ದಾವಣಗೆರೆ | ಕೃಷಿಯಲ್ಲಿ ಖುಷಿ ಕಾಣುತ್ತಿರುವ ‘ಟೊಮ್ಯಾಟೊ ಬಾಷಾ’ ಮಗ ತರಕಾರಿ ಜಫ್ರುಲ್ಲಾ!

ಹಾಗಲಕಾಯಿ
  • ಒಂದು ಕ್ವಿಂಟಾಲ್‌ ಹಾಗಲಕಾಯಿಗೆ ₹ 3000- ₹ 3,500 ಬೆಲೆ ಸಿಗುತ್ತಿದೆ
  • ರೈತ ಎಂದ ಮೇಲೆ ಲಾಭ-ನಷ್ಟ ಇದ್ದದ್ದೇ; ಒಮ್ಮೆ ಕೈ ಕೊಟ್ಟರೆ ಮತ್ತೊಮ್ಮೆ ಕೈ ಹಿಡಿಯತ್ತೆ

ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಆದಾಗ್ಯೂ ಛಲ ಬಿಡದೆ ನಂಬಿದ ಭೂಮಿಯಲ್ಲಿ ದುಡಿದ ಅನೇಕ ಮಂದಿ ರೈತರು ಕೃಷಿಯಲ್ಲಿ ಯಶ ಕಾಣುತ್ತಿದ್ದಾರೆ. ದಾವಣಗೆರೆಯ ಜಫ್ರುಲ್ಲಾ ಅಂಥವರ ಪೈಕಿ ಒಬ್ಬರು.

ದಾವಣಗೆರೆ ಜಿಲ್ಲೆ ಬಸವಾಪಟ್ಟಣದ ಪ್ರಗತಿಪರ ರೈತ ಜಫ್ರುಲ್ಲಾಗೆ ಇರುವುದೇ ಮೂರು ಮೂರು ಎಕರೆ ಭೂಮಿ. ಅದರ ಜೊತೆಗೆ ಅವರು ಹಲವಾರು ವರ್ಷದಿಂದ ಐದು ಎಕರೆ ಕೃಷಿ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದಾರೆ.

Eedina App

ಜಫ್ರುಲ್ಲಾ ತಂದೆ ಅನ್ವರ್‌ ಬಾಷಾ ಕೂಡ ನಿರಂತರವಾಗಿ 50 ವರ್ಷಗಳ ಕಾಲ ತರಕಾರಿ ಬೆಳೆದು ಉತ್ತಮ ಬದುಕು ನಡೆಸಿದವರು. ತಾಲೂಕಿನಾದ್ಯಂತ ‘ಟೊಮ್ಯಾಟೊ ಬಾಷಾ’ ಎಂದೇ ಪ್ರಸಿದ್ಧರಾಗಿದ್ದವರು. ಈಗ ಅವರ ಮಗ ಕೂಡ ಕೃಷಿಯಲ್ಲಿ ಖುಷಿ ಕಾಣುತ್ತಿದ್ದಾರೆ.

ʼಸೆಕೆಟಾʼ ಎಂಬ ಕಂಪನಿಯ ಮೋನಿಕಾ ಎಂಬ ಹಾಗಲಕಾಯಿ, ಬದನೆಕಾಯಿ, ಟೊಮ್ಯಾಟೊ ಸೇರಿದಂತೆ 50-60 ದಿನಗಳಲ್ಲಿ ಫಲ ಕೊಡುವ ಹಲವು ಬೆಳೆಗಳನ್ನು ಕೃಷಿ ಮಾಡಿದ್ದು, ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಕುರಿತು ಈ ದಿನ.ಕಾಮ್‌ನೊಂದಿಗೆ ಜಫ್ರುಲ್ಲಾ ತಮ್ಮ ಅನುಭವ ಹಂಚಿಕೊಂಡರು. 

AV Eye Hospital ad

"ನಮ್ಮ ತಂದೆ ಕಾಲದಿಂದ ಕೃಷಿಯೇ ನಮಗೆ ಆಧಾರ. 3 ಎಕರೆ ಜಮೀನಿಗೆ ಅಡಿಕೆ ಬೆಳೆ ಹಾಕಿದ್ದು, ಗುತ್ತಿಗೆಗೆ ಐದು ಎಕರೆ ಭೂಮಿ ಪಡೆದು ಹಾಗಲಕಾಯಿ, ಬದನೆಕಾಯಿ, ಟೊಮ್ಯಾಟೊ ಹಾಕಿದ್ದು, ಎಕರೆಗೆ ₹ 40,000 ದಂತೆ ಖರ್ಚು ಮಾಡಿದ್ದೇನೆ. ಇದುವರೆಗೂ ಒಂದು ಕ್ವಿಂಟಾಲ್‌ ಹಾಗಲಕಾಯಿಗೆ ₹ 3000- ₹ 3,500 ತನಕ ಬೆಲೆ ಸಿಕ್ಕಿದೆ. ಹಾಗಾಗಿ ಈ ಸಲದ ಫಸಲಿನಿಂದ ಸುಮಾರು ₹ 5 ಲಕ್ಷದವರೆಗೂ ಲಾಭ ನಿರೀಕ್ಷಿಸಿದ್ದೇನೆ" ಎಂದರು.

"ಒಂದು ʼಟಾಟಾ ಎಸಿʼ ಮತ್ತೆರೆಡು ʼಆಫೆʼ ಗಾಡಿಗಳಿದ್ದು, ಹತ್ತಿರದ ಕೃಷಿ ಮಾರುಕಟ್ಟೆಗೆ ತರಕಾರಿ ಹಾಕುತ್ತೇನೆ. ಈಗ ನಾವು ಬೆಳೆದಿರುವ ಹಾಗಲಕಾಯಿ ಗಾತ್ರದಲ್ಲಿ ಉತ್ತಮವಾಗಿದೆ. ದಾವಣಗೆರೆ, ಹೊನ್ನಾಳಿ, ಶಿವಮೊಗ್ಗ, ಶಿಕಾರಿಪುರ ಸಗಟು ತರಕಾರಿ ಮಳಿಗೆಗಳು, ಸ್ಥಳೀಯ ವ್ಯಾಪಾರಿಗಳು ಹಾಗೂ ಸಂತೆ ವ್ಯಾಪಾರಿಗಳಿಗೂ ತರಕಾರಿ ಮಾರುತ್ತಿದ್ದೇವೆ. ಕಳೆದ ಸಲ ಮಾಡಿದ್ದ ಬಿತ್ತನೆ ಮಳೆಯಿಂದ ಹಾಳಾಗಿತ್ತು. ಆದರೆ ಈ ಬಾರಿ ಬೆಳೆ ಚೆನ್ನಾಗಿ ಬಂದಿದೆ" ಎಂದು ನಿಟ್ಟುಸಿರು ಬಿಟ್ಟರು.

ರೈತ ಜಫ್ರುಲ್ಲಾ
ಬೆಳೆಯೊಂದಿಗೆ ರೈತ ಜಫ್ರುಲ್ಲಾ

ತಂದೆ ಕಾಲದಿಂದಲೂ ಇತರ ರೈತರ ಜಮೀನನ್ನು ಗುತ್ತಿಗೆ ಪಡೆದು ಟೊಮ್ಯಾಟೋ ಬೆಳೆಯುತ್ತಿದ್ದೆವು. ಎರಡ್ಮೂರು ವರ್ಷಕೊಮ್ಮೆ ಮಾತ್ರ ಟೊಮ್ಯಾಟೋ ಕೈ ಹಿಡಿಯುತ್ತಿತ್ತು. ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿತ್ತು. ರೈತ ಎಂದ ಮೇಲೆ ನಷ್ಟ ಇದ್ದದ್ದೆ. ಒಂದು ಬೆಳೆ ಕೈ ಕೊಟ್ಟರೆ ಮತ್ತೊಂದು ಕೈ ಹಿಡಿಯುತ್ತದೆ. ಹಾಗಾಗಿ ಕೆಲವು ವರ್ಷಗಳಿಂದ ಬೇಡಿಕೆಯಿರುವ ಹಾಗಲಕಾಯಿಯನ್ನು ಬೆಳೆಯುತ್ತಿದ್ದು, ಸಹೋದರ ಇನಾಯತ್‌ ಉಲ್ಲಾ ಹಾಗೂ ನಮ್ಮ ಕುಟುಂಬ ತುಂಬಾ ಸಹಕಾರ ನೀಡುತ್ತಿದೆ" ಎಂದು ಜಫ್ರುಲ್ಲಾ ತಮ್ಮ ಕೃಷಿ ಬದುಕನ್ನು ವಿವರಿಸಿದರು.

ಈ ಸುದ್ದಿ ಓದಿದ್ದೀರಾ? ಮಂಡ್ಯ | ರೈತರ ಸಭೆ ನಡೆಸುವ ತಾಕತ್ತು ಮುಖ್ಯಮಂತ್ರಿಗೆ ಯಾಕಿಲ್ಲ: ರೈತರ ಆಕ್ರೋಶ

ಜಫ್ರುಲ್ಲಾ ಹಾಗಲಕಾಯಿ ಕೃಷಿ ಮಾಡುವ ವಿಧಾನ

ಮೋನಿಕಾ ಹೆಸರಿನ ಹಾಗಲಕಾಯಿ ತಳಿಯ ಸಸಿಯನ್ನು ಮೂರು ಅಡಿ ಅಂತರ, ನಾಲ್ಕು ಅಡಿ ಅಗಲಕ್ಕೆ ಸಾಲು ಮಾಡಿದ್ದು, ಒಟ್ಟು 8,000 ಸಸಿ ನೆಟ್ಟಿದ್ದಾರೆ. ಹಾಗಲಕಾಯಿ ಬಳ್ಳಿಗೆ ರೋಗ, ಕೀಟ ಬಾಧೆ ಬಾರದಂತೆ ನಡೆಯಲು ತಜ್ಞರ ಸಲಹೆಯಂತೆ ಔಷಧಿ ಸಿಂಪಡಿಸಲಾಗಿದೆ. ಸಸಿ ನೆಟ್ಟ 50 ದಿನಗಳಿಗೆ ಹಾಗಲಕಾಯಿ ಕೊಯ್ಲಿಗೆ ಬರುತ್ತಿದ್ದು, ವಾರಕ್ಕೊಮ್ಮೆ ಕಾಯಿ ಕೊಯ್ಲು ಮಾಡುತ್ತಾರೆ. ಒಮ್ಮೆ ಕಾಯಿ ಕೊಯ್ಲು ಮಾಡಿದರೆ 6–7 ಕ್ವಿಂಟಾಲ್‌ ಹಾಗಲಕಾಯಿ ಸಿಗುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app