ಒಳ ಮೀಸಲಾತಿ| ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಆಗಸ್ಟ್ 15ಕ್ಕೆ ಕರಾಳ ದಿನ ಆಚರಣೆ

  • ದೇಶದ ಗಮನ ಸೆಳೆಯಲು ದಕ್ಷಿಣ ಭಾರತ ರಾಜ್ಯಗಳಲ್ಲಿ ಹೋರಾಟ
  • ಕಪ್ಪುಪಟ್ಟಿ ಧರಿಸಿ ತಹಶೀಲ್ದಾರ್ ಕಚೇರಿ ಎದುರು ಧರಣಿಗೆ ನಿರ್ಧಾರ

ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿ ಜಾರಿಗೆ ಒತ್ತಾಯಿಸಿ ಮುಂಬರುವ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ದಿನ ದೇಶದ ಗಮನಸೆಳೆಯುವ ನಿಟ್ಟಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರಾಳ ದಿನ ಆಚರಣೆಗೆ ನಿರ್ಧರಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಎಲ್ ಹನುಮಂತಯ್ಯ ಹೇಳಿದರು.

ಒಳಮೀಸಲಾತಿಗಾಗಿ ಹೋರಾಟ ಮತ್ತಷ್ಟು ತೀವ್ರಗೊಳಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲೇ ಒಳ ಮೀಸಲಾತಿ ಹೆಚ್ಚು ಅಗತ್ಯವಿರುವುದರಿಂದ ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ರಾಜ್ಯಗಳಲ್ಲಿ ಹೋರಾಟ ನಡೆಯಲಿದೆ. ಅಂದು ಎಲ್ಲಾ ತಾಲ್ಲೂಕುಗಳಲ್ಲಿ ತಹಶೀಲ್ದಾರ್ ಕಚೇರಿ ಎದುರು ಕೈಗೆ ಕಪ್ಪುಪಟ್ಟಿ ಧರಿಸಿ ಧರಣಿ ನಡೆಸಲಾಗುವುದು ಎಂದು ಈ ದಿನ.ಕಾಂಗೆ ತಿಳಿಸಿದರು.

ಬೆಂಗಳೂರಿನಲ್ಲಿ ಭಾನುವಾರ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಮತ್ತು ಮಾದಿಗ ಮಾನವ ಹಕ್ಕುಗಳ ವೇದಿಕೆ ಜಂಟಿಯಾಗಿ ಆಯೋಜಿಸಿದ್ದ “ಮೀಸಲಾತಿ ಮತ್ತು ಒಳಮೀಸಲಾತಿ ತಲ್ಲಣಗಳು–ಅವಲೋಕನ” ಕುರಿತ ವಿಚಾರ ಸಂಕಿರಣದಲ್ಲಿ ಮುಂದಿನ ಹೋರಾಟದ ಹಾದಿ ಕುರಿತು ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಭಾನುವಾರ ನಡೆದ ಸಭೆಯಲ್ಲಿ, ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಡಾ ಎಲ್‌ ಹನುಮಂತಯ್ಯ, ನಿವೃತ್ತ ನ್ಯಾಯಮೂರ್ತಿ ಎ ಜೆ ಸದಾಶಿವ ಹಾಗೂ ಬಿಎಸ್‌ಪಿ ರಾಜ್ಯ ಉಸ್ತುವಾರಿ ಮಾರಸಂದ್ರ ಮುನಿಯಪ್ಪ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.

ಸಭೆಯಲ್ಲಿ ಮಾತನಾಡಿದ ರಾಜ್ಯಸಭಾ ಸದಸ್ಯರಾದ ಎಲ್‌ ಹನುಮಂತಯ್ಯ, “ರಾಜಕೀಯ ಪಕ್ಷಗಳು ನ್ಯಾಯಮೂರ್ತಿ ಎ ಜೆ ಸದಾಶಿವ ಆಯೋಗದ ವರದಿಯನ್ನು ಅಧಿಕಾರಕ್ಕೆ ಏರಲು ಮೆಟ್ಟಿಲು ಮಾಡಿಕೊಂಡಿವೆಯೇ ಹೊರತು ಅನುಷ್ಠಾನಗೊಳಿಸಲು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಅಂದಾಜು 32 ವರ್ಷಗಳಿಂದ ಒಳಮೀಸಲಾತಿಗಾಗಿ ಹೋರಾಟ ನಡೆಯುತ್ತಿದ್ದರೂ ಫಲ ದೊರೆತಿಲ್ಲ. ಸಮಗ್ರವಾಗಿ ಸಿದ್ಧಪಡಿಸಿರುವ ಸದಾಶಿವ ಆಯೋಗದ ವರದಿಯನ್ನು ಮೊದಲು ವಿಧಾನಸಭೆಯಲ್ಲಿ ಮಂಡಿಸಿ ಚರ್ಚೆ ನಡೆಸಬೇಕು. ವರದಿಯನ್ನು ತಿರಸ್ಕರಿಸುವ ನಿರ್ಣಯವನ್ನಾದರೂ ಕೈಗೊಳ್ಳಲಿ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

“ಆರ್‌ಎಸ್‌ಎಸ್‌ ಮುಖಂಡರು ಬಿಜೆಪಿ ಮನವೊಲಿಸಿ ವರದಿ ಜಾರಿಗೊಳಿಸುವ ನಂಬಿಕೆ ಇತ್ತು. ಈ ಬಗ್ಗೆ ಚರ್ಚಿಸಲು ಸಮುದಾಯದ ಕೆಲವು ನಾಯಕರು ಕೇಶವಕೃಪಾಕ್ಕೂ ಹೋಗಿದ್ದರು. ಇದು ಸಾಮಾಜಿಕ ನ್ಯಾಯದ ಪ್ರಶ್ನೆಯಾಗಿದ್ದರಿಂದ ಯಾರೂ ವಿರೋಧ ವ್ಯಕ್ತಪಡಿಸಿಲ್ಲ. ಆದರೂ ಈವರೆಗೆ ಅಂತಹ ಯಾವುದೇ ಕ್ರಮ ಜರುಗಿಲ್ಲ. ಒಟ್ಟಾರೆಯಾಗಿ ವಿಶ್ಲೇಷಿಸಿದಾಗ ಮಾದಿಗ ಸಮುದಾಯ ಒಂದು ರಾಜಕೀಯ ಪಕ್ಷವನ್ನು ಗೆಲ್ಲಿಸಬಹುದು ಅಥವಾ ಸೋಲಿಸಬಹುದು ಎನ್ನುವುದು ರಾಜಕೀಯ ಪಕ್ಷಗಳಿಗೆ ಮನವರಿಕೆಯಾಗಿದೆ” ಎಂದು ಹೇಳಿದರು.

“ರಾಜಕೀಯವಾಗಿ ಅಸಂಘಟಿತ ಆಗಿರುವುದರಿಂದ ಮಾದಿಗ ಸಮುದಾಯವು ತನ್ನ ಹಿತಾಸಕ್ತಿಯನ್ನೇ ಬಲಿ ಕೊಡುತ್ತಿದೆ. ರಾಜ್ಯ ಸರ್ಕಾರಗಳು ನಿರಾಸಕ್ತಿ ವಹಿಸಿದ್ದರಿಂದ ವರದಿ ಅನುಷ್ಠಾನವಾಗುತ್ತಿಲ್ಲ. ಈಗ ಚುನಾವಣೆಗಳು ಸಮೀಪಿಸುತ್ತಿರುವುದರಿಂದ ರಾಜಕೀಯ ಪಕ್ಷಗಳು ಬೇಡಿಕೆ ಈಡೇರಿಸುವ ಭರವಸೆ ನೀಡುತ್ತಿವೆ. ಆದರೆ, ಇದು ಹೊಸದಲ್ಲ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಇಂತಹ ಭರವಸೆಗಳು ಬರುತ್ತವೆ” ಎಂದು ಸಮುದಾಯದ ವಿಷಯದಲ್ಲಿ ರಾಜಕೀಯ ಪಕ್ಷಗಳ ಧೋರಣೆಯನ್ನು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಪಠ್ಯಪುಸ್ತಕ ವಿವಾದ| ಅಧಿಕಾರ ಇದೆ ಎಂದು ದಾರ್ಶನಿಕರ ಭಾವನೆಗೆ ಧಕ್ಕೆ ತರುವುದು ಸಲ್ಲ: ಜಯಮೃತ್ಯುಂಜಯ ಸ್ವಾಮೀಜಿ

ತಪ್ಪು ಅಭಿಪ್ರಾಯ ಹೋಗಲಾಡಿಸಿ
ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ  ಮಾತನಾಡಿ, “ಒಳ ಮೀಸಲಾತಿ ಬಗ್ಗೆ ಭೋವಿ ಮತ್ತು ಲಂಬಾಣಿ ಸಮುದಾಯಗಳಲ್ಲಿ ತಪ್ಪು ಅಭಿಪ್ರಾಯ ಮೂಡಿಸಲಾಗಿದೆ. ಪರಿಶಿಷ್ಟ ಜಾತಿಗಳ ಪಟ್ಟಿಯಿಂದ ತಮ್ಮನ್ನು ಕೈಬಿಡಲಾಗುತ್ತದೆ ಎನ್ನುವ ಆತಂಕ ಈ ಸಮುದಾಯದವರಲ್ಲಿದೆ. ಹಾಗಾಗಿ ಎಲ್ಲ ಸಮುದಾಯಗಳ ಮುಖಂಡರ ಜತೆ ಚರ್ಚಿಸಿ ತಪ್ಪು ಅಭಿಪ್ರಾಯಗಳನ್ನು ನಿವಾರಿಸಿ, ವಿಶ್ವಾಸ ಗಳಿಸಬೇಕು” ಎಂದು ಸಲಹೆ ನೀಡಿದ್ದಾರೆ.

“ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ 101 ಸಮುದಾಯಗಳಲ್ಲಿ ಕೇವಲ ಒಂದು ಸಮುದಾಯ ಮಾತ್ರ ಒಳಮೀಸಲಾತಿ ಕೇಳುತ್ತಿದೆ. ಇದರಿಂದ, ಉಳಿದ 100 ಸಮುದಾಯಗಳ ವಿರೋಧ ಎದುರಿಸಬೇಕಾಗುತ್ತದೆ ಎನ್ನುವ ಅಭಿಪ್ರಾಯವೂ ರಾಜಕೀಯ ಪಕ್ಷಗಳಲ್ಲಿದೆ. ಹಾಗಾಗಿ ರಾಜಕೀಯ ಪಕ್ಷಗಳ ನಾಯಕರಿಗೂ ಸಮುದಾಯದ ಮುಖಂಡರು ಒಳಮೀಸಲಾತಿಯ ಅಗತ್ಯತೆ ಕುರಿತು ಮನವರಿಕೆ ಮಾಡಬೇಕು” ಎಂದು ಸ್ವಾಮೀಜಿ ತಿಳಿಹೇಳಿದರು.

ಸಭೆಯ ಬಳಿಕ ಸಮುದಾಯದ ಪ್ರಮುಖ ನಾಯಕರು ಒಳ ಮೀಸಲಾತಿ ಜಾರಿ ಮತ್ತು ನ್ಯಾ. ಎ ಜೆ ಸದಾಶಿವ ಅವರ ವರದಿ ಜಾರಿಯ ಕುರಿತು ಸಮಾಲೋಚನೆ ನಡೆಸಿ, ಮುಂದಿನ ಆಗಸ್ಟ್‌ 15ರಂದು ದೇಶದ 75ನೇ ಸ್ವಾತಂತ್ರ್ಯೋತ್ಸವದ ದಿನ ಕರಾಳ ದಿನ ಆಚರಿಸುವ ಮೂಲಕ ಪ್ರಬಲ ಸಂದೇಶ ರವಾನಿಸಲು ನಿರ್ಧರಿಸಿದ್ದಾರೆ. ಈ ಬಾರಿ ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣ ಸೇರಿದಂತೆ ದಕ್ಷಿಣದ ಪ್ರಮುಖ ರಾಜ್ಯಗಳ ವ್ಯಾಪ್ತಿಯಲ್ಲಿ ಹೋರಾಟವನ್ನು ತೀವ್ರಗೊಳಿಸಲು ಕೂಡ ಸಭೆ ತೀರ್ಮಾನಿಸಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್