
- ಮೊಹಮ್ಮದ್ ಜುಬೇರ್ ಬೆಂಗಳೂರು ನಿವಾಸ ಶೋಧಿಸಿದ ದೆಹಲಿ ಪೊಲೀಸ್
- ಲ್ಯಾಪ್ ಟಾಪ್, ಮೊಬೈಲ್ಗಾಗಿ ಪರಿಶೀಲನೆ ನಡೆಸಿದ ಪೊಲೀಸರ ತಂಡ
ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರನ್ನು ಬೆಂಗಳೂರಿಗೆ ಕರೆತಂದಿರುವ ದೆಹಲಿ ಪೊಲೀಸ್ ವಿಶೇಷ ಘಟಕ ಅವರ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ದೆಹಲಿ ಪೊಲೀಸರು ಜುಬೇರ್ ಅವರನ್ನು ಬಂಧಿಸಿದ್ದರು. ಹಿಂದೂ ದೇವರಿಗೆ ಅಪಮಾನವಾಗುವ ರೀತಿ ಟ್ವೀಟ್ ಮಾಡಿದ್ದರೆನ್ನುವ ಆರೋಪವನ್ನು ಜುಬೇರ್ ಎದುರಿಸುತ್ತಿದ್ದಾರೆ.
ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ಜುಬೇರ್ ಅವರನ್ನು ಅವರ ಬೆಂಗಳೂರು ನಿವಾಸಕ್ಕೆ ಕರೆತಂದ ಪೊಲೀಸರು ಕೆಲಕಾಲ ನಿವಾಸದ ಪರಿಶೀಲನೆ ನಡೆಸಿದರು. ಈ ವೇಳೆ ಜುಬೇರ್ ಅವರ ಪತ್ನಿ ಹಾಗೂ ಕೆಲ ಸದಸ್ಯರೂ ಅಲ್ಲಿದ್ದರು ಎಂದು ಮೂಲಗಳು ತಿಳಿಸಿವೆ. ಟ್ವೀಟ್ಗಾಗಿ ಬಳಸಿದ್ದ ಮೊಬೈಲ್ ಅಥವಾ ಲ್ಯಾಪ್ ಟಾಪ್ ಪಡೆದುಕೊಳ್ಳಲು ಪೊಲೀಸರು ಈ ತಪಾಸಣೆ ನಡೆಸಿದ್ದರು ಎನ್ನಲಾಗಿದೆ.
ಗುರುವಾರ ಸಂಜೆ 4ರ ಸುಮಾರಿಗೆ ದೆಹಲಿ ವಿಶೇಷ ಪೊಲೀಸ್ ಘಟಕ ಜುಬೇರ್ ಅವರನ್ನು ಮರಳಿ ದೆಹಲಿಗೆ ಕರೆದುಕೊಂಡು ಹೊರಟಿದೆ.
ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್ ಅವರ ಮೊಬೈಲ್ ಫೋನ್ ಮತ್ತು ಲ್ಯಾಪ್ಟಾಪ್ ಅನ್ನು ಮರುಪಡೆಯಲು ಜುಬೇರ್ ಅವರ ಬೆಂಗಳೂರಿನ ನಿವಾಸಕ್ಕೆ ಕರೆದೊಯ್ಯುವುದಕ್ಕಾಗಿ ದೆಹಲಿ ನ್ಯಾಯಾಲಯವು ಮಂಗಳವಾರ ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಜುಬೇರ್ ಅವರನ್ನು ವಹಿಸಿತ್ತು.
ಇನ್ನೊಂದು ಕಡೆ ಪಟಿಯಾಲ ಹೌಸ್ ಕೋರ್ಟ್, ದೆಹಲಿ ಪೊಲೀಸ್ ವಿಶೇಷ ಸೆಲ್ಗೆ ನೀಡಿದ ಪೊಲೀಸ್ ರಿಮ್ಯಾಂಡ್ ಪ್ರಶ್ನಿಸಿ ಜುಬೇರ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜುಬೇರ್ ಅವರ ವಕೀಲರು ಗುರುವಾರ ದೆಹಲಿ ಹೈಕೋರ್ಟ್ನ ರಜಾ ಕಾಲದ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದರು. ಈ ಪ್ರಸ್ತಾಪಕ್ಕೆ ಅವಕಾಶ ನೀಡಿದ್ದರ ಹಿನ್ನೆಲೆಯಲ್ಲಿ ನಾಳೆ ಪ್ರಕರಣದ ವಿಚಾರಣೆ ನಡೆಯಲಿದೆ.
2018ರಲ್ಲಿ ಮಾಡಿದ ಟ್ವೀಟ್ ಸಲುವಾಗಿ ಸೋಮವಾರ ಜುಬೇರ್ ಅವರನ್ನು ಬಂಧಿಸಿದ ದೆಹಲಿ ವಿಶೇಷ ಘಟಕದ ಪೊಲೀಸರು, ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಅವರ ಮುಂದೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣೆಗಾಗಿ ಜುಬೇರ್ ಅವರನ್ನು ಕಸ್ಟಡಿಗೆ ನೀಡುವಂತೆ ದೆಹಲಿ ಪೊಲೀಸರು ಮಾಡಿಕೊಂಡ ಮನವಿಯನ್ನ ನ್ಯಾಯಾಲಯ ಮಾನ್ಯ ಮಾಡಿ ಪೊಲೀಸ್ ಕಸ್ಟಡಿಗೆ ಜುಬೇರ್ ಅವರನ್ನು ನೀಡಿತ್ತು.
ಇತ್ತ 2018 ರಲ್ಲಿ ಜುಬೇರ್ ಮಾಡಿದ್ದರೆನ್ನಲಾದ ಟ್ವೀಟ್ ಅನ್ನು ಫ್ಲ್ಯಾಗ್ ಮಾಡಿದ್ದ ಟ್ವಿಟರ್ ಹ್ಯಾಂಡಲ್ ಡಿಲೀಟ್ ಆಗಿದೆ. ಈ ಬಗ್ಗೆ ಪಿಟಿಐ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿರುವ ದೆಹಲಿ ವಿಶೇಷ ಘಟಕದ ಪೊಲೀಸ್ ಮೂಲಗಳು, "ಅನಾಮಧೇಯ ಟ್ವೀಟ್ ಹ್ಯಾಂಡಲ್ ಈಗ ಡಿಲೀಟ್ ಆಗಿದೆ. ನಾವು ಈ ಖಾತೆ ಬಳಸುತ್ತಿದ್ದವರ ಪತ್ತೆಗೆ ಕ್ರಮ ಜರುಗಿಸುತ್ತಿದ್ದೇವೆ" ಎಂದು ತಿಳಿಸಿದೆ.