ಹಾಸನ| 26 ಸಾವಿರ ಕನಿಷ್ಠ ವೇತನ, 10 ಸಾವಿರ ನಿವೃತ್ತಿ ವೇತನಕ್ಕೆ ಆಗ್ರಹ

  • ಜಿಲ್ಲಾಧಿಕಾರಿ ಕಚೇರಿ ಎದುರು ಅಂಗನವಾಡಿ ನೌಕರರ ಪ್ರತಿಭಟನೆ
  • ಜುಲೈ 26 ರಿಂದ ಪಾರ್ಲಿಮೆಂಟ್ ಎದುರು ಅನಿರ್ಧಿಷ್ಟ ಹೋರಾಟ ಎಚ್ಚರಿಕೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

1972ರ ಗ್ರಾಚ್ಯುಟಿ ಕಾಯ್ದೆಯು ಸಾಮೂಹಿಕ ಭದ್ರತಾ ಕಲ್ಯಾಣ ಶಾಸನವಾಗಿದೆ. ಇದು ಎಲ್ಲಾ ವ್ಯಕ್ತಿಗಳಿಗೆ ರಕ್ಷಣೆ ಕೊಡುವ ಅಗತ್ಯವನ್ನು ಗುರುತಿಸಿದೆ. ಕೇಂದ್ರ ಸರ್ಕಾರ ಮತ್ತು ಅಂಗನವಾಡಿ ನೌಕರರ ನಡುವೆ ಉದ್ಯೋಗ ಮಾಲೀಕರ ಸಂಬಂಧವಿದೆ ಆದರೂ ಸರ್ಕಾರವು ತಮ್ಮನ್ನು ನೌಕರರು ಎಂದೂ ಪರಿಗಣಿಸುತ್ತಿಲ್ಲ. 1972 ರ ಕಾಯ್ದೆಯ ಪ್ರಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನೌಕರರು ಆಗಿರುತ್ತಾರೆ. ಹಾಗಾಗಿ ಅಂಗನವಾಡಿ ನೌಕರರ ವೇತನವನ್ನು ಮೇಲ್ದರ್ಜೆಗೇರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ರಾಜ್ಯ ಸರ್ಕಾರ ನಿಗಧಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು. ಐಸಿಡಿಎಸ್ ಯೋಜನೆ ಪಾರಂಭವಾಗಿ 18 ವರ್ಷಗಳಾದರೂ ಅಂಗನವಾಡಿ ನೌಕರರನ್ನು ಖಾಯಂ ಮಾಡಿಲ್ಲ. ಕಾನೂನುಗಳನ್ನು ಅನ್ವಯಿಸಿಲ್ಲ. ಇಂದಿಗೂ 3-4 ತಿಂಗಳಿಗೊಮ್ಮೆ ವೇತನ ಬಿಡುಗಡೆ ಮಾಡಲಾಗುತ್ತಿದೆ. ಶಿಸ್ತು ಕ್ರಮಗಳ ಹೆಚ್ಚಳವಾಗಿದೆ. ಎಲ್ಲ ಕೆಲಸಗಳಿಗೂ ಮಹಿಳೆಯರೆಂದು ಪರಿಗಣಿಸದೇ ವಸ್ತುಗಳಂತೆ ನಡೆಸಿಕೊಳ್ಳುವ ವಿಧಾನಗಳಿವೆ. ಇಂತಹ ವಿಧಾನಗಳನ್ನು ವಿರೋಧಿಸಿ ಸಂಘಟಿತರಾಗಿ ಪ್ರತಿಭಟಿಸುವ ಹಕ್ಕನ್ನು ಕೂಡಾ ಇಂದು ಕೇಂದ್ರ ಸರ್ಕಾರ ಕಿತ್ತುಕೊಂಡಿದೆ. ಇದರಿಂದ ಅಂಗನವಾಡಿ ನೌಕರರ ಸಾಮೂಹಿಕ ಚೌಕಾಸಿಯ ಹಕ್ಕಿಗೆ ಧಕ್ಕೆ ಬಂದಿದೆ. ಆದ್ದರಿಂದ ಕೇಂದ್ರ ಸರ್ಕಾರ ತನ್ನ ಸುತ್ತೋಲೆಯನ್ನು ಹಿಂಡೆಯಬೇಕು ಎಂದು ಒತ್ತಾಯಿಸಿದರು.

26 ಸಾವಿರ ಕನಿಷ್ಠ ವೇತನ ಮತ್ತು 10 ಸಾವಿರ ನಿವೃತ್ತಿ ವೇತನ ನೀಡಬೇಕು. ಇಂದಿಗೂ ಕೇಂದ್ರ ಸರ್ಕಾರ ಕೇವಲ 4,500 ರೂ. ಮಾತ್ರ ಕೊಡುತ್ತಿದೆ. ಉಳಿದ ವೇತನವನ್ನು ರಾಜ್ಯ ಸರ್ಕಾರದ ಬಳಿ ನಿರಂತರ ಹೋರಾಟದಿಂದ ತೆಗೆದು ಕೊಳ್ಳಬೇಕಿದೆ. ಕೇಂದ್ರ ಸರ್ಕಾರ ಇಂದಿಗೂ ಐಸಿಡಿಎಸ್ ಯೋಜನೆಗೆ ಶೇ. 40ರಷ್ಟು ಅನುದಾನ ಕಡಿತ ಮಾಡಿ, ಅಧಿಕಾರಿಗಳ ವೇತನಗಳಲ್ಲಿ ಶೇ. 75ರಷ್ಟು ಕಡಿತ ಮಾಡಿದೆ. ಅಲ್ಲದೆ ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ಜಿಎಸ್ಟಿ ಹಣವನ್ನು ಕೂಡದೇ ಸತಾಯಿಸುತ್ತಿದೆ ಎಂದು ಪ್ರತಿಭನಾಕಾರರು ಆರೋಪಿಸಿದರು.

ಸರ್ಕಾರದ ನಡೆಯಿಂದ ಐಸಿಡಿಎಸ್ ಯೋಜನೆ ಮತ್ತು ಅಂಗನವಾಡಿ ನೌಕರರು ಸತತವಾಗಿ ಕಷ್ಟವನ್ನು ಅನುಭವಿಸಬೇಕಾಗಿದೆ. ಅದ್ದರಿಂದ ಅಗತ್ಯ ಅನುದಾನ, ಸರ್ಕಾರದ ಪಾಲಿನ ಜಿಎಸ್ಟಿ ಹಣ ಪಾವತಿ ಮತ್ತು ತನ್ನ ಪಾಲಿನ ವೇತನ ಹೆಚ್ಚಳವನ್ನು ಮಾಡಬೇಕು. ಇತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ 2022 ಜುಲೈ 26 ರಿಂದ ಅನಿರ್ಧಿಷ್ಟ ಹೋರಾಟವನ್ನು ಪಾರ್ಲಿಮೆಂಟ್ ಎದುರು ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಹಾಸನ| ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರತಿಭಟನೆಯಲ್ಲಿ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ ಬಿ ಪುಷ್ಪ, ಗೌರವಾಧ್ಯಕ್ಷೆ ಇಂದ್ರಮ್ಮ, ಖಜಾಂಚಿ ಜೆ ಪಿ ಶೈಲಜಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ ಮಂಜುಳಾ, ಉಪಾಧ್ಯಕ್ಷರಾದ ಶಾರದ, ಕಾಮಾಕ್ಷಿರಾಜು, ಹೆಚ್ ಟಿ ಮೀನಾಕ್ಷಿ, ಕಾರ್ಯದರ್ಶಿ ಟಿ ಎಚ್ ಜಯಂತಿ, ಲಲಿತಾ, ಕೆ ಪಿ ವೀಣಾ, ಸುಮಿತ್ರ ಹಾಗೂ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಎಂ ಜಿ ಪೃಥ್ವಿ, ಅರವಿಂದ್ ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್