಧರಿಸಿದ ವರದಿ.
ನಿಮಗೆ ಏನು ಅನ್ನಿಸ್ತು?
0 ವೋಟ್
eedina app