
ರಾಜ್ಯ ವಿಧಾನಸಭಾ ಚುನಾವಣೆಗೆ ಆರು ತಿಂಗಳು ಬಾಕಿಯಿದ್ದು, ರಾಜ್ಯದಲ್ಲಿ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗಳ ಓಲೈಕೆಯ ರಾಜಕಾರಣಕ್ಕೆ ಪ್ರಮುಖವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಸ್ಪರ್ಧೆ ಆರಂಭವಾಗಿದೆ.
ಬಳ್ಳಾರಿಯಲ್ಲಿ ಆಡಳಿತಾರೂಢ ಬಿಜೆಪಿ ಭಾನುವಾರ 'ನವಶಕ್ತಿ' ಸಮಾವೇಶ ನಡೆಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮತದಾರರನ್ನು ಸೆಳೆಯಲು ತೀವ್ರ ಕಸರತ್ತು ನಡೆಸಿದೆ. ಈ ಸಮಾವೇಶ ಬೆನ್ನಲ್ಲೇ ಕಾಂಗ್ರೆಸ್ ಕೂಡ ಬಿಜೆಪಿಗೆ ಸಡ್ಡು ಹೊಡೆಯಲು ನಿರ್ಧರಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಐಕ್ಯತಾ ಸಮಾವೇಶ ನಡೆಸಲು ಕಾಂಗ್ರೆಸ್ ನಾಯಕರು ಭರ್ಜರಿ ಸಿದ್ಧತೆಯಲ್ಲಿ ತೊಡಗಿದ್ದಾರೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ, ಮಾಜಿ ಸಚಿವರಾದ ಕೆ.ಎಚ್.ಮುನಿಯಪ್ಪ, ಎಚ್ ಸಿ ಮಹದೇವಪ್ಪ, ತುಕಾರಾಮ್, ಪರಮೇಶ್ವರ ನಾಯಕ ಹಾಗೂ ಎಸ್ ವಿ ಉಗ್ರಪ್ಪ ಸೇರಿದಂತೆ ಮತ್ತಿತರ ನಾಯಕರ ಸಮ್ಮುಖದಲ್ಲಿ ಭಾನುವಾರ ಖಾಸಗಿ ಹೋಟೆಲ್ನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಐಕ್ಯತಾ ಸಮಾವೇಶದ ಪೂರ್ವಭಾವಿ ಸಭೆ ನಡೆದಿದೆ.
ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡ ಪ್ರಮುಖ ನಾಯಕರು ತಮ್ಮ ಸಲಹೆ ಸೂಚನೆಗಳನ್ನು ಬಹಳ ಗಂಭೀರವಾಗಿ ನೀಡಿದ್ದಾರೆ. ಆಗಸ್ಟ್ 3ರಂದು ದಾವಣಗೆರೆಯಲ್ಲಿ ನಡೆದ ʼಸಿದ್ದರಾಮೋತ್ಸವʼದ ಮಾದರಿಯಲ್ಲಿಯೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಐಕ್ಯತಾ ಸಮಾವೇಶ ನಡೆಯಬೇಕು ಎಂಬ ಒಕ್ಕೊರಲಿನ ತೀರ್ಮಾಣವನ್ನು ಇಂದಿನ ಸಭೆಯಲ್ಲಿ ಮಾಡಲಾಗಿದೆ ಎಂಬುದನ್ನು ಈ ದಿನ.ಕಾಮ್ಗೆ ಬಲ್ಲ ಮೂಲಗಳು ಖಚಿತ ಪಡಿಸಿವೆ.
ಸಿದ್ದರಾಮೋತ್ಸವ ಆಚರಣೆಗಾಗಿ ಹೇಗೆ ʼಸಿದ್ದರಾಮಯ್ಯ 75 ಅಮೃತ ಸಮಿತಿʼ ರಚನೆ ಮಾಡಲಾಗಿತ್ತೋ ಅದೇ ಮಾದರಿಯಲ್ಲಿ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ನೇತೃತ್ವವನ್ನು ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ವಹಿಸಿಕೊಂಡಿದ್ದರೆ, ಮಾಜಿ ಸಚಿವ ಎಚ್ ಸಿ ಮಹದೇವಪ್ಪ ಉಪ ನೇತೃತ್ವ ವಹಿಸಿಕೊಂಡಿದ್ದಾರೆ.

ಜನವರಿ 26ಕ್ಕೆ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ!
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದವರ ಐಕ್ಯತಾ ಸಮಾವೇಶವನ್ನು ಜನವರಿ 26ರಂದೇ ಆಯೋಜಿಸಬೇಕು ಎನ್ನುವ ತೀರ್ಮಾನ ಮಾಡಲಾಗಿದೆಯಂತೆ. ಕಾರಣ ಜನವರಿ 26 ದೇಶ ಪ್ರಜಾಪ್ರಭುತ್ವ ಸಾಧಿಸಿದ ದಿನ, ಸಂವಿಧಾನ ಜಾರಿಯಾದ ದಿನ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಆಯೋಜಿಸಿರುವ ಭಾರತ್ ಜೋಡೋ ಯಾತ್ರೆಯ ಉದ್ದೇಶ ಕೂಡ ಪ್ರಜಾಪ್ರಭುತ್ವ, ಸಂವಿಧಾನ ಉಳುವಿಗಾಗಿ ಎಂಬುದನ್ನು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಪದೇ ಪದೇ ಒತ್ತಿ ಹೇಳಿದ್ದನ್ನು ಇಲ್ಲಿ ಗಮನಿಸಬಹುದು. ಈ ಆಶಯದ ಹಿನ್ನೆಲೆಯಲ್ಲಿ ಎಸ್ಸಿ ಎಸ್ಟಿ ಸಮಾವೇಶವನ್ನು ಜನವರಿ 26ರಂದು ಆಯೋಜಿಸುವುದು ಸೂಕ್ತ ಎನ್ನುವ ಸಲಹೆಯನ್ನು ಸಿದ್ದರಾಮಯ್ಯ ಕೊಟ್ಟಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ವಿಶೇಷ | ಪ್ರಚಾರಕ್ಕಾಗಿ ಸರ್ಕಾರಿ ವಾಹನ ಬಳಸಿ, ಸಂಚಾರ ನಿಯಮ ಉಲ್ಲಂಘಿಸಿದ ಸಾರಿಗೆ ಸಚಿವ ಶ್ರೀರಾಮುಲು!
ಹತ್ತು ಲಕ್ಷ ಜನ ಸೇರಿಸುವ ಗುರಿ!
ಸಿದ್ದರಾಮೋತ್ಸಕ್ಕೆ ಯಾರೂ ಊಹಿಸಿರದ ರೀತಿಯಲ್ಲಿ ಜನಸಾಗರವೇ ಸೇರಿತ್ತು ಎಂಬುದಕ್ಕೆ ದಾವಣಗೆರೆ ಸಾಕ್ಷಿಯಾಗಿತ್ತು. ಎಸ್ಸಿ ಎಸ್ಟಿ ಸಮಾವೇಶ ಕೂಡ ಸಿದ್ದರಾಮೋತ್ಸವದ ರೀತಿಯಲ್ಲಿಯೇ ಯಶಸ್ವಿಯಾಗಬೇಕು ಎಂದು ಬಹಳ ಜನ ನಾಯಕರು ಆಶಯ ವ್ಯಕ್ತಪಡಿಸಿದ್ದಾರೆ. ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಿಂದಲೂ ಜನರನ್ನು ಕರೆದು ತರುವ ಯೋಚನೆ ಹೊಂದಲಾಗಿದ್ದು, ಹಾಗೆಯೇ 63 ವಿಧಾನಸಭಾ ಮೀಸಲು ಕ್ಷೇತ್ರಗಳ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿದೆ. ಮೀಸಲು ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳು ಐಕ್ಯತಾ ಸಮಾವೇಶ ಯಶಸ್ಸಿಗಾಗಿ ಹೆಚ್ಚು ಶ್ರಮ ವಹಿಸಬೇಕಿದ್ದು, ತನು, ಮನ, ಧನಪೂರ್ವಕವಾದ ಸಹಕಾರವನ್ನು ಅವರಿಂದ ನಿರೀಕ್ಷಿಸಲಾಗಿದೆ.
ಸೂಕ್ತ ಜಾಗದ ಹುಡುಕಾಟ
ಈ ಬಗ್ಗೆ ಕೆಪಿಸಿಸಿ ಪ್ರಣಾಳಿಕೆ ರಚನಾ ಸಮಿತಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಅವರನ್ನು ಈ ದಿನ.ಕಾಮ್ ಸಂಪರ್ಕಿಸಿತು. "ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶವನ್ನು ಹುಬ್ಬಳ್ಳಿ-ಧಾರವಾಡ, ತುಮಕೂರು, ಚಿತ್ರದುರ್ಗ ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಮೈದಾನ.. ಈ ಪೈಕಿ ಯಾವುದಾದರೊಂದು ಜಾಗದಲ್ಲಿ ನಡೆಸುವ ಸಲಹೆಗಳು ಕೇಳಿಬಂದಿವೆ. ಸತೀಶ್ ಜಾರಕಿಹೊಳಿ ಇಂದಿನ ಸಭೆಗೆ ಕಾರಣಾಂತರಗಳಿಂದ ಬರಲಾಗಿಲ್ಲ. ಅವರ ಜೊತೆಗೂ ಚರ್ಚಿಸಿ ನಾಲ್ಕೈದು ದಿನಗಳಲ್ಲಿ ಜಾಗ ಫೈನಲ್ ಮಾಡಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಷ್ಟ್ರೀಯ ಮುಖಂಡರೊಬ್ಬರು ಸಮಾವೇಶ ಉದ್ಘಾಟಿಸಲಿದ್ದಾರೆ” ಎಂದು ತಿಳಿಸಿದರು.