ದಾವಣಗೆರೆ | ಖಾಸಗಿ ಆಸ್ಪತ್ರೆಯಲ್ಲಿ ಮಹಿಳೆ ಸಾವು; ವೈದ್ಯರ ನಿರ್ಲಕ್ಷ್ಯದ ಆರೋಪ

  • ಆಸ್ಪತ್ರೆ ಮುಂದೆ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ 
  • ಆಸ್ಪತ್ರೆಯೊಂದಿಗೆ ಪೊಲೀಸರು ಶಾಮೀಲಾಗಿರುವ ಆರೋಪ

ವೈದ್ಯರ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿ ರೋಗಿಗಳು ಸಾವನ್ನಪ್ಪುತ್ತಿದ್ದಾರೆ ಎಂಬ ಆರೋಪಗಳು ಇತ್ತೀಚೆಗೆ ಹೆಚ್ಚಾಗಿವೆ. ಕೆಲವು ವಾರಗಳ ಹಿಂದೆ, ತುಮಕೂರಿನ ಸರ್ಕಾರಿ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ಅವಳಿ ಕೂಸುಗಳು ಸಾವನ್ನಪ್ಪಿದ್ದವು. ಆ ಘಟನೆ ಮಾಸುವ ಮುನ್ನವೇ, ವೈದ್ಯರ ನಿರ್ಲಕ್ಷಕ್ಕೆ ದಾವಣಗೆರೆಯಲ್ಲಿ ಮತ್ತೊಂದು ಜೀವ ಬಲಿಯಾಗಿದೆ ಎನ್ನಲಾಗಿದೆ. ಹೊಟ್ಟೆನೋವಿನ ತಪಾಸಣೆಗೆಂದು ದಾಖಲಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. 

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಹುಚ್ಚಂಗಿಪುರ ಗ್ರಾಮದ ನಾಗರತ್ನಮ್ಮ (46) ಮೃತ ಮಹಿಳೆ. ಅವರು ನವಂಬರ್ 7ರಂದು ಹೊಟ್ಟೆ ನೋವಿನ ತಪಾಸಣೆಗಾಗಿ ದಾವಣಗೆರೆಯ ಸಂಜೀವಿನಿ ಎಂಬ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

Eedina App

ತಪಾಸಣೆ ನಡೆಸಿದ ವೈದ್ಯರು ‘ಹೊಟ್ಟೆಯಲ್ಲಿ ಗೆಡ್ಡೆ ಇದೆ, ಶಸ್ತ್ರ ಚಿಕಿತ್ಸೆ ಮಾಡಬೇಕು; ಎಂದಿದ್ದರು. ಆಸ್ಪತ್ರೆಗೆ ದಾಖಲು ಮಾಡಿಕೊಂಡಿದ್ದರು. ಆದರೆ, ಮಾರನೇ ದಿನ (ನ.8) ಶಸ್ತ್ರಚಿಕಿತ್ಸೆಯನ್ನೇ ನಡೆಸದ ವೈದ್ಯರು, ‘ಇನ್ನು ಯಾವುದೇ ಅಪಾಯವಿಲ್ಲ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮುಗಿದಿದೆ, ನೀವು ಎರಡು ದಿನದ ನಂತರ ಊರಿಗೆ ಹೋಗಬಹುದು' ಎಂದಿದ್ದರು. ಆಸ್ಪತ್ರೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದ ನಾಗರತ್ನಮ್ಮಗೆ ನವಂಬರ್ 10ರ ಬೆಳಿಗ್ಗೆ ಮತ್ತೆ ವಿಪರೀತ ನೋವು ಕಾಣಿಸಿಕೊಂಡಿದೆ. ಆ ಸಮಯದಲ್ಲಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ಕೊನೆ ಉಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ನಾಗರತ್ನಮ್ಮ ಅವರನ್ನು ಕಳೆದುಕೊಂಡ ಕುಟುಂಬಸ್ಥರು, “ಆಸ್ಪತ್ರೆಯಲ್ಲಿ ರೋಗಿಯನ್ನು ದಾಖಲು ಮಾಡಿಕೊಂಡು ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡಿಲ್ಲ. ವೈದ್ಯರು ನಿರ್ಲಕ್ಷ್ಯರಿಂದ ನಾಗರತ್ನಮ್ಮ ಸಾವನ್ನಪ್ಪಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

AV Eye Hospital ad

ಪ್ರಕರಣ ಬೆಳಕಿಗೆ ಬಾರದಂತೆ ಮುಚ್ಚಿಹಾಕಲು ಯತ್ನಿಸಿರುವ ಆಸ್ಪತ್ರೆ ಸಿಬ್ಬಂದಿ, “ನೀವು ಯಾವುದೇ ಚಿಕಿತ್ಸಾ ವೆಚ್ಚವನ್ನು ಆಸ್ಪತ್ರೆಗೆ ತುಂಬುವ ಅಗತ್ಯವಿಲ್ಲ. ಆಂಬ್ಯಲೇನ್ಸ್ ವ್ಯವಸ್ಥೆ ಕೂಡ ನಾವೇ ಮಾಡುತ್ತೇವೆ. ಮೃತದೇಹವನ್ನು ತೆಗೆದುಕೊಂಡು ಹೋಗಿ" ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ.

ಆಸ್ಪತ್ರೆಯವರ ಮಾತಿಗೆ ಒಪ್ಪದ ಕುಟುಂಬಸ್ಥರು, ಆಸ್ಪತ್ರೆಯ ಎದುರು ಮೃತದೇವಿಟ್ಟು ಪ್ರತಿಭಟನೆ ನಡೆಸಿದ್ದಾರೆ. “ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದು, ಇದರ ಬಗ್ಗೆ ತನಿಖೆ ಆಗಬೇಕು” ಎಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದವರನ್ನು ಆಸ್ಪತ್ರೆ ಗೇಟ್‌ನಿಂದ ಹೊರದೂಡಲು ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಸೇರಿ ಪೊಲೀಸರು ಯತ್ನಿಸಿದ್ದಾರೆ. ಮೃತ ಮಹಿಳೆಯ ಕುಟುಂಬದ ಸದಸ್ಯರ ಮೇಲೆ ದೌರ್ಜನ್ಯ ಎಸಗಿ, ಕುಟುಂಬಸ್ಥರನ್ನು ಬಂಧಿಸಿದ್ದಾರೆ ಎಂದು ಆರೋಪಿಸಲಾಗಿದೆ. 

ಈ ಸುದ್ದಿ ಓದಿದ್ದೀರಾ?: ಶಿಕ್ಷಕರ ವರ್ಗಾವಣೆ ತಿದ್ದುಪಡಿ ಪ್ರಕಟ; ಆಕ್ಷೇಪಣೆ ಸಲ್ಲಿಸಲು ಅವಕಾಶ

ಘಟನೆ ಬಗ್ಗೆ ರೈತ ಸಂಘದ ಮುಖಂಡ ರವಿ ಉಚ್ಚಂಗಿಪುರ ಮಾತನಾಡಿ, “ಮೃತ ಮಹಿಳೆಯ ಶವವನ್ನು ಪೋಸ್ಟ್ ಮಾರ್ಟಂ ನಡೆಸಿ ಅಂತ್ಯಕ್ರಿಯೆ ಮಾಡಲಾಗಿದೆ. ಫೋಸ್ಟ್ ಮಾರ್ಟಮ್ ವರದಿ ಇನ್ನಷ್ಟೇ ಬರಬೇಕಾಗಿದೆ. ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ರೋಗಿಗಳ ಹಣ ದೋಚುವ ಕೇಂದ್ರಗಳಾಗಿದ್ದು, ಸರಿಯಾದ ವ್ಯವಸ್ಥೆ ಇಲ್ಲದೆ ರೋಗಿಗಳು ನರಳುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ವೈದ್ಯರು ಮತ್ತು ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ರೋಗಿಗಳು ಸಾವನ್ನಪ್ಪಿದರೆ, ಆಸ್ಪತ್ರೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಆಸ್ಪತ್ರೆಯೊಂದಿಗೆ ಪೊಲೀಸರೂ ಶಾಮೀಲಾಗಿದ್ದಾರೆ. ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app