ದಾವಣಗೆರೆ | ಶಿಥಿಲಾವಸ್ಥೆಗೆ ತಲುಪಿದ 50 ವರ್ಷಗಳಷ್ಟು ಹಳೆಯ ಸರ್ಕಾರಿ ಶಾಲೆ ; ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸ್ಥರ ಆಕ್ರೋಶ

Davanagere
  • ಭಾರೀ ಮಳೆಗೆ ಛಾವಣಿಯ ಹಂಚಿಗೆ ಹಾನಿ
  • ಮಳೆಯಿಂದ ಬಿರುಕು ಬಿಟ್ಟ ಗೋಡೆ

ದಾವಣಗೆರೆ ಜಿಲ್ಲೆಯ ಅಣಬೇರು ಗ್ರಾಮದಲ್ಲಿರುವ 50 ವರ್ಷಗಳಷ್ಟು ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆಗೆ ತಲುಪಿದೆ. ಮಳೆಗೆ ಶಾಲೆಯ ಮೇಲ್ಛಾವಣಿಯ ಹಂಚುಗಳು ಕಿತ್ತು ಹೋಗಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕೆ  ತೊಂದರೆಯಾಗಿದೆ.

ಈ ಶಾಲೆಯಲ್ಲಿ 1ರಿಂದ 7 ತರಗತಿಯವರೆಗೆ ಸುಮಾರು 181 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಒಂಬತ್ತು ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 

ಕಳೆದ ಕೆಲವು ದಿನಗಳ ಹಿಂದೆ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ಛಾವಣಿಯ ಹಂಚುಗಳಿಗೆ ಹಾನಿಯಾಗಿವೆ. ಕಟ್ಟಡದಲ್ಲಿರುವ ಏಳು ಕೊಠಡಿಗಳ ಪೈಕಿ ನಾಲ್ಕು ಕೊಠಡಿಗಳು ತೀವ್ರವಾಗಿ ಹಾನಿಗೀಡಾಗಿವೆ. ತರಗತಿ ಕೊಠಡಿಗಳ ಗೋಡೆಗಳು ತೇವಗೊಂಡಿದ್ದು, ವಿವಿಧೆಡೆ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಪೋಷಕರು ಅಸಮಾಧಾನ ಹೊರಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಕನ್ನಡ ಶಾಲೆಗಳ ಉಳಿವಿಗಾಗಿ ನ್ಯಾಯಾಲಯ ಮೆಟ್ಟಿಲು ಹತ್ತಲು ಸಿದ್ಧ: ಕಸಾಪ ಅಧ್ಯಕ್ಷ ಮಹೇಶ ಜೋಶಿ‌ ಎಚ್ಚರಿಕೆ

ಈ ಬಗ್ಗೆ ಈ ದಿನ.ಕಾಮ್‌ ಜೊತೆ ಮಾತನಾಡಿದ ಕರ್ನಾಟಕ ಜನಶಕ್ತಿ ಸಂಘಟನೆಯ ಕಾರ್ಯಕರ್ತ ಸತೀಶ್, “ಶಾಲೆಯ ಏಳು ಕೊಠಡಿಗಳಲ್ಲಿ ನಾಲ್ಕು ಕೊಠಡಿಗಳು ಹಾನಿಯಾಗಿದ್ದು, ಆ ಕೊಠಡಿಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸುತ್ತಿಲ್ಲ. ಅದಕ್ಕಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಶಾಲೆಯ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನ ತಂದಿದ್ದಾರೆ ” ಎಂದು ಹೇಳಿದ್ದಾರೆ.

“ಭಾರೀ ಮಳೆಯಾದರೆ ಮಳೆ ನೀರು ನೇರವಾಗಿ ಕೊಠಡಿಗಳಿಗೆ ನುಗ್ಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳು ಕಲಿಯಲು ಹೇಗೆ ಸಾಧ್ಯ?" ಎಂದು ಗ್ರಾಮಸ್ಥರು ಎಂದು ಕೇಳಿದ್ದಾರೆ. 

ಇತ್ತೀಚೆಗೆ ಶಾಲೆಗೆ ಭೇಟಿ ನೀಡಿದ ದಾವಣಗೆರೆ ತಾಲೂಕು ಉಪ ತಹಶೀಲ್ದಾರ್ ರಾಮಸ್ವಾಮಿ, ಶಾಲೆಯ ಸ್ಥಿತಿಗತಿಗಳ ಬಗ್ಗೆ ಅವಲೋಕನ ನಡೆಸಿದ್ದಾರೆ. ಉನ್ನತಾಧಿಕಾರಿಗಳಿಗೆ ವರದಿ ಸಲ್ಲಿಸಿ ಶೀಘ್ರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

ಶಾಲಾ ಕಟ್ಟಡದ ದುಸ್ಥಿತಿಯ ಬಗ್ಗೆ ಗಮನ ಹರಿಸದ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್