ದಾವಣಗೆರೆ | ದಲಿತ ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Dalit
  • ಎರಡು ದಿನ ಕಲ್ಯಾಣ ಮಂಟಪದಲ್ಲಿ ಕೂಡಿಟ್ಟು ಚಿತ್ರಹಿಂಸೆ
  • ಅರೆಬೆತ್ತಲೆಗೊಳಿಸಿ ಮೆರವಣಿಗೆ ಮಾಡಿ ಜಾತಿ ದೌರ್ಜನ್ಯ

ಮೇಲ್ಜಾತಿಯ ಯುವತಿಗೆ ಮೆಸೇಜ್‌ ಕಳಿಸಿದ ಎಂಬ ಕಾರಣಕ್ಕಾಗಿ ದಲಿತ ಯುವಕನನ್ನು ಮಾರಣಾಂತಿಕವಾಗಿ ಥಳಿಸಿರುವ ಘಟನೆ ದಾವಣೆಗೆರೆ ತಾಲೂಕಿನಲ್ಲಿ ನಡೆದಿದೆ. ಈ ಸಂಬಂಧ ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಲೂಕಿನ ಅತ್ತಿಗೆರೆ ಗ್ರಾಮದ 20 ವರ್ಷದ ಯುವಕ ಗಣೇಶ್‌ನನ್ನು  ಅರೆಬೆತ್ತಲೆಗೊಳಿಸಿ, ಗ್ರಾಮದಲ್ಲಿ ಮೆರವಣಿಗೆ ಮಾಡಲಾಗಿದೆ. ಈ ಅಮಾನವೀಯ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಘಟನೆಯ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಊರಿನ ಮೇಲ್ಜಾತಿಯ ಯುವತಿಗೆ ದಲಿತ ಯುವಕ ಗಣೇಶ್‌ ಮೆಸೇಜ್‌ ಮಾಡಿದ್ದಾನೆ ಎಂದು ಆರೋಪಿಸಿ, ಗ್ರಾಮ ಪಂಚಾಯತ್ ಸದಸ್ಯ, ಬಾಬಣ್ಣ ಮತ್ತು ಆತನ ಸಹಚರರಾದ ಕಾರ್ತಿಕ್‌ ಹಾಗೂ ಹರೀಶ್‌ ಎಂಬವರು ಹಲ್ಲೆ ನಡೆಸಿದ್ದಾರೆ. ಗಣೇಶ್‌ನನ್ನು ಕಲ್ಯಾಣ ಮಂಟಪವೊಂದರಲ್ಲಿ ಎರಡು ದಿನಗಳ ಕಾಲ ಕೂಡಿಟ್ಟು, ಚಿತ್ರಹಿಂಸೆ ನೀಡಿದ್ದಾರೆ. ಅಲ್ಲದೆ, ಗ್ರಾಮದಲ್ಲಿ ಅರೆಬೆತ್ತಲೆ ಮೆರವಣಿಗೆ ಮಾಡಿದ್ದಾರೆ ಎಂದು ದೂರಲಾಗಿದೆ.

ಘಟನೆಯ ಬಳಿಕ ಯುವಕನ ಸಂಬಂಧಿಕರು ಮಾಯಕೊಂಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ (ಅಟ್ರಾಸಿಟಿ) ಅಡಿಯಲ್ಲಿ ಎಫ್‌ಐಆರ್‍‌ ದಾಖಲಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ?: 40% ಕಮಿಷನ್ | ಪ್ರಧಾನಿಗೆ ಪತ್ರ ಬರೆದಿದ್ದ ಗುತ್ತಿಗೆದಾರನ ವಿರುದ್ದ ಪ್ರಕರಣ ದಾಖಲು

ಪ್ರಕರಣ ಕುರಿತು 'ಈ ದಿನ.ಕಾಮ್' ಜೊತೆಗೆ ಮಾತನಾಡಿದ ಮಾಯಕೊಂಡ ಪೊಲೀಸ್‌ ಠಾಣೆಯ ಎಸ್‌ಐ, "ಆರೋಪಿಗಳ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಲಾಗಿದೆ. ಈವರೆಗೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಇಬ್ಬರ ಬಂಧನಕ್ಕೆ ಶೋಧ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ. 

ಯುವತಿಯೇ ಗಣೇಶನಿಗೆ ಮೊದಲ ಮೆಸೇಜ್‌ ಮಾಡಿದ್ದಾಗಿ, ದಲಿತ ಯುವಕನ ಮೊಬೈಲ್‌ ಪರಿಶೀಲಿಸಿದಾಗ ತಿಳಿದು ಬಂದಿದೆ. ಇದರಲ್ಲಿ ತಮ್ಮ ಮಗನದ್ದೇನೂ ತಪ್ಪಿಲ್ಲ ಎಂದು ಗಣೇಶನ ಪೋಷಕರು ಹೇಳಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್