ದಾವಣಗೆರೆ | 'ದಲಿತೆ' ಎಂದು ಮನೆ ಒಳಗೆ ಬಿಡುವುದಿಲ್ಲ, ಹೇಗೆ ಕೆಲಸ ಮಾಡಲಿ?; ಆಶಾ ಕಾರ್ಯಕರ್ತೆ ಕಣ್ಣೀರು

  • ತಹಶೀಲ್ದಾರ್ - ತಾ ಪಂ ಅಧಿಕಾರಿ ಎದುರು ಆಶಾ ಕಾರ್ಯಕರ್ತೆ ಕಣ್ಣೀರು
  • ಅಣಬೂರು ಗ್ರಾ. ಪಂ. ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಘಟನೆ

“ಲಾರ್ವಾ ಸೇರಿದಂತೆ ಇತರೆ ಸಮೀಕ್ಷೆ ಕಾರ್ಯ ಮಾಡಲು ಮನೆ ಮನೆಗೆ ತೆರಳಿದ ವೇಳೆ, ನಾನು ಕೆಳಜಾತಿಯವಳು ಎಂಬ ಕಾರಣಕ್ಕೆ ಮನೆ ಒಳಗೆ ಪ್ರವೇಶ ನೀಡದೆ ಹೊರಗಡೆ ನಿಲ್ಲಿಸುತ್ತಾರೆ. ಹೀಗಾದರೆ ಹೇಗೆ ಕೆಲಸ ಮಾಡಲಿ ಸರ್?” ಎಂದು ಜಗಳೂರು ತಾಲೂಕಿನ ಕಾನನಕಟ್ಟೆ ಗ್ರಾಮದ ಆಶಾ ಕಾರ್ಯಕರ್ತೆಯೋರ್ವರು ತಹಶೀಲ್ದಾರ್ ಮತ್ತು ತಾಲೂಕು ಕಾರ್ಯನಿರ್ವಹಕ ಅಧಿಕಾರಿ ಎದುರು ಕಣ್ಣೀರಿಟ್ಟರು.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಅಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನನಕಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕಾನನಕಟ್ಟೆ ಗ್ರಾಮಸ್ಥರು ನಿಗೂಢ ಜ್ವರದಿಂದ ಬಳಲುತ್ತಿರುವ ಹಿನ್ನೆಲೆ ತಹಶೀಲ್ದಾರ್ ಜಿ ಸಂತೋಷ್ ಕುಮಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಪತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಜಿ ಒ ನಾಗರಾಜ್, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಪೂಜಾರ ಸಿದ್ದಪ್ಪ ಕಾನನಕಟ್ಟೆಗೆ ಭೇಟಿ ನೀಡಿದ್ದರು. ಈ ವೇಳೆ ಆಶಾ ಕಾರ್ಯಕರ್ತೆಯೋರ್ವರು ತಮ್ಮ ನೋವು ವ್ಯಕ್ತಪಡಿಸಿದ್ದಾರೆ.

“ಅಧಿಕಾರಿಗಳು ಕೆಲಸ ಮಾಡಿ ಎಂದು ಹೇಳುತ್ತಾರೆ. ಆದರೆ, ನಾವು ಎಸ್‌ಸಿ ಜನಾಂಗದವರೆಂದು ಸವರ್ಣೀಯರು ಮನೆಯೊಳಗೆ ಪ್ರವೇಶ ನೀಡುತ್ತಿಲ್ಲ. ಹೀಗಾಗಿ ನೀರು ಸಂಗ್ರಹಿಸುವ ತೊಟ್ಟಿಗಳನ್ನು ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿಲ್ಲ. ಸಮೀಕ್ಷೆಯನ್ನೂ ನಡೆಸಲು ಆಗುತ್ತಿಲ್ಲ” ಎಂದು ಕಣ್ಣೀರು ಹಾಕಿದರು. ಇದಕ್ಕೆ ಆರೋಗ್ಯ ಇಲಾಖೆ ಶುಶ್ರೂಶಕಿಯರು ದನಿಗೂಡಿಸಿದರು. ಬಳಿಕ ತಾಲ್ಲೂಕು ಪಂಚಾಯಿತಿ ಇಒ ಲಕ್ಷ್ಮೀಪತಿ ಸಮಾಧಾನಪಡಿಸಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಕನಿ‍‍‍‍‍‍‍ಷ್ಠ ಸೌಕರ್ಯಗಳಿಲ್ಲದೆ ಬದುಕುತ್ತಿವೆ 49 ಆದಿವಾಸಿ ಕುಟುಂಬಗಳು

“ಸಮೀಕ್ಷಾ ಕಾರ್ಯ ನಡೆಯುವ ವೇಳೆ ಗ್ರಾಮಸ್ಥರು ಸಹಕಾರ ನೀಡಬೇಕು. ಗ್ರಾಮಸ್ಥರ ಅಸಹಕಾರದಿಂದ ಸಮಸ್ಯೆ ಎದುರಿಸುತ್ತಿರುವ ಆಶಾ ಕಾರ್ಯಕರ್ತೆಯನ್ನು ಬೇರೆ ಕಡೆ ನಿಯೋಜನೆ ಮಾಡಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗುವುದು" ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ನಾಗರಾಜ್ ತಿಳಿಸಿದರು.

ಆಶಾ ಕಾರ್ಯಕರ್ತೆ ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್