ದಾವಣಗೆರೆ | ಮಾಜಿ ಶಾಸಕ ತಿಪ್ಪೇಸ್ವಾಮಿ ಸಮಾಧಿ ಧ್ವಂಸ; ಆರೋಪಿಗಳ ಬಂಧನಕ್ಕೆ ದಸಂಸ ಪ್ರತಿಭಟನೆ

Davanagere | Former MLA Dr. B M Thippeswamy's samadhi vandalised; Dasansa protest for arrest of accused
  • ಜಮೀನಿನ ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯ
  • ಆರೋಪಿಗಳನ್ನು ಬಂಧಿಸದ ಪೊಲೀಸರು

ದಾವಣಗೆರೆಯ ದಲಿತ ಮುಖಂಡ, ಮಾಜಿ ಶಾಸಕ ಡಾ. ಬಿ.ಎಂ ತಿಪ್ಪೇಸ್ವಾಮಿ ಹಾಗೂ ಅವರ ಕುಟುಂಬದ ಮೂರು ಸದಸ್ಯರ ಸಮಾಧಿಗಳನ್ನು ಅತಿಕ್ರಮಣಕಾರರು ಧ್ವಂಸಗೊಳಿಸಿ, ದೌರ್ಜನ್ಯವೆಸಗುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ದಸಂಸ) ಪ್ರತಿಭಟನೆ ನಡೆಸಿದೆ. 

ದಾವಣಗೆಯಲ್ಲಿರುವ ತಿಪ್ಪೇಸ್ವಾಮಿ ಅವರು ಸಮಾಧಿ ಸ್ಥಳದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ನೂರಾರು ಪ್ರತಿಭಟನಾಕಾರರು, ಉಪವಿಭಾಗಾಧಿಕಾರಿಗೆ ಹಕ್ಕೊತ್ತಾಯ ಸಲ್ಲಿಸಿದ್ದಾರೆ. 

ಪ್ರತಿಭಟನೆಯಲ್ಲಿ ಮಾತನಾಡಿದ ತಿಪ್ಪೇಸ್ವಾಮಿಯವರ ಪುತ್ರಿ ಲೇಖಕಿ ಬಿ.ಟಿ ಜಾಹ್ನವಿ, “ನೊಂದವರಿಗೆ ನ್ಯಾಯ ನೀಡುವ ಬದಲಾಗಿ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ನಕಲಿ ದಾಖಲೆ ಸೃಷ್ಟಿಸಿ ಅನ್ಯಾಯವೆಸಗಲಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

“ನವೆಂಬರ್ 21ರಂದು ಘಟನೆ ನಡೆದಾಗ, ನಾನು ಸ್ಥಳಕ್ಕೆ ಬರುವಷ್ಟರಲ್ಲಿ ಎಲ್ಲ ಸಮಾಧಿಗಳನ್ನು ಧ್ವಂಸಗೊಳಿಸಿದ್ದರು. ಸ್ಥಳದಲ್ಲಿ ಗಣೇಶ್ ಹುಲುಮನೆ ಎಂಬುವವರಿದ್ದರು. 'ಏಕೆ ನಮ್ಮ ತಂದೆಯವರ ಸಮಾಧಿ ಹೊಡೆದಿದ್ದೀರಿ' ಎಂದು ಪ್ರಶ್ನಿಸಿದ್ದಕ್ಕೆ ನಮ್ಮ ಮೇಲೆ ಹಲ್ಲೆಗೆ ಮುಂದಾಗಿದ್ದರು. ಈ ಕುರಿತು ಮರುದಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ದೂರು ನೀಡಿದ್ದೇವೆ. ಆದರೂ, ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಆರೋಪಿಗಳನ್ನೂ ಬಂಧಿಸಿಲ್ಲ” ಎಂದು ದೂರಿದರು.

“ಪೊಲೀಸರು ಅವರ ಬಳಿ 1955ರ ಕಾಲದಿಂದಲೂ ದಾಖಲೆಗಳಿವೆ ಎನ್ನುತ್ತಿದ್ದಾರೆ. ಆದರೆ, ಇದು ಸಿವಿಲ್ ವಿಷಯವಾಗಿದ್ದು ನಾವು ಕೋರ್ಟ್‌ನಲ್ಲಿ ಅದನ್ನು ಪರಿಹರಿಸಿಕೊಳ್ಳುತ್ತೇವೆ. ಆದರೆ, ಇಲ್ಲಿ ನಮ್ಮ ತಂದೆಯವರು ಸೇರಿದಂತೆ ನಮ್ಮ ಕುಟುಂಬದ ನಾಲ್ವರ ಸಮಾಧಿಗಳಿವೆ. ಇಷ್ಟು ಸಮಾಧಿಗಳನ್ನು ನಾವು 1990ರಿಂದ ಕಟ್ಟುವಾಗ ಅವರು ದಾಖಲೆಗಳಿದ್ದರೂ ಏಕೆ ಸುಮ್ಮನಿದ್ದರು?” ಎಂದು ಪ್ರಶ್ನಿಸಿದ್ದಾರೆ.

“ಜಮೀನಿನ ಖಾತೆ ನಮ್ಮ ಅಣ್ಣನ ಹೆಸರಿನಲ್ಲಿದೆ. ನಾವು ಇದುವರೆಗೂ ಕಂದಾಯವನ್ನೂ ಕಟ್ಟುತ್ತಿದ್ದೇವೆ. 2012ರವರೆಗೂ ಪಹಣಿ ಅವರ ಹೆಸರಿನಲ್ಲಿತ್ತು. ಆದರೆ, 2013ರಲ್ಲಿ ಪಹಣಿಯನ್ನು ರವಿಕುಮಾರ್ ಎಂಬುವವರ ಹೆಸರಿಗೆ ಹೇಗೆ ಮಾಡಲಾಗಿದೆ ಎಂಬುದು ನಮಗೆ ಗೊತ್ತಿಲ್ಲ. ಇದನ್ನು ಪರೀಶಿಲೀಸಬೇಕು. ನಕಲಿ ದಾಖಲೆ ಸೃಷ್ಟಿಸಿದವರು ಮತ್ತು ಅದರಲ್ಲಿ ಭಾಗಿಯಾದ ಅಧಿಕಾರಿಗಳಿಗೂ ಶಿಕ್ಷೆಯಾಗಬೇಕು” ಎಂದು ಒತ್ತಾಯಿಸಿದರು.

ಈ ಸುಸದ್ದಿ ಓದಿದ್ದೀರಾ?: ಡಾ ಬಿ ಎಂ ತಿಪ್ಪೇಸ್ವಾಮಿಯವರ ಸಮಾಧಿ ಧ್ವಂಸ ಪ್ರಕರಣ ಖಂಡಿಸಿ ನ.24ಕ್ಕೆ ಪ್ರತಿಭಟನೆ

“ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದು ಬಿದ್ದಿದೆ. ಒಂದು ಬಲಿಷ್ಠ ಸರ್ಕಾರವಿದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಹಾಗಾಗಿ ಈ ದುರ್ಘಟನೆಗೆ ಸರ್ಕಾರವೇ ನೇರ ಕಾರಣವಾಗಿದೆ. ಸಮಾಧಿ ಧ್ವಂಸಮಾಡಿ ಮೂರು ದಿನವಾದರೂ ಈವರೆಗೆ ಏಕೆ ಆರೋಪಿಗಳ ಬಂಧನವಾಗಿಲ್ಲವೆಂದು ಅರ್ಥವಾಗುತ್ತಿಲ್ಲ” ಎಂದು ಹಿಂದುಳಿದ ವರ್ಗಗಳ ಶಾಶ್ವಾತ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕನಾಥ್‌ ಅಸಮಾಧಾನ ವ್ಯಕ್ತಪಡಿಸಿದರು.

"ಕೂಡಲೇ ಆರೋಪಿಗಳ ಬಂಧನವಾಗಬೇಕು. ಇದೇ ಜಾಗದಲ್ಲಿ ಡಾ.ತಿಪ್ಪೇಸ್ವಾಮಿ ಮತ್ತು ಅವರ ಕುಟುಂಬದವರ ಸಮಾಧಿಯನ್ನು ಮರುನಿರ್ಮಾಣ ಮಾಡಬೇಕು. ಜೊತೆಗೆ ಇಂತಹ ತಪ್ಪಿಗಾಗಿ ನಾಡಿನ ಕ್ಷಮೆ ಕೇಳಬೇಕು” ಎಂದು ಒತ್ತಾಯಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180