ಆಯವ್ಯಯದ ಘೋಷಿತ ಯೋಜನೆಗಳ ಅನುಷ್ಠಾನ ವಿಳಂಬ ಸಹಿಸಲ್ಲ: ಸಿಎಂ ಬೊಮ್ಮಾಯಿ

Basavaraj Bommai
  • ಜಿಲ್ಲಾ ಪಂಚಾಯಿತಿ ಸಿಇಒ ಸಭೆಯಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಎಚ್ಚರಿಕೆ
  • ಬಡವರ ಪರ ಕೆಲಸಕ್ಕೆ ಅಧಿಕಾರಿಗಳು ಧೈರ್ಯದಿಂದ ಕ್ರಮ ಕೈಗೊಳ್ಳಿ: ಸೂಚನೆ

ಆಯವ್ಯಯದ ಘೋಷಿತ ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಧೋರಣೆ ಕಂಡುಬಂದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನೀವೆಲ್ಲರೂ ನನ್ನ ಕಣ್ಗಾವಲಿನಲ್ಲಿದ್ದೀರಿ. ನಿಮ್ಮೆಲ್ಲರ ಕಾರ್ಯವೈಖರಿಯನ್ನು ನಾನು ಗಮನಿಸುತ್ತಿರುವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. 

ವಿಧಾನಸೌಧದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ಸಿಇಒ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

“ಅಧಿಕಾರದ ವಿಕೇಂದ್ರೀಕರಣವಾಗಿ ಮೂರು ದಶಕ ಮೇಲಾಗಿದೆ. ಅದರ ಲಾಭವನ್ನು ಒಮ್ಮೆ ಹಿಂದುರಿಗಿ ನೋಡಬೇಕು. ಕೇಂದ್ರೀಕೃತವಾದ ಆಡಳಿತ ಮಾಡಿದರೆ ಜನರಿಗೆ ಆಡಳಿತದ ಲಾಭ, ಸರ್ಕಾರದ ಕಾರ್ಯಕ್ರಮಗಳು ಮುಟ್ಟುವುದಿಲ್ಲ ಎಂದು ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಜನರಿಂದ ಜನರಿಗೋಸ್ಕರ ಆಡಳಿತವಾಗಬೇಕು,” ಎಂದು ತಿಳಿಸಿದರು. 

“ಬಡವರ ಪರವಾಗಿ ಕೆಲಸ ಮಾಡಲು ಅಧಿಕಾರಿಗಳು ಧೈರ್ಯವಾಗಿ ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯಬಾರದು. ಎಲ್ಲ ಜಿಲ್ಲಾ ಪಂಚಾಯಿತಿ ಸಿಇಒಗಳು ಸ್ವತಂತ್ರವಾಗಿ ಕೆಲಸ ಮಾಡಬೇಕು. ಕೆಳಹಂತದ ಅಧಿಕಾರಿಗಳ ಮೇಲೆ ನಿಯಂತ್ರಣವೂ ಇರಬೇಕು. ಜಿಲ್ಲಾ ಪಂಚಾಯತ್ ಸ್ವತಂತ್ರ ಸರ್ಕಾರವಿದ್ದಂತೆ,” ಎಂದರು. 

ಪಿಡಿಒಗಳನ್ನು ಶಿಸ್ತಿನಲ್ಲಿಡಿ

“ಸರ್ಕಾರದ ಆಯವ್ಯಯದ ಬಹುತೇಕ ಕಾರ್ಯಕ್ರಮಗಳನ್ನು ಜಿಲ್ಲಾ ಪಂಚಾಯತ್ ಸಿಇಒಗಳು ಅನುಷ್ಠಾನ ಮಾಡುತ್ತಾರೆ. ಸಿಇಒಗಳು ತಮ್ಮ ಹಂತದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕು. ತಮ್ಮ ಅಧಿಕಾರದ ಮಹತ್ವ ಅರಿತು ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕು. ಪಿಡಿಒಗಳನ್ನು ಶಿಸ್ತಿನಲ್ಲಿಡಬೇಕು. ಸ್ಥಳಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಆಗಾಗಾ ಪರಿಶೀಲಿಸಬೇಕು," ಎಂದು ಸೂಚಿಸಿದರು. 

“ಬಜೆಟ್ ಕಾರ್ಯಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನೀಲನಕ್ಷೆ ಮಾಡಿಕೊಳ್ಳಬೇಕು. ಸಿಇಒಗಳು ಜಿಲ್ಲೆಯ ಸಿಎಸ್ (ಮುಖ್ಯ ಕಾರ್ಯದರ್ಶಿಗಳು) ಗಳಂತೆ ಕಾರ್ಯನಿರ್ವಹಿಸಬೇಕು. ಜಿಲ್ಲೆಗಳಲ್ಲಿ ಮನೆ ನಿರ್ಮಾಣ, ಫಲಾನುಭವಿಗಳ ಆಯ್ಕೆ ಶೀಘ್ರವಾಗಿ ಮುಗಿಸಬೇಕು. ಪಡಿತರ ಚೀಟಿ ವಿತರಣೆ, ಶಾಲಾ ಕೊಠಡಿಗಳು, ಆಸ್ಪತ್ರೆಗಳ ವಸ್ತುಸ್ಥಿತಿ ಬಗ್ಗೆ ವರದಿ ನೀಡಬೇಕು,” ಎಂದರು. 

ಈ ಸುದ್ದಿ ಓದಿದ್ದೀರಾ? ಸಂಪುಟ ಪುನರ್ ರಚನೆ ಸಿಎಂ ಬೊಮ್ಮಾಯಿಗೆ ಬಿಟ್ಟ ವಿಚಾರ: ವಿ ಸೋಮಣ್ಣ

ಹತ್ತು ತಿಂಗಳೊಳಗೆ ಅನುಷ್ಠಾನ ಮಾಡಿ

“ಆಯಾ ವರ್ಷದ ಕ್ರಿಯಾ ಯೋಜನೆಗಳು ಅದೇ ವರ್ಷದಲ್ಲಿ ಅನುಷ್ಠಾನವಾಗುವುದಿಲ್ಲ. ಹತ್ತು ತಿಂಗಳ ಕಾಲಮಿತಿಯೊಳಗೆ ಕಾರ್ಯಕ್ರಮಗಳ ಅನುಷ್ಠಾನವಾಗಬೇಕೆಂಬ ಧ್ಯೇಯವಿರಬೇಕು. ಗ್ರಾಮೀಣ ಭಾಗದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ ಇಲಾಖೆಯ ಯೋಜನೆಗಳ ಅನುಷ್ಠಾನಕ್ಕೆ ಸಿಇಒಗಳು ಗಮನಹರಿಸಬೇಕು,” ಎಂದು ತಿಳಿಸಿದರು.

"ರಾಯಚೂರಿನಲ್ಲಿ ಇಷ್ಟು ವರ್ಷಗಳ ಕಾರ್ಯಕ್ರಮಗಳ ಹೊರತಾಗಿಯೂ ಅನೀಮಿಯಾ ಪ್ರಮಾಣದಲ್ಲಿ ಹೆಚ್ಚಳವಿದೆ. ಅಪೌಷ್ಟಿಕತೆ ನಿವಾರಣೆಗೆ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಕಾರ್ಯಕ್ರಮ ರೂಪಿಸಬೇಕು. ಎಸ್ಸಿ ಎಸ್ಟಿ, ಹಿಂದುಳಿದ ವರ್ಗದ ಯೋಜನೆಗಳು ನಿಗದಿತ ಅವಧಿಯಲ್ಲಿ ಮುಗಿಯಲೇಬೇಕು. ತಳಹಂತದ ಜನರ ಬದುಕನ್ನು ಬದಲಿಸುವ ಇಂಥ ಯೋಜನೆಗಳ ಅನುಷ್ಠಾನದ ಬಗ್ಗೆ ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಬೇಕು,” ಎಂದರು.

ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿ

"ಜಿಲ್ಲೆಗಳಲ್ಲಿ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಬೇಕು. ಮಕ್ಕಳಲ್ಲಿ ಅಪೌಷ್ಟಿಕತೆ, ಕುಂಠಿತ ಬೆಳವಣಿಗೆಗಳ ಬಗ್ಗೆ ಗಮನಹರಿಸಿ ಇವುಗಳನ್ನು ಅಭಿವೃದ್ಧಿಗೊಳಿಸಲು ಶಾಲೆಗಳಲ್ಲಿ ಆರೋಗ್ಯ ಶಿಬಿರ, ಆಸ್ಪತ್ರೆಗಳ ಸಹಕಾರ ಪಡೆದು ಕಾರ್ಯಕ್ರಮ ಮಾಡಬೇಕು. ಇಂದಿನಿಂದಲೇ ಬದಲಾವಣೆಯಾಗಬೇಕು. ಜನಕ್ಕೆ ಈ ವ್ಯವಸ್ಥೆಯ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ಮಾಡಬೇಕು. ಸಾಮಾಜಿಕ ಮತ್ತು ಅಭಿವೃದ್ಧಿಯ ಹೊಣೆಗಾರಿಕೆ ನಿಮ್ಮ ಮೇಲಿದೆ," ಎಂದರು.  

“100 ಪಶು ಚಿಕಿತ್ಸಾಲಯ, 70 ಗೋಶಾಲೆ ನಿರ್ಮಾಣ, ಪುಣ್ಯಕೋಟಿ ದತ್ತು ಯೋಜನೆ, ಕರಾವಳಿಯಲ್ಲಿ ಸಮುದ್ರದಾಳದಲ್ಲಿ ಮೀನುಗಾರಿಕೆ, ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಲ್ಲಿ ಶಿಕ್ಷಣ, ಆರೋಗ್ಯ, ಅಪೌಷ್ಟಿಕತೆ ನಿವಾರಣೆಗೆ ಎಸ್‌ಡಿಪಿಯಲ್ಲಿ, ಕೆಕೆಆಆರ್‌ಡಿಬಿ ಮೂಲಕ ಅನುದಾನ ಒದಗಿಸಲಾಗಿದೆ,” ಎಂದರು.

ಈ ಸುದ್ದಿ ಓದಿದ್ದೀರಾ? ಬೊಮ್ಮಾಯಿ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ: ವೀರಪ್ಪ ಮೊಯ್ಲಿ

7000 ಶಾಲಾ ಕೊಠಡಿಗಳ ನಿರ್ಮಾಣ

"ಸುಮಾರು 7000 ಶಾಲಾ ಕೊಠಡಿಗಳ ನಿರ್ಮಾಣ ಸರ್ಕಾರದ ಬೃಹತ್ ಕಾರ್ಯಕ್ರಮವಾಗಿದೆ. ಸೂಕ್ತ ರೀತಿಯಲ್ಲಿ ಆಯ್ಕೆ ಮತ್ತು ಅನುಷ್ಠಾನವಾಗಬೇಕು. ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು. 100 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು, ಸಮಾಜ ಕಲ್ಯಾಣ ಇಲಾಖೆಯಡಿ 100 ವಸತಿ ನಿಲಯಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 50 ವಸತಿ ನಿಲಯಗಳ ನಿರ್ಮಾಣ ಆದ್ಯತೆ ಮೇರೆಗೆ ಕೈಗೊಳ್ಳಲು ನಿರ್ಧರಿಸಲಾಗಿದೆ," ಎಂದು ತಿಳಿಸಿದರು.

ನಗರಗಳಲ್ಲಿ ʼನಮ್ಮ ಕ್ಲಿನಿಕ್ʼ ಅನುಷ್ಠಾನ, ಮುಖ್ಯಮಂತ್ರಿ ವಿದ್ಯಾರ್ಥಿ ಮಾಗದರ್ಶಿನಿ ವೆಬ್ ಸೈಟ್ ಕುರಿತು ಬಡಮಕ್ಕಳಿಗೆ ಮಾರ್ಗದರ್ಶನ ನೀಡಬೇಕು. ಮುಖ್ಯಮಂತ್ರಿ ಆರೋಗ್ಯ ವಾಹಿನಿ ಬೀದರ್, ಹಾವೇರಿ, ಚಾಮರಾಜನಗರ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನ ಮಾಡಲಾಗುತ್ತಿದೆ. ಗ್ರಾಮ ಒನ್ ಕೇಂದ್ರಗಳ ಸ್ಥಾಪನೆಗೆ ವಿಶೇಷ ಗಮನ ಹರಿಸಿ, ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಸ್ಥಾಪಿಸಬೇಕು. ಗ್ರಾಮ ಒನ್ ಜನೋಪಯೋಗಿ ಕಾರ್ಯಕ್ರಮವಾಗಿದ್ದು ಯಶಸ್ವಿಗೊಳಿಸಬೇಕು. ಇದರಿಂದ ಮೇಲಿನ ಹಂತದಲ್ಲಿ ಅರ್ಜಿಗಳ ಹೊರೆ ಕಡಿಮೆಯಾಗುತ್ತದೆ," ಎಂದು  ಬೊಮ್ಮಾಯಿ ವಿವರಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್