ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷಾ ಮಂಡಳಿಗಳ ವಿಲೀನ; ಶೀಘ್ರವೇ ಮಸೂದೆ ಮಂಡನೆ

  • ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ 1966 ತಿದ್ದುಪಡಿ ಮಸೂದೆ
  • ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರ್ಕಾರ ತೀರ್ಮಾನ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಪರೀಕ್ಷಾ ಮಂಡಳಿಯನ್ನು ವಿಲೀನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 

ಈ ಎರಡು ಮಂಡಳಿಗಳನ್ನು ವಿಲೀನಗೊಳಿಸಿ ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ ಎಂದು ಒಂದು ಪರೀಕ್ಷಾ ಮಂಡಳಿ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಈದಿನ.ಕಾಮ್‌ಗೆ ತಿಳಿಸಿವೆ. 

“ಈ ಎರಡು ಮಂಡಳಿಗಳ ವಿಲೀನದ ಬಗ್ಗೆ ಯಾರದ್ದೂ ವಿರೋಧವಿಲ್ಲ. ಏಕೆಂದರೆ, ಈ ಮೊದಲು ಉಪನ್ಯಾಸಕರ ಸಂಘದವರು ವಿರೋಧಿಸುತ್ತಿದ್ದರು. ಆದರೆ, ಈಗ ಅವರ ವಿರೋಧವಿಲ್ಲ. ಮಂಡಳಿಗಳು ಸರಿ ಇಲ್ಲ ಎಂಬ ಅಭಿಪ್ರಾಯವಿತ್ತು. ಜೊತೆಗೆ ಗೊಂದಲವಿತ್ತು. ಶಿಕ್ಷಣ ಸಚಿವರು ಎರಡು ಮಂಡಳಿಗಳ ವಿಲೀನದ ಬಗ್ಗೆ ಅಧಿವೇಶನದಲ್ಲಿ ಮಸೂದೆ ಮಂಡಿಸದ್ದಾರೆ. ಎರಡು ವಿಭಾಗಗಳನ್ನು ವಿಲೀನಗೊಳಿಸುವುದಿಲ್ಲ, ಬದಲಾಗಿ ಕೇವಲ ಪರೀಕ್ಷಾ ಮಂಡಳಿಗಳನ್ನು ಮಾತ್ರ ವಿಲೀನಗೊಳಿಸದ್ದಾರೆ” ಎಂದು ತಿಳಿದುಬಂದಿದೆ. 

ಈ ಎರಡು ಮಂಡಳಿಗಳನ್ನು ವಿಲೀನಗೊಳಿಸುವುದರಿಂದ ಹೆಚ್ಚು ಖರ್ಚು ತಗುಲುವ ಬಗ್ಗೆ ಮಾಹಿತಿ ನೀಡಿದ ಮೂಲಗಳು, “ಎಸ್ಎಸ್‌ಎಲ್‌ಸಿಗೆ ಬೇರೆ ಪರೀಕ್ಷಾ ಶುಲ್ಕವಿದೆ, ಪಿಯುಸಿಗೆ ಬೇರೆ ಶುಲ್ಕವಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ವಿದ್ಯಾರ್ಥಿಗಳಿರುತ್ತಾರೆ. ಹಾಗಾಗಿ ಅವರಿಂದಲೇ ಆದಾಯ ಬರುತ್ತದೆ. ಜೊತೆಗೆ ಪಿಯುಸಿ ಮಂಡಳಿ ಕೇವಲ ಪರೀಕ್ಷಾ ವ್ಯವಸ್ಥೆ ಮಾತ್ರ ನಿರ್ವಹಿಸುತ್ತದೆ. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮಂಡಳಿಯಲ್ಲಿ ಒಬ್ಬ ನಿರ್ದೇಶಕರು, ಇಬ್ಬರು ಜಂಟಿ ನಿರ್ದೇಶಕರು, ನಾಲ್ಕು ಮಂದಿ ಉಪ ನಿರ್ದೇಶಕರು, ಸಹಾಯಕ ನಿರ್ದೇಶಕರು, ಕ್ಷೇತ್ರಾ ಶಿಕ್ಷಣಾಧಿಕಾರಿಗಳು (ಬಿಇಒ) ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಐ) ಇರುತ್ತಾರೆ. ಆದರೆ, ಪಿಯುಸಿ ಮಂಡಳಿಯಲ್ಲಿ ಆಡಳಿತ ವಿಭಾಗ, ಉಪನ್ಯಾಸಕರು ಹಾಗೂ ಪರೀಕ್ಷೆ ಎಲ್ಲವನ್ನು ಸರ್ಕಾರವೇ ನಿರ್ವಹಿಸುತ್ತಿದ್ದು, ಇಲ್ಲಿ ಖರ್ಚು ಹೆಚ್ಚು ಬರುತ್ತಿದೆ” ಎಂದು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕ ಭಾಗದಲ್ಲಿ 15,000 ಹುದ್ದೆಗಳ ನೇಮಕಾತಿ ಘೋಷಿಸಿದ ಬಸವರಾಜ ಬೊಮ್ಮಾಯಿ

ಆದರೆ, ಎಸ್‌ಎಸ್‌ಎಲ್‌ಸಿಗೆ ಪ್ರತ್ಯೇಕ ವ್ಯವಸ್ಥೆಯಿದ್ದು, ಅದನ್ನು ಶಿಕ್ಷಣ ಇಲಾಖೆ ಗಮನಿಸುತ್ತದೆ. ಹಾಗಾಗಿ ಈ ಎರಡು ಪರೀಕ್ಷಾ ಮಂಡಳಿಗಳನ್ನು ವಿಲೀನಗೊಳಿಸುವುದರಿಂದ ಹೊಸ ಮಂಡಳಿಗೆ ಒಬ್ಬರು ಐಐಎಸ್‌ ಅಧಿಕಾರಿ ಮತ್ತು ನಿರ್ದೇಶಕರನ್ನು ನೇಮಿಸಲಾಗುವುದು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು, ವಿತರಣೆ, ರಹಸ್ಯ ಕಾಪಾಡುವುದು ಸಂಬಂಧಿಸಿ ಆಯಾ ಪರೀಕ್ಷೆಯ ನಿರ್ದೇಶಕರಿಗೆ ವಿಶೇಷಾಧಿಕಾರ ನೀಡಲಾಗಿದೆ. ಈ ವಿಷಯದಲ್ಲಿ ಮಂಡಳಿಯ ಸದಸ್ಯರಿಗಾಗಲಿ, ಇತರ ಅಧಿಕಾರಿಗಳಿಗಾಗಲಿ ಮಧ್ಯಪ್ರವೇಶಿಸಲು ಅವಕಾಶ ಇಲ್ಲ ಎಂದು ಮೂಲಗಳು ಹೇಳಿವೆ.

ಈ ಉದ್ದೇಶದಿಂದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ 1966 ತಿದ್ದುಪಡಿಗೆ ಮಸೂದೆ ಸಿದ್ಧವಾಗಿದೆ. ಸದ್ಯ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲು ಸರ್ಕಾರ ತೀರ್ಮಾನಿಸಿದೆ. 

ರಾಜ್ಯದಲ್ಲಿ ಹೊಸ ಶಿಕ್ಷಣ ನೀತಿ 2020ರ (ಎನ್‌ಇಪಿ) ಅನ್ವಯ ‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ’ಯ ಹೆಸರನ್ನು ‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ’ ಎಂದು ಮರು ನಾಮಕರಣ ಮಾಡುವುದರ ಬಗ್ಗೆ ಮಸೂದೆಯಲ್ಲಿ ವಿವರವಿದೆ ಎನ್ನಲಾಗಿದೆ.

ನಿಮಗೆ ಏನು ಅನ್ನಿಸ್ತು?
4 ವೋಟ್