ದಾವಣಗೆರೆ | ಎಫ್‌ಆರ್‌ಪಿ ದರ ಖಂಡಿಸಿ ಕಬ್ಬು ಬೆಳೆಗಾರರಿಂದ ರಾಜ್ಯಾದ್ಯಂತ ಪ್ರತಿಭಟನೆ

  • ಪ್ರತಿ ಟನ್ ಕಬ್ಬಿಗೆ 3,050 ರೂ.ಗಳ ಎಫ್ಆರ್‌ಪಿ ಘೋಷಣೆ
  • 150 ರೂ. ಎಫ್‌ಆರ್‌ಪಿ ಹೆಚ್ಚಿಸಿರುವುದು ರೈತರ ಕಣ್ಣೊರೆಸುವ ತಂತ್ರ

ಕೇಂದ್ರ ಸರ್ಕಾರ ಕಬ್ಬು ಬೆಳೆಗೆ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರವನ್ನು (ಎಫ್ಆರ್‌ಪಿ) 10.25ರಷ್ಟು ಸಕ್ಕರೆ ಉತ್ಪಾದನೆಯಾಗಬಲ್ಲ ಪ್ರತಿ ಟನ್ ಕಬ್ಬಿಗೆ 3,050 ರೂ.ಗಳನ್ನು ಘೋಷಿಸಿದೆ. ಈ ಅವೈಜ್ಞಾನಿಕ ದರವನ್ನು ಖಂಡಿಸಿ ಆಗಸ್ಟ್ 12ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಉಪಾಧ್ಯಕ್ಷ ತೇಜಸ್ವಿ ವಿ ಪಟೇಲ್ ಹೇಳಿದ್ದಾರೆ.

ದಾವಣಗೆರೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಈ ವರ್ಷ ಕೇವಲ 150 ರೂ. ಎಫ್‌ಅರ್‌ಪಿಯನ್ನು ಹೆಚ್ಚಿಸಲಾಗಿದೆ. ಕಟಾವು ಸೇರಿದಂತೆ ಒಂದು ಟನ್ ಕಬ್ಬಿನ ಉತ್ಪಾದನೆಗೆ 500 ರೂ.ಗಿಂತ ಹೆಚ್ಚಿನ ವೆಚ್ಚವಾಗಿದೆ. ಆದರೆ, ಸರ್ಕಾರ 150 ರೂ.ಗೆ ಎಫ್‌ಆರ್‌ಪಿ ಹೆಚ್ಚಿಸಿರುವುದು ರೈತರ ಕಣ್ಣೊರೆಸುವ ತಂತ್ರವಷ್ಟೇ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಫ್‌ಆರ್‌ಪಿ ಹೆಚ್ಚಳಕ್ಕೆ ಸಂಬಂಧಿಸಿದಂತೆ  ದಿನ.ಕಾಮ್‌ನೊಂದಿಗೆ ಮಾತನಾಡಿದ ತೇಜಸ್ವಿ ವಿ ಪಟೇಲ್, “9.5ರಷ್ಟು ಸಕ್ಕರೆ ಇಳುವರಿ ತರುವ ಪ್ರತಿ ಟನ್‌ ಕಬ್ಬಿಗೆ 3,500 ರೂ. ಎಫ್‌ಆರ್‌ಪಿ ನಿಗದಿಯಾಗಿದ್ದರೆ ಕಬ್ಬು ಬೆಳೆಗಾರರು ತುಸು ನಿಟ್ಟುಸಿರು ಬಿಡಬಹುದಿತ್ತು. ಆದರೆ, ಸರ್ಕಾರ 10.25ರಷ್ಟು ಕನಿಷ್ಟ ಸಕ್ಕರೆ ಇಳುವರಿ ಹೊಂದಿರುವ ಪ್ರತಿ ಟನ್ ಕಬ್ಬಿಗೆ 3,050 ರೂ. ನಿಗದಿ ಮಾಡಿದೆ. ಇದರಿಂದಾಗಿ ರೈತರು ನಷ್ಟ ಅನುಭವಿಸುವಂತಾಗಿದೆ" ಎಂದು ದೂರಿದ್ದಾರೆ.

"ಕನಿಷ್ಟ ಸಕ್ಕರೆ ಇಳುವರಿ 9.5ರಷ್ಟಿದ್ದಾಗ 2,825 ರೂ. ಎಫ್‌ಆರ್‌ಪಿ ಸಿಗುತ್ತಿತ್ತು. ಪ್ರಸ್ತುತ ಸಕ್ಕರೆ ಇಳುವರಿ ಪ್ರಮಾಣವನ್ನು 10.25ರಷ್ಟಕ್ಕೆ ಹೆಚ್ಚಿಸಲಾಗಿದೆ ಮತ್ತು 3,050 ರೂ. ಎಫ್‌ಆರ್‌ಪಿ ದರ ಹೆಚ್ಚಿಸಿದೆ. ಇದರಿಂದ ರೈತರಿಗೆ ನಷ್ಟವಾಗಲಿದೆಯೇ ಹೊರತು, ಯಾವುದೇ ಲಾಭದಾಯಕವಾಗಿಲ್ಲ" ಎಂದು ತಿಳಿಸಿದ್ದಾರೆ.

"ಈ ಹಿನ್ನೆಲೆಯಲ್ಲಿ 9.5ರಷ್ಟು ಕನಿಷ್ಟ ಸಕ್ಕರೆ ಇಳುವರಿಯ ಪ್ರತಿ ಟನ್‌ ಕಬ್ಬಿಗೆ 3,500 ರೂ. ಎಫ್‌ಆರ್‌ಪಿ ದರ ಹೆಚ್ಚಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುವುದು” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಹಾವೇರಿ | ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದ ಬ್ಯಾಡಗಿ ಮೆಣಸಿನಕಾಯಿ

"ಪ್ರತಿ ಕೃಷಿ ಉತ್ಪನ್ನಗಳಿಗೂ ಸರ್ಕಾರ ಜಿಎಸ್‌ಟಿ ವಿಧಿಸಿದ್ದು, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚ ಹೆಚ್ಚಿಸುತ್ತಿದೆ. ಎಲ್ಲ ಕ್ಷೇತ್ರಗಳಿಗೂ ಜಿಎಸ್‌ಟಿ ವಿಧಿಸಿ ತೆರಿಗೆ ಸಂಗ್ರಹಿಸಲು ಕೇಂದ್ರ ಸರ್ಕಾರ ಮುಂದಾಗಿರುವುದು ಆಡಳಿತ ವೈಫಲ್ಯವನ್ನು ತೋರುತ್ತದೆ” ಎಂದು ಆರೋಪಿಸಿದ್ದಾರೆ.

ಮಾಸ್ ಮೀಡಿಯಾ ದಾವಣಗೆರೆ ಜಿಲ್ಲಾ ಸಂಯೋಜಕ ವಿನಾಯಕ್ ಮಾಹಿತಿ ಆಧರಿಸಿದ ವರದಿ
ನಿಮಗೆ ಏನು ಅನ್ನಿಸ್ತು?
1 ವೋಟ್